Advertisement

ಟಾಯ್ಲೆಟ್‌, ಏಕ್‌ ಫಿಲ್ಮ್ ಕಥಾ

06:00 AM May 23, 2018 | |

ಅದು ಅವಳ ಮೊದಲ ಸಿನಿಮಾ. ಅದಕ್ಕೆ ಸಿಕ್ಕ ಸಂಭಾವನೆ 1 ಲಕ್ಷ ರೂ. ಆಕೆಗದು ದೊಡ್ಡ ಮೊತ್ತವೇ. ಆದರೂ ಆ ಹಣವನ್ನು ಶೌಚಾಲಯ ನಿರ್ಮಾಣಕ್ಕೆ ದಾನ ಮಾಡಿದ್ದಾಳೆ. ಜೊತೆಗೆ ಬೀದಿನಾಟಕದ ಮೂಲಕ ಜನ ಜಾಗೃತಿ ಮೂಡಿಸಲು ತೊಡಗಿದ್ದಾಳೆ. ಹತ್ತನೇ ತರಗತಿಯ ಪ್ರತ್ಯಕ್ಷ, ಈ ನಿರ್ಧಾರಕ್ಕೆ ಬರಲು, ಚಿತ್ರೀಕರಣದ ವೇಳೆ ನೋಡಿದ ಕೆಲವು ಸಂಗತಿಗಳೇ ಕಾರಣವಂತೆ…

Advertisement

ಈ ಹುಡುಗಿಯ ಹೆಸರು ಬಿ.ಆರ್‌. ಪ್ರತ್ಯಕ್ಷ. ಇನ್ನೇನು ತೆರೆ ಕಾಣಲಿರುವ “ಸಂಡಾಸ್‌’ ಚಿತ್ರದಲ್ಲಿ, ಈಕೆಯದು ಮಲ್ಲಮ್ಮನ ಪಾತ್ರ. ಶೌಚಾಲಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿ, ಪ್ರಧಾನಿಗಳ ಗಮನ ಸೆಳೆದ ಕೊಪ್ಪಳದ ಮಲ್ಲಮ್ಮನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕೆಯ ಕಥೆಯನ್ನಾಧರಿಸಿದ ಸಿನಿಮಾ ಇದು. ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದ ಪ್ರತ್ಯಕ್ಷಾಗೆ, ಶೌಚಾಲಯವಿಲ್ಲದ ಊರುಗಳಿವೆ ಅಂತ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಕಳೆದ ನವೆಂಬರ್‌ನಲ್ಲಿ ಸಿನಿಮಾ ಶೂಟಿಂಗ್‌ಗೆಂದು ಕೊಪ್ಪಳದ ಸುತ್ತಲಿನ ಹಳ್ಳಿಗಳಿಗೆ ಹೋದಾಗಲೇ, ಸಮಸ್ಯೆಯ ಗಂಭೀರತೆ ಆಕೆಗೆ ಅರ್ಥವಾಗಿದ್ದು.

ಟಾಯ್ಲೆಟ್‌ ಬಳಸೋದಿಲ್ಲ ಅಂದ್ರು…
“ನಾನು ಶೂಟಿಂಗ್‌ಗೆಂದು ಸುಮಾರು 2 ತಿಂಗಳು ಕೊಪ್ಪಳದಲ್ಲಿಯೇ ಇದ್ದೆ. ಕೆಲವೊಮ್ಮೆ ಅಲ್ಲಿನ ಜನರ ಮನೆಯಲ್ಲೇ ಊಟ, ವಸತಿ ಪಡೆಯುತ್ತಿದ್ದೆವು. ಒಂದು ದಿನ ಹೀಗೆ ಒಬ್ಬರ ಮನೆಯಲ್ಲಿ ತಂಗಿದ್ದಾಗ ನಾನು ಅವರ ಬಳಿ “ಟಾಯ್ಲೆಟ್‌ ಎಲ್ಲಿದೆ?’ ಅಂತ ಕೇಳಿದೆ. ಆಗ ಅವರು, “ನಮ್ಮನೇಲಿ ಟಾಯ್ಲೆಟ್‌ ಇಲ್ಲಾರಿ. ಬಯಲಿಗೇ ಶೌಚಕ್ಕೆ ಹೋಗೋದು’ ಅಂದರು. ಅದನ್ನು ಕೇಳಿ ಆಶ್ಚರ್ಯವಾಯ್ತು. ಅಲ್ಲಿ ಸಾಕಷ್ಟು ಸ್ಥಿತಿವಂತರ ಮನೆಯಲ್ಲೂ ಶೌಚಾಲಯವಿಲ್ಲ. ಕೇಳಿದರೆ, ಜಾಗ ಇಲ್ಲ, ನೀರಿನ ಸಮಸ್ಯೆ ಇದೆ, ಮನೆ ಹತ್ತಿರ ಶೌಚಾಲಯ ಕಟ್ಟಿಸೋದು ಅಶುಭ ಅಂತೆಲ್ಲಾ ಕಾರಣಗಳನ್ನು ಕೊಡುತ್ತಾರೆ. ಇದನ್ನೆಲ್ಲ ನೋಡಿ, ಸಿನಿಮಾ ನಿರ್ದೇಶಕ ಅಜಯ್‌ ಕುಮಾರ್‌, ಚಿತ್ರ ಬಿಡುಗಡೆಯ ನಂತರ ಅಲ್ಲಿನ ಹಳ್ಳಿಗಳಲ್ಲಿ ಟಾಯ್ಲೆಟ್‌ ಕಟ್ಟಿಸಲು ನಿರ್ಧರಿಸಿದರು. ಆಗ ನಾನು ನನ್ನ ಸಂಭಾವನೆಯ 1 ಲಕ್ಷ ರೂ.ಗಳನ್ನು ಆ ಕೆಲಸಕ್ಕೇ ಬಳಸಲು ಹೇಳಿದೆ’ ಎನ್ನುತ್ತಾಳೆ ಪ್ರತ್ಯಕ್ಷ.  

ಜನಜಾಗೃತಿಗೆ ಬೀದಿ ನಾಟಕ
ಶೂಟಿಂಗ್‌ ಮುಗಿಸಿ ಬಂದರೂ ಪ್ರತ್ಯಕ್ಷಾ ತಲೆಯಲ್ಲಿ ಅದೇ ವಿಷಯ ಕೊರೆಯುತ್ತಿತ್ತು. ಬಯಲು ಶೌಚದಿಂದ ಉಂಟಾಗುವ ತೊಂದರೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಅಂತ ಬಲವಾಗಿ ಅನ್ನಿಸಿತು. ಅಪ್ಪನ ಜೊತೆಗೆ ಸೇರಿ “ಪಾಯಿಖಾನೆ’ ಎಂಬ ಬೀದಿ ನಾಟಕವನ್ನು ರಚಿಸಿದಳು. ಕೊಪ್ಪಳದ ಹಳ್ಳಿಯಲ್ಲಿ ನಡೆದ ನೈಜ ಕಥೆಯನ್ನಾಧರಿಸಿದ ಆ ನಾಟಕ, ಈಗಾಗಲೇ ಕೊಪ್ಪಳದ ಸುತ್ತಮುತ್ತ, ಕನಕಪುರ, ಸಾತನೂರು, ಹಾರೋಹಳ್ಳಿ ಸೇರಿದಂತೆ ಹಲವೆಡೆ 100 ಪ್ರದರ್ಶನಗಳನ್ನು ಕಂಡಿದೆ. ಕೆಲ ಗ್ರಾಮಗಳಲ್ಲಿ ಮುಕ್ಕಾಂ ಹೂಡಿ, ಸ್ಥಳೀಯರ ಸಹಾಯದೊಂದಿಗೆ ಸ್ವಚ್ಛತೆ ಬಗ್ಗೆ ಜನಜಾಗೃತಿ ಜಾಥಾ ನಡೆಸಿ, ಕರಪತ್ರಗಳನ್ನು ಹಂಚುವ ಮೂಲಕ ಸ್ವತ್ಛಭಾರತಕ್ಕೆ ತನ್ನದೇ ಆದ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾಳೆ. 

ನಂಗೆ ಮನೆಯೇ ಇಲ್ಲ!
ಕೊಪ್ಪಳದ ಹಳ್ಳಿಯೊಂದರಲ್ಲಿ ಬೀದಿ ನಾಟಕ ಮಾಡುವಾಗ ಒಂದು ಘಟನೆ ನಡೆಯಿತು. ಶೌಚಾಲಯದ ಮಹತ್ವವನ್ನು ವಿವರಿಸಿದ ನಂತರ, ಗುಂಪಿನಲ್ಲಿದ್ದ ಹುಡುಗಿಯೊಬ್ಬಳು ಹತ್ತಿರ ಬಂದು, “ನಂಗೆ ಇರೋದಿಕ್ಕೆ ಮನೆಯೇ ಇಲ್ಲ. ನೀವು ಶೌಚಾಲಯ ಕಟ್ಟಿಸಿ ಅಂದರೆ ಏನು ಮಾಡೋದು?’ ಅಂತ ಕೇಳಿದಳು. ಆ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಇನ್ನೂ ಕೆಲವೆಡೆ ಹುಡುಗಿಯರು, ನಮಗೂ ಬಯಲಿಗೆ ಹೋಗೋಕೆ ಮುಜುಗರವಾಗುತ್ತದೆ. ಆದರೆ, ಮನೆಯಲ್ಲಿ ಶೌಚಾಲಯ ಕಟ್ಟಿಸಿ ಅಂತ ಹೇಗೆ ಕೇಳ್ಳೋದು ಅಂತ ಅಳಲು ತೋಡಿಕೊಂಡಿದ್ದಾರೆ. ಎಲ್ಲರೂ ಮಲ್ಲಮ್ಮನಂತೆ ಧೈರ್ಯ ವಹಿಸುವುದಿಲ್ಲವಲ್ಲ ಅನ್ನುತ್ತಾಳೆ ಪ್ರತ್ಯಕ್ಷ.

Advertisement

ಬಾಲ್ಯದಿಂದಲೇ ರಂಗಭೂಮಿ ನಂಟು
ಗಿರಿನಗರದ ಮಾರ್ಟಿನ್‌ ಲೂಥರ್‌ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಪ್ರತ್ಯಕ್ಷ, 6ನೇ ವಯಸ್ಸಿನಲ್ಲಿ “ಗಾಂಧಿ ಬಂದ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದಳು. “ಅನಭಿಜ್ಞ ಶಾಕುಂತಲ’, “ಮಲ್ಲಿಗೆ ಮತ್ತು ಅಕ್ಕು’ ಎಂಬ ಮಹಿಳಾ ಪ್ರಧಾನ ನಾಟಕಗಳಲ್ಲಿ ನಟಿಸಿದ್ದು, ರಂಗಮಂಟಪ ತಂಡದ ಮೂಲಕ ದೇಶಾದ್ಯಂತ ಸಂಚರಿಸಿದ್ದಾಳೆ. ಅಲ್ಲದೆ ಬಿಡುಗಡೆಗೆ ಸಿದ್ಧವಾಗಿರುವ “ಅಮ್ಮಚ್ಚಿಯೆಂಬ ನೆನಪು’ ಸಿನಿಮಾದಲ್ಲೂ ನಟಿಸಿದ್ದಾಳೆ. 

“40 ದಿನ ಕೊಪ್ಪಳದಲ್ಲಿಯೇ ತಂಗಿದ್ದೆ. ಮಲ್ಲಮ್ಮ ಅವರ ಪಾತ್ರ ಮಾಡಬೇಕಾದ್ದರಿಂದ, ಅವರ ಜೊತೆಗೂ ಒಡನಾಡುವ ಅವಕಾಶ ಸಿಕ್ಕಿತು. ಮಲ್ಲಮ್ಮ ಹೆಚ್ಚು ಮಾತಾಡೋದಿಲ್ಲ. ಆದರೆ, ಅವರ ಧೈರ್ಯ, ಶೌಚಾಲಯ ಬೇಕು ಅಂತ ಹಠ ಹಿಡಿದ ರೀತಿ ಎಲ್ಲರಿಗೂ ಮಾದರಿ. ಅವರಂತೆ ಕಾಣಬೇಕು ಅಂತ 3-4 ದಿನ ಬಿಸಿಲಿನಲ್ಲಿ ನಿಂತಿದ್ದನ್ನು ಮರೆಯಲಾಗುವುದಿಲ್ಲ.
-ಪ್ರತ್ಯಕ್ಷಾ, ನಟಿ

ಪ್ರತ್ಯಕ್ಷಾಳನ್ನು ಕಲಕಿದ ಮತ್ತೂಂದು ಘಟನೆ ಇಲ್ಲಿದೆ. ಇದು ಅವಳು ಹಳ್ಳಿಯಲ್ಲಿ ಕೇಳಿದ ಕಥೆ. ಒಮ್ಮೆ ಅಲ್ಲಿನ ತುಂಬು ಗರ್ಭಿಣಿಯೊಬ್ಬಳಿಗೆ ವಾಂತಿ-ಭೇದಿ ಶುರುವಾಯಿತಂತೆ. ಬೆಳಗ್ಗಿನಿಂದ ಬಯಲಿಗೆ ಹೋಗಿ, ಬಂದು ಆಕೆ ಸುಸ್ತಾಗಿಬಿಟ್ಟಳು. ಮತ್ತೂಮ್ಮೆ ಬಯಲಿಗೆ ಹೋಗಬೇಕಾದಾಗ, ದೂರ ನಡೆಯಲಾಗದೆ ಎಲ್ಲರೆದುರೇ ಶೌಚಕ್ಕೆ ಕುಳಿತು ಬಿಟ್ಟಳಂತೆ. ಇಂಥವನ್ನೆಲ್ಲ ನೋಡಿದ ಮೇಲೂ ಅಲ್ಲಿನ ಜನರಿಗೆ ಶೌಚಾಲಯದ ಮಹತ್ವ ಅರಿವಾಗದಿರುವುದೇ ಶೋಚನೀಯ.

ಪ್ರಿಯಾಂಕಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next