Advertisement

ನೇತ್ರಾವತಿಗೆ ಗ್ರಾ.ಪಂ.ನಿಂದಲೇ ಶೌಚಾಲಯದ ಕೊಚ್ಚೆ

10:28 AM Oct 09, 2018 | Team Udayavani |

ಪುತ್ತೂರು: ನದಿ ನೀರನ್ನು ಕಲುಷಿತಗೊಳಿಸಬೇಡಿ ಎಂದು ಸಾರ್ವಜನಿಕರೇ ಎಚ್ಚರಿಸಿದರೂ ಕಿವಿಗೆ ಹಾಕಿಕೊಳ್ಳದ ಉಪ್ಪಿನಂಗಡಿ ಗ್ರಾ.ಪಂ. ತಾನೇ ಸ್ವತಃ ಶೌಚಾಲಯದ ಕೊಚ್ಚೆಯನ್ನು ನದಿಗೆ ಸೇರಿಸುತ್ತಿರುವ ಆಘಾತಕಾರಿ ಅಂಶ ಬಯಲಿಗೆ ಬಂದಿದೆ. 

Advertisement

ವಿಚಿತ್ರವೆಂದರೆ ಇದೇ ಕಲ್ಮಶ ನೀರು ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಸಂಗ್ರಹವಾಗಿ ವಿತರಣೆಯಾಗುತ್ತಿದೆ. ಮಾತ್ರವಲ್ಲ, ಗಯಪದ ಕ್ಷೇತ್ರ ಎಂದೇ ಗುರುತಿಸಿರುವ ಉಪ್ಪಿನಂಗಡಿ ಸಂಗಮ
ಕ್ಷೇತ್ರವನ್ನೂ ಈ ಕೊಚ್ಚೆ ಮಲಿನವಾಗಿಸಿದೆ.

ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸಂಗಮ ಕ್ಷೇತ್ರದ ಬಳಿ ಹರಿಯುವ ನೇತ್ರಾವತಿ ನದಿ ನೀರು ಕೆಟ್ಟ ವಾಸನೆಯಿಂದ ಕೂಡಿದೆ ಎಂಬ ದೂರು ವ್ಯಕ್ತವಾಗಿತ್ತು. ಆಗ ಸ್ಥಳೀಯ ಗ್ರಾ.ಪಂ, “ನೀರಿನಲ್ಲಿ ಪಾಚಿ ತುಂಬಿ ವಾಸನೆ ಬರುತ್ತಿದೆ’ ಎಂದು ಹೇಳಿತ್ತು. ಆದರೆ ವಾಸ್ತವ ಈಗ ಬಯಲಾಗಿದೆ. ಉಪ್ಪಿನಂಗಡಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಸಾರ್ವಜನಿಕ ಶೌಚಾಲಯ ಇದೆ. 2016ರಲ್ಲಿ ನಿರ್ಮಾಣವಾದ ಈ ಶೌಚಾಲಯದ ಪಿಟ್‌, ಮೂರೇ ತಿಂಗಳಲ್ಲಿ ಒಡೆದಿತ್ತು. ಆಗಿನಿಂದ ಈಗಿನವರೆಗೆ ಶೌಚಾಲಯದ ಕೊಚ್ಚೆಯನ್ನು ನದಿ ಒಡಲಿಗೆ ಬಿಡಲಾಗುತ್ತಿದೆ. ದೂರು ನೀಡಿದಾಗಲೊಮ್ಮೆ ಶೌಚಾಲಯದ ಪಿಟ್‌ ಶುಚಿಗೊಳಿಸಲಾಗುತ್ತಿದೆ. ಮತ್ತೆ ಅದೇ ಪರಿಸ್ಥಿತಿ. ಶೌಚಾಲಯದ ಬದಿಯಲ್ಲೇ ನದಿಯಿದ್ದರೂ ಪಿಟ್‌ಗೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾ.ಪಂ. ಮನಸ್ಸು ಮಾಡದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.


ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ನೇತ್ರಾವತಿಯ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ ತುಂಬೆಯಲ್ಲಿ ಬೃಹತ್‌ ಡ್ಯಾಂ ನಿರ್ಮಿಸಿ, ನೀರು ಶೇಖರಿಸಲಾಗುತ್ತಿದೆ. ಇದೇ ನೀರಿಗೆ ಶೌಚಾಲಯದ ಕೊಳಚೆ ನೀರು ಸೇರಿದರೆ, ಇದನ್ನು ಕುಡಿಯುವ ನಾಗರಿಕರು ಅನಾರೋಗ್ಯಕ್ಕೀಡಾಗುವ ಅಪಾಯವಿದೆ. ಹಾಗಾಗಿ ನದಿ ನೀರು ಮಲಿನಗೊಳ್ಳದಂತೆ ತಡೆಯಬೇಕೆಂಬುದು ಸ್ಥಳೀಯರ ಆಗ್ರಹ.

ಧಾರ್ಮಿಕ ಕೇಂದ್ರ
ಪಿಂಡ ಪ್ರದಾನ, ಸಂಗಮ ಕ್ಷೇತ್ರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿ, ನದಿಯಲ್ಲೇ ಉದ್ಭವಲಿಂಗ- ಹೀಗೆ ಹಲವು ನೆಲೆಗಳಿಂದ ಧಾರ್ಮಿಕ ಪ್ರಾಮುಖ್ಯ ಹೊಂದಿರುವ ಕ್ಷೇತ್ರವಿದು. ಇದೇ ಕಾರಣಕ್ಕೆ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎನ್ನಲಾಗುತ್ತಿದೆ. ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂಥ ಕ್ಷೇತ್ರದಲ್ಲಿ ಸ್ವತ್ಛತೆ ತೀರಾ ಅವಶ್ಯ. ಭಕ್ತರೂ ಇದೇ ಕೊಳಚೆಯುಕ್ತ ನೀರನ್ನು ಸೇವಿಸುವಂತಾಗಿದೆ. ದೇವಸ್ಥಾನದಿಂದ ಕೇವಲ 50 ಮೀ. ಹಿಂದೆ ಈ ಶೌಚಾಲಯದ ಕೊಳಚೆ ನದಿಯನ್ನು ಸೇರುತ್ತಿದೆ.

Advertisement

ಸಾರ್ವಜನಿಕ ದೂರು
ಒಂದು ವರ್ಷದಿಂದ ಈ ಕುರಿತು ಸಾರ್ವಜನಿಕರು ಗ್ರಾ. ಪಂ.ನ ಗಮನ ಸೆಳೆದಿದ್ದರು. ನದಿ ತಟದಲ್ಲೇ ಶೌಚಾಲಯ ಪಿಟ್‌ ನಿರ್ಮಿಸುವುದನ್ನೂ ಆಕ್ಷೇಪಿಸಲಾಗಿತ್ತು. ಆದರೂ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.

ಕೊಳಚೆ ನೀರನ್ನು ನದಿಗೆ ಬಿಡುವಂತಿಲ್ಲ. ಇಂಗುಗುಂಡಿ, ಪಿಟ್‌ ಸೇರಿದಂತೆ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ನದಿಗೆ ಕೊಳಚೆ ಬಿಡುತ್ತಿರುವ ಬಗ್ಗೆ ದೂರು ಬಂದಿದ್ದು, ಉಪ್ಪಿನಂಗಡಿ ಗ್ರಾ.ಪಂ. ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆದು, ಸರಿಪಡಿಸಲು ಸೂಚಿಸಲಾಗಿತ್ತು. ಇದರ ಬಗ್ಗೆ ಸ್ಥಳೀಯಾಡಳಿತವೇ ಪ್ರಥಮ ಕ್ರಮ ಕೈಗೊಳ್ಳಬೇಕು.
ಎಚ್‌.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಪುತ್ತೂರು

ನದಿಗೆ ಶೌಚಾಲಯದ ನೀರು ಬಿಡುವಂತೆಯೇ ಇಲ್ಲ. ಇದರ ಬಗ್ಗೆ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಇದೇ ನೀರನ್ನು ಬಳಕೆ ಮಾಡುತ್ತಿರುವುದರಿಂದ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರಲಾಗುವುದು. ತುಂಬೆಯಲ್ಲಿ  ನೀರನ್ನು ಶುದ್ಧೀಕರಣ ಮಾಡಿಯೇ ನೀಡಲಾಗುತ್ತಿದೆ.      
ಲಿಂಗೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್‌, ಮಂಗಳೂರು ಮನಪಾ

ಮರದ ಗೆಲ್ಲು ಮುರಿದು, ಶೌಚಾಲಯದ ಪೈಪ್‌ ಹಾಗೂ ಪಿಟ್‌ ಹಾಳಾಗಿತ್ತು. ನಿರ್ವಹಣೆಯ ಹೊಣೆ ಹೊತ್ತಿರುವ ಗುತ್ತಿಗೆದಾರರಿಗೆ ಈ ಬಗ್ಗೆ ತಿಳಿಸಿ ಸರಿಪಡಿಸಲಾಗಿದೆ. ಇದಲ್ಲದೇ ಪೈಪ್‌ ನಿರ್ವಹಣೆ ಬಗ್ಗೆ ನೋಟಿಸ್‌ ಕೂಡ ನೀಡಲಾಗಿದೆ. ಬಳಿಕದ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಆಸಫ್‌, ಪಿಡಿಒ, ಉಪ್ಪಿನಂಗಡಿ ಗ್ರಾಮ ಪಂಚಾಯತ್‌

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next