ಶಹಾಬಾದ: ನಗರದ ವಾರ್ಡ್ ನಂ 11ರಲ್ಲಿ ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕಾಮಗಾರಿ ಅವೈಜ್ಞಾನಿಕವಾಗಿದೆ ಹಾಗೂ ಕಳಪೆ ಮಟ್ಟದಿಂದ ಕೂಡಿದೆ. ಈ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ವಾರ್ಡ್ ಸದಸ್ಯೆ ಸುಧಾ ಅನಿಲ ದತ್ತ ಆಗ್ರಹಿಸಿದ್ದಾರೆ.
ಯಾವುದೇ ವಾರ್ಡ್‌ನಲ್ಲಿ ಶೌಚಾಲಯ ನಿರ್ಮಾಣವಾಗಬೇಕಾದರೆ ನಗರಸಭೆ ಸದಸ್ಯರ ಗಮನಕ್ಕೆ ತರಬೇಕು. ಆದರೆ ಇಲ್ಲಿನ ಅಧಿಕಾರಿಗಳು ಸದಸ್ಯರ ಗಮನಕ್ಕೆ ತಾರದೇ ಶೌಚಾಲಯ ಕಟ್ಟಡ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.
ಶೌಚಾಲಯ ವಾರ್ಡ್ ನಂ 10ಕ್ಕೂ ಹಾಗೂ 11ಕ್ಕೂ ಬಾರದೇ ಬಡಾವಣೆಯಿಂದ ಬಹುದೂರ ಕಲ್ಲಿನ ಗಣಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಜೆಇ ಅವರು 11ರಲ್ಲಿ ಬರುತ್ತದೆ ಎನ್ನುತ್ತಾರೆ. ಇದರಿಂದ ಸಾರ್ವಜನಿಕರಿಗೆ ಹೋಗುವುದಕ್ಕೂ ಆಗುವುದಿಲ್ಲ. ಅಲ್ಲದೇ ಮುಳ್ಳು ಕಂಟಿಗಳು, ಕಲ್ಲಿನ ಗಣಿ ತ್ಯಾಜ್ಯ ಕಲ್ಲುಗಳಲ್ಲಿ ನಡೆಯಲು ಆಗುವುದಿಲ್ಲ. ಅಂತಹ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವುದರಿಂದ ಇದು ಯಾರಿಗೆ ಪ್ರಯೋಜನವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ. ಈ ಬಗ್ಗೆ ನಗರಸಭೆ ಜೆಇ ಬಸವರಾಜ ಅವರಿಗೆ ತಿಳಿಸಿದರೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಅಧಿಕಾರಿಗಳೇ ಗುತ್ತಿಗೆದಾರರ ಜತೆ ಸೇರಿಕೊಂಡಿದ್ದರಿಂದಲೇ ಇಂತಹ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಆದ್ದರಿಂದ ಕೂಡಲೇ ಕಾಮಗಾರಿ ನಿಲ್ಲಿಸಿ ಗುತ್ತಿಗೆದಾರನ ಬಿಲ್ ತಡೆ ಹಿಡಿಯಬೇಕು. ಜೆಇ ಬಸವರಾಜ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿರ್ಜನ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುವ ಬದಲು ಬಡಾವಣೆಗೆ ಹತ್ತಿರವಿರುವ ಪ್ರದೇಶದಲ್ಲಿ ನಿರ್ಮಾಣ ಮಾಡಬೇಕು ಎಂದು ಸುಧಾ ಆಗ್ರಹಿಸಿದ್ದಾರೆ.