ಬೆಳಗಾವಿ: ಗ್ರಾಮೀಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಕರೆ ನೀಡಿದರು. ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮಕ್ಕೆ ಶನಿವಾರ ಬೆಳಿಗ್ಗೆ 6.30 ಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ಆವರು, ವ್ಯಕ್ತಿ ಶುಚಿತ್ವ ಕಾಪಾಡಿಕೊಂಡು ಆರೋಗ್ಯಪೂರ್ಣವಾಗಿ ಬದುಕಲು ಶೌಚಾಲಯದ ಅವಶ್ಯಕತೆ ಇದೆ. ಬಯಲು ಶೌಚಕ್ಕೆ ಹೋಗುವುದರಿಂದ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡು, ಬಳಕೆ ಮಾಡಬೇಕು ಎಂದರು.
ನಿಮ್ಮದೇ ಗ್ರಾಮ ನಿಮ್ಮದೇ ಸ್ವಚ್ಛತೆ ಎಂಬ ಸಂದೇಶವನ್ನು ನೀಡಿ ಗ್ರಾಮದಲ್ಲಿ ಈಗಾಗಲೇ ಶೌಚಾಲಯಗಳನ್ನು ಕಟ್ಟಿಸಿಕೊಂಡಿರುವ ಮಹಿಳೆಯರು ಬೇರೆಯವರಿಗೂ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಪ್ರೇರಣೆಯಾಗಬೇಕು. ಅವರ ಮನವೊಲಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕೇಂದ್ರ ಸರಕಾರದ ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣದ ಗುರಿ ನೀಡಿದ್ದು, ಪ.ಜಾ ಮತ್ತು ಪರಿಶಿಷ್ಟ ಪಂಗಡದವರಿಗೆ ತಲಾ ರೂ.15 ಸಾವಿರ ಹಾಗೂ ಉಳಿದ ಫಲಾನುಭವಿಗಳಿಗೆ ರೂ.12 ಸಾವಿರ ಸಹಾಯಧನ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಸಮಾಲೋಚನೆ ನಡೆಸಿದ ಅವರು, ಸತ್ಯಾಗ್ರಹದ ಮೂಲಕ ತನ್ನ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಎಂಬ ವಿದ್ಯಾರ್ಥಿನಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶೌಚಾಲಯದ ಮಹತ್ವ ಮತ್ತು ಬಯಲು ಶೌಚಕ್ಕೆ ಹೋಗುವುದರಿಂದ ಆರೋಗ್ಯದ ಮೇಲೆ ಆಗುವಂತಹ ತೊಂದರೆಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದ ಸಿಇಒ ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಮತ್ತು ಅವುಗಳನ್ನು ಬಳಸುವಂತೆ ಪೋಷಕರು ಹಾಗೂ ಹಿರಿಯರ ಮನವೊಲಿಸಬೇಕು ಎಂದರು.
ನಂತರ ಕರ್ನಾಟಕ ಕಸ್ತೂರಿಬಾ ಬಾಲಿಕಾ ವಸತಿ ನಿಲಯ ಮತ್ತು ಹಿಂದುಳಿದ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ಬಾಲ್ಯ ವಿವಾಹ ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದು, ಪೋಷಕರು ಒತ್ತಾಯದಿಂದ ಬಾಲ್ಯವಿವಾಹ ಮಾಡುತ್ತಿದ್ದರೆ ನೀವು ಶಿಕ್ಷಣವನ್ನು ಪೂರೈಸಿಯೇ ಮದುವೆಯಾಗುವುದಾಗಿ ತಿಳಿಸಬೇಕು. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಬಾಲ್ಯವಿವಾಹ ನಡೆಯುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಎಂದು ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎ.ಎಂ. ಪಾಟೀಲ, ರಾಮದುರ್ಗ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಜಶೇಖರ ನಿಡೋನಿ, ಸಹಾಯಕ ನಿರ್ದೇಶಕ ಸೋಮರಡ್ಡಿ ಹೊಂಗಲ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.