ಭಾಲ್ಕಿ: ತಮ್ಮ ಜವಾಬ್ದಾರಿ ಅರಿತು ನಿಸ್ವಾರ್ಥ ದೇಶ ಸೇವೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಇದಕ್ಕಾಗಿ ಯುವಕರನ್ನು ಮಾನಸಿಕವಾಗಿ ಸಿದ್ದಗೊಳಿಸಬೇಕಾಗಿದೆ ಎಂದು ತುಮಕೂರಿನ ವಕ್ತಾರ ವಿನಯ ಬಿದ್ರೆ ಹೇಳಿದರು. ಪಟ್ಟಣದ ನೂತನ ಟೌನ್‌ಹಾಲ್‌ನಲ್ಲಿ ರವಿವಾರ ಮಂಥನ ಬೀದರ ಜಿಲ್ಲೆ ಕಾರ್ಯಕ್ರಮದಲ್ಲಿ ನಡೆದ ‘ರಾಷ್ಟ್ರ ನಿರ್ಮಾಣದಲ್ಲಿ ವೈಚಾರಿಕ ದಾಯಿತ್ವ, ಭವಿಷ್ಯದ ಭಾರತ’ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜಾತಿ, ಧರ್ಮ, ಲಿಂಗ ಭೇದವಿಲ್ಲದೇ, ಸರ್ಕಾರದ ಮೇಲೆ ಅತಿಯಾದ ಅವಲಂಬನೆ ಯಿಲ್ಲದೇ, ವಿದೇಶ ಮತ್ತು ಅಲ್ಲಿನ ಸರಕುಗಳ ವ್ಯಾಮೋಹ ಕಡಿಮೆ ಮಾಡಿಕೊಂಡು, ಸ್ವದೇಶ ಮತ್ತು ಇಲ್ಲಿ ಉತ್ಪಾದನೆಯಾಗುವ ವಸ್ತುಗಳ ಮೇಲೆ ಪ್ರೇಮ ವೃದ್ಧಿಸಿಕೊಳ್ಳುವ ಯುವಕರು ನಮಗೆ ಬೇಕಾಗಿದ್ದಾರೆ. ಪುಟ್ಟ ದೇಶಗಳಾದ ಜಪಾನ್, ದಕ್ಷಿಣ ಕೋರಿಯಾ, ಇಸ್ರೇಲ್‌ಗಳಂತೆ ಭಾರತದಲ್ಲೂ ಪ್ರತಿಯೊಬ್ಬ ನಾಗರಿಕನು ನಾನೊಬ್ಬ ಯೋಧ ಎಂದು ಭಾವಿಸಿ ದೇಶಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕಿದೆ. ಅದೇ ನಾವು ರಾಷ್ಟ್ರಕ್ಕೆ ಕೊಡುವ ಅತ್ಯಂತ ಶ್ರೇಷ್ಠ ಗೌರವ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್‌ನ ಸುಧಾಕರ ದೇಶಪಾಂಡೆ ಮಾತನಾಡಿ, ಶ್ರೀಮಂತ ಮತ್ತು ಬಡವರ ಮಧ್ಯ ಆರ್ಥಿಕ ಮತ್ತು ಸಾಮಾಜಿಕ ಅಂತರ ಹೆಚ್ಚಾಗಿದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ವಿಶ್ವದ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲದ ಪ್ರಾಕೃತಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳು ಭಾರತದಲ್ಲಿವೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರತಿಷ್ಟಾನದ ತಾಲೂಕು ಅಧ್ಯಕ್ಷ ಶಿವಾಜಿರಾವ್ ಮಾನೆ ಮಾತನಾಡಿ, ಕೃಷಿಗೆ ಬೇಕಾದ ಎಲ್ಲವನ್ನೂ ಸರ್ಕಾರವೇ ಒದಗಿಸಿ ರೈತರು ಬೆಳೆದ ಬೆಳೆಯನ್ನು ಕೂಡ ಸರ್ಕಾರವೇ ನೇರವಾಗಿ ಖರೀದಿಸಬೇಕು. ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತಗೊಳಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ತಾಂಡವವಾಡುತ್ತಿರುವ ವೇತನ ತಾರತಮ್ಯ ಕಡಿಮೆ ಮಾಡಬೇಕು ಎಂದು ಹೇಳಿದರು.
ಎಬಿವಿಪಿ ಪ್ರಮುಖ ಈಶ್ವರ ರುಮ್ಮಾ ಮಾತನಾಡಿ, ಭಾರತ ಎಲ್ಲ ದೇಶಗಳಿಗಿಂತಲೂ ಮುಂಚೂಣಿಯಲ್ಲಿರಬೇಕು. ಸಂಪೂರ್ಣ ಸಾಕ್ಷರತಾ ರಾಷ್ಟ್ರವಾಗಬೇಕು. ಇಲ್ಲಿನ ಜನರ ಸೃಜನಶೀಲತೆ ಗುರುತಿಸಿ ಅದನ್ನು ಸರ್ಕಾರವೇ ಜಗತ್ತಿಗೆ ಪರಿಚಯಿಸಬೇಕು ಎಂದು ಹೇಳಿದರು.
ಪ್ರಜ್ಞಾಪ್ರವಾಹ ಜಿಲ್ಲಾ ಸಂಯೋಜಕ ಶಿವಾನಂದ ದಾಡಗೆ ಮಾತನಾಡಿ, ದೇಶದಲ್ಲಿ ಭಿಕ್ಷುಕರೆ ಇರಬಾರದು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರನ್ನು ಕಾಯಿಸುವಂತಾಗಬಾರದು. ಶುಚಿತ್ವ, ಸಾಧನೆ, ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ನಮ್ಮ ದೇಶ ವಿಶ್ವದಲ್ಲಿಯೇ ಮುಂದಿರಬೇಕು ಎಂದು ಹೇಳಿದರು.
ಪ್ರಕಾಶ ಮಾಶೆಟ್ಟೆ, ಬಿಜೆಪಿ ಪ್ರಮುಖ ಶಿವರಾಜ ಗಂದಗೆ ಮಾತನಾಡಿದರು. ಇದೇವೇಳೆ ಬೆಳಗ್ಗೆ ಯಿಂದ ಸಂಜೆ ವರೆಗೆ, ನಮ್ಮ ಸೈನ್ಯ ನಮ್ಮ ಹೆಮ್ಮೆ, ಸ್ವತಂತ್ರ ಸಮರ್ಥ ಭಾರತ, ವಿಶ್ವಮಾನ್ಯ ಭಾರತ ವಿಷಗಳ ಕುರಿತು ಗೋಷ್ಠಿಗಳು ನಡೆದವು. ಸಂಗಮೇಶ ಫುಲಾರಿ ಸ್ವಾಗತಿಸಿದರು. ರವಿಚಂದ್ರ ಬರದಾಪುರೆ ವಂದಿಸಿದರು.