ನೆಲ್ಯಾಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನಲ್ಲಿ ಆಗಮಿಸಿ ಪ್ರಾಣ ಕಳೆದುಕೊಳ್ಳುವ ಯೋಚನೆಯಲ್ಲಿದ್ದ ಬೆಂಗಳೂರಿನ ಮಹಿಳೆ ಹಾಗೂ ಮಕ್ಕಳನ್ನು ಕೊಕ್ಕಡದ ಯುವಕರು ಸಾವಿನ ದವಡೆಯಿಂದ ಪಾರು ಮಾಡಿ ಮರಳಿ ಮನೆಗೆ ಸೇರುವಂತೆ ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಕೊಕ್ಕಡದ ಯುವಕರ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ಸೂಚಿಸಿದ್ದಾರೆ.
ಕೊಕ್ಕಡದ ರಫೀಕ್ ಬೋಳದಬೈಲು ಹಾಗೂ ಅಝೀಜ್ ಬೆಂಗಳೂರಿನಿಂದ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ವಾಪಸಾಗುತ್ತಿದ್ದ ವೇಳೆ ತಮ್ಮ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಮಕ್ಕಳು ಅಳುತ್ತಾ ಇರುವುದನ್ನು ಸೂಕ್ಷ್ಮ ವಾಗಿ ಗಮನಿಸಿದ್ದರು. ಮಹಿಳೆ ಯಾರೊಂದಿಗೋ ಮೊಬೈಲ್‌ನಲ್ಲಿ ಅಳುತ್ತಾ ಮಾತನಾಡಿ, ತಾನು ಮಕ್ಕಳೊಂದಿಗೆ ಸಾಯಲು ಹೊರಟಿದ್ದಾಗಿ ಹೇಳುತ್ತಿದ್ದುದನ್ನು ಗಮನಿಸಿದ ರಫಿಕ್ ಹಾಗೂ ಅಝೀಜ್ ಮಹಿಳೆಯನ್ನು ಮಾತನಾಡಿಸಿದರು.
ಆಗ ಆಕೆ ತಾನು ರಾಮನಗರ ನಿವಾಸಿ ಚಂದ್ರಕಲಾ, ತನ್ನ ಮಕ್ಕಳಾದ ಭಾವನಾ ಹಾಗೂ ವಿದ್ಯಾಶ್ರೀ ಜತೆಗೆ ಗಂಡನ ಹೆತ್ತವರ ಕಿರುಕುಳ ತಡೆಯಲಾರದೆ ಯಾರಲ್ಲೂ ಹೇಳದೆ ಬಂದಿರುವುದಾಗಿ ತಿಳಿಸಿದರು. ಕೊಟ್ಟಿಗೆಹಾರ ಬಳಿ ಬಸ್ಸಿನಿಂದ ಇಳಿದ ಮಹಿಳೆಯನ್ನು ಹಿಂಬಾಲಿಸಿ ಗಮನಿಸುತ್ತಿದ್ದ ಈ ಯುವಕರಿಗೆ ಮಹಿಳೆಯಲ್ಲಿ ಉಳಿದಿರುವ ಹಣ ಕೇವಲ 20 ರೂ. ಎಂದು ತಿಳಿದಾಗ ಉಪಾಹಾರ ಹಾಗೂ ನೀರು ತೆಗೆದುಕೊಟ್ಟಿದ್ದಾರೆ. ಬಳಿಕ ಮಹಿಳೆಯ ಪತಿಯ ಮೊಬೈಲ್ ಸಂಖ್ಯೆ ಪಡೆದುಕೊಂಡು ಕರೆ ಮಾಡಿದರು. ಮಹಿಳೆಯ ಪತಿ ಕೂಡಲೇ ಬೆಂಗಳೂರಿನಿಂದ ಹೊರಟು ಬರುವುದಾಗಿ ತಿಳಿಸಿದ್ದು, ಆ ತನಕ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಲು ಮನವಿ ಮಾಡಿಕೊಂಡಿದ್ದರು.
ಮಾಧ್ಯಮ ಸಂಪರ್ಕ: ಬೆಳ್ತಂಗಡಿ ತಾಲೂಕು ಕೋಮು ಸೂಕ್ಷ್ಮ ಪ್ರದೇಶವಾದ್ದರಿಂದ ಯುವಕರು ಮಹಿಳೆ ಮತ್ತು ಮಕ್ಕಳೊಂದಿಗೆ ಧರ್ಮಸ್ಥಳಕ್ಕೆ ತೆರಳಿದರು. ತಪ್ಪು ತಿಳುವಳಿಕೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎನ್ನುವ ಮುಂಜಾಗ್ರತೆಯಿಂದ ಕೊಕ್ಕಡದ ಮಾಧ್ಯಮ ವರದಿಗಾರರನ್ನು ಸಂಪರ್ಕಿಸಿದರು.
ಮಾಧ್ಯಮ ವರದಿಗಾರರು ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮಾಹಿತಿ ನೀಡಿದರು. ಮಹಿಳೆ ಮತ್ತು ಮಕ್ಕಳೊಂ ದಿಗೆ ಯುವಕರು ಬಸ್ಸಿನಿಂದ ಇಳಿಯುವ ಹೊತ್ತಿಗೆ ಪೊಲೀಸ್ ವಾಹನ ಸಿದ್ಧವಾಗಿದ್ದು, ಅವರನ್ನು ಪೊಲೀಸ್ ಸುಪರ್ದಿಗೆ ಒಪ್ಪಿಸಲಾಯಿತು.
ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬಂದ ಪತಿಯ ಜತೆಯಲ್ಲಿ ಮಹಿಳೆ ಹಾಗೂ ಮಕ್ಕಳನ್ನು ಕಳುಹಿಸಿಕೊಡಲಾಗಿದೆ. ಮಕ್ಕಳೊಂದಿಗೆ ಸಾಯಲು ಹೋಗುತ್ತಿದ್ದೇನೆ ಅನ್ನುವ ಮಹಿಳೆಯ ಮಾತುಗಳನ್ನು ಕೇಳಿಸಿಕೊಂಡು ಸಮಯೋಚಿತವಾಗಿ ವರ್ತಿಸಿ ಮೂರು
ಜೀವಗಳನ್ನು ಉಳಿಸಿದ ಯುವಕರ ಕಾರ್ಯಕ್ಕೆ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಮನೆಯಲ್ಲಿ ಹಿಂದಿನ ರಾತ್ರಿ ನಡೆದ ಘಟನೆಯಿಂದ ನನ್ನ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಎಲ್ಲಿ ಹೋಗಿದ್ದಾರೆ ಅನ್ನುವ ಮಾಹಿತಿಯೇ ನಮಗೆ ಇರಲಿಲ್ಲ. ಕೊಕ್ಕಡದ ಯುವಕರ ಸಾಂತ್ವನದಿಂದ ಹೆಂಡತಿ ಮಕ್ಕಳನ್ನು ಮರಳಿ ಪಡೆಯುವಂತಾಯಿತು. ರಕ್ಷಿಸಿದ ಯುವಕರಿಗೆ ಒಳಿತಾಗಲಿ.
ಶಿವಾಜಿ ರಾವ್, ಮಹಿಳೆಯ ಪತಿ
ಗುರುಮೂರ್ತಿ ಎಸ್. ಕೊಕ್ಕಡ