Advertisement

ಖಾನಾಪುರದಲ್ಲಿ ತೆಲಗಿ ಅಂತ್ಯಕ್ರಿಯೆ ಇಂದು

08:26 AM Oct 28, 2017 | Team Udayavani |

ಖಾನಾಪುರ: ನಕಲಿ ಛಾಪಾ ಕಾಗದ ಹಗರಣದ ಆರೋಪಿ ಕರೀಂಲಾಲ್‌ ತೆಲಗಿ ಮೃತದೇಹ ಶನಿವಾರ ಬೆಳಗ್ಗೆ 6 ಗಂಟೆಗೆ
ಖಾನಾಪುರಕ್ಕೆ ಆಗಮಿಸಲಿದ್ದು, 10 ಗಂಟೆ ಸುಮಾರಿಗೆ ಬಹಾರ ಗಲ್ಲಿಯ ಕಬರಸ್ಥಾನ(ಸ್ಮಶಾನ)ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗು ವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಅಂತಿಮ ಇಚ್ಛೆಯಂತೆ ಖಾನಾಪುರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ. 

Advertisement

ಮೃತದೇಹವನ್ನು ಸಾರ್ವಜನಿಕರ ವೀಕ್ಷಣೆಗಾಗಿ ಪಟ್ಟಣದ ವಿದ್ಯಾನಗರದ ಮನೆ ಎದುರು ಸ್ವಲ್ಪ ಹೊತ್ತು ಇರಿಸಲಾಗುವುದು ಎಂದು ಹಿರಿಯ ಸಹೋದರನ ಪುತ್ರ ತಿಳಿಸಿದ್ದಾರೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗಿದ್ದು, ಆಂಬ್ಯುಲೆನ್ಸ್‌ ಮೂಲಕ ಖಾನಾಪುರ ಪಟ್ಟಣಕ್ಕೆ ಆಗಮಿಸಲಿದೆ. ವಿಜಯಪುರ ಜಿಲ್ಲೆಯ ತೆಲಗಿ ಸೇರಿ ವಿವಿಧ ಕಡೆಯಿಂದ ಸಂಬಂಧಿಕರು ಈಗಾಗಲೇ ಖಾನಾಪುರಕ್ಕೆ ಆಗಮಿಸಿದ್ದಾರೆಂದು ತೆಲಗಿ ಸಹೋದರ ಅಜೀಂ ಲಾಡಸಾಬ ತೆಲಗಿ ಹಾಗೂ ಅಳಿಯ ಇರ್ಫಾನ್‌ ತಾಳಿಕೋಟಿ ಪತ್ರಿಕೆಗೆ ತಿಳಿಸಿದ್ದಾರೆ. ಕರೀಂ ಲಾಲ್‌ ತೆಲಗಿಯ ಅನಾರೋಗ್ಯ ನಿಮಿತ್ತ ಈ ಮೊದಲೇ ಬೆಂಗಳೂರಿಗೆ ತೆರಳಿದ್ದ ಪುತ್ರಿ ಸನಾ ಹಾಗೂ ಪತ್ನಿ ರಿಯಾನಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಬೆಂಗಳೂರು, ಹುಬ್ಬಳ್ಳಿ, ಮುಂಬೈ ಹಾಗೂ ಅಜ್ಮಿರದಿಂದ ಸ್ನೇಹಿತರು, ಪರಿಚಯಸ್ಥರು ಕೂಡ ಶನಿವಾರ ಆಗಮಿಸಲಿದ್ದಾರೆ.

35 ಕೇಸುಗಳ ವಿಚಾರಣೆ ಪೂರ್ಣ
ಬೆಂಗಳೂರು: ಅಬ್ದುಲ್‌ ಕರೀಂ ಲಾಲ್‌ ತೆಲಗಿ ವಿರುದ್ಧ ರಾಜ್ಯದಲ್ಲಿ ದಾಖಲಾಗಿದ್ದ 35 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ತೆಲಗಿ ವಿರುದ್ಧ ಮಡಿವಾಳ, ಆರ್‌.ಟಿನಗರ, ಕೆ.ಆರ್‌.ಮಾರುಕಟ್ಟೆ, ಉಪ್ಪಾರಪೇಟೆ, ಯಶವಂತಪುರದಲ್ಲಿ ನಕಲಿ ಛಾಪಾ ಕಾಗದ ಆರೋಪ ಸಂಬಂಧ 35 ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಅಧೀನ ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಇದ್ದ ಕೇಸುಗಳು, ತೆಲಗಿ ಹಾಗೂ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಹೈಕೋರ್ಟ್‌ ವಿಭಾಗೀಯ ಪೀಠ ಸೆ.5ರಂದು ತೆಲಗಿ ವಿರುದ್ಧದ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿತ್ತು. ಜುಲೈ 5ರಿಂದ ಸೆಪ್ಟೆಂಬರ್‌ 8ರವರೆಗೆ ತೆಲಗಿ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಹೈಕೋಟ್‌ ìನ ನ್ಯಾ. ರವಿ ಮಳೀಮಠ ಹಾಗೂ ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಿತ್ತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೇಸುಗಳ ವಿಚಾರಣೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ  ಪೂರ್ಣಗೊಳಿಸಿದ ಹೆಗ್ಗಳಿಕೆ ನ್ಯಾಯಪೀಠದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next