Advertisement

ಐದು ರಾಜ್ಯಗಳಲ್ಲಿ  ಕರ್ನಾಟಕ ಮಾದರಿ ಮೈತ್ರಿಕೂಟ?

06:00 AM Dec 11, 2018 | Team Udayavani |

ಹೊಸದಿಲ್ಲಿ/ಮುಂಬಯಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದೆ. ಹಲವು ಸುದ್ದಿ ವಾಹಿನಿ ಗಳು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿರುವುದರಿಂದ ಕರ್ನಾಟಕ ಮಾದರಿಯ ಮೈತ್ರಿಕೂಟ ರಚನೆ ಸಾಧ್ಯವಿದೆಯೇ ಎಂಬ ಬಗ್ಗೆ ಬಿಜೆಪಿ, ಕಾಂಗ್ರೆಸ್‌, ಇತರ ಪಕ್ಷ ಗಳು ಲೆಕ್ಕಾಚಾರ ಹಾಕತೊಡಗಿವೆ. ಈಗಾಗಲೇ ಪ್ರಾದೇ ಶಿಕ ಪಕ್ಷಗಳ ಜತೆಗೆ ಮಾತುಕತೆಯೂ ಶುರುವಾಗಿದೆ. 2018ರ ಮೇಯಲ್ಲಿ ಕರ್ನಾಟಕ ಚುನಾವಣ ಫ‌ಲಿತಾಂಶದ ವೇಳೆ, ಆರಂಭದಲ್ಲಿ ಬಿಜೆಪಿಗೆ ಅಧಿ ಕಾರ ಸಿಗಲಿದೆ ಎಂಬ ಟ್ರೆಂಡ್‌ ಇದ್ದರೂ ಅಂತಿಮವಾಗಿ 7 ಸ್ಥಾನಗಳ ಕೊರತೆ ಉಂಟಾಗಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿತು.

Advertisement

ಅದರಂತೆ ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ರಚನೆಯಾದರೆ ಪಕ್ಷೇತರರು, ಬಿಎಸ್‌ಪಿ ಮತ್ತು ಗೊಂಡ್ವಾನಾ ಗೋಮಾಂತಕ ಪಕ್ಷದ ಜತೆಗೆ ಸರಕಾರ ರಚಿಸಲು ಬಿಜೆಪಿ ಅಥವಾ ಕಾಂಗ್ರೆಸ್‌ ಮುಂದಾಗಬಹುದು. ಛತ್ತೀಸ್‌ಗಢ ದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಮಾಜಿ ಸಿಎಂ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ (ಜೆಸಿಸಿ), ಬಿಎಸ್‌ಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಹೆಚ್ಚಿನ ಬಲ ಬಂದಂತಾಗಲಿದೆ. ಏಕೆಂದರೆ ಇಲ್ಲಿ ಸರಕಾರ ರಚಿಸಲು ಪ್ರಮುಖ ಪಕ್ಷಗಳು ಈ ಪಕ್ಷಗಳನ್ನೇ ನೆಚ್ಚಿಕೊಳ್ಳ ಬೇಕಾಗುತ್ತದೆ.

ತೆಲಂಗಾಣದಲ್ಲಿ ಸಂಸದ ಅಸಾದುದ್ದೀನ್‌ ಒವೈಸಿ ಅವರ ಎಂಐಎಂ ಪಕ್ಷ ಮತ್ತು ಬಿಜೆಪಿ ಪ್ರಬಲ ಪರ್ಯಾಯ ಶಕ್ತಿಯಾಗಿ ಮೂಡಿಬರುವ ವಿಶ್ವಾಸವನ್ನು ಹೊಂದಿವೆ. ಇನ್ನು ಮಿಜೋರಾಂನಲ್ಲಿ ಕಾಂಗ್ರೆಸ್‌ ಸೋತರೆ, ವಿಪಕ್ಷ ಮಿಜೋ ನ್ಯಾಶನಲ್‌ ಫ್ರಂಟ್‌ ಜತೆ ಸೇರಿಕೊಂಡು ಸರಕಾರ ರಚಿಸಲು ಬಿಜೆಪಿ ಉತ್ಸುಕವಾಗಿದೆ. ಅಸ್ಸಾಂ ಸಚಿವ ಹಿಮಾಂತ ಬಿಸ್ವ ಶರ್ಮಾ ಈಗಾಗಲೇ ರಂಗಕ್ಕೆ ಇಳಿದಿದ್ದಾರೆ.

ಷೇರುಪೇಟೆ 714 ಅಂಕ ಕುಸಿತ
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಐದು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಸೋಮವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 714 ಅಂಕ ಕುಸಿತ ಕಂಡಿದೆ. ಕಳೆದ 2 ತಿಂಗಳಲ್ಲಿ ಆಗಿರುವ ಅತ್ಯಧಿಕ ಕುಸಿತ ಇದಾಗಿದೆ. ಇದರ ಜತೆಗೆ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಮಧ್ಯಾಂತರ ವಹಿವಾಟಿನಲ್ಲಿ ಕುಸಿದದ್ದು ಕೂಡ ಸೆನ್ಸೆಕ್ಸ್‌ ಇಳಿಕೆಗೆ ಕಾರಣ ಎನ್ನಲಾಗಿದೆ. ಬಿಎಸ್‌ಇ, ಎನ್‌ಎಸ್‌ಇನಲ್ಲಿ ವಹಿವಾಟು ನಡೆಸಿದ ಎಲ್ಲ ಮಾದರಿಯ ಕಂಪೆನಿಗಳ ಷೇರುಗಳೂ ಕುಸಿತ ಕಂಡಿವೆ. ಬಿಎಸ್‌ಇ ಸೂಚ್ಯಂಕ ದಿನಾಂತ್ಯಕ್ಕೆ 34,959.19ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ 205 ಅಂಕ ಕುಸಿತ ದಾಖಲಿಸಿ 10,488.45ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next