Advertisement

ಇಂದು ಬರೀ ಲೆಕ್ಕಾಚಾರವಲ್ಲೋ ಅಣ್ಣಾ ! ;ಇಂದು ಬಜೆಟ್‌ ಕುತೂಹಲ

12:11 AM Feb 08, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ರಾಜ ಕೀಯ ಗೊಂದಲ ಮುಂದುವರಿದಿದ್ದು, ಅಧಿ ವೇಶನಕ್ಕೆ ಅತೃಪ್ತ ಶಾಸಕರು ಬಾರ ದಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿಯ ತಂತ್ರಗಳಿಗೆ ಕಾಂಗ್ರೆಸ್‌ ಪ್ರತಿತಂತ್ರ ಹೂಡುತ್ತಿದೆ. ಆದರೂ ಹಲವು ರೀತಿಯ ಲೆಕ್ಕಾಚಾರಗಳಲ್ಲಿ ರಾಜಕೀಯ 
ಆಟ  ಮುಂದುವರಿದಿದೆ. ಇವೆಲ್ಲದರ  ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಲಿರುವ ಬಜೆಟ್‌ ಕುತೂಹಲ ಮೂಡಿಸಿದೆ.

Advertisement

ಬಿಜೆಪಿಗೆ ವಿಧಾನಸಭೆಯಲ್ಲಿ ನಿರೀಕ್ಷಿತ ಸಂಖ್ಯಾಬಲವಾಗದಂತೆ ಅತೃಪ್ತರ ಸಂಖ್ಯೆ ಕಡಿಮೆ ಮಾಡಲು ಇರುವ ಸಾಧ್ಯತೆಗಳನ್ನು ಬಳಸಿ ಕೊಂಡು ಕಾಂಗ್ರೆಸ್‌ ಕಾರ್ಯಾಚರಣೆ ನಡೆಸು ತ್ತಿದೆ. ಆ ಕಾರಣಕ್ಕಾಗಿಯೇ ಪಕ್ಷದ ವಿಪ್‌ ಮತ್ತು ನಿರಂತರ ನೋಟಿಸ್‌ಗಳಿಗೆ ಪ್ರತಿ ಕ್ರಿಯೆ ನೀಡದ ಅತೃಪ್ತರಿಗೆ ಮತ್ತೂಂದು ಅವಕಾಶ ಕೊಡಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಕಾನೂನು ಕ್ರಮ ಒತ್ತಡದ ಮೂಲಕ ಅತೃಪ್ತರ ಸಂಖ್ಯೆಯನ್ನು ಕಡಿಮೆ ಮಾಡಿ ಆಪರೇಷನ್‌ ಕಮಲದ ತಂತ್ರಕ್ಕೆ ಹಿನ್ನಡೆಯುಂಟು ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಮೂರು ಪಕ್ಷಗಳ ತಂತ್ರಗಾರಿಕೆ
ಸಂಪರ್ಕಕ್ಕೆ ಸಿಗದೇ ದೂರವೇ ಉಳಿದಿರುವ ಅತೃಪ್ತ ಶಾಸಕರ ವಿರುದ್ಧ ಕಡೇ ಅಸ್ತ್ರವಾಗಿ ಅನರ್ಹತೆ ಎಚ್ಚರಿಕೆಯ ನೋಟಿಸ್‌ ನೀಡಲಾಗಿದೆ. ಇದರ ಪ್ರಕಾರ ಶುಕ್ರವಾರ ಬೆಳಗ್ಗೆ ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಬರಲೇಬೇಕು. ಬಾರದೇ ಹೋದಲ್ಲಿ ಅನರ್ಹರಾಗಬೇಕಾದೀತು ಎಂಬ ಎಚ್ಚರಿಕೆ ನೀಡಿ ಅವರನ್ನು ವಾಪಸ್‌ ಸೆಳೆಯುವ ಪ್ರಯತ್ನ ನಡೆಸಲಾಗಿದೆ. ಈ ದಾಳಕ್ಕೆ ಶಾಸಕರು ಅನಿವಾರ್ಯವಾಗಿ ಬಗ್ಗುತ್ತಾರೆ ಎಂಬುದು ಕಾಂಗ್ರೆಸ್‌ ನಾಯಕರ ತಂತ್ರಗಾರಿಕೆ.

ಸದ್ಯಕ್ಕೆ ಸಿಎಂ ಅವರ ಬಜೆಟ್‌ ಭಾಷಣಕ್ಕೆ ಅಡ್ಡಿ ಮಾಡುವುದಷ್ಟೇ ಬಿಜೆಪಿಯ ಒಂದು ಸಾಲಿನ ಟಾರ್ಗೆಟ್‌. ಆದರೆ ಸದನ ದಲ್ಲಿ ಯಾವ ರೀತಿ ನಡೆದುಕೊಳ್ಳ ಬೇಕು ಎಂಬ ಬಗ್ಗೆ ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಪಕ್ಷದ ಶಾಸಕ ರಿಗೆ ಪಾಠ ಮಾಡಿದ್ದಾರೆ. ಸದನದ ಬಾವಿಗೆ ನುಗ್ಗದೆ ಕುಳಿತಲ್ಲೇ ಬಜೆಟ್‌ ಮಂಡಿಸು ವಾಗ, ಸರಕಾರದ ವೈಫ‌ಲ್ಯಗಳನ್ನು ಎತ್ತಿ ತೋರಿಸುವ ತಂತ್ರಗಾರಿಕೆ ನಡೆಸ ಲಾಗಿದೆ. 

ತಮ್ಮ ಯಾವುದೇ ಶಾಸಕರು ಆಪರೇಷನ್‌ ಕಮಲಕ್ಕೆ ತುತ್ತಾಗಲ್ಲ ಎಂಬ ಭರವಸೆಯಲ್ಲಿದ್ದ ಸಿಎಂ ಕುಮಾರಸ್ವಾಮಿ, ಓರ್ವ ಶಾಸಕ ನಾಪತ್ತೆಯಾಗುತ್ತಿದ್ದಂತೆ ಅನಿವಾರ್ಯವಾಗಿ ವಿಪ್‌ ಮೊರೆ ಹೋಗಿದ್ದಾರೆ. ಕುಮಾರಸ್ವಾಮಿ ಬಜೆಟ್‌ ಮಂಡಿಸುವಾಗ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಲೇ ಬೇಕು ಎಂದು ಸೂಚಿಸಲಾಗಿದೆ. ಈ ಮೂಲಕ ನಾರಾಯಣಸ್ವಾಮಿ ಅವರನ್ನು ವಾಪಸ್‌ ಕರೆತರುವ ತಂತ್ರಗಾರಿಕೆ ಮಾಡಲಾಗಿದೆ.

Advertisement

ಈಗಾಗಲೇ ಕಡ್ಡಾಯ ಹಾಜರಾಗು ವಂತೆ ಸರಕಾರದ ಮುಖ್ಯ ಸಚೇತಕರ ಮೂಲಕವೇ ವಿಪ್‌ ಜಾರಿ ಮಾಡಿದರೂ ಮಣಿಯದ ಬಂಡಾಯ ಶಾಸಕರನ್ನು ಕಾನೂನು ಮೂಲಕವೇ ನಿಯಂತ್ರಿಸಲು ಪೂರಕ ವಾತಾವರಣ ನಿರ್ಮಿಸುವ ಪ್ರಯತ್ನವನ್ನೂ ಕಾಂಗ್ರೆಸ್‌ ನಾಯಕರು ಮುಂದುವರಿಸಿದ್ದಾರೆ. 

ಉಚ್ಚಾಟನೆ ಅಸ್ತ್ರ
ಈ ಬಾರಿ ಹಾಜರಾಗದಿದ್ದರೆ, ಪಕ್ಷ ವಿರೋಧಿ ಚಟುವಟಿಕೆ ಕಾಯ್ದೆಯ ಸಂವಿಧಾನದ 10ನೇ ಪರಿಚ್ಛೇದದ ಪ್ರಕಾರ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು “ಥ್ರಿà ಲೈನ್‌ ನೋಟಿಸ್‌’ನ್ನು ಶಾಸಕಾಂಗ ಪಕ್ಷದ ಕಾರ್ಯದರ್ಶಿ ಪಿ.ಆರ್‌. ರಮೇಶ್‌ ಮೂಲಕ ನೀಡಲಾಗಿದೆ. ಬಿಜೆಪಿಯವರು ಬಂಡಾಯಗಾರರಿಂದ ರಾಜೀನಾಮೆ ಕೊಡಿಸುವ ಪ್ರಯತ್ನ ನಡೆಸುತ್ತಿದ್ದರೂ ಸಂಖ್ಯಾ ಬಲದ ಕೊರತೆ ಎದುರಾಗುತ್ತಿ ರುವುದರಿಂದ ಅದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್‌ ಈಗಾಗಲೇ ಗೈರು ಹಾಜರಾಗಿರುವ ಆರು ಜನ ಶಾಸಕರಿಗೆ ಪ್ರತ್ಯೇಕ ನೋಟಿಸ್‌ ನೀಡಿದೆ. 

ಶುಕ್ರವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಹಾಜರಾ ಗದಿದ್ದರೆ ಬಜೆಟ್‌ ಮಂಡನೆಯ ಬಳಿಕ ಇಬ್ಬರು ಬಂಡಾಯ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಸಭಾಧ್ಯಕ್ಷ ರಮೇಶ್‌ಕುಮಾರ್‌ಗೆ ದೂರು ನೀಡಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಜೆಡಿಎಸ್‌ ವಿಪ್‌ 
ಜೆಡಿಎಸ್‌ನ ನಾರಾಯಣಗೌಡ ಅವರು ಮುಂಬಯಿಯಲ್ಲಿದ್ದಾರೆ ಎಂದು ಹೇಳಲಾಗಿದ್ದು ಅವರನ್ನು ಕರೆತರಲು ಮಾಜಿ ಶಾಸಕ ಮಂಜುನಾಥಗೌಡ ಅವರನ್ನು ಕಳುಹಿಸಲಾಗಿದೆ. ಬೇರೆ ಶಾಸಕರು ಕೈ ಕೊಡಬಹುದು ಎಂಬ ಅನುಮಾನದಿಂದ ಸಿಎಂ ಕುಮಾರಸ್ವಾಮಿ ಅವರು ಪಕ್ಷದ ಎಲ್ಲ ಶಾಸಕರಿಗೆ  ವಿಪ್‌ ಜಾರಿ ಮಾಡಿದ್ದಾರೆ.

ತಲೆಕೆಳಗಾದ ಲೆಕ್ಕಾಚಾರ 
ಗುರುವಾರ ಅಪರಾಹ್ನ ನಾಲ್ವರು ಅತೃಪ್ತರು ಮುಂಬಯಿಗೆ ತೆರಳಿ ಬಂಡಾಯಗಾರರ ಗುಂಪು ಸೇರುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ. ಈಗಾಗಲೇ ಆರು ಜನ ಅತೃಪ್ತರು ಮುಂಬಯಿಯಲ್ಲಿ ಇರುವುದರಿಂದ ಮತ್ತೆ ನಾಲ್ವರು ಸೇರಿದರೆ ಬಂಡಾಯಗಾರರ ಸಂಖ್ಯೆ 10ಕ್ಕೇರಿದಂತಾಗುತ್ತದೆ. ಆ ಸಂಖ್ಯೆ ಆಧಾರದಲ್ಲಿ ಮತ್ತೆ ನಾಲ್ವರು ಅತೃಪ್ತರ ತಂಡ ಸೇರಿಕೊಳ್ಳುತ್ತಾರೆ. ಒಟ್ಟು 14 ಜನ ಅತೃಪ್ತರು ಸೇರಿದರೆ ಎಲ್ಲರನ್ನೂ ಒಟ್ಟಿಗೆ ಕರೆತಂದು ರಾಜೀನಾಮೆ ಕೊಡಿಸುವುದು ಬಿಜೆಪಿಯ ಲೆಕ್ಕಾಚಾರವಾಗಿತ್ತು ಎಂದು ತಿಳಿದು ಬಂದಿದೆ. 

ಬಜೆಟ್‌ ನಿರೀಕ್ಷೆಗಳು

ಸಾಲ ಮನ್ನಾಕ್ಕೆ ಹಣ
ರಾಜ್ಯದಲ್ಲಿ  ಸಾಲ ಮನ್ನಾ ಆಗಲೇ ಇಲ್ಲ ಎಂಬ ಅಪವಾದ ದಿಂದ ಹೊರ ಬರಲು ಮುಖ್ಯ ಮಂತ್ರಿ ಕುಮಾರ ಸ್ವಾಮಿ ಈ ಬಜೆಟ್‌ನ್ನು ಬಳಸಿಕೊಳ್ಳಲೇ ಬೇಕಾ ಗಿದೆ. ಹೀಗಾಗಿ, ಘೋಷಣೆ ಯಾಗಿ ರುವ ಸಾಲ ಮನ್ನಾಕ್ಕೆ ಬೇಕಾದ ಹಣ ಮೀಸಲಿಡು ವುದು, ಸಾಲ ಮನ್ನಾ ಪ್ರಕ್ರಿಯೆ ಸರಳ ಮಾಡುವ ಕ್ರಮ ಕೈಗೊಳ್ಳ ಬಹುದು. 

ಉಚಿತ ಬಸ್‌ ಪಾಸ್‌
ಸಿದ್ದರಾಮಯ್ಯ ಘೋಷಿಸಿದ್ದ ಉಚಿತ ಬಸ್‌ ಪಾಸ್‌ ಯೋಜನೆಯನ್ನು ಈ ಬಾರಿ ಬಜೆಟ್‌ನಲ್ಲಿ ಜಾರಿಗೊಳಿಸುವ ನಿರೀಕ್ಷೆ ಇದೆ. ಈ ಯೋಜನೆಯಡಿ 1ನೇ ತರಗತಿಯಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಯವರೆಗೆ ಉಚಿತ ಬಸ್‌ ಪಾಸ್‌ ದೊರೆಯಲಿದೆ.

ನೀರಾವರಿಗೆ ಒತ್ತು
ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ಒದಗಿಸಿ ಮೇಕೆ ದಾಟು, ಎತ್ತಿನಹೊಳೆ ಸೇರಿದಂತೆ ಪ್ರಮುಖ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿ ಸಲು ಅಗತ್ಯ ಹಣಕಾಸು ಮೀಸ ಲಿಡು ತ್ತಾರೆ ಎನ್ನುವ ನಿರೀಕ್ಷೆ ಇದೆ.

ಕೌಶಲಾಭಿವೃದ್ಧಿ
ರಾಜ್ಯದಲ್ಲಿ  ನಿರುದ್ಯೋಗ ನಿವಾರಣೆಗೆ ಯಾವ ಯೋಜನೆ ಜಾರಿಗೊಳಿಸುತ್ತಾರೆ ಎಂಬ ಕುತೂಹಲ ಇದೆ. ಯುವ ಜನತೆಗೆ ಕೌಶಲಾಭಿವೃದ್ಧಿ ಜತೆಗೆ ಉದ್ಯೋಗ ಅವಕಾಶ ಕಲ್ಪಿಸುವ ಕ್ರಮದ ನಿರೀಕ್ಷೆ .

ನಿಗಮ ಮಂಡಳಿ ಭರವಸೆ
ಈಗಾಗಲೇ ಬಂಡಾಯಗಾರರ ಪಾಳಯದಲ್ಲಿ ಗುರುತಿಸಿಕೊಂಡಿರುವ ಶಾಸಕರನ್ನು ಮಾತನಾಡಿಸಿ ಮನವೊಲಿಸುವ ಪ್ರಯತ್ನ ಮುಂದುವರಿಸಿರುವ ಕೈ ನಾಯಕರು ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಮತ್ತು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್‌ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಕಾಂಗ್ರೆಸ್‌ನ ಈ ತಂತ್ರದಿಂದ ಬಿಜೆಪಿಯ ಪ್ರತಿದಿನದ ಲೆಕ್ಕಾಚಾರವೂ ಹೆಚ್ಚು ಕಡಿಮೆಯಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next