ಮೈಸೂರು: ರೈತರ ಸಾಲಮನ್ನಾಗೆ ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ, ಬರ ಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಬಂದ್ ಕರೆಗೆ ಸಾಂಸ್ಕೃತಿಕ ನಗರಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ.
ಕನ್ನಡ ಪರ ಸಂಘಟನೆಗಳ ಒಕ್ಕೂಟ ಮುಂದಿಟ್ಟಿರುವ ವಿಷಯಗಳಿಗೆ ನಮ್ಮ ಬೆಂಬಲವಿದೆ, ಆದರೆ ಪದೇ ಪದೆ ಬಂದ್ ಮಾಡುವುದರಿಂದ ನಮಗೇ ತೊಂದರೆಯಾಗುತ್ತದೆ. ಹೀಗಾಗಿ ಬಂದ್ ಬೆಂಬಲಿಸುತ್ತಿಲ್ಲ ಎಂದು ರೈತ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಬಂದ್ ವಿಚಾರದಲ್ಲಿ ವಾಟಾಳ್ ನಾಗರಾಜ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಮೈಸೂರಿಗೆ ಬಂದ ವಾಟಾಳ್ ನಾಗರಾಜ್ ಅವರು ಸೌಜನ್ಯಕ್ಕೂ ಇಲ್ಲಿನ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ಕಾರ್ಮಿಕ ಮುಖಂಡರು, ರೈತ ಮುಖಂಡರ ಸಭೆ ಕರೆದು ಚರ್ಚಿಸುವ ಬದಲು, ನೇರವಾಗಿ ಮಾಧ್ಯಮ ಗೋಷ್ಠಿ ನಡೆಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿರುವುದರಿಂದ ಬಂದ್ ಬೆಂಬಲಿಸುತ್ತಿಲ್ಲ ಎಂದು ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳು ಸಹ ಎಂದಿನಂತೆ ತೆರೆಯಲಿವೆ ಎಂದು ಡಿಡಿಪಿಐ ಎಚ್.ಆರ್.ಬಸಪ್ಪ ತಿಳಿಸಿದ್ದಾರೆ. ಹೋಟೆಲ್ ಮಾಲೀಕರ ಸಂಘ, ಚಲನಚಿತ್ರ ಮಂದಿರಗಳ ಮಾಲೀಕರ ಸಂಘ, ಪೆಟ್ರೋಲ್ ಬಂಕ್‌ಗಳ ಸಂಘಟನೆಗಳು ಸಹ ಬಂದ್ ಕರೆಯನ್ನು ಬೆಂಬಲಿಸಿಲ್ಲ.
ಪದೇ ಪದೆ ಬಂದ್‌ಗೆ ಕರೆ ನೀಡುವುದರಿಂದ ಜನ ಜೀವನದ ಮೇಲೆ ಪರಿಣಾಮ ಬೀರಲಿದೆ. ರೈತರ ಕೃಷಿ ಚಟುವಟಿಕೆಗೂ ತೊಂದರೆಯಾಗಲಿದೆ. ಹೀಗಾಗಿ ಬಂದ್ ಬೆಂಬಲಿಸುತ್ತಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬಂದ್‌ಗೆ ಕರೆ ನೀಡಿರುವವರು ಹೇಳಿರುವ ವಿಷಯಗಳು ಸರಿ ಇವೆ. ಆದರೆ, ಎಲ್ಲಕ್ಕೂ ಬಂದ್ ಒಂದೇ ಪರಿಹಾರವಲ್ಲ. ಹೀಗಾಗಿ ನಾಳಿನ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯಿಂದ ತಮಗೆ ಯಾವುದೇ ಸೂಚನೆ ಬಾರದಿರುವುದರಿಂದ ಬಂದ್ ಬೆಂಬಲಿಸುತ್ತಿಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಪದೇ ಪದೆ ಬಂದ್‌ಗೆ ಕರೆ ಕೊಡುವುದು ಸರಿಯಾದ ನಿಲುವಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಾರೆ ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್‌ಗೆ ಮೈಸೂರು ಜಿಲ್ಲೆಯಲ್ಲಿ ಬೆಂಬಲ ಇಲ್ಲದಂತಾಗಿದೆ.
ಎಂದಿನಂತೆ ಕೆಎಸ್ಸಾರ್ಟಿಸಿ ಬಸ್…: ಬಂದ್ ಕರೆಗೆ ಯಾವುದೇ ಸಂಘಟನೆಗಳ ಬೆಂಬಲ ದೊರೆಯದ ಹಿನ್ನೆಲೆ ಜನ ಜೀವನ ಎಂದಿನಂತೆ ಇರಲಿದೆ. ಕೆಎಸ್ಸಾರ್ಟಿಸಿಯ ನಗರ ಮತ್ತು ಗ್ರಾಮಾಂತರ ಸಾರಿಗೆ ಬಸ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕೆಎಸ್ಸಾರ್ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್ ಉದಯವಾಣಿಗೆ ತಿಳಿಸಿದರು.