Advertisement
ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಮುಖ ಕೀಲಿಕೈ. ಕೊರೊನಾ ಮಹಾಮಾರಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲವಾದ ಪೆಟ್ಟು ನೀಡಿದೆ. ಕಳೆದ ಎರಡು ವರ್ಷ ಪ್ರವಾಸೋದ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಬಹುತೇಕ ಎಲ್ಲ ವಲಯಗಳು ಸಾಕಷ್ಟು ಸೊರಗಿವೆ. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಯ ಜತೆಗೆ ಮೊದಲಿನ ಲಯಕ್ಕೆ ಬರುತ್ತಿವೆ. ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ, ಹೂಡಿಕೆ, ಉದ್ಯೋಗಾವಕಾಶ ಹೀಗೆ ಎಲ್ಲವೂ ಚೇತರಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಹೆಚ್ಚಿನ ಉತ್ತೇಜವನನ್ನು ನೀಡುತ್ತಿವೆ.ಸುಸ್ಥಿರ ಪ್ರವಾಸೋದ್ಯಮವು ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗುತ್ತದೆ. ಪರಿಸರ ಸ್ನೇಹಿ ಬೆಳವಣಿಗೆಯೂ ದೀರ್ಘಕಾಲದ ಆರ್ಥಿಕ ಬೆಳವಣಿಯ ಅಡಿಪಾಯವಾಗಿರಲಿದೆ. ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಬರುವ ಪ್ರತಿಯೊಬ್ಬರಿಗೂ ಅಲ್ಲಿ ಇನ್ನಷ್ಟು ಹೊತ್ತು ಕಾಲಕಳೆಯಬೇಕು ಮತ್ತು ಅಲ್ಲಿನ ವಾತಾವರಣ ಹಿತಕರವಾಗಿದೆ ಎಂದೆನಿಸಬೇಕು. ಈ ನಿಟ್ಟಿನಲ್ಲಿ ಇಡೀ ಪರಿಸರವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ, ಸ್ಥಳೀಯರಿಗೆ ಇನ್ನಷ್ಟು ಆರ್ಥಿಕ ಬಲ ನೀಡುವ ಕೇಂದ್ರವಾಗಿಯೂ ಪ್ರವಾಸಿ ಸ್ಥಳ ಪರಿವರ್ತನೆಗೊಳ್ಳಬೇಕು. ಬಹುಮುಖ್ಯವಾಗಿ ಪ್ರತೀ ಪ್ರವಾಸಿಗನೂ ಕನೆಕ್ಟಿವಿಟಿಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾನೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಇರುವ ಸಂಪರ್ಕ ವ್ಯವಸ್ಥೆ, ಮಾರ್ಗಸೂಚಿ ಫಲಕಗಳು ಹೀಗೆ ಸಣ್ಣಸಣ್ಣ ಅಂಶವೂ ಪ್ರವಾಸೋದ್ಯಮದಲ್ಲಿ ಅತೀಮುಖ್ಯವಾಗುತ್ತದೆ.
ಪ್ರವಾಸೋದ್ಯಮ ವಲಯದ ನವೀನ ಪರಿಕಲ್ಪನೆಯಾಗಿರುವ ವೆಲ್‌ನೆಸ್ ಟೂರಿಸಂ ಪ್ರಸ್ತುತ ಆದ್ಯತ ವಲಯವಾಗಿದೆ. ವೈದ್ಯಕೀಯ ಪ್ರವಾಸೋದ್ಯಮ(ಮೆಡಿಕಲ್ ಟೂರಿಸಂ)ಕ್ಕೂ ವೆಲ್‌ನೆಸ್ ಪ್ರವಾಸೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವೆಲ್‌ನೆಸ್ ಪ್ರವಾಸೋದ್ಯಮದಲ್ಲಿ ಯೋಗ, ಆಯುರ್ವೇದ, ಧ್ಯಾನ, ಆಹಾರ ವಿಧಾನದ ಜತೆಗೆ ಜೀವನಶೈಲಿಯೂ ಸೇರಿದಂತೆ ಪ್ರವಾಸೋದ್ಯಮದ ಭಾಗವಾಗಿ ಆರೋಗ್ಯ ಯೋಗಕ್ಷೇಮದ ಎಲ್ಲವನ್ನೂ ಇದು ಒಳಗೊಂಡಿರುತ್ತದೆ. ಸ್ಥಳೀಯ ಆರ್ಥಿಕತೆಗೆ ಈ ಮೂಲಕ ಉತ್ತೇಜನ ನೀಡಿ, ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಸಮುದಾಯದ ಸಹಭಾಗಿತ್ವ
ಇತ್ತೀಚಿನ ವರ್ಷಗಳಲ್ಲಿ ಸಮುದಾಯ ಆಧಾರಿತ ಪ್ರವಾಸೋದ್ಯಮ ಹೆಚ್ಚು ಪ್ರಾಮುಖ್ಯ ಪಡೆಯುತ್ತಿದೆ. ಸ್ಥಳೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಒಂದೆಡೆಯಾದರೆ ಪ್ರವಾಸೋದ್ಯಮವನ್ನು ಸ್ಥಳೀಯ ಪರಿಸರ, ಜಾನಪದ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿಕೊಂಡು ಅಭಿವೃದ್ಧಿಪಡಿಸುವ ಅಂಶವೂ ಇದರಲ್ಲಿ ಸೇರಿದೆ. ಸ್ಥಳೀಯರ ಜೀವನಶೈಲಿ ಮತ್ತು ಆರ್ಥಿಕ ಪ್ರಗತಿಗೂ ಇದು ಸಹಕಾರಿಯಾಗಲಿದೆ. ಸ್ಥಳೀಯರ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಜತೆ ಜತೆಗೆ ಸ್ವಾಲಂಬನೆಗೆ ದಾರಿ ಸೃಷ್ಟಿಸಿಕೊಡಬೇಕು. ಕೌಶಲಾಧಾರಿತ ಉದ್ಯೋಗ ಸೃಷ್ಟಿ ಮಾಡಿ ಸ್ಥಳೀಯವಾಗಿ ಜನರಿಗೆ ಉದ್ಯೋಗ ಒದಗಿಸುವುದು ಮುಖ್ಯವಾಗುತ್ತದೆ.
Related Articles
ಕೊರೊನಾದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆಗಿರುವ ಹಿನ್ನೆಡೆಯನ್ನು ಅನೇಕ ಸಂಸ್ಥೆಗಳು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಿವೆ. ಭಾರತದ ಪ್ರವಾಸೋದ್ಯಮ ವಲಯಕ್ಕೆ ಸರಿ ಸುಮಾರು 5 ಲಕ್ಷ ಕೋ.ರೂ.ಗಳಿಗೂ ಅಧಿಕ ನಷ್ಟವಾಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪ್ರಯಾಣ ನಿರ್ಬಂಧ ಒಂದೆಡೆಯಾದರೆ ಆರ್ಥಿಕ ವಹಿವಾಟು ಸ್ಥಗಿತಗೊಂಡಿತ್ತು. ಉತ್ಪಾದನ ಕ್ಷೇತ್ರವೂ ಸ್ತಬ್ಧವಾಗಿತ್ತು. ಹೊಟೇಲ್ ಸಹಿತ ಆತಿಥ್ಯ ಕ್ಷೇತ್ರವೂ ಬಹುತೇಕ ಮುಚ್ಚಿತ್ತು. ಒಟ್ಟಾರೆ ಪರಿಣಾಮ ಲಕ್ಷಾಂತರ ಉದ್ಯೋಗ ನಷ್ಟವೂ ಆಗಿದೆ. ಕೊರೊನಾ ಅನಂತರದಲ್ಲಿ ಪ್ರವಾಸೋದ್ಯವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
Advertisement
ರಾಜ್ಯ ಕರಾವಳಿಯಲ್ಲಿ ಪ್ರವಾಸಿ ತಾಣಗಳಿಗೆ ಹೊಸ ಸ್ಪರ್ಶಕೇಂದ್ರ ಸರಕಾರ ಸಾಗರಮಾಲಾ ಯೋಜನೆಯಡಿಯಲ್ಲಿ ಜಲ ಸಾರಿಗೆ ಉತ್ತೇಜನಕ್ಕೆ ಕ್ರಮ ತೆಗೆದುಕೊಳ್ಳುತ್ತಿದೆ. ಮಣಿಪಾಲದಿಂದ ಹಂಗಾರಕಟ್ಟೆಗೆ ಜಲಮಾರ್ಗ ಅಭಿವೃದ್ಧಿಗೆ ಈಗಾಗಲೇ ಈ ಯೋಜನೆಯಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಹಲವು ಕಡೆಗಳಲ್ಲಿ ತೇಲುವ ಜೆಟ್ಟಿ ನಿರ್ಮಾಣಕ್ಕೂ ಕಾರ್ಯಸೂಚಿ ಸಿದ್ಧಪಡಿಸಿದೆ. ಈ ಹಿಂದೆ ಗಂಗೊಳ್ಳಿಯಲ್ಲಿ ಕೋಸ್ಟರ್ ಬರ್ತ್ ಇತ್ತು (ವಾಣಿಜ್ಯ ಉದ್ದೇಶದ ಬಂದರು). ಅದನ್ನು ಪುನಃಸ್ಥಾಪಿಸಲು ಅನುದಾನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ರಾಜ್ಯ ಸರಕಾರದಿಂದ ಕರಾವಳಿ ಬಂದರುಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧವಾಗುತ್ತಿದೆ. ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳನ್ನು ಸರ್ಕ್ನೂಟ್ ವ್ಯವಸ್ಥೆಯಲ್ಲಿ ಅಭಿವೃದ್ಧಿಪಡಿಸಲು ಸೂಕ್ತ ಕಾರ್ಯಸೂಚಿ ಸಿದ್ಧವಾಗುತ್ತಿದೆ. ಟೆಂಪಲ್ ಟೂರಿಸಂ ಅಡಿಯಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಧಾರ್ಮಿಕ ಕೇಂದ್ರಗಳಿಗೆ ಬರುವ ಜನರಿಗೆ ಬೇಕಾದ ಮೂಲಸೌಕರ್ಯ ಒದಗಿಸುವ ವ್ಯವಸ್ಥೆ ನಡೆಯುತ್ತಿದೆ. ಧಾರ್ಮಿಕ ಕೇಂದ್ರಗಳಲ್ಲಿ ಇಡೀ ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿ ಲಭ್ಯವಾಗುವ ಮಾದರಿಯಲ್ಲಿ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಅದು ವೀಡಿಯೋ ರೂಪದಲ್ಲೂ ಇರಲಿದೆ. ಇದರಿಂದ ಸರ್ಕ್ನೂಟ್ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ ಆಗಲಿದೆ. ಪ್ರವಾಸಿಗರು ಧಾರ್ಮಿಕ ಕ್ಷೇತ್ರ ನೋಡಿದ ಅನಂತರದಲ್ಲಿ ಸ್ಥಳೀಯವಾಗಿ ಸಿಗುವ ಅಥವಾ ಅಲ್ಲಿಂದ ಸಂಪರ್ಕ ವ್ಯವಸ್ಥೆ ಚೆನ್ನಾಗಿರುವ ಇನ್ನೊಂದು ಪ್ರವಾಸಿ ತಾಣಕ್ಕೆ ಸುಲಭವಾಗಿ ಹೋಗಲು ಆಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಜತೆಗೆ ಬೀಚ್ ಮತ್ತು ಚಾರಣ, ವನ್ಯಜೀವಿ, ಅರಣ್ಯ ಹೀಗೆ ಒಂದಕ್ಕೊಂದು ಲಿಂಕ್ ಮಾಡಲಾಗುತ್ತಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸರ್ಕ್ನೂಟ್ ಪ್ಲಾನ್ ಅಲ್ಲಿನ ಪ್ರವಾಸೋದ್ಯಮದ ಸ್ಥಿತಿಗತಿ ಮತ್ತು ಸ್ಥಳಗಳ ಆಧಾರದಲ್ಲಿ ಸಿದ್ಧಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ದೇಶ ವಿದೇಶಗಳಿಂದಲೂ ಹೂಡಿಕೆಯನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯ ಸರಕಾರವೂ ಈ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳ ಜತೆಗೆ ಈಗಾಗಲೇ ಒಪ್ಪಂದವನ್ನು ಮಾಡಿಕೊಂಡಿದೆ. ಕೊರೊನಾನಂತರ ಪ್ರವಾಸೋದ್ಯಮ ಕ್ಷೇತ್ರವು ಹೊಸ ಸಾಧ್ಯತೆ, ಅವಕಾಶಗಳತ್ತ ದೃಷ್ಟಿ ಹರಿಸಿದೆ. ಸಹಜವಾಗಿಯೇ ದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಚಿಗಿತುಕೊಂಡಿವೆ. ಇದೇ ನಿಟ್ಟಿನಲ್ಲಿ ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನದ ಧ್ಯೇಯವನ್ನು ಇರಿಸಿಕೊಳ್ಳಲಾಗಿದ್ದು ಇಡೀ ಕ್ಷೇತ್ರದ ಪುನ ರಾವಲೋಕನದ ಜತೆಯಲ್ಲಿ ನವೀನ ದೃಷ್ಟಿಕೋನದೊಂದಿಗೆ ಪ್ರಗತಿಯ ಹಾದಿಯಲ್ಲಿ ವಲಯವನ್ನು ಕೊಂಡೊಯ್ಯುವ ಸಂಕಲ್ಪ ತೊಡಲಾಗಿದೆ. ಸದ್ಯದ ಸ್ಥಿತಿಯಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಪ್ರವಾಸೋ ದ್ಯಮವನ್ನು ಇನ್ನೊಂದು ಮಜಲಿನತ್ತ ಕೊಂಡೊಯ್ಯುವಲ್ಲಿ ಜಾಗತಿಕ ಸಮುದಾಯ ದೃಷ್ಟಿಹರಿಸಿರುವುದಂತೂ ನಿಜ. -ರಾಜು ಖಾರ್ವಿ ಕೊಡೇರಿ