Advertisement

ಜೀವಸಂಕುಲಗಳ ಸಂರಕ್ಷಣೆಗೆ ಕಾಡು ಉಳಿಸುವುದು ಅನಿವಾರ್ಯ

05:12 AM Mar 21, 2019 | |

ಕಾಡನ್ನು ಪ್ರೀತಿಸಲು ಕಲಿಯಿರಿ: ವಿಶ್ವ ಅರಣ್ಯ ದಿನದ ಸಂದೇಶ

Advertisement

ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ಭೂಮಿ ಮತ್ತು ಪರಿಸರ ಸಮತೋಲನವಾಗಿರಬೇಕಾದರೆ ಅರಣ್ಯದ ಪಾತ್ರ ಬಹುಮುಖ್ಯ. ಈ ಕಾರಣಕ್ಕೆ ಅರಣ್ಯ ಸಂವರ್ಧನೆಗೆ ಪಣತೊಡಬೇಕು ಎಂಬ ಆಶಯ ಈ ದಿನದಾಗಲಿ.

ಇಂದು ವಿಶ್ವ ಅರಣ್ಯ ದಿನ ಮನುಷ್ಯ ಜೀವನದ ಮೊದಲ ಘಟ್ಟ ಆರಂಭವಾದದ್ದು ಕಾಡಿನಿಂದ. ಬದುಕಲು ಬೇಕಾಗುವ ಎಲ್ಲ ಮೂಲ ಸೌಕರ್ಯಗಳನ್ನು ಕಾಡು ಒದಗಿಸಿತ್ತು. ಅಲ್ಲಿಂದ ಆರಂಭವಾದ ಕಾಡು ಮತ್ತು ಮನುಷ್ಯನ ಸಂಬಂಧ ಇಂದು ಕಾಡುಗಳನ್ನು ನಾಶ ಮಾಡಿ ತನ್ನ ಮೂಲ ಸೌಕರ್ಯಗಳನ್ನು ಹೆಚ್ಚಿಸುವಲ್ಲಿಯವರೆಗೆ ಮುಂದುವರಿದಿದೆ.

ಕುಡಿಯುವ ನೀರಿನಿಂದ ಹಿಡಿದು, ಬರೆಯುವ ಪುಸ್ತಕ ಕಟ್ಟುವ ಮನೆಯವರೆಗೆ ಎಲ್ಲದರಲ್ಲೂ ಅರಣ್ಯದ ಪಾತ್ರವಿದೆ. ಇವುಗಳ ನಿರ್ಮಾಣಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾಡಿನ ಸಂಪನ್ಮೂಲ. ಮಳೆ, ಹವಾಮಾನ ಏರುಪೇರು, ಪರಿಸರ ವ್ಯವಸ್ಥೆಗಳಲ್ಲಿ ಅರಣ್ಯದ ಪಾತ್ರ ಮಹತ್ವದ್ದು. ಬಡತನ ನಿರ್ಮೂಲನೆಗೆ ಅರಣ್ಯದ ಕೊಡುಗೆ ಅಪಾರ.

ವಿಶ್ವ ಅರಣ್ಯ ದಿನದ ಇತಿಹಾಸ
ಅರಣ್ಯ ದಿನವನ್ನು ಮೊದಲು ಆಚರಿಸಿದ್ದು 1971ರಲ್ಲಿ. ಇದನ್ನು ಒಂದು ವಿಶ್ವ ದಿನಾಚರಣೆಯಾಗಿ ಮಾಡುವ ನಿರ್ಧಾರವನ್ನು ಯುನೈಟೆಡ್‌ ನೇಶನ್‌ನ ಆಹಾರ ಮತ್ತು ಕೃಷಿ ಸಂಸ್ಥೆ ಮಾಡಿತು. ಈ ದಿನ ಎಲ್ಲ ವಿಧದ ಕಾಡುಗಳ ಮಹತ್ವವನ್ನು ಜನರಿಗೆ ಅರಿವು ಮೂಡಿಸಿ ಅರಣ್ಯ ಸಂರಕ್ಷಣೆ ಮಾಡಲು ಪ್ರೇರೇಪಿಸುತ್ತಿದೆ.

Advertisement

ಯಾಕಾಗಿ ಅರಣ್ಯ ದಿನಾಚರಣೆ
ಕಾಡು ಭೂಮಿಯ ಅತಿ ಪ್ರಮುಖವಾದ ಒಂದು ಭಾಗ. ಇದು ಜೀವಿಗಳಿಗೆ ನೆರಳು, ಆಹಾರ, ಶುದ್ಧ ನೀರು ಮತ್ತು ಗಾಳಿಯನ್ನು ಒದಗಿಸುತ್ತದೆ. ಆದರೆ ಮುಂದುವರಿಯುತ್ತಿರುವ ಇಂದಿನ ಯುಗದಲ್ಲಿ ಅರಣ್ಯದ ನಾಶ ಹೇರಳವಾಗಿ ಉಂಟಾಗುತ್ತಿದೆ. ಕಾಡು ಉಳಿಸುವುದು ಇಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ. ನಾಶವಾಗುತ್ತಿರುವ ಜೀವಸಂಕುಲಗಳ ಸಂರಕ್ಷಣೆ, ಪರಿಸರದ ಸಮತೋಲನ ನಿರ್ಮಾಣವಾಗಬೇಕಾದರೆ ಕಾಡು ಉಳಿಯಲೇಬೇಕು.

ಸಂದೇಶದ ಮುಖ್ಯ ಅಂಶಗಳು
ಕಾಡುಗಳು ನಮಗೆ ಮಾತ್ರವಲ್ಲ ಮುಂದಿನ ಜನಾಂಗಕ್ಕೂ ಅತಿ ಅಗತ್ಯವೆಂದು ಪರಿಗಣಿಸಿ ಅದನ್ನು ರಕ್ಷಿಸಲು ಮುಂದಾಗುವುದು. 2030ರಲ್ಲಿ ವಿಶ್ವದ ಜನಸಂಖ್ಯೆ 8.5 ಬಿಲಿಯನ್‌ ದಾಟುವುದರಿಂದ ಕಾಡುಗಳನ್ನು ಉಳಿಸುವುದು ಕೂಡ ಮುಖ್ಯವಾಗುತ್ತದೆ, ಮಕ್ಕಳಿಗೆ ಕಾಡಿನ ಅಗತ್ಯವನ್ನು ತಿಳಿಸುವುದು ಮತ್ತು ಪ್ರಕೃತಿಯ ಒಡನಾಟದಲ್ಲಿ ಅವರನ್ನು ಬೆಳೆಸುವುದು. ಇದರಿಂದ ಅವರಲ್ಲಿ ಅರಣ್ಯವನ್ನು ಪ್ರೀತಿಸುವ ಮನೋಭಾವ ಬೆಳೆಯುತ್ತದೆ. ನಗರ ಪ್ರದೇಶ ಮತ್ತು ಗ್ರಾಮಗಳಲ್ಲಿರುವವರು ಅರಣ್ಯದ ಪ್ರಾಮುಖ್ಯವನ್ನು ತಿಳಿಯಬೇಕು. ಅನಗತ್ಯವಾಗಿ ಕಟ್ಟಿಗೆಗಾಗಿ ಅಥವಾ ಮಾರಾಟಕ್ಕಾಗಿ ಮರಗಳನ್ನು ಕಡಿಯಬಾರದು.

ಕಾಡುಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುವುದರಿಂದ ಸಂರಕ್ಷಣೆ ಸುಲಭವಾಗುತ್ತದೆ. ವಿಜ್ಞಾನಿಗಳು, ಸಂಶೋಧಕರೆಲ್ಲರೂ ಕಾಡು ನಾಶದ ಪರಿಣಾಮಗಳನ್ನು ಅರ್ಥವತ್ತಾಗಿ ವಿವರಿಸುತ್ತಾರೆ. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ ಎಂಬು ದನ್ನು ಮೊದಲು ಅರಿತು ನಡೆಯಬೇಕಿದೆ. ಹೀಗಾಗಿ ದಿನಾಚರಣೆಗಳು ಕೇವಲ ಆಚರಣೆಗಳಿಗಷ್ಟೇ ಮೀಸಲಾಗದೆ ಪ್ರತಿಯೊಂದು ದಿನವನ್ನು ಅರಣ್ಯ ದಿನವೆಂದೇ ಭಾವಿಸಿ ಕಾಡನ್ನು ಸಂರಕ್ಷಿಸಬೇಕು. 

ವಿಶಿಷ್ಟ ಸಂದೇಶ 
ಪ್ರತಿ ವರ್ಷ ವಿಶ್ವ ಅರಣ್ಯ ದಿನಾಚರಣೆಗೆ ಯುಎನ್‌ಒ ಒಂದೊಂದು ವಿಶಿಷ್ಟ ಸಂದೇಶವನ್ನು ನೀಡಿ ಜನರನ್ನು ಆಕರ್ಷಿಸುತ್ತಿದೆ. ಈ ಭಾರಿ ಶಿಕ್ಷಣದ ಜತೆಯಲ್ಲಿ ಅರಣ್ಯ ದಿನಾಚರಣೆ ತಳುಕು ಹಾಕಿಕೊಂಡಿದೆ. ಶಿಕ್ಷಣ ಮತ್ತು ಅರಣ್ಯ: ಕಾಡನ್ನು ಪ್ರೀತಿಸಲು ಕಲಿಯಿರಿ ಎಂಬುದು ಈ ಬಾರಿಯ ಸಂದೇಶ. ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಕಾಡಿನ ಮಹತ್ವವನ್ನು ತಿಳಿಸುವುದು. ಆರೋಗ್ಯಯುತವಾದ ಪರಿಸರ ನಿರ್ಮಾಣಕ್ಕೆ ಮೊದಲು ಬೇಕಾದದ್ದು ಕಾಡುಗಳು.

Advertisement

Udayavani is now on Telegram. Click here to join our channel and stay updated with the latest news.

Next