Advertisement

ಆಹ್ಲಾದಕರ ಕಾಫಿಯ ಸ್ವಾದ 

01:32 PM Oct 01, 2018 | |

ಬೆಚ್ಚಗಿನ ಕಾಫಿ ಕುಡಿಯುವುದೆಂದರೆ ಅದೇನೋ ಮನಸ್ಸಿಗೆ ಹಿತ. ಕಾಫಿ ಪ್ರೀಯರ ಮನತಣಿಸುವ ಈ ಉತ್ಪನ್ನದ ಬೇಡಿಕೆ ಅಪಾರ. ಆಸ್ವಾದಿಸಿ ಸವಿಯುವುದೆಂದರೆ ಆಹ್ಲಾದ.

Advertisement

ಮುಂಜಾನೆ ಸುವಾಸನೆ ಭರಿತ ಕಾಫಿಯೊಂದಿಗೆ ಅನೇಕರ ದಿನ ತಾಜಾತನಗೊಳ್ಳುತ್ತದೆ. ಕೆಲವರಿಗೆ ಕಾಫಿ ಒತ್ತಡ ನಿವಾರಿಸುವ ಮದ್ದು. ಇಂಥ ಕಾಫಿ ಪ್ರಿಯರಿಗೆ ಅಕ್ಟೋಬರ್‌ 1ರಂದು ವಿಶೇಷ ದಿನ. ಅಂದು ಅಂತಾರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕಾಫಿ ದಿನದ ಆರಂಭ ಕುರಿತಾಗಿ ನಿಖರ ಮಾಹಿತಿ ಇಲ್ಲ. ಒಂದು ಮೂಲದ ಪ್ರಕಾರ 1983 ರಲ್ಲಿ ಜಪಾನ್‌ನಲ್ಲಿ ನಡೆದ ದಿ ಆಲ್‌ ಜಪಾನ್‌ ಕಾಫಿ ಅಸೋಸಿಯೇಷನ್‌ ಕಾರ್ಯ ಕ್ರಮದಲ್ಲಿ ಮೊದಲು ಪ್ರಚಾರ ಮಾಡಲಾಗಿತ್ತು. 2015ರಲ್ಲಿ ಅಮೆರಿಕಾ ನ್ಯಾಷನಲ್‌ ಕಾಫಿ ಡೇಯನ್ನು ಆಚರಿಸಿತು. 2015ರಲ್ಲಿ ಇಂಟರ್‌ ನ್ಯಾಷನಲ್‌ ಕಾಫಿ ಆರ್ಗನೈಸೇಶನ್‌ ಇಟಲಿಯ ಮಿಲನ್‌ನಲ್ಲಿ ಅಧಿಕೃತವಾಗಿ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಲು ತೀರ್ಮಾನಿಸಿತು. 

ಕಾಫಿ ಇನ್‌ವಿಮೆನ್‌ ಈ ಬಾರಿಯ ಧ್ಯೇಯ 
ಅಂತಾರಾಷ್ಟ್ರೀಯ ಕಾಫಿ ದಿನವನ್ನು ಈ ಬಾರಿ ಮಹಿಳೆಯರಿಗೆ ಮಹತ್ವ ನೀಡಿದೆ. ‘ಕಾಫಿ ಇನ್‌ ವಿಮೆನ್‌’ ಎನ್ನುವ ಥೀಮ್‌ ಇಟ್ಟುಕೊಂಡು ಅಂತಾರಾಷ್ಟ್ರೀಯ ಕಾಫಿ ದಿನ ಆಚರಿಸಲಾಗುತ್ತದೆ. ಕಾಫಿ ಉತ್ಪಾದನೆಯ ಕೆಲಸದಲ್ಲಿ ಆರಂಭದಿಂದ ಅಂತ್ಯದವರೆಗೂ ಮಹಿಳೆಯರ ಕೈ ಚಳಕವಿದೆ. ಈ ಮೂಲಕ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಗೌರವಿಸಲಾಗುತ್ತಿದೆ. ವಿಶ್ವದಲ್ಲೇ ಕಾಫಿ ಕೂಡ ಅತ್ಯಂತ ಹೆಚ್ಚು ವ್ಯಾಪಾರವಾಗುವ ಸರಕುಗಳಲ್ಲಿ ಒಂದಾಗಿದೆ. ತೈಲದ ಅನಂತರದ ಸ್ಥಾನ ಕಾಫಿಯದ್ದಾಗಿದೆ. ಕಾಫಿ ಬೆಳೆಯು ಮೊದಲು ಇಥಿಯೋಪಿಯಾದಲ್ಲಿ ಆರಂಭವಾದರೂ ಇಂದು ವಿಶ್ವದಲ್ಲಿ ಕಾಫಿ ಉತ್ಪಾದನೆಯಲ್ಲಿ ಬ್ರೆಜಿಲ್‌ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ 5ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ ಪ್ರತಿದಿನ 25 ಮಿಲಿಯನ್‌ ಬಕೆಟ್‌ ಕಾಫಿ ಸೇವನೆಯಾಗುತ್ತದೆ. ಇದು ಕಾಫಿ  ಮೇಲಿನ ಜನರ ಒಲವನ್ನು ತೋರಿಸುತ್ತದೆ. ಒಮ್ಮೆ ಕಾಫಿಯ ರುಚಿ ಹಿತವಾದರೆ ಅದರ ವ್ಯಸನಿಗಳಾಗುವುದಂತೂ ನಿಜ. 

ಆರೋಗ್ಯಕರ ಅಂಶಗಳ
ಕಾಫಿ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಕೊಬ್ಬು ಕರಗಿಸುತ್ತದೆ. ಅಲ್ವೈಮರ್‌, ಕೆಲವು ಮಾನಸಿಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಕಾಫಿಗೆ ಇದೆ. ಯಕೃತ್‌ಗೆ ಉತ್ತಮವಾಗಿದೆ. ಕೆಲವು ಕ್ಯಾನ್ಸರ್‌ ಸಾಧ್ಯತೆ ಗಳನ್ನು ಕಡಿಮೆ ಮಾಡುತ್ತದೆ. ಒತ್ತಡ ನಿವಾರಿಸಿ ರಿಲ್ಯಾಕ್ಸ್‌ ಮೂಡ್‌ಗೆ ಹೋಗಬೇಕಾದರೆ ಒಂದು ಕಪ್‌ ಕಾಫಿ ಸೇವನೆ ಮಾಡಿ ನೋಡಿ. ಅತಿಯಾದರೆ ಅಮೃತವು ವಿಷ ಎಂಬಂತೆ ಅತಿಯಾದ ಕಾಫಿ  ಸೇವನೆ ದೇಹಕ್ಕೆ ಉತ್ತಮವಲ್ಲ.

ಅಂತಾರಾಷ್ಟ್ರೀಯ ಕಾಫಿ ದಿನದಂದು ಇಂಟರ್‌ನ್ಯಾಷನಲ್‌ ಕಾಫಿ ಆರ್ಗನೈಸೇಶನ್‌ ನೆನಪಿಸಿಕೊಂಡರೆ ತಪ್ಪಿಲ್ಲ. ಇದರ ಪ್ರಯತ್ನದಿಂದಾಗಿಯೇ ಈ ದಿನವನ್ನು ಆಚರಿಸಲಾಗುತ್ತಿದೆ. ಕಾಫಿ ಕ್ಷೇತ್ರ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ವಿವಿಧ ದೇಶಗಳಲ್ಲಿಯೂ ಅಂತಾರಾಷ್ಟ್ರೀಯ ಕಾಫಿ ದಿನ ಮಾತ್ರವಲ್ಲದೇ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತಾರೆ. ಭಾರತದಲ್ಲಿ ಸೆಪ್ಟಂಬರ್‌ 29ರಂದು ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತಾರೆ. ಸೆಪ್ಟಂಬರ್‌ 28ರಂದು ಮಲೇಷಿಯಾ, ಅಮೆರಿಕಾ, ನ್ಯೂಜಿ ಲ್ಯಾಂಡ್‌ನ‌ಲ್ಲಿ ಆಚರಿಸಿದರೆ, ಜಪಾನ್‌, ಶ್ರೀಲಂಕಾ, ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನದಂದೆ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಗುತ್ತದೆ. ಕಾಫಿ ನಾಡು ಎಂದು ಕರೆಸಿಕೊಳ್ಳುವ ಬ್ರೆಜಿಲ್‌ ಮೇ 24ರಂದು ಅಂತಾರಾಷ್ಟ್ರೀಯ ಕಾಫಿ ದಿನ ಆಚರಿಸುತ್ತದೆ. 

Advertisement

3 4 ಕಪ್‌ ಕಾಫಿ ಸೇವನೆ ಆರೋಗ್ಯಕ್ಕೆ ಹಿತ
ಸೌತ್‌ಪ್ಟನ್‌ ಹಾಗೂ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಸಂಶೋಧನ ತಂಡದ ವರದಿಯಂತೆ, ದಿನಕ್ಕೆ 3 ಅಥವಾ 4 ಕಪ್‌ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ವರದಿ ತಯಾರಿಸಿ, ಬಿಎಂಜೆ ಎಂಬ ಜರ್ನಲ್‌ನಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯಲ್ಲಿ ಮುಂದುವರಿದು ಕಾಫಿ ಸೇವನೆಯಿಂದ ಸುಮಾರು ಶೇ. 17ರಷ್ಟು ಸಾವಿನ ಅಪಾಯಗಳನ್ನು ತಡೆಯಬಹುದು ಎಂದು ಕೂಡ ತಿಳಿಸಲಾಗಿತ್ತು. 

ವೈವಿಧ್ಯಮಯ ಕಾಫಿಗಳು
ಕೆಫೆ ಅಮೆರಿಕಾನೋ, ಕೆಫೆ ಲೆಟ್ಟೆ, ಕಪ್ಪುಚ್ಚೀನೋ, ಎಸೆಪ್ರಸ್ಸೋ, ಫ್ಲಾಟ್‌ ವೈಟ್‌, ಲಾಂಗ್‌ ಬ್ಲಾಕ್‌, ಮಚ್ಚಿಟ್ಟೋ, ಮಚ್ಚೋಸ್ಸಿನೋ, ಐರಿಷ್‌ ಕಾಫಿ, ವಿಯೆನ್ನಾ ಹಾಗೂ ಆಪ್ರೋಗಾಟೋ ಇವು ಅತೀ ಹೆಚ್ಚು ಕಾಫಿ  ಪ್ರಿಯರು ಇಷ್ಟಪಡುವ ವೈವಿಧ್ಯಮಯ ಕಾಫಿ  ಉತ್ಪನ್ನಗಳು.

ಭಾರತ ಮತ್ತು ಕಾಫಿ
ಭಾರತದ ಕಾಫಿ ಉತ್ಪನ್ನಗಳಲ್ಲಿ ಪ್ರಮುಖ ದೇಶ. ದೇಶದಲ್ಲಿ ಬಹು ವಿಸ್ತಾರವಾಗಿ ಚಾಚಿಕೊಂಡಿರುವ ಕಾಫಿ ಮಾರುಕಟ್ಟೆಯನ್ನು ನೋಡಿದರೆ, ಇದರ ಎಳೆ ಸಿಗುವುದು ದಕ್ಷಿಣ ಭಾರತದಲ್ಲಿ. ಅತಿಹೆಚ್ಚು ಕಾಫಿ ಬೆಳೆಯುವುದು ದಕ್ಷಿಣ ಭಾರತದಲ್ಲಿ. ಅದು ಪ್ರಮುಖವಾಗಿ ಕರ್ನಾಟಕ (ಶೇ.71 ರಷ್ಟು), ಕೇರಳ (ಶೇ.21 ರಷ್ಟು), ತಮಿಳುನಾಡು (ಶೇ.5ರಷ್ಟು) ಒಟ್ಟಾರೆಯಾಗಿ 8,200 ಲಕ್ಷ ಟನ್‌ಗಳಷ್ಟು ವಾರ್ಷಿಕವಾಗಿ ಕಾಫಿಯನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಬೆಳೆದ ಕಾಫಿಗೆ ಜಾಗತಿಕವಾಗಿ ಉತ್ತಮ ಮಾರುಕಟ್ಟೆಯಿದ್ದು, ಶೇ. 80 ರಷ್ಟು ರಫ್ತು ಆಗುತ್ತದೆ. ಪ್ರಮುಖವಾಗಿ ಜರ್ಮನಿ, ರಶ್ಯಾ, ಸ್ಪೇನ್‌, ಬೆಲ್ಜಿಯಂ, ಸ್ಲೋವಿಯಾ, ಅಮೆರಿಕ, ಜಪಾನ್‌ ಹಾಗೂ ಗ್ರೀಸ್‌ ದೇಶಗಳಲ್ಲಿ ಕಾಫಿ ಉತ್ಪನ್ನಗಳ ರಫ್ತಾಗುತ್ತವೆ. ಭಾರತದಲ್ಲಿ ಕಾಫಿ ಮಾರುಕಟ್ಟೆ ವ್ಯಾಪಕವಾಗಿ ಬೆಳೆದಿದ್ದು, ವಾರ್ಷಿಕವಾಗಿ ಸುಮಾರು 377 ಮಿಲಿಯನ್‌ ಡಾಲರ್‌ನಷ್ಟು ವಾರ್ಷಿಕ ವ್ಯವಹಾರ ನಡೆಸಲಾಗುತ್ತಿದೆ. ಪ್ರಸ್ತುತ ಇದು ಶೇ. 5.9 ರಷ್ಟು ಹೆಚ್ಚಳವಾಗಿದೆ.

ಕಾಫಿ ಮಾರಾಟ ಹೆಚ್ಚಳ
ಜಗತ್ತಿನದಾದ್ಯಂತ ಕಾಫಿ ಪ್ರಿಯರೇನೂ ಕಡಿಮೆಯಿಲ್ಲ. ಇಂದು ಮಾರುಕಟ್ಟೆಯಲ್ಲಿ ಕೂಡ ಹಲವು ತಂಪು ಪಾನೀಯ ಹಾಗೂ ಗರಂ ಪಾನೀಯಗಳಲ್ಲಿ ಮಧ್ಯೆಯೂ ಕೂಡ ಕಾಫಿ ಹಲವರ ನೆಚ್ಚಿನ ಪಾನೀಯವಾಗಿದೆ. 2017ರಲ್ಲಿ ತಯಾರಿಸಿದ ವರದಿಯಂತೆ, ಮಾರುಕಟ್ಟೆಯಲ್ಲಿ ಕಾಫಿ ಮಾರಾಟ ವಾರ್ಷಿಕವಾಗಿ ಶೇ. 20 ರಷ್ಟು ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ಜಗತ್ತಿನದಾದ್ಯಂತ ಸುಮಾರು 18 ಬಿಲಿಯನ್‌ ಡಾಲರ್‌ನಷ್ಟು ಕಾಫಿ ತನ್ನ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲದೇ ಸ್ವತಂತ್ರವಾಗಿ ನಿರ್ವಹಿಸುವ ಕಾಫಿ ಶಾಪ್‌ ಒಂದು ಸುಮಾರು 12 ಮಿಲಿಯನ್‌ ಡಾಲರ್‌ ವ್ಯವಹಾರ ಮಾಡುತ್ತದೆ. ಮಾಹಿತಿಯಂತೆ ಅಮೆರಿಕದದವರಿಗೆ ನೆಚ್ಚಿನ ಪಾನೀಯಗಳಲ್ಲಿ ಕಾಫಿಯೂ ಕೂಡ ಪ್ರಮುಖ ಸ್ಥಾನ ಪಡೆದಿದೆ. ಹಾಗಾಗಿ ವರದಿಯಂತೆ, ಅಮೆರಿಕದ 150 ಮಿಲಿಯನ್‌ ಜನರೂ ದಿನಕ್ಕೆ 3 ಕಪ್‌ ಕಾಫಿಸೇವನೆ ಮಾಡುತ್ತಾರೆ. ಅದರಲ್ಲಿ ಎಪ್ರಿಸ್ಸೋ,  ಕೆಚ್ಚಿನೋ, ಲೆಟ್ಟೆ ಹಾಗೂ ಕೋಲ್ಡ್‌ ಕಾಫಿ  ಹೆಚ್ಚು ಜನಪ್ರಿಯ.

ಅತೀ ಹೆಚ್ಚು ಕಾಫಿ  ರಫ್ತುಮಾಡುವ ದೇಶಗಳು
ಬ್ರೆಜಿಲ್‌ (5.7 ಬಿಲಿಯನ್‌ ಪೌಂಡ್‌), ವಿಯೆಟ್ನಾಂ (3.6 ಬಿಲಿಯನ್‌), ಕೊಲಂಬಿಯಾ (1.8 ಬಿಲಿಯನ್‌), ಇಂಡೋನೇಷಿಯಾ (1.5 ಬಿಲಿಯನ್‌), ಇಥೋಪಿಯಾ (847 ಮಿಲಿಯನ್‌), ಭಾರತ (767 ಮಿಲಿಯನ್‌ ಪೌಂಡ್‌). 

ಮಾಹಿತಿ: ಶಿವ ಸ್ಥಾವರಮಠ, ಧನ್ಯಶ್ರೀ ಬೋಳಿಯಾರ್‌, ರಂಜಿನಿ ಮಿತ್ತಡ್ಕ, ವಿನ್ಯಾಸ:ಜಿ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next