Advertisement

ಏಡ್ಸ್‌ ಜಾಗೃತಿ ಆತ್ಮವಿಶ್ವಾಸ ತುಂಬಲಿ

10:07 AM Dec 01, 2018 | |

ಡಿ. 1ರಂದು ವಿಶ್ವ ಏಡ್ಸ್‌ ರೋಗ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. 2018ರಲ್ಲಿ 30ನೇ ವರ್ಷದ ಆಚರಣೆ ನಡೆಯುತ್ತಿದೆ. ಮುಖ್ಯವಾಗಿ ಈ ಬಾರಿ ನೋ ಯುವರ್‌ ಸ್ಟೇಟಸ್‌ ((KNOW UR STATUS) ಎಂಬ ವಿಶೇಷ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ವಿಶ್ವಾದ್ಯಂತ ಏಡ್ಸ್‌ ಕುರಿತು ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಗೆ‌ ಎಲ್ಲರೂ ಕೈ ಜೋಡಿಸಿ ಈ ರೋಗವನ್ನು ದೂರೀಕರಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕಿದೆ.

Advertisement

ಬಡತನ, ನಿರುದ್ಯೋಗ, ಅಸಮಾನತೆಗಳ ಮಧ್ಯೆ ಆರೋಗ್ಯದ ಸಮಸ್ಯೆಯೂ ಕೂಡ ಇಂದು ಮಾನವ ಸಂಕುಲವನ್ನು ಹಲವು ರೀತಿಯಲ್ಲಿ ಚಿಂತೆಗೀಡು ಮಾಡಿದೆ. ಅಂತಹವುಗಳಲ್ಲಿ ಏಡ್ಸ್‌ ಕೂಡ ಒಂದು. ಇದು ಕಣ್ಣಿಗೆ ಕಾಣದೇ, ಒಳಗೊಳಗೆ ಮನುಷ್ಯನ ನೆಮ್ಮದಿ ಹಾಗೂ ಸಂತೋಷವನ್ನು ಕಿತ್ತುಕೊಂಡು ಜೀವ ಹಿಂಡಿ, ಮುಂದೊಂದು ದಿನ ಜೀವನವನ್ನೇ ಬಲಿ ತೆಗೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಹುಟ್ಟೋ ಮಕ್ಕಳಿನಿಂದ ಹಿಡಿದು ಸಾಯುವ ವೃದ್ಧರವರೆಗೆ ಯಾವ ವಯೋಮಾನದ ಭೇದಭಾವವಿಲ್ಲದೇ ಬರುವ ಈ ರೋಗಕ್ಕೆ ಇಂದಿಗೂ ಸಿದ್ಧ ಔಷಧ ಕಂಡು ಹಿಡಿಯದೇ ಇರುವುದು ಈ ರೋಗ ವೈದ್ಯಲೋಕಕ್ಕೇ ಸವಾಲಾಗಿದೆ.

ಏಡ್ಸ್‌ ಪೀಡಿತರಿಗೆ ವೈದ್ಯಲೋಕದಲ್ಲಿ ಯಾವುದೇ ಔಷಧ ಇಲ್ಲದೇ ಇದ್ದರೂ, ಕೇವಲ ದೃಢವಾದ ಆತ್ಮವಿಶ್ವಾಸವೇ ಒಂದು ಸಿದ್ಧ ಔಷಧವಾಗಿದೆ. ಹೀಗಾಗಿ ಈ ಏಡ್ಸ್‌ ರೋಗದ ಬಗ್ಗೆ ಜಗತ್ತಿನಾದ್ಯಂತ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಅಸುರಕ್ಷ ಜೀವನ ಪದ್ಧತಿಯಿಂದ ದೇಹಕ್ಕೆ ಎಚ್‌.ಐ.ವಿ.( ಹ್ಯುಮಾನ್‌ ಇಮ್ಯಾನುಡಿಫಿಸಿಯೆನ್ಸಿ ವೈರಸ್‌) ಎಂಬ ವೈರಸ್‌ ಸೋಂಕು ತಗುಲಿದಾಗ ಮೊದಲು ದೇಹದಲ್ಲಿ ಏಡ್ಸ್‌ ರೋಗ ಪತ್ತೆಯಾಗುತ್ತದೆ. ನಿಧಾನಗತಿಯಾಗಿ ದೇಹವನ್ನು ಹಲವಾರು ರೋಗಗಳಿಗೆ ತುತ್ತಾಗುವಂತೆ ಮಾಡಿ, ಮುಂದೆ ಜೀವನವನ್ನು ಬಲಿತೆಗೆದುಕೊಳ್ಳುತ್ತದೆ .

ಈ ರೋಗದ ಬಗ್ಗೆ ಜಗತ್ತಿನಾದ್ಯಂತ ಜಾಗೃತಿ ಮಾಡಿಸುವ ಕಾರಣಕ್ಕಾಗಿ ಡಿಸೆಂಬರ್‌ 1ರಂದು ವಿಶ್ವ ಏಡ್ಸ್‌ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿಶೇಷ ಥೀಮ್‌ನ ಸಂದೇಶದೊಂದಿಗೆ ಹಲವಾರು ವಿಶೇಷ
ವಿಚಾರಸಂಕಿರಣ, ಜಾಥಾವನ್ನು ಕೈಗೊಂಡು ಜಾಗೃತಿ ಮೂಡಿಸಲಾಗುತ್ತದೆ.

 ಜಾಗೃತಿ ದಿನ
ಏಡ್ಸ್‌ ರೋಗದ ಬಗೆಗಿನ ಜಾಗೃತಿ ಹಾಗೂ ಸೋಂಕಿನಿಂದ ಬಳುತ್ತಿರುವ ರೋಗಿಗಳ ಬಗ್ಗೆ ಕಾಳಜಿವಹಿಸುವ ಬಗ್ಗೆ 1987ರಲ್ಲಿ ಡಬ್ಲ್ಯು.ಎಚ್‌.ಒ. ನ ಏಡ್ಸ್‌ ರೋಗದ ಕಾರ್ಯಕ್ರಮದಲ್ಲಿ ವಿಶೇಷ ಅಧಿಕಾರಿಗಳಾದ ಥೋಮಸ್‌ ನೆಟ್ಟರ್‌ ಹಾಗೂ ಜೇಮ್ಸ್‌ ಡಬ್ಲ್ಯು. ಬನ್‌ ಎಂಬುವವರೂ ಮೊದಲಿಗೆ ಗಮನಸೆಳೆದರು. ಡಿಸೆಂಬರ್‌ 1ರಂದು ವಿಶ್ವ ಏಡ್ಸ್‌ ಜಾಗೃತಿ ದಿನವನ್ನಾಗಿ ಆಚರಿಸುವಂತೆ ಮನವಿ ಮಾಡಿದರು. ಇದರ ಫ‌ಲವಾಗಿ 1988ರಿಂದ ಡಿಸೆಂಬರ್‌ ಡಿ. 1ರಂದು ವಿಶ್ವ ಏಡ್ಸ್‌ ರೋಗ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. 

Advertisement

2018ರಲ್ಲಿ ಆಚರಿಸುವ ಏಡ್ಸ್‌ ಜಾಗೃತಿ ದಿನ ವಿಶೇಷವಾಗಿದ್ದು, 30ನೇ ವರ್ಷದ ಆಚರಣೆಯಾಗಿದೆ. ಮುಖ್ಯವಾಗಿ ಈ ಬಾರಿ ನೋ ಯುವರ್‌ ಸ್ಟೇಟಸ್‌ (KNOW UR STATUS) ಎಂಬ ವಿಶೇಷ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಕಳೆದ ವರ್ಷ ನಮ್ಮ ಆರೋಗ್ಯ, ನಮ್ಮ ಹಕ್ಕು ಎಂಬ ಸಂದೇಶದೊಂದಿಗೆ ಆಚರಿಲಾಗಿತ್ತು. 1988ರಲ್ಲಿ ಸಂವಹನ (COMMUNICATION)) ಅಥವಾ ರೋಗದ ಬಗ್ಗೆ ಸಂಕೋಚವಿಲ್ಲದೇ ಬಹಿರಂಗಪಡಿಸಿ ಎಂಬ ವಿಶೇಷ ಅರ್ಥದಲ್ಲಿ ಮೊದಲ ವಿಶ್ವ ಏಡ್ಸ್‌ ರೋಗ ಜಾಗೃತಿ ದಿನವನ್ನು ಆಚರಿಸಲಾಗಿತ್ತು.

ಭಾರತ ಮತ್ತು ಏಡ್ಸ್‌ ರೋಗ
1981ರಲ್ಲಿ ಚೆನೈನ ಲೈಂಗಿಕ ಕಾರ್ಯಕರ್ತೆಯರಲ್ಲಿ ಮೊದಲಿಗೆ ಏಡ್ಸ್‌ ರೋಗದ ಲಕ್ಷಣ ಕಂಡು ಬಂದಿತು. ಇದೇ ಮೊದಲ ಬಾರಿಗೆ ಏಡ್ಸ್‌ ರೋಗ ಭಾರತದಲ್ಲಿ ಕಾಣಿಸಿಕೊಂಡಿದ್ದು, 1987ರಲ್ಲಿ ಸುಮಾರು 52,907 ಮಂದಿಯನ್ನು ತಪಾಸಣೆಗೆ ಒಳಪಡಿಸಿದಾಗ ಈ ಪೈಕಿ 135 ಜನರಲ್ಲಿ ಸೋಂಕು ಪತ್ತೆಯಾಯಿತು. ಇತ್ತೀಚಿನ ವರದಿಯಂತೆ ಏಡ್ಸ್‌ ರೋಗವೂ ದೇಶವ್ಯಾಪಿ ಆವರಿಸಿದ್ದು, ಕರ್ನಾಟಕದ ಬಾಗಲಕೋಟೆಯಲ್ಲಿ ಅತೀಹೆಚ್ಚಿನ ಏಡ್ಸ್‌ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಗಳು ಪ್ರಕಟಗೊಂಡಿದ್ದವು. ದೇಶದಲ್ಲಿಯೇ ಮೂರನೇ ಸ್ಥಾನ ಹೊಂದಿದೆ ಎಂಬುವುದು ಸೋಜಿಗದ ಸಂಗತಿಯಾಗಿದೆ.

ಏಡ್ಸ್‌ ರೋಗಕ್ಕೆ ಕಾರಣಗಳೇನು?
ಏಡ್ಸ್‌ ಗೆ(ಅಕ್ವೈಡ್‌ ಇಮ್ಯೂನ್‌ ಡಿಫಿಶಿಯನ್ಸಿ ಸಿಂಡ್ರೋಮ್‌) ಎಚ್‌ ಐವಿ (ಹ್ಯೂಮನ್‌ ಇಮ್ಯೂನೊಡಿಫಿಶಿಯನ್ಸಿ ವೈರಸ್‌) ಎಂಬ ವೈರಸ್‌ ಕಾರಣವಾಗಿದ್ದು ಇದರಲ್ಲಿ ಎರಡು ಮುಖ್ಯ ಪ್ರಕಾರಗಳಿವೆ. ಅವುಗಳೆಂದರೆ ಎಚ್‌ ಐವಿ-1 ಮತ್ತು ಎಚ್‌ ಐವಿ-2. ಅವುಗಳಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ಪ್ರಕಾರವೆಂದರೆ ಎಚ್‌ ಐವಿ-1 ಎಚ್‌ ಐವಿಯು ಲೆಂಟಿ ವೈರಸ್‌ (ರೆಟ್ರೋ ವೈರಸ್‌ ಕುಟುಂಬಕ್ಕೆ ಸೇರಿದ) ಜಾತಿಯ ಒಂದು ವೈರಸ್‌ ಆಗಿದೆ. ಎಚ್‌ ಐವಿಯು ಪ್ರಮುಖವಾಗಿ ಬಿಳಿ ರಕ್ತ ಕಣಗಳ ಒಂದು ವಿಭಾಗವಾಗಿರುವ ಸಿಡಿ4+ಟಿ ಜೀವ ಕಣಗಳ ಮೇಲೆ ದಾಳಿ ಮಾಡುತ್ತದೆ. ಸಿಡಿ4+ಟಿ ಜೀವ ಕಣಗಳನ್ನು ನಾವು ಕೆಲವೊಮ್ಮೆ ಸಹಾಯಕ ಟಿ ಜೀವಕಣಗಳು (ಹೇಲ್ಪರ್‌ ಟಿ ಸೆಲ್ಸ್‌) ಎಂದು ಸಹ ಕರೆಯಲಾಗುತ್ತದೆ.

ಸಿಡಿ4+ಟಿ ಜೀವಕಣಗಳು ಮಾನವನ ದೇಹದಲ್ಲಿ ರಕ್ಷಣಾ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ ಎಚ್‌ ಐವಿ ಅದರ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಗೊಳಿಸುತ್ತವೆ. ಹೀಗೆ ಸಿಡಿ4+ಟಿ ಜೀವಕಣಗಳ ಮಟ್ಟ ಕಡಿಮೆಯಾಗಿ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲವಾಗುತ್ತದೆ. ಹೀಗೆ ಅವಕಾಶವಾದಿ ಸೋಂಕುಗಳು ಹಾಗೂ ರೋಗಗಳು ಏಡ್ಸ್‌ಗೆ ಕಾರಣವಾಗುತ್ತದೆ.

ಹೇಗೆ ಹರಡುತ್ತದೆ?
ಎಚ್‌ ಐವಿ ಸೋಂಕಿತ ರೋಗಿಯೊಂದಿಗಿನ ಅಸುರಕ್ಷಿತ ಲೈಂಗಿಕ ಸಂಪರ್ಕ, ಎಚ್‌ ಐವಿ ಸೋಂಕಿತ ವ್ಯಕ್ತಿಗಳಿಂದ ರಕ್ತ ಪಡೆಯುವುದು| ಎಚ್‌ ಐವಿ ಸೋಂಕಿತ ಮಾದಕ ವ್ಯಸನಿಗಳು ಬಳಸಿದ ಸೂಜಿನ ಅಥವಾ ಸಿರಿಂಜ್‌ ಗಳನ್ನು ಬಳಸುವುದು. ಎಚ್‌ ಐವಿ ಸೋಂಕಿತ ತಾಯಿ ಯಂದಿರಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಎದೆ ಹಾಲುಣಿಸುವ ಮುಖಾಂತರ ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳು, ದೇಹದ ಮೇಲೆ ಹಾಕುವ ಹಚ್ಚೆಗಳಿಂದ.

. ಜಗತ್ತಿನಲ್ಲಿ 70 ಮಿಲಿಯನ್‌ ಮಂದಿ ಏಡ್ಸ್‌ ಸೋಂಕಿನಿಂದ ಬಳಲುತ್ತಿದ್ದು, ಈಗಾಗಲೇ ಸೋಂಕಿನಿಂದ ಸುಮಾರು 35 ಮಿಲಿಯನ್‌ ಜನ ಸತ್ತಿದ್ದು, 37 ಮಿಲಿಯನ್‌ ಮಂದಿ ಬದುಕಿದ್ದಾರೆ. ಇದರಲ್ಲಿ 22 ಮಿಲಿಯನ್‌ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿತ್ತು.
. ಸೋಂಕಿನಿಂದ ಬಳಲುತ್ತಿರುವ ಗರ್ಭಿಣಿ ಹೆಂಗಸರಿಗೆ ಹುಟ್ಟುವ ಮಕಳಿಗೂ ಸೋಂಕು ತಗುಲುತ್ತದೆ. 
.  2017ರಲ್ಲಿ ಜಗತ್ತಿನಾದ್ಯಂತ ಸುಮಾರು 1.1 ಮಿಲಿಯನ್‌ ಹೆಂಗಸರು ಏಡ್ಸ್‌ ರೋಗದಿಂದ ಬಳಲುತ್ತಿದ್ದಾರೆ.
. 1991ರಲ್ಲಿ ಏಡ್ಸ್‌ ಜಾಗೃತಿ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಆಗ ಅಮೆರಿಕದ ನ್ಯೂಯಾರ್ಕ್‌ನಲ್ಲಿ ರೆಡ್‌ ರಿಬ್ಬನ್‌ನ್ನು ಕಟ್ಟಿಕೊಂಡು, ಇದನ್ನು ಜಾಗೃತಿಯ ಸಂಕೇತವಾಗಿ ಆಚರಿಸಲಾಯಿತು. ರಕ್ತದ ಸಂಪರ್ಕದಿಂದ ಕೋಪ ಬೇಡ, ಪ್ರೀತಿಸಿ (connection to blood and
the idea of passion—not only anger, but love)ಎಂಬ ಸಂದೇಶ ರೆಡ್‌ ರಿಬ್ಬನ್‌ ಮೂಲಕ ತಿಳಿಸಲಾಯಿತು. 1995 ರಲ್ಲಿ ಆಚರಿಸಲಾದ 11ನೇ ವಿಶ್ವ ಏಡ್ಸ್‌ ರೋಗದ ದಿನಾಚರಣೆಯ ವೇಳೆ ಶೇ. 80 ರಿಂದ 60ಕ್ಕೆ ಏಡ್ಸ್‌ ಪೀಡಿತರ ಸಂಖ್ಯೆ ಇಳಿದಿತ್ತು. ಅದಕ್ಕೆ ಈ ಜಾಗೃತಿಯ ದಿನದ ಪ್ರಭಾವ ಪೂರಕವಾಗಿದೆ ಎಂದು ಅಂದಿನ ಸಮ್ಮೇಳನದಲ್ಲಿ ತಿಳಿಸಲಾಗಿತ್ತು.

ಏಡ್ಸ್‌ ರೋಗಿಗಳು ಅಸ್ಪೃಶ್ಯರಲ್ಲ
ಏಡ್ಸ್‌ ಇರುವ ರೋಗಿಯನ್ನು ಸಮಾಜದಲ್ಲಿ ಅಸ್ಪೃಶ್ಯರಂತೆ ಕಾಣುತ್ತಾರೆ. ಅದು ಇನ್ನೂ ಅವರ ಆತ್ಮ ಸ್ಥೆರ್ಯವನ್ನು ಕುಗ್ಗಿಸುತ್ತದೆ. ಅವರು ಕೂಡ ಎಲ್ಲರಂತೆ ಜೀವಿಸಬಹುದು. ತಪ್ಪು ಕಲ್ಪನೆಗಳನ್ನು ಬದಿಗೊತ್ತಿ ಅವರನ್ನು ಎಲ್ಲರಂತೆ ನೋಡಿ. ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಳಿತು, ಭಯದಲ್ಲಿ ಊಟ, ತಿಂಡಿ ಬಿಟ್ಟು ಅವರು ಚಿಂತೆಗೆ ಶರಣಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಧೈರ್ಯ ತುಂಬ ಬೇಕು. ಇನ್ನೂ ಹತ್ತಿಪ್ಪತ್ತು ವರ್ಷ ಬದುಕಬೇಕಾದವರು ಚಿಂತೆಯಲ್ಲಿ ಎರಡೇ ವರ್ಷಕ್ಕೆ ಜೀವ ಬತ್ತಿ ಹೋಗಿರುತ್ತದೆ. ಆದ್ದರಿಂದ ಅವರಿಗೆ ಸಾಂತ್ವನ ಹೇಳಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು. 

ರೋಗದ ಲಕ್ಷಣಗಳು
ಪ್ರಾಥಮಿಕ ಹಂತ: ಎಚ್‌ ಐವಿ ಸೋಂಕಿಗೆ ಒಳಗಾದ ನಂತರ ಕೆಲವರಿಗೆ ಫ್ಲೂನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ ಅವು ಗುಣಮುಖವಾಗುತ್ತದೆ. ಇದರ ಲಕ್ಷ ಣವೆಂದರೆ – ಜ್ವರ, ತಲೆ ನೋವು, ಕೀಲು ನೋವು, ಆಯಾಸ, ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣು ಕಾಣಿಸಿಕೊಳ್ಳುವುದು, ಚರ್ಮದ ತುರಿಕೆ. ಏಡ್ಸ್‌ ಎಚ್‌ ಐವಿ ಸೋಂಕಿನ ಕೊನೆಯ ಹಂತವೆಂದರೆ ಸಿಡಿ4+ಟಿ ಜೀವಕಣ  ಪ್ರಮಾಣ ಅತಿ ಕಡಿಮೆಯಾಗುವುದು ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕುಗ್ಗಿರುತ್ತದೆ. ಸಾಮಾನ್ಯವಾಗಿ ಎಚ್‌ ಐವಿ ಸೋಂಕಿಗೆ ಒಳಗಾದ 8-10 ವರ್ಷಗಳ ನಂತರ ಏಡ್ಸ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಅವುಗಳೆಂದರೆ – ದೇಹದ ತೂಕದಲ್ಲಿ ಭಾರಿ ಇಳಿಕೆ, ಮತ್ತೆ ಮತ್ತೆ ಮರುಕಳಿಸುವ ಜ್ವರ, ಕೆಮ್ಮು ಮತ್ತು ಕಫ‌, ವಾಂತಿ, ತೀವ್ರ ದಣಿವು, ಅತಿ ಸಾರ, ಬಾಯಿಯಲ್ಲಿ ಬಿಳಿ ಮಚ್ಚೆ ಕಾಣಿಸಿಕೊಳ್ಳುವುದು, ಹುಣ್ಣಾಗುವುದು, ನೆನಪಿನ ಶಕ್ತಿ ಕುಂದುವುದು, ತಲೆನೋವು ಮತ್ತು ತಲೆ ಸುತ್ತು.

 ಶಿವ ಸ್ಥಾವರ ಮಠ, ಪ್ರೀತಿ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next