Advertisement

ಉಡುಪಿಯಲ್ಲಿ ಇಂದು, ನಾಳೆ ಸರಳ ಶ್ರೀಕೃಷ್ಣ ಜಯಂತಿ

01:52 AM Sep 10, 2020 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಗುರುವಾರ ಶ್ರೀಕೃಷ್ಣ ಜಯಂತಿ ಮತ್ತು ಶುಕ್ರವಾರ ವಿಟ್ಲಪಿಂಡಿ ಉತ್ಸವ ನಡೆಯಲಿದೆ.  ಕೊರೊನಾ ಕಾರಣದಿಂದ ಸೆ. 21ರ ವರೆಗೆ ಕೇಂದ್ರದ ಮಾರ್ಗಸೂಚಿ ಪ್ರಕಾರ 50 ಜನರಿಗಿಂತ ಹೆಚ್ಚಿಗೆ ಜನರು ಸೇರಲು ಅವಕಾಶವಿಲ್ಲವಾದ ಕಾರಣ ಶ್ರೀಕೃಷ್ಣ ಜಯಂತಿಯಲ್ಲಿ ಭಕ್ತರು ಪಾಲ್ಗೊಳ್ಳಲು ಅವಕಾಶವಿಲ್ಲ. ಕೇವಲ ಸಾಂಪ್ರದಾಯಿಕ ಆಚರಣೆಯನ್ನು ಮಾತ್ರ ನಡೆಸಲಾಗುತ್ತಿದೆ.

Advertisement

ಗುರುವಾರ ಬೆಳಗ್ಗೆ ಪರ್ಯಾಯ ಸ್ವಾಮೀಜಿಯವರಿಂದ ಲಕ್ಷ ತುಳಸೀ ಅರ್ಚನೆ, ಕಲಾವಿದರಿಂದ ಸ್ಯಾಕ್ಸೋ ಫೋನ್‌ ವಾದನ, ವೀಣಾ ವಾದನ, ಸಂಜೆ ವಿವಿಧ ಮಠಾಧೀಶರಿಂದ ಪ್ರವಚನ ಮಾಲಿಕೆಯ ಸಮಾರೋಪ, ರಾತ್ರಿ ಸಂಸ್ಕೃತ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕಾರ್ಯಕ್ರಮವನ್ನು ಅದಮಾರು ಮಠದ ವೆಬ್‌ಸೈಟ್‌ ಡಿಡಿಡಿ.ಚಛಞಚruಞಚಠಿಜಚ.cಟಞ ಅಥವಾ ಯೂಟ್ಯೂಬ್‌ ಮೂಲಕ ನೋಡಬಹುದು.

ವಿಟ್ಲಪಿಂಡಿ ಉತ್ಸವ ಶುಕ್ರವಾರ ಅಪರಾಹ್ನ ನಡೆಯಲಿದೆ. ಈಗಾಗಲೇ 12 ಗುರ್ಜಿಗಳನ್ನು ಮತ್ತು ಎರಡು ಮಂಟಪಗಳನ್ನು ನಿರ್ಮಿಸಲಾಗಿದೆ. ಗೋಶಾಲೆಯ ಗೋವಳರು ಮೊಸರು ಕುಡಿಕೆಯನ್ನು ಒಡೆಯಲಿದ್ದಾರೆ. ಈ ಕಾರಣಕ್ಕಾಗಿ ಅಪರಾಹ್ನ 2 ಗಂಟೆಯಿಂದ ಉತ್ಸವ ಮುಗಿಯುವವರೆಗೆ ರಥಬೀದಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅನಂತರ ಕನಕನ ಕಿಂಡಿ ಮೂಲಕ ರಥಬೀದಿ ಹೊರಗೆ ಕೃಷ್ಣದರ್ಶನ ಮಾಡಬಹುದು. ಇಷ್ಟು ವರ್ಷ ಮುದ್ದುಕೃಷ್ಣ ವೇಷ ಸ್ಪರ್ಧೆ ಮತ್ತು ವೇಷಗಳ ಸ್ಪರ್ಧೆ ನಡೆಯುತ್ತಿದ್ದರೆ ಈ ಬಾರಿ ಇವೆರಡಕ್ಕೂ ಅವಕಾಶ ಇಲ್ಲ.

ಪ್ರಸಾದ ವಿತರಣೆ
ಶ್ರೀ ಕೃಷ್ಣ ದೇವರ ದರ್ಶನವನ್ನು ಒಳಗೆ ಪ್ರವೇಶಿಸಿ ಮಾಡಲು ಸಾಧ್ಯವಾಗದ ಕಾರಣ ಭಕ್ತರಿಗೆ ಪ್ರಸಾದವನ್ನು ರಥಬೀದಿಯಲ್ಲಿ ಮತ್ತು ರಾಜಾಂಗಣ ಸಮೀಪ ಹಾಕಿದ ಕೌಂಟರ್‌ನಲ್ಲಿ ಶುಕ್ರವಾರ- ಶನಿವಾರ ವಿತರಿಸಲಾಗುತ್ತದೆ. ಕೃಷ್ಣನ ಪ್ರಸಾದವನ್ನು ಭಕ್ತರಿಗೆ ವಿತರಿಸಲು ಒಂದು ಲಕ್ಷ ಚಕ್ಕುಲಿ, ಒಂದು ಲಕ್ಷ ಉಂಡೆಯನ್ನು ತಯಾರಿಸಲಾಗುತ್ತಿದೆ.

ದ.ಕ.ದಲ್ಲೂ ಸರಳ ಆಚರಣೆ
ಮಂಗಳೂರು: ಸೌರಮಾನ ಕ್ರಮದಲ್ಲಿ ಗುರುವಾರ ಜರಗುವ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ದ.ಕ.ದಲ್ಲಿ ಸರಳವಾಗಿ ನಡೆಯಲಿದೆ. ಆದರೆ ಕೊರೊನಾದಿಂದಾಗಿ ಯಾವುದೇ ದೇವಳಗಳಲ್ಲಿ ಅಷ್ಟಮಿ ಆಚರಣೆ ಇರುವುದಿಲ್ಲ. ಕೆಲವು ಮನೆಗಳಲ್ಲಿ ಆಚರಣೆ ಇರುತ್ತದೆ. ಚಾಂದ್ರಮಾನ ಮಾಸದ ಕೃಷ್ಣಾಷ್ಟಮಿ ಕಳೆದ ಆ. 11ರಂದು ನಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಆ ದಿನವೂ ಎಲ್ಲಿಯೂ ಆಚರಣೆಯಾಗಲೀ, ಮೊಸರು ಕುಡಿಕೆ ಉತ್ಸವಗಳಾಗಲೀ ಇರಲಿಲ್ಲ. ಇದೀಗ ಸೌರಮಾನ ಮಾಸದ ಪ್ರಕಾರ ಗುರುವಾರ ನಡೆಯುವ ಅಷ್ಟಮಿ ವೇಳೆಯೂ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮೊಸರು ಕುಡಿಕೆಯಂತಹ ಕಾರ್ಯಕ್ರಮಗಳು ಇರುವುದಿಲ್ಲ.

Advertisement

ಕೃಷ್ಣಾರ್ಘ್ಯ ಪ್ರದಾನ…
ಗುರುವಾರ 9 ಗಂಟೆಗೆ ಕೃಷ್ಣಜಯಂತಿ ಪೂಜೆಯನ್ನು ನೆರವೇರಿಸಲಿರುವ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಧ್ಯರಾತ್ರಿ 12.16ಕ್ಕೆ ಶ್ರೀಕೃಷ್ಣ ಮಠದಲ್ಲಿ ಕೃಷ್ಣಾರ್ಘ್ಯ ಪ್ರದಾನ ಮಾಡುವರು. ಇದನ್ನು ಲೈವ್‌ನಲ್ಲಿ ಬಿತ್ತರಿಸಲಾಗುವುದು. ಇದನ್ನು ನೋಡಿ ಭಕ್ತರು ಅನುಸರಿಸಬಹುದು.

ನಿತ್ಯ ಶ್ರೀಕೃಷ್ಣ ಸಂದೇಶದ ಅನುಸಂಧಾನ
ಶ್ರೀಈಶಪ್ರಿಯತೀರ್ಥರಿಂದ ಶ್ರೀಕೃಷ್ಣಜಯಂತಿ ಸಂದೇಶ

ನಮ್ಮಲ್ಲಿ ಎರಡು ರೀತಿಯ ಮಾಸ ಕ್ರಮಗಳಿವೆ. ಒಂದು ಸೂರ್ಯನ ಗತಿಯನ್ನು ಆಧರಿಸಿದ, ಮತ್ತೂಂದು ಚಂದ್ರನ ಗತಿಯನ್ನು ಆಧರಿಸಿದ ಮಾಸ ಪದ್ಧತಿ. ಉಡುಪಿ ಯಲ್ಲಿ ಸೌರಮಾನ ಕ್ರಮದಂತೆ ಶ್ರೀಕೃಷ್ಣ ಜಯಂತಿಯನ್ನು ಆಚರಿಸುತ್ತೇವೆ. ಭಗವಂತನನ್ನು ಎಲ್ಲಿ ನೋಡಬೇಕೆಂಬ ಪ್ರಶ್ನೆ ಬರುತ್ತದೆ. ನಮ್ಮ ಸುತ್ತಮುತ್ತಲಿನ ಎಲ್ಲ ವಸ್ತು, ಪರಿಸರದಲ್ಲಿಯೂ ದೇವರನ್ನು ಕಂಡು ನಾವು ಕೆಲಸ ಮಾಡಬೆಕು. ನಮ್ಮಲ್ಲಿರುವ ಸಂಪತ್ತನ್ನು ಇಲ್ಲದವರಿಗೆ ಕೊಡುವ ಸಂದೇಶವನ್ನು ಶ್ರೀಕೃಷ್ಣ ತೋರಿಸಿದ್ದಾನೆ. ಉದಾಹರಣೆಗೆ ಕುಚೇಲ. ಹಳೆಯ ಸ್ನೇಹಿತನಾದ ಕುಚೇಲನನ್ನು ಪ್ರೀತಿಯಿಂದ ಕೃಷ್ಣ ಸ್ವೀಕರಿಸಿದ. ಅವನಲ್ಲಿದ್ದ ಅವಲಕ್ಕಿಯನ್ನು ಸ್ವೀಕರಿಸಿ ಪೀತಾಂಬರದಂತಹ ಬಟ್ಟೆಗಳನ್ನು ಕೊಟ್ಟು ಸತ್ಕರಿಸಿದ. ಮನೆಗೆ ವಾಪಸು ಹೋಗುವಾಗ ಕೃಷ್ಣನ ಮರೆವು ಬರಬಾರದೆಂದು ನನ್ನಲ್ಲಿದುದನ್ನು ತೆಗೆದುಕೊಂಡು ಕಳುಹಿಸಿದ ಎಂದು ಕುಚೇಲ ಸಂತೋಷಪಟ್ಟ. ಮನೆಗೆ ಹೋದಾಗ ಎಲ್ಲ ಸಂಭ್ರಮವನ್ನೂ ಕೃಷ್ಣ ಕೊಟ್ಟಿದ್ದ, ಲೋಕದ ಸಂಕಷ್ಟವನ್ನು ನಿವಾರಿಸಲು ಭಗವಂತ ಶ್ರೀಕೃಷ್ಣನಾಗಿ ಅವತರಿಸುತ್ತಾನೆ. ಈಗ ಕೊರೊನಾ ಸೋಂಕಿನಿಂದ ಶ್ರೀಕೃಷ್ಣನ ದರ್ಶನವನ್ನು ಭಕ್ತರಿಗೆ ಮಾಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಅಥವಾ ಆರ್ಥಿಕ ಕ್ಷೇತ್ರದ ಮೇಲೆ ಹೊಡೆತ ಇದೆ. ಮುಂದೆ ಈ ಸಮಸ್ಯೆಗಳೆಲ್ಲವೂ ಪರಿಹಾರವಾಗಿ ಇನ್ನಷ್ಟು ಎತ್ತರಕ್ಕೆ ಹೋಗುತ್ತೇವೆ ಎಂಬ ಸಂದೇಶ ಸಿಗುತ್ತದೆ. ಒಂದು ರೀತಿಯಲ್ಲಿ ನೋಡುವುದಾದರೆ ಪ್ರಕೃತಿಗೆ ಮಾಡಿದ ಅನ್ಯಾಯಕ್ಕೆ ನಮಗೆ ಪಾಠವಾಗುತ್ತಿದೆ ಎನ್ನಬಹುದು. ಶ್ರೀಕೃಷ್ಣ ಗಿಡಮರಗಳ ಮೇಲೆ, ಸಾಮಾನ್ಯ ಜನರ ಮೇಲೆ ಎಷ್ಟು ಪ್ರೀತಿ ತೋರಿಸಿದ್ದಾನೆಂಬುದು ಶ್ರೀಮದ್ಭಾಗವತಾದಿ ಗ್ರಂಥಗಳಲ್ಲಿ ಕಂಡುಬರುತ್ತದೆ. ಇದೆಲ್ಲವನ್ನೂ ನಾವು ಅಳವಡಿಸಿಕೊಳ್ಳಬೇಕೆಂಬ ಪಾಠವನ್ನು ಶ್ರೀಕೃಷ್ಣ ಕೊಟ್ಟಿದ್ದಾನೆ. ಸಾಮಾನ್ಯ ವ್ಯಕ್ತಿಗಳಲ್ಲಿಯೂ ಭಗವಂತನಿದ್ದಾನೆಂಬ ಅರಿವಿನೊಂದಿಗೆ ನಾವು ಕಾರ್ಯನಿರ್ವಹಿಸಬೇಕು. ಪರಸ್ಪರಂ ಭಾವಯಂತಃ ಎಂಬ ನುಡಿಯಂತೆ ಶ್ರೀಕೃಷ್ಣ ಹೇಳಿದ ಸಹಬಾಳ್ವೆಯನ್ನು ನಡೆಸಬೇಕು. ಶ್ರೀಕೃಷ್ಣ ಎಲ್ಲ ದಿನವೂ ಇದ್ದಾನೆ. ಭಕ್ತಿಯಿಂದ ಪ್ರಾರ್ಥನೆ ಮಾಡುವ ದಿನಗಳಲ್ಲಿ ಆತ ಅವತಾರ ಎತ್ತುತ್ತಾನೆ. ಶ್ರೀಕೃಷ್ಣನ ನೆನಪು ಸದಾ ಇರಬೇಕು. ಇದಕ್ಕಾಗಿಯೇ ಕೃಷ್ಣ ವೇಷಗಳನ್ನು ಮಕ್ಕಳಿಗೆ ಹಾಕುವ ಪರಿಪಾಠ ಬೆಳೆದಿದೆ. ಮಕ್ಕಳಿಗೆ ಸಂಸ್ಕಾರವೂ ಸಿಗುತ್ತದೆ. ಕೃಷ್ಣ ಕೊಟ್ಟ ಸಂದೇಶಗಳಲ್ಲಿ ಕಾಳೀಯಮರ್ದನವೂ ಒಂದು. ಕಾಳೀಯನ ಹೆಡೆ ಮೇಲೆ ಕೃಷ್ಣ ಕುಣಿದಾಗ ಕಾಳೀಯನ ತಲೆಯಲ್ಲಿದ್ದ ಅಹಂಕಾರ ಹೋಯಿತು, ಶಂಖ, ಚಕ್ರಗಳ ಚಿಹ್ನೆ ಮೂಡಿದವು. ನಮ್ಮ ತಲೆಯಲ್ಲಿಯೂ ಸದಾ ಭಗವಂತನ ಚಿಂತನೆ ಇರಬೇಕು. ನಾವು ವಸುದೇವ (ವೈರಾಗ್ಯದ ಸಂಕೇತ) ಮತ್ತು ದೇವಕಿ (ಭಕ್ತಿ ಸಂಕೇತ) ಆಗಬೇಕು. ಶ್ರೀಕೃಷ್ಣಜಯಂತಿಯ ಪರ್ವಕಾಲದಲ್ಲಿ ಇಂತಹ ಕೃಷ್ಣನ ಸಂದೇಶಗಳನ್ನು ಅನುಸಂಧಾನ ಮಾಡೋಣ.

– ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next