ಬೆಂಗಳೂರು: ಬಿಬಿಎಂಪಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದ ನಾಲ್ಕನೇ ಅವಧಿಯ ಹಾಗೂ 2019-2020ನೇ ಸಾಲಿನ ಬಜೆಟ್ ಸೋಮವಾರ ಮಂಡನೆಯಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ಜನಪ್ರಿಯ ಘೋಷಣೆಗಳನ್ನು ಹೆಚ್ಚಿರುವ ನಿರೀಕ್ಷೆ ಇದ್ದು, ಪಾಲಿಕೆಯ ಇತಿಹಾಸದಲ್ಲಿಯೇ ಬೃಹತ್ ಗಾತ್ರದ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.
ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ 11.30ಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಬಜೆಟ್ ಮಂಡಿಸಲಿದ್ದು, ಬಿಬಿಎಂಪಿ ರಚನೆಯಾದ ಬಳಿಕ ಬಜೆಟ್ ಮಂಡನೆ ಮಾಡುತ್ತಿರುವ ಮೊದಲ ಮಹಿಳಾ ಸದಸ್ಯೆಯಾಗಿದ್ದಾರೆ. 2019-2020ನೇ ಸಾಲಿನಲ್ಲಿ ಅಂದಾಜು 11,000 ಕೋಟಿ ರೂ.ಮೊತ್ತದ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.
ಪಾಲಿಕೆ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಒತ್ತು ನೀಡುವ ಜತೆಗೆ ಪ್ರಮುಖವಾಗಿ ಬಿಬಿಎಂಪಿ ಶಾಲೆ ಕಟ್ಟಡಗಳ ದುರಸ್ತಿಗೆ ಹೆಚ್ಚಿನ ಅನುದಾನ. ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಕಂಚಿನ ಪ್ರತಿಮೆಗೆ 5 ಕೋಟಿ ರೂ, ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗೆ ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ಪ್ರಶಸ್ತಿ,
ಪ್ರತಿ ವಾರ್ಡ್‌ಗಳಲ್ಲಿ 20 ಮಹಿಳೆಯರಿಗೆ ಮೊಪೆಡ್( ಎಲೆಕ್ಟ್ರಿಕ್ ಸ್ಕೂಟಿ) ವಿತರಣೆ, ಮಹಿಳೆಯರ ಆರ್ಥಿಕ ಸದೃಢತೆಗೆ ಕಿರು ಸಾಲಭಾಗ್ಯ, ತ್ಯಾಜ್ಯ ವಿಲೇವಾರಿ ಮಾಡುವ ಕಲ್ಲು ಕ್ವಾರಿಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ. ಪಿಂಕ್ ಬೇಬಿ ಯೋಜನೆ ವರ್ಷಪೂರ್ತಿ ವಿಸ್ತರಣೆ, ಬಿಬಿಎಂಪಿ ಆಸ್ಪತ್ರೆಗಳಿಗೆ ಆತ್ಯಾಧುನಿಕ ಆ್ಯಂಬುಲೆನ್ಸ್ ಖರೀದಿ ಸೇರಿದಂತೆ ಪ್ರಮುಖ ಅಂಶಗಳು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿತ ಕಾರ್ಯಕ್ರಮಗಳ ಕೆಲಸ ಆರಂಭವಾಗಿದ್ದು, ಯೋಜನೆಗಳು ಪೂರ್ಣಗೊಂಡ ನಂತರ ವೆಚ್ಚ ಮೊತ್ತದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಈ ವರ್ಷ 8015 ಕೋಟಿ ರೂ. ಕ್ರಿಯಾ ಯೋಜನೆ ನೀಡಲಾಗಿದೆ. ವೈಟ್ ಟಾಪಿಂಗ್, ಚರಂಡಿ ಅಭಿವೃದ್ಧಿ, ಫ್ಲೈಓವರ್, ಅಂಡರ್ ಪಾಸ್‌ಗಳಂತ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ.
-ಡಾ.ಜಿ.ಪರಮೇಶ್ವರ್, ಬೆಂಗಳೂರು ಅಭಿವೃದ್ಧಿ ಸಚಿವ