Advertisement

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಇಂದು

07:45 AM Aug 18, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಶುಕ್ರವಾರ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸಿ ಪಕ್ಷದ ರಾಜ್ಯ ಮುಖಂಡರಿಗೆ ಚುರುಕು ಮುಟ್ಟಿಸಿದ ಬಳಿಕ ನಡೆಯುತ್ತಿರುವ ಮೊದಲ ಕೋರ್‌ ಕಮಿಟಿ ಸಭೆ ಇದಾಗಿರುವುದರಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Advertisement

ಜಡವಾಗಿದ್ದ ರಾಜ್ಯ ಬಿಜೆಪಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಅಮಿತ್‌ ಶಾ ಅವರು ಪಕ್ಷದ ಮುಖಂಡರಿಗೆ ಕೆಲವು 
“ಟಾಸ್ಕ್’ಗಳನ್ನು ನೀಡಿದ್ದು, ಅದನ್ನು ಪೂರೈಸಲು ಕಾಲಮಿತಿಯನ್ನೂ ನಿಗದಿಪಡಿಸಿದ್ದಾರೆ.

ಅಲ್ಲದೆ, ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಭಾರಿ ಹೋರಾಟ ನಡೆಸಿ ಪಕ್ಷ ಸಂಘಟಿಸುವಂತೆಯೂ ತಾಕೀತು ಮಾಡಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು ರೂಪಿಸಲಿದ್ದಾರೆ.

ಮತ್ತಷ್ಟು ಹೋರಾಟ ನಿರ್ಧಾರ ಸಾಧ್ಯತೆ: ಈಗಾಗಲೇ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದಟಛಿ ಹೋರಾಟಕ್ಕೆ ಇಳಿದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಳನ್ನು ಕೈಗೊಳ್ಳುವ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಬಿಜೆಪಿಯ ರಾಜ್ಯ ಘಟಕದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಿಳಿದು ದೆಹಲಿಗೆ ವಾಪಸಾಗಿರುವ ಶಾ ಅವರು ಈಗಾಗಲೇ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರೊಂದಿಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಅವರಿಗೂ ಪಕ್ಷ ಸಂಘಟನೆ ಕುರಿತಂತೆ ಕೆಲವು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.ಶುಕ್ರವಾರ ನಡೆಯಲಿರುವ ಕೋರ್‌ ಕಮಿಟಿ ಸಭೆಯಲ್ಲಿ ಮುರಳೀಧರರಾವ್‌ ಕೂಡ ಭಾಗವಹಿಸುತ್ತಿದ್ದು,ಅಮಿತ್‌ ಶಾ ಅವರ ಮತ್ತಷ್ಟು ನಿರ್ದೇಶನಗಳೊಂದಿಗೆ ರಾಜ್ಯ ನಾಯಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಅದರಂತೆ ಪಕ್ಷದ ಮುಂದಿನ ಚಟುವಟಿಕೆಗಳ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರಧಾನಿ ಬಗ್ಗೆ ರಾಹುಲ್‌ ಹೇಳಿಕೆಗೆ ಬಿಜೆಪಿ ಆಕ್ಷೇಪ
ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ಕಾಶ್ಮೀರ ಮತ್ತು ವಿದೇಶಾಂಗ ನೀತಿ ಕುರಿತು ಟೀಕಿಸಿರುವ ಎಐಸಿಸಿ
ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರನ್ನು ಜಾಣ ಕುರುಡು ಆವರಿಸಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದೆ.

Advertisement

ಬುಧವಾರ ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗೆ ಆಗಮಿಸಿದ್ದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ನೀಡಿರುವ ಹೇಳಿಕೆಗಳು ವಿದೇಶಾಂಗ ನೀತಿ ವಿಚಾರದಲ್ಲಿ ಅವರು ಯಾವುದೇ ಪ್ರೌಢತೆ ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಪಕ್ಷದ ವಕ್ತಾರರೂ ಆಗಿರುವ ಶಾಸಕ ಎಸ್‌.ಸುರೇಶ್‌ಕುಮಾರ್‌ ಟೀಕಿಸಿದ್ದಾರೆ.

ಮೋದಿ ಅವರು ಪ್ರಧಾನಿಯಾದ ಬಳಿಕ ಭೂತಾನ್‌ಗೆ ನೀಡಿದ ಪ್ರಥಮ ಭೇಟಿಯಲ್ಲೇ ಎರಡೂ ರಾಷ್ಟ್ರಗಳ ಸಂಬಂಧ ಸುಧಾರಿಸಿದೆ. ಡೋಕ್ಲಾಂ ವಿವಾದದಲ್ಲಿ ಭೂತಾನ್‌ ರಾಷ್ಟ್ರವು ಚೀನಾದ ಆಕ್ರಮಣಕ್ಕೆ ಪ್ರಬಲ ಪ್ರತಿರೋಧ ವ್ಯಕ್ತಪಡಿಸುವುದೇ ಇದಕ್ಕೆ ಸಾಕ್ಷಿ. ಅಲ್ಲದೆ, ಈ ವಿಚಾರದಲ್ಲಿ ದೇಶ, ವಿದೇಶದಲ್ಲಿ ಅನೇಕ ರಾಜತಾಂತ್ರಿಕರು ಭಾರತದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ರಾಹುಲ್‌ ಗಾಂಧಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯಿಂದ ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣ ಸಂದರ್ಭದಲ್ಲಿ ಕಾಶ್ಮೀರದ ಸಮಸ್ಯೆಗೆ ಸೂಕ್ತ ಪರಿಹಾರ ಕುರಿತು ಪ್ರಸ್ತಾಪಿಸಿದ್ದೇ ಕಾಂಗ್ರೆಸ್‌ ಪಕ್ಷವನ್ನು ವಿಚಲಿತಗೊಳ್ಳುವಂತೆ ಮಾಡಿದೆ. ಅಲ್ಲಿನ ಜನರ ಒಳಿತು ಮತ್ತು ಉಗ್ರರ ನಿಗ್ರಹ ಇವೆರಡೂ ಬಿಜೆಪಿಯ ಆದ್ಯತೆಯಾಗಿದೆ. ತನ್ನ ಎಡಬಿಡಂಗಿ ನೀತಿಯಿಂದಲೇ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್‌ ಪಾತಾಳಕ್ಕೆ ಕುಸಿಯುತ್ತಿದ್ದರೂ ರಾಷ್ಟ್ರೀಯ ವಿಚಾರಗಳು ಮತ್ತು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅದೇ ನೀತಿ ಮುಂದುವರಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಿಂದ ವಿಧಾನಸೌಧ ಚಲೋ ಇಂದು
ಬೆಂಗಳೂರು
: ಸಚಿವರಾದ ಡಿ.ಕೆ.ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೊಳಿ ರಾಜೀನಾಮೆಗೆ ಆಗ್ರಹಿಸಿ ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಬಿಜೆಪಿ ಶುಕ್ರವಾರ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ ನಲ್ಲಿ ಸಭೆ ಸೇರಲಿರುವ ಬಿಜೆಪಿ ಕಾರ್ಯಕರ್ತರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೇಲೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ರಾಜ್ಯದ ಬಿಜೆಪಿ ನಾಯಕರ ಮೃದು ಧೋರಣೆ ಬಗ್ಗೆ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಆ. 18ರಿಂದ ಒಂದು ವಾರ ಕಾಲ ರಾಜ್ಯಾದ್ಯಂತ ಧರಣಿ, ಪ್ರತಿಭಟನಾ ರ್ಯಾಲಿ, ಬೈಕ್‌ ರ್ಯಾಲಿ, ಪಂಜಿನ ಮೆರವಣಿಗೆ, ಮೌನ ಮೆರವಣಿಗೆ ಸೇರಿ ಸರಣಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಹೋರಾಟದ ಮೊದಲ ಭಾಗವಾಗಿ ಶುಕ್ರವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next