ತುಮಕೂರು: ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ವೈಭವಯುತದಿಂದ ನಡೆಯುತ್ತಿದೆ. ಮಹಾಶಿವರಾತ್ರಿ ಅಂಗವಾಗಿ ಮಂಗಳವಾರ ಸಿದ್ಧಲಿಂಗೇಶ್ವರ ಸ್ವಾಮಿಯವರ ಐತಿಹಾಸಿಕ ರಥೋತ್ಸವಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕಾಗಿ ಮಠದಲ್ಲಿ ಎಲ್ಲಾರೀತಿಯ ಸಿದ್ಧತೆಗಳು ನಡೆದಿದೆ.
ಶ್ರೀಕ್ಷೇತ್ರದಲ್ಲಿ ಜಾತ್ರೆ ಅಂಗವಾಗಿ ಕಳೆದ ಫೆ.22 ರಿಂದ ಈವರೆಗೆ ವಿವಿಧ ಉತ್ಸವಾದಿಗಳಾದ ಗೋಸಲ ಸಿದ್ದೇಶ್ವರ ಸ್ವಾಮಿ ಉತ್ಸವ, ಶೂನ್ಯ ಸಿಂಹಾಸನೋತ್ಸವ, ನಂದೀವಾಹನ ಮತು ಗಜವಾಹನ, ಹುಲಿವಾಹನ, ಸಿಂಹವಾಹನ, ಹುತ್ತವಾಹನ, ಶೇಷವಾಹನ, ಅಶ್ವವಾಹನ, ನವಿಲುವಾಹನ, ರಾವಣವಾಹನ, ಬಿಲ್ವವೃಕ್ಷ ವಾಹನ ಇತ್ಯಾದಿ ಉತ್ಸವಾದಿಗಳು ನಡೆದವು.
ಮಹಾಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು. ರಾತ್ರಿ ಬೆಳ್ಳಿ ರಥೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಇಡೀ ರಾತ್ರಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಹಾಗೂ ಮಠದ ಮಕ್ಕಳಿಗೆ ಶಿವರಾತ್ರಿ ವಿಶೇಷಕ್ಕೆ 30 ಸಾವಿರಕ್ಕೂ ಹೆಚ್ಚು ತಂಬಿಟ್ಟು ವಿತರಣೆ ಮಾಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ. ರಾಜ್ಯ ಮಟ್ಟದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಎಲ್ಲರನ್ನು ಆಕರ್ಷಿಸುತ್ತಿದೆ.
ಮಹಾರಥೋತ್ಸವ ಮಂಗಳವಾರ ನಡೆಯುವ ಹಿನ್ನೆಲೆಯಲ್ಲಿ ರಥೋತ್ಸವಕ್ಕಾಗಿ ಸಿದ್ಧಗಂಗೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಎಲ್ಲಾ ರೀತಿ ಸಿದ್ಧತೆ ನಡೆದಿದ್ದು, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ಮೇಲೆ ನಡೆಯುತ್ತಿರುವ ಮೊದಲ ಜಾತೆ ಇದಾಗಿದ್ದು, ಶ್ರೀಗಳ ಗದ್ದುಗೆ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು. ಶ್ರೀಗಳ ಗದ್ದುಗೆಗೆ ಶಿವಲಿಂಗ ಅಲಂಕಾರ ಮಾಡಿದ್ದು ಭಕ್ತರ ಗಮನ ಸೆಳೆಯಿತು.