ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯದ ಖಾಸಗಿ ಶಾಲೆಯ ಒಂದನೇ ತರಗತಿ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಲಭ್ಯವಿರುವ ಸೀಟಿಗೆ 2019-20ನೇ ಸಾಲಿನ ಪ್ರವೇಶಕ್ಕೆ ಮೇ 6ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
ಆರ್‌ಟಿಇ ಕಾಯ್ದೆಯ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ) ತಿದ್ದುಪಡಿ ಮಾಡಿರುವುದರಿಂದ ಈ ಬಾರಿ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹಾಗೆಯೇ ಸೀಟುಗಳ ಪ್ರಮಾಣವೂ ಇಳಿಕೆಯಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದ ಕಡೆಗಳಲ್ಲಿ ಮಾತ್ರ ಖಾಸಗಿ ಶಾಲೆಗೆ ಆರ್‌ಟಿಇ ಅಡಿ ಮಕ್ಕಳನ್ನು ಸೇರಿಸಲು ಸಾಧ್ಯವಿರುವುದರಿಂದ ಬಹುತೇಕ ಜಿಲ್ಲೆಗಳಲ್ಲಿ ಪಾಲಕ, ಪೋಷಕರಿಗೆ ತಮ್ಮ ಮಕ್ಕಳನ್ನು ಆರ್‌ಟಿಇ ಅಡಿಯಲ್ಲಿ ಸೇರಿಸಲು ಸಾಧ್ಯವಾಗುವುದಿಲ್ಲ.
2018-19ರಲ್ಲಿ ಸರಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಸರ್ಕಾರ ಆರ್‌ಟಿಇ ಕಾಯ್ದೆಯ ನಿಯಮದಲ್ಲಿ ಬದಲಾವಣೆ ಮಾಡಿರುವುದರಿಂದ ಆ ಸೀಟು ಸಾವಿರಕ್ಕೆ ಕುಸಿದಿತ್ತು. 2019-20ನೇ ಸಾಲಿಗೆ ಲಭ್ಯವಿರುವ ಸೀಟುಗಳಿಗೆ ಆನ್‌ಲೈನ್ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಮೊದಲ ಸುತ್ತಿನ ಹಂಚಿಕೆ ಪ್ರಕ್ರಿಯೆ ಮೇ 6ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಮೊದಲ ಸುತ್ತಿನಲ್ಲಿ ಸೀಟು ಪಡೆದ ಮಕ್ಕಳಿಗೆ ಮೇ 8ರಿಂದ 15ವರೆಗೆ ಸಂಬಂಧಪಟ್ಟ ಶಾಲೆಯಲ್ಲಿ ದಾಖಲಾತಿಗೆ ಅವಕಾಶ ಇರುತ್ತದೆ. ಶಾಲಾಡಳಿತ ಮಂಡಳಿ ಇದೇ ಸಂದರ್ಭದಲ್ಲಿ ದಾಖಲಾತಿ ಪಡೆದ ಮಕ್ಕಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುತ್ತಾರೆ.
ಸೀಟು ಪಡೆದ ಮಕ್ಕಳ ಪಾಲಕ, ಪೋಷಕರಿಗೆ ಮೊಬೈಲ್ ಸಂದೇಶವನ್ನು ರವಾನೆ ಮಾಡಲಾಗುತ್ತದೆ. ಯಾವ ಶಾಲೆಯಲ್ಲಿ ಸೀಟು ಸಿಕ್ಕಿದೆ ಮತ್ತು ದಾಖಲಾಗಬೇಕಾದ ದಿನಾಂಕದ ಮಾಹಿತಿಯು ಅದರಲ್ಲಿ ಇರಲಿದೆ. ಮೇ 25ಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯುವ ಸಾಧ್ಯತೆ ಇದೆ.