Advertisement

ಇಂದು ಅನಿವಾಸಿ ಭಾರತೀಯರ ದಿನ : ಸದೃಢವಾಗಲಿ ತಾಯ್ನಾಡಿನೊಂದಿಗಿನ ನಂಟು

12:32 AM Jan 09, 2022 | Team Udayavani |

1915ರ ಜ. 9ರಂದು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲು ದಕ್ಷಿಣ ಆಫ್ರಿಕಾದಿಂದ ಮಹಾತ್ಮಾ ಗಾಂಧಿಯವರು ಭಾರತಕ್ಕೆ ಹಿಂದಿರುಗಿದ್ದರು. ಇದರ ನೆನಪಿಗಾಗಿ ಹಾಗೂ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಭಾರತದಲ್ಲಿ  ಪ್ರತೀ ವರ್ಷ ಜ. 9ರಂದು ಅನಿವಾಸಿ ಭಾರತೀಯರ (ಎನ್‌ಆರ್‌ಐ) ಅಥವಾ ಪ್ರವಾಸಿ ಭಾರತೀಯರ ದಿನವನ್ನು ಆಚರಿಸಲಾಗುತ್ತದೆ.

Advertisement

2003ರಲ್ಲಿ ಮೊದಲ ಬಾರಿಗೆ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಯಿತು. ಸಾಗರೋತ್ತರ ಭಾರತೀಯರ ಪರಿಕಲ್ಪನೆಯು 2006ರ ಜ. 9ರಂದು ಹೈದರಾಬಾದ್‌ನಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್‌ ಸಮಾವೇಶದಲ್ಲಿ ಹುಟ್ಟಿಕೊಂಡಿತು. ಇದರಿಂದ ಭಾರತೀಯ ಮೂಲದವರು, ಸಾಗರೋತ್ತರ ದೇಶಗಳಲ್ಲಿ ವಾಸಿಸುತ್ತಿರುವವರು ಭಾರತಕ್ಕೆ ಬಂದು  ಇಲ್ಲಿ  ಅನಿರ್ದಿಷ್ಟವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ಸಿಕ್ಕಿತು. ಪ್ರವಾಸಿ ಭಾರತೀಯ ದಿನದಂದು ಕೇಂದ್ರ ಸರಕಾರವು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ನೀಡುತ್ತಿರುವ ಎನ್‌ಆರ್‌ಐಗಳನ್ನು ಗುರುತಿಸಿ ಅವರಿಗೆ “ಪ್ರವಾಸಿ ಭಾರತೀಯ ಸಮ್ಮಾನ್‌  ಪ್ರಶಸ್ತಿ’ಯನ್ನು  ಪ್ರದಾನ ಮಾಡುವ ಮೂಲಕ ಅವರನ್ನು ಗೌರವಿಸುತ್ತ ಬಂದಿದೆ.

ಸುಮಾರು 32 ಮಿಲಿಯನ್‌ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದವರು ದೇಶದ ಹೊರಗೆ ನೆಲೆಸಿದ್ದಾರೆ. ಅವರೆಲ್ಲರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭಾರತೀಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರವಾಸಿ ಭಾರತೀಯ ದಿನ ಒಂದು ವೇದಿಕೆಯಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಫೆಡರೇಶನ್‌ ಆಫ್ ಇಂಡಿಯನ್‌ ಚೇಂಬರ್ಸ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ, ಭಾರತೀಯ ಕೈಗಾರಿಕೆಗಳ ಒಕ್ಕೂಟ, ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ನೇತೃತ್ವದಲ್ಲಿ ಈ ದಿನದಂದು ವಿವಿಧೆಡೆ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ.

2022ರ ಎನ್‌ಆರ್‌ಐ ದಿನದ ಪ್ರಮುಖ ಉದ್ದೇಶಗಳು

Advertisement

- ಅನಿವಾಸಿ ಭಾರತೀಯರಿಗೆ ಭಾರತದ ಬಗ್ಗೆ ತಮ್ಮ ಭಾವನೆ, ದೃಷ್ಟಿಕೋನ, ಗ್ರಹಿಕೆಗಳನ್ನು ವ್ಯಕ್ತಪಡಿಸಲು ಮುಕ್ತ ವೇದಿಕೆ ಒದಗಿಸುವುದು.

- ಪ್ರಪಂಚದ ಎಲ್ಲ ದೇಶಗಳಲ್ಲಿ ಎನ್‌ಆರ್‌ಐ ಜಾಲವನ್ನು ರಚಿಸುವುದು, ಯುವ ಪೀಳಿಗೆಯನ್ನು ವಲಸಿಗರೊಂದಿಗೆ ಸಂಪರ್ಕಿಸುವುದು.

- ವಿದೇಶದಲ್ಲಿ ವಾಸಿಸುವ ಭಾರತೀಯ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ,  ಸಂಕಷ್ಟಗಳನ್ನು ಅರಿತುಕೊಂಡು ಅವುಗಳನ್ನು ಪರಿಹರಿಸಲು ಪ್ರಯತ್ನಿಸುವುದು.

-ಸಾಗರೋತ್ತರ ಭಾರತೀಯರಿಗೆ ತಮ್ಮ ಬೇರುಗಳೊಂದಿಗೆ ಮರು ಸಂಪರ್ಕಿಸಲು ಗಮನ ಹರಿಸುವುದು.

- ಎನ್‌ಆರ್‌ಐಗಳ ಜ್ಞಾನ ಮತ್ತು ಪರಿಣತಿಯನ್ನು ತಾಯ್ನಾಡಿನ ಅಭಿವೃದ್ಧಿ ಯೋಜನೆಗಳಲ್ಲಿ ಬಳಸಿಕೊಳ್ಳುವ ಮೂಲಕ ಅವರು ದೇಶದ ಪ್ರಗತಿಯಲ್ಲಿ ಕೈಜೋಡಿಸುವಂತೆ ಮಾಡಲು ಪ್ರೇರಣೆ ನೀಡುವುದು.

ಇದನ್ನೂ ಓದಿ:ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕರೇ ಬದಲು; 100 ದಿನಗಳಲ್ಲಿ 3ನೇ ಡಿಜಿಪಿ

ಸಮ್ಮೇಳನಗಳು
2018ರಲ್ಲಿ ಮೊದಲ ಬಾರಿಗೆ ದೇಶದ ಹೊರಗಡೆ ಸಿಂಗಾಪುರದಲ್ಲಿ  ಅನಿವಾಸಿ ಭಾರತೀಯ ದಿನದ ಅಂಗವಾಗಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು.

2003, 2004ರಲ್ಲಿ ಹೊಸದಿಲ್ಲಿ, 2005ರಲ್ಲಿ ಮುಂಬಯಿ, 2006ರಲ್ಲಿ ಹೈದರಾಬಾದ್‌, 2007, 2008ರಲ್ಲಿ ಹೊಸದಿಲ್ಲಿ, 2009ರಲ್ಲಿ ಚೆನ್ನೈ, 2010, 2011ರಲ್ಲಿ ಹೊಸದಿಲ್ಲಿ, 2012ರಲ್ಲಿ ಜೈಪುರ, 2013ರಲ್ಲಿ ಕೊಚ್ಚಿ, 2014ರಲ್ಲಿ ಹೊಸದಿಲ್ಲಿ, 2015ರಲ್ಲಿ ಗಾಂಧಿನಗರ್‌, 2017ರಲ್ಲಿ ಬೆಂಗಳೂರು, 2018ರಲ್ಲಿ ಸಿಂಗಾಪುರ, 2019ರಲ್ಲಿ ವಾರಾಣಸಿ, 2020ರಲ್ಲಿ ಹೊಸದಿಲ್ಲಿಯಲ್ಲಿ ಅನಿವಾಸಿ ಭಾರತೀಯರ ದಿನದ ಅಂಗವಾಗಿ ಸಮ್ಮೇಳನಗಳನ್ನು ಆಯೋಜಿಸಲಾಗಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಒಟ್ಟು  1,34,59,195 ಮಂದಿ ಅನಿವಾಸಿ ಭಾರತೀಯರು, 1,86,83,645 ಮಂದಿ ಭಾರತೀಯ ಮೂಲದವರು, 3,21,00,340 ಸಾಗರೋತ್ತರ ಭಾರತೀಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next