Advertisement

ಭಾರತದ ಸೆಮಿಫೈನಲ್‌ ಭವಿಷ್ಯ ನಿರ್ಧರಿಸಲಿದೆ ನ್ಯೂಜಿಲ್ಯಾಂಡ್‌-ಅಫ್ಘಾನಿಸ್ಥಾನ ಮುಖಾಮುಖಿ

11:39 PM Nov 06, 2021 | Team Udayavani |

ಅಬುಧಾಬಿ: ಭಾರತದ ಕ್ರಿಕೆಟ್‌ ಪ್ರೇಮಿಗಳೀಗ ರವಿವಾರದ ನ್ಯೂಜಿಲ್ಯಾಂಡ್‌-ಅಫ್ಘಾನಿಸ್ಥಾನ ಪಂದ್ಯವನ್ನು ತುದಿಗಾಲಲ್ಲಿ ನಿಂತು ನಿರೀಕ್ಷಿಸಲಾರಂಭಿಸಿದ್ದಾರೆ. ಏಕೆಂದರೆ ಕೊಹ್ಲಿ ಪಡೆಯ ಸೆಮಿಫೈನಲ್‌ ಭವಿಷ್ಯ ಈ ಪಂದ್ಯದ ಫ‌ಲಿತಾಂಶವನ್ನು ಅವಲಂಬಿಸಿದೆ!

Advertisement

ಮೊದಲ ಲೆಕ್ಕಾಚಾರದ ಪ್ರಕಾರ, ಅಫ್ಘಾನಿಸ್ಥಾನ ತಂಡ ಗೆದ್ದರೆ ಭಾರತ ರೇಸ್‌ನಲ್ಲಿ ಉಳಿಯಲಿದೆ. ಆಗ ಮೂರೂ ತಂಡಗಳ ಅಂಕ ಸಮನಾಗಲಿದೆ (ತಲಾ 6). ರನ್‌ರೇಟ್‌ನಲ್ಲಿ ಮುಂದಿರುವ ತಂಡಕ್ಕೆ ನಾಕೌಟ್‌ ಅದೃಷ್ಟ ಒಲಿಯಲಿದೆ. ಇಲ್ಲಿ ಕೊಹ್ಲಿ ಪಡೆಗೆ ಅವಕಾಶ ಹೆಚ್ಚು ಎಂಬುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಸೋಮವಾರದ ಕಟ್ಟಕಡೆಯ ಲೀಗ್‌ ಪಂದ್ಯದಲ್ಲಿ ಭಾರತ ದುರ್ಬಲ ನಮೀಬಿಯಾವನ್ನು ಎದುರಿಸಲಿರುವುದರಿಂದ “ಲೆಕ್ಕಾಚಾರದ ಆಟ’ ಸಾಧ್ಯವಾಗಲಿದೆ.

ಇನ್ನೊಂದು ಲೆಕ್ಕಾಚಾರ ಸರಳ. ಕಿವೀಸ್‌ ಗೆದ್ದರೆ ಭಾರತ ಮತ್ತು ಅಫ್ಘಾನ್‌ ತಂಡಗಳೆರಡೂ ಕೂಟದಿಂದ ನಿರ್ಗಮಿಸ ಲಿವೆ. ಆಗ ಕಿವೀಸ್‌ ಗ್ರೂಪ್‌-2ರ ದ್ವಿತೀಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಭಾರತ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ನಮೀಬಿಯಾವನ್ನು ಎಷ್ಟೇ ದೊಡ್ಡ ಅಂತರದಿಂದ ಮಣಿಸಿದರೂ ಪ್ರಯೋಜನವಾಗದು.

ಇದನ್ನೂ ಓದಿ:ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

ಸ್ಕಾಟ್ಲೆಂಡ್‌ ವಿರುದ್ಧ ಮಿಂಚಿನ ಆಟ
ಸ್ಕಾಟ್ಲೆಂಡ್‌ ವಿರುದ್ಧ ಭಾರತ ಲೆಕ್ಕಾಚಾರದ ಆಟದಲ್ಲಿ ಅಮೋಘ ಯಶಸ್ಸು ಕಂಡಿತ್ತು. ಹೀಗಾಗಿ ಮೈನಸ್‌ನಲ್ಲಿದ್ದ ಭಾರತದ ರನ್‌ರೇಟ್‌ ಪ್ಲಸ್‌ಗೆ ಏರಿತ್ತು. 7.1 ಓವರ್‌ಗಳಲ್ಲಿ ಸ್ಕಾಟ್ಲೆಂಡ್‌ ಮೊತ್ತವನ್ನು ಹಿಂದಿಕ್ಕಿದ್ದರೆ ಭಾರತ ರನ್‌ರೇಟ್‌ನಲ್ಲಿ ಅಫ್ಘಾನಿಸ್ಥಾನವನ್ನು ಮೀರಿಸುತ್ತಿತ್ತು. ಕೆ.ಎಲ್‌. ರಾಹುಲ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಪರಾಕ್ರಮ ದಿಂದ ಭಾರತ 6.3 ಓವರ್‌ಗಳಲ್ಲೇ 2ಕ್ಕೆ 89 ರನ್‌ ಬಾರಿಸಿತು. ಭಾರತವೀಗ ಗ್ರೂಪ್‌-2ರ ರನ್‌ರೇಟ್‌ನಲ್ಲಿ ಎಲ್ಲರಿಗಿಂತ ಮುಂದಿರುವುದು ಗಮನಾರ್ಹ. ಕೊರತೆ ಇರುವುದು ಗೆಲುವು ಹಾಗೂ ಅಂಕಗಳದ್ದು ಮಾತ್ರ!

Advertisement

ಒಂದು ವೇಳೆ ನ್ಯೂಜಿಲ್ಯಾಂಡ್‌ ಎದುರು ಅಫ್ಘಾನಿಸ್ಥಾನ ಗೆದ್ದು ಬಂದರೆ ಆಗ ನಮೀಬಿಯಾ ವಿರುದ್ಧವೂ ಕೊಹ್ಲಿ ಪಡೆ ಇಂಥದೇ ಭರ್ಜರಿ ಪ್ರದರ್ಶನ ನೀಡಬೇಕಾಗುತ್ತದೆ.

ಮೊದಲ ಮುಖಾಮುಖಿ
ಈಗಿನ ಬಲಾಬಲದ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡ್‌ ಫೇವರಿಟ್‌ ತಂಡ; ಅಫ್ಘಾನಿಸ್ಥಾನ ಕರಿಗುದುರೆ. ಇತ್ತಂಡ ಗಳು ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಎದುರಾಗಿಲ್ಲ. ಆದರೆ ಏಕದಿನ ವಿಶ್ವಕಪ್‌ನಲ್ಲಿ 2 ಸಲ ಮುಖಾಮುಖಿಯಾಗಿವೆ. ಎರಡನ್ನೂ ನ್ಯೂಜಿಲ್ಯಾಂಡ್‌ ಗೆದ್ದಿದೆ. ಮಾಜಿ ನಾಯಕ ಅಸ್ಗರ್  ಅಫ್ಘಾನ್‌ ಕೂಟದ ನಡುವೆಯೇ ನಿವೃತ್ತಿ ಘೋಷಿಸಿದ್ದು, ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಗಾಯಾಳಾಗಿರುವುದು ಅಫ್ಘಾನಿಸ್ಥಾನಕ್ಕೆ ಎದುರಾಗಿರುವ ದೊಡ್ಡ ಹಿನ್ನಡೆ.

ರವಿವಾರ ರಾತ್ರಿ ಪಾಕಿಸ್ಥಾನ-ಸ್ಕಾಟ್ಲೆಂಡ್‌ ಎದುರಾಗಲಿವೆ. ಅಜೇಯವಾಗಿ ನಾಕೌಟ್‌ ಪ್ರವೇಶಿಸಲು ಬಾಬರ್‌ ಆಜಂ ಪಡೆಗೆ ಉತ್ತಮ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next