ವಾರಣಾಸಿ: ನಿನ್ನೆಯಷ್ಟೇ ಕಾಲಭೈರವೇಶ್ವರನ ನಾಡಿನಲ್ಲಿ ಅಭೂತಪೂರ್ವ ರೋಡ್ ಶೋ ನಡೆಸುವ ಮೂಲಕ ಈ ಕ್ಷೇತ್ರದಿಂದ ಮತ್ತೂಮ್ಮೆ ಭರ್ಜರಿಯಾಗಿ ಗೆಲ್ಲುವ ನಿರೀಕ್ಷೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಅಂತಿಮ ಹಂತದಲ್ಲಿ ಅಂದರೆ ಮೇ 19ರಂದು ಮತದಾನ ನಡೆಯಲಿದೆ.
ಇದೇ ರೀತಿಯಾಗಿ ಇವತ್ತು ಉತ್ತರ ಭಾರತದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳೂ ಸಹ ತಮ್ಮ ನಾಮಪತ್ರವನ್ನು ಇಂದೇ ಸಲ್ಲಿಸುತ್ತಿರುವುದು ವಿಶೇಷ. ಶಿರೋಮಣಿ ಅಕಾಲಿ ದಳ ಪಕ್ಷದ ಮುಖ್ಯಸ್ಥ ಸುಕ್ಬೀರ್ ಸಿಂಗ್ ಬಾದಲ್ ಅವರು ಫಿರೋಝ್ ಪುರ್ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಅವರ ಪತ್ನಿ ಹರ್‌ಸಿಮ್ರತ್ ಬಾದಲ್ ಅವರು ಬತಿಂಡಾ ಕ್ಷೇತ್ರದಿಂದ ಆಯ್ಕೆ ಬಯಸಿ ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಲಿದ್ದಾರೆ.
ಬಿಜೆಪಿ ನಾಯಕ ಮತ್ರು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಬಿಹಾರದ ಪಟ್ನಾ ಸಾಹೀಬ್ ನಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಕಮಲ ಪಕ್ಷದ ಇನ್ನೋರ್ವ ನಾಯಕಿ ಅಶ್ವಿನಿ ಚೌಬೆ ಅವರು ಬಕ್ಸಾರ್ ಕ್ಷೇತ್ರದಿಂದ ಆಯ್ಕೆ ಬಯಸಿ ತಮ್ಮ ಉಮೇದುವಾರಿಕೆಯನ್ನು ಇಂದು ಸಲ್ಲಿಸಲಿದ್ದಾರೆ. ಇನ್ನು ಕಾಂಗ್ರೆಸ್ ನ ಸುನಿಲ್ ಜಖಾಡ್ ಮತ್ತು ಜೆಡಿಯು ಪಕ್ಷದ ಕೌಶಲೇಂದ್ರ ಕುಮಾರ್ ಅವರು ನಲಂದಾ ಕ್ಷೇತ್ರದಲ್ಲಿ ಮುಖಾಮುಖೀಯಾಗುತ್ತಿದ್ದು ಇಂದು ತಮ್ಮ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಎಪ್ರಿಲ್ 29ರಂದು ನಡೆಯಲಿರುವ ನಾಲ್ಕನೇ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ಇಂದು ಅಂತಿಮ ದಿನವಾಗಿದ್ದು ದೇಶದೆಲ್ಲೆಡೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಪ್ರಧಾನಿ ಮೋದಿ ಅವರು ಇಂದು ಮಧ್ಯಪ್ರದೇಶದ ಸಿಧಿ ಹಾಗೂ ಜಬಲ್ಪುರದಲ್ಲಿ ಎರಡು ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಹಾರದ ಸಮಷ್ಟಿಪುರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ.
ಬಳಿಕ ಈ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿರುವುದು ಇಂದಿನ ವಿಶೇಷವಾಗಿದೆ.
ಮೋದಿ ಅವರು ಬಾಂದ್ರಾ ಕುರ್ಲಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರೆ ರಾಹುಲ್ ಗಾಂಧಿ ಅವರು ನಾಸಿಕ್ ನಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ.