Advertisement

ಪ್ರಕೃತಿಯ ಕೊಡುಗೆ ಸ್ಮರಿಸುವ ವಿಶೇಷ ಹಬ್ಬ 

09:55 AM Sep 08, 2018 | Team Udayavani |

ಕರ್ನಾಟಕ ಕರಾವಳಿಯ ಕೊಂಕಣಿ ಕೆಥೋಲಿಕ್‌ ಜನರಿಗೆ ಸೆ. 8 ವಿಶೇಷ ದಿನ. ಅಂದು ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮ ದಿನವಾಗಿದ್ದು, ಇದನ್ನು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೊಂಕಣಿ ಕೆಥೋಲಿಕರು ವಿಶಿಷ್ಟವಾಗಿ ಆಚರಿಸುತ್ತಾರೆ. ಸೆಪ್ಟಂಬರ್‌ ತಿಂಗಳು ಮಳೆಗಾಲದ ಕೊನೆಯ ಅವಧಿಯಾಗಿದ್ದು, ಈ ಅವಧಿಯಲ್ಲಿ ಬೆಳೆಗಳು ಕೊಯ್ಲಿಗೆ ಸಿದ್ಧವಾಗಿರುತ್ತವೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ಮತ್ತು ಮೇರಿ ಮಾತೆಯ ಜನ್ಮ ದಿನದ ನಿಮಿತ್ತ ಈ ದಿನವನ್ನು ಕೊಂಕಣಿ ಕೆಥೋಲಿಕರು ‘ಮೊಂತಿ ಫೆಸ್ತ್’ ಹೆಸರಿನಲ್ಲಿ ಹಬ್ಬ ಆಚರಿಸುತ್ತಾರೆ. 

Advertisement

ಮೇರಿ ಮಾತೆ ‘ದೇವ ಮಾತೆ’ ಆಗಿದ್ದು, ಪವಾಡಗಳನ್ನು ಸೃಷ್ಟಿಸುತ್ತಾರೆ ಮತ್ತು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎನ್ನುವುದು ಕೆಥೋಲಿಕರ ನಂಬಿಕೆ. ಮೇರಿ ಮಾತೆಯನ್ನು ಬೇರೆ ಬೇರೆ 24 ನಾಮಗಳಿಂದ ಸಂಬೋಧಿಸಲಾಗುತ್ತಿದ್ದು, ‘ಮೊಂತಿ ಸಾಯ್ಬಿಣ್‌’ (ಇನ್‌ಫೆಂಟ್‌ ಮೇರಿ) ಎನ್ನುವುದೂ ಒಂದು. ಆಕೆಯ ಜನ್ಮದಿನದ ಕಾರಣ ಇದಕ್ಕೆ ಧಾರ್ಮಿಕ ಮಹತ್ವ ಇದೆ. ಜತೆಗೆ ಬೆಳೆ ಹಬ್ಬ ಆಗಿರುವುದರಿಂದ ಸಾಂಸ್ಕೃತಿಕ ಆಯಾಮವೂ ಇದೆ. ‘ಸಂಕ್ರಾಂತಿ’ಯ ರೀತಿ ಇದನ್ನು ‘ತೆನೆ ಹಬ್ಬ’ (ಹಾರ್ವೆಸ್ಟ್‌ ಫೆಸ್ಟಿವಲ್‌) ಎಂಬುದಾಗಿ ಪರಿಗಣಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಮನೆ ತುಂಬಿಸುವ ತೆನೆ ಹಬ್ಬ ನಡೆಯುವಂತೆ ಇಲ್ಲೂ ಆಚರಣೆ ಇದೆ.

ಹಬ್ಬದ ಹಿನ್ನೆಲೆ
ಮೊಂತಿ ಫೆಸ್ತ್ ಆರಂಭದ ಬಗ್ಗೆ ನಿರ್ದಿಷ್ಟ ಐತಿಹ್ಯಗಳಿಲ್ಲ. ಆದರೆ ಇದರ ಆಚರಣೆ ನಡೆದುಕೊಂಡು ಬಂದ ಬಗ್ಗೆ ವಿಭಿನ್ನ ಉಲ್ಲೇಖಗಳು ಕಂಡು ಬರುತ್ತವೆ. ಮಂಗಳೂರು ಹೊರ ವಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳಷ್ಟು ಹಿಂದೆ ‘ಮೊಂತಿ ಫೆಸ್ತ್’ ಆಚರಣೆ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ.

ಸಂತ ಫ್ರಾನ್ಸಿಸ್‌ ಅಸಿಸಿ ಅವರಿಗೆ ಸಮರ್ಪಿಸಿದ ಮಠವೊಂದು ಇಲ್ಲಿ ಸ್ಥಾಪನೆಯಾಗಿತ್ತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ‘ಮೊಂತೆ ಮರಿಯಾನೊ’ ಅಥವಾ ‘ಮೌಂಟ್‌ ಆಫ್‌ ಮೇರಿ’ (ಮೇರಿ ಮಾತೆಯ ಬೆಟ್ಟ) ಎಂದು ಹೆಸರಿಸಲಾಗಿತ್ತು. ಗೋವಾದಿಂದ ಬಂದ ಕೆಥೋಲಿಕ್‌ ಧರ್ಮಗುರು ಫಾ| ಜೋಕಿಂ ಮಿರಾಂದಾ ಅವರು ಸ್ಥಳೀಯ ಚರ್ಚ್‌ನ ವಾರ್ಷಿಕ ಹಬ್ಬದ ಜತೆಗೆ ಮೇರಿ ಮಾತೆಯ ಜನ್ಮ ದಿನವನ್ನು ಪ್ರಥಮ ಬಾರಿಗೆ ಆಚರಿಸಿದರು ಎನ್ನುವುದು ಪ್ರತೀತಿ. ‘ಮೊಂತೆ’ ಪದದಿಂದ ‘ಮೊಂತಿ’ ಬಂತು ಹಾಗೂ ವರ್ಷ ಕಳೆದಂತೆ ಈ ಆಚರಣೆ ಮುಂದುವರಿಯುತ್ತಾ ಕ್ರಮೇಣ ‘ಮೊಂತಿ ಫೆಸ್ತ್’ ಆಯಿತು ಎನ್ನುವುದು ಹಿರಿಯರ ಅಭಿಪ್ರಾಯ.

ಮೇರಿ ಮಾತೆ
ಮೇರಿ ಮಾತೆ ಸ್ವರ್ಗ ಲೋಕದ ಮಾತೆ ಹಾಗೂ ಎಲ್ಲರೂ ಆಕೆಯ ಮಕ್ಕಳು ಎಂಬ ನಂಬಿಕೆ ಇದೆ. ಆದ್ದರಿಂದ ಆಕೆಯ ಜನ್ಮ ದಿನವನ್ನು ವಿಶೇಷ ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ. ಆ ದಿನ ಮಾತೆಗೆ ಪುಷ್ಪಾರ್ಚನೆ ಮಾಡುತ್ತಾರೆ. ಪ್ರಾರ್ಥನಾ ಗೀತೆಗಳನ್ನು ಹಾಡಿ ಸ್ತುತಿಸುತ್ತಾರೆ. ಹೊಸ ಫ‌ಲ ಬಂದಾಗ ದೇವರಿಗೆ ಅರ್ಪಿಸಿ ಶುಭಾಶೀರ್ವಾದ ಪಡೆಯುವುದು ಸಂಪ್ರದಾಯ. ಮೊಂತಿ ಹಬ್ಬ ಕೂಡ ಈ ಹಿನ್ನಲೆಯದ್ದು. ಕರಾವಳಿ ಕೊಂಕಣಿ ಕೆಥೋಲಿಕರ ಪೂರ್ವಜರು ಇದನ್ನು ಕುಟುಂಬದ ಆಚರಣೆಯನ್ನಾಗಿಸಿ ಹೊಸ ವ್ಯಾಖ್ಯಾನ ನೀಡಿದರು. 

Advertisement

‘ಮೊಂತಿ ಫೆಸ್ತ್’
ಪ್ರಕೃತಿಯಲ್ಲಿ ದೇವರನ್ನು ಕಾಣವುದು ಕೇವಲ ಹಿಂದೂ ಸಂಪ್ರದಾಯವಲ್ಲ. ಕ್ರೈಸ್ತರೂ ಇದನ್ನು ಹಬ್ಬವಾಗಿ ಆಚರಿಸುತ್ತಾರೆ. ದೇವ ಮಾತೆ ಎಂದೇ ಕರೆಯಲ್ಪಡುವ ಮೇರಿ ಮಾತೆಯ ಜನ್ಮದಿನವನ್ನು ಪ್ರಕೃತಿಯು ನೀಡಿರುವ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸುವ ದಿನವಾಗಿ ಮೊಂತಿ ಫೆಸ್ತ್ ಆಚರಿಸುವುದು ಈ ದಿನದ ವಿಶೇಷ. ಈ ಹಬ್ಬದಲ್ಲಿ ಹೊಸ ತೆನೆ, ನಾನಾ ಬಗೆಯ ಹೂವು, ಸಸ್ಯಹಾರಿ ಖಾದ್ಯಗಳಿಗೆ ವಿಶೇಷ ಆದ್ಯತೆ. 

ಮನೆಯಲ್ಲಿ ಸಂಭ್ರಮ 
ಮನೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾ ಗುತ್ತದೆ. ಆಶೀರ್ವದಿಸಿ ನೀಡಿದ ತೆನೆಯ ಅಕ್ಕಿ ಪುಡಿ ಮಾಡಿ ಹಾಲು/ ತೆಂಗಿನ ಹಾಲು/ ಪಾಯಸದಲ್ಲಿ ಹಾಕಿ ಮಿಶ್ರಣ ಮಾಡಿ ಅದನ್ನು ಕುಟುಂಬದ ಹಿರಿಯರು ಮನೆ ಮಂದಿಗೆ ಬಡಿಸುತ್ತಾರೆ. ಭೋಜನ ವೇಳೆ ಮೊದಲಾಗಿ ಸೇವಿಸಿ, ಒಟ್ಟಿಗೆ ಊಟ ಮಾಡುತ್ತಾರೆ. ಕರಾವಳಿಯ ಕೊಂಕಣಿ ಕೆಥೋಲಿಕರು ಎಲ್ಲೇ ವಾಸಿಸುತ್ತಿದ್ದರೂ ಈ ಹಬ್ಬ ಆಚರಿಸುತ್ತಾರೆ.  

ಹೀಗೆ ಆಚರಿಸುತ್ತಾರೆ
ಆ. 30ರಿಂದ ವಿಶೇಷವಾದ ನೊವೇನಾ ಪ್ರಾರ್ಥನೆಯೊಂದಿಗೆ ಮೊಂತಿ ಹಬ್ಬಕ್ಕೆ ನಾಂದಿ. 9 ದಿನಗಳ ಕಾಲ ನಡೆಯುವ ಈ ಪ್ರಾರ್ಥನೆಯಲ್ಲಿ ಪ್ರತಿ ದಿನ ಪುಟಾಣಿಗಳು ಹೂವುಗಳನ್ನು ಕೊಂಡೊಯ್ದು ಬಾಲೆ ಮೇರಿಯ ಮೂರ್ತಿಗೆ ಸಮರ್ಪಿಸಿ ಸ್ತುತಿಸುತ್ತಾರೆ. ಕೊನೆಯ ದಿನ ಸೆ. 8 ರಂದು ಸಾಮುದಾಯಿಕವಾಗಿ ಮತ್ತು ಕೌಟುಂಬಿಕವಾಗಿ ಹಬ್ಬದ ಆಚರಣೆಯಿರುತ್ತದೆ. ಅಂದು ಹೊಸ ಭತ್ತದ ತೆನೆಗಳನ್ನು ಚರ್ಚ್‌ಗೆ ಕೊಂಡೊಯ್ದು ಆಶೀರ್ವಚನ ಮಾಡಿ, ಮೇರಿ ಮಾತೆಗೆ ಪುಷ್ಪಾರ್ಚನೆ ನಡೆಯುತ್ತದೆ. ಬಳಿಕ ಸಂಭ್ರಮದ ಬಲಿ ಪೂಜೆ ನೆರವೇರುತ್ತದೆ. ಭತ್ತದ ತೆನೆಗಳನ್ನು ಪ್ರತಿ ಕುಟುಂಬಗಳಿಗೆ ವಿತರಿಸಲಾಗುತ್ತದೆ. ಹೂವು ಕೊಂಡು ಹೋದ ಮಕ್ಕಳಿಗೆ ಸಿಹಿ ತಿಂಡಿ, ಎಲ್ಲ ಭಕ್ತರಿಗೆ ಕಬ್ಬು ಹಂಚಲಾಗುತ್ತದೆ.

ನವೆಂ ಜೆವಾಣ್‌
‘ನವೆಂ ಜೆವಾಣ್‌’ ಅಂದರೆ ಹೊಸ ಭೋಜನ. ಸಸ್ಯಾಹಾರಿ ಭೋಜನ ಈ ದಿನದ ವಿಶೇಷ. ಕನಿಷ್ಠ 5 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕು ಎನ್ನುವುದು ರೂಢಿ. ಅದರಲ್ಲೂ ‘ಅಳು’ (ಕೆಸುವಿನ ದಂಟು), ‘ದೆಂಟೊ’ (ಹರಿವೆ ದಂಟು), ಹೀರೆ, ಬೆಂಡೆಕಾಯಿಗೆ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಬಾಳೆ ಎಲೆಯಲ್ಲಿ ಊಟ ಮಾಡುವುದು ಇನ್ನೊಂದು ವೈಶಿಷ್ಟ್ಯ.

ಹಿಲರಿ ಕ್ರಾಸ್ತ 

Advertisement

Udayavani is now on Telegram. Click here to join our channel and stay updated with the latest news.

Next