Advertisement
ಹ್ಯಾಟ್ರಿಕ್ ಸೋಲಿನಿಂದ ದಿಕ್ಕೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಭರವಸೆಯ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ವಿರುದ್ಧ ಸೆಣಸಲಿದೆ.
Related Articles
ಪಂಜಾಬ್ ವಿರುದ್ಧ 5 ವಿಕೆಟ್‌ಗಳಿಂದ ಸೋಲುವ ಮೂಲಕ ಆರ್‌ಸಿಬಿ ಕೂಡ ನಿರಾಶಾದಾಯಕವಾಗಿಯೇ ಈ ಬಾರಿಯ ಕೂಟವನ್ನು ಆರಂಭಿಸಿತ್ತು. ಆದರೆ ಇದೇನೂ ಹೀನಾಯ ಸೋಲಾಗಿರಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿ ಕೇವಲ 2 ವಿಕೆಟಿಗೆ 205 ರನ್ ಪೇರಿಸುವಲ್ಲಿ ಯಶಸ್ವಿಯಾಗಿತ್ತು.
Advertisement
ಬಳಿಕ ಕೆಕೆಆರ್ ವಿರುದ್ಧದ ಸಣ್ಣ ಮೊತ್ತದ ಪಂದ್ಯವನ್ನು ತುಸು ಕಷ್ಟದಿಂದಲೇ 3 ವಿಕೆಟ್‌ಗಳಿಂದ ಜಯಿಸಿತು. ರಾಜಸ್ಥಾನ್ ರಾಯಲ್ಸ್ ಎದುರಿನ ಸವಾಲು ಕಬ್ಬಿಣದ ಕಡಲೆಯಾದೀತು ಎಂದೇ ಭಾವಿಸಲಾಗಿತ್ತು. ಆದರೆ ಆರ್‌ಸಿಬಿ ಬೌಲರ್ ಸ್ಯಾಮ್ಸನ್ ಪಡೆಗೆ ದೊಡ್ಡ ಮೊತ್ತ ಬಿಟ್ಟುಕೊಡಲಿಲ್ಲ. ಮಧ್ಯಮ ಕ್ರಮಾಂಕದ ಕುಸಿತದ ಹೊರತಾಗಿಯೂ 170 ರನ್ ಗುರಿಯನ್ನು 6 ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿತು. ಶಬಾಜ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವಿನ ರೂವಾರಿಗಳಾಗಿ ಮೂಡಿಬಂದರು. ಮುಂಬೈಯನ್ನು ಎದುರಿಸುವಾಗ ರಾಜಸ್ಥಾನ್ ವಿರುದ್ಧ ಸಾಧಿಸಿದ ಗೆಲುವು ಆರ್‌ಸಿಬಿಗೆ ಸ್ಫೂರ್ತಿ ತುಂಬಬೇಕಿದೆ.
ಆಸ್ಟ್ರೇಲಿಯದ ಆಲೌರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದ ಮೂಲಕ ತಮ್ಮ ಆಟ ಆರಂಭಿಸುತ್ತಿರುವುದು ಕೂಡ ತಂಡಕ್ಕೆ ನೈತಿಕ ಶಕ್ತಿ ತುಂಬಿದೆ. ಇವರಿಗಾಗಿ ಶಫೇìನ್ ರುದರ್‌ಫೋರ್ಡ್ ಜಾಗ ಬಿಡುವ ಸಾಧ್ಯತೆ ಇದೆ.ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ, ವೇಗಿ ಡೇವಿಡ್ ವಿಲ್ಲಿ, ಡೆತ್ ಓವರ್‌ಗಳಲ್ಲಿ ಅಪಾಯಕಾರಿಯಾಗುವ ಹರ್ಷಲ್ ಪಟೇಲ್ ಮುಂಬೈಗೆ ಕಡಿವಾಣ ಹಾಕಿಯಾರೆಂಬುದೊಂದು ನಿರೀಕ್ಷೆ.
ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರೆ ಆರ್‌ಸಿಬಿಗೆ ಬಹು ದೊಡ್ಡ ಲಾಭವಾಗಲಿದೆ. ಇಶಾನ್, ತಿಲಕ್ ಸ್ಥಿರ ಪ್ರದರ್ಶನ
ಮುಂಬೈ ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದವರಲ್ಲಿ ಆರಂಭಕಾರ ಇಶಾನ್ ಕಿಶನ್‌ಗೆ ಅಗ್ರಸ್ಥಾನ (81, 54, 14). ಅನಂತರದ ಸ್ಥಾನದಲ್ಲಿರುವವರು ತಿಲಕ್ ವರ್ಮ (22, 61, 38). “ಬೇಬಿ ಎಬಿಡಿ’ ಡಿವಾಲ್ಡ್ ಬ್ರೇವಿಸ್ ಕೂಡ ಹೊಡಿಬಡಿ ಆಟಕ್ಕೆ ಕುದುರಿಕೊಳ್ಳುತ್ತಿದ್ದಾರೆ. ಕೈರನ್ ಪೊಲಾರ್ಡ್ 5 ಎಸೆತಗಳಿಂದ 22 ರನ್ ಬಾರಿಸಿದ್ದನ್ನು ಕಂಡಾಗ ಈ ಕೆರಿಬಿಯನ್ ದೈತ್ಯ ಫಾರ್ಮ್ ಗೆ ಮರಳಿದ ಸೂಚನೆ ಲಭಿಸುತ್ತದೆ. ಮುಖ್ಯವಾಗಿ ನಾಯಕ ರೋಹಿತ್ ಶರ್ಮ ಇನ್ನೂ ಲಯ ಕಾಣದಿರುವುದು ಮುಂಬೈ ಚಿಂತೆಗೆ ಕಾರಣವಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಅವರ ಗಳಿಕೆ ಇಳಿಮುಖವಾಗುತ್ತ ಹೋಗಿದೆ (41, 10 ಮತ್ತು 3 ರನ್).