Advertisement

ಇಂಡೋ-ಪಾಕ್‌; ಏಷ್ಯಾ ದೈತ್ಯರ ಟಿ20 ಜೋಶ್‌; ಇಂದು ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ

11:04 PM Aug 27, 2022 | Team Udayavani |

ದುಬೈ: ಸಾಂಪ್ರದಾಯಿಕ ಹಾಗೂ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಮತ್ತೊಂದು ರೋಚಕ ಕ್ರಿಕೆಟ್‌ ಹಣಾಹಣಿಗೆ ಕಾಲ ಕೂಡಿಬಂದಿದೆ. ಭಾನುವಾರದ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ರೋಹಿತ್‌ ಶರ್ಮ-ಬಾಬರ್‌ ಆಜಂ ಪಡೆಗಳು ಪರಸ್ಪರ ಎದುರಾಗಲಿವೆ. ಈ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಲಿದೆ.

Advertisement

ಇದು ಎರಡೂ ತಂಡಗಳಿಗೆ ಕೂಟದ ಆರಂಭಿಕ ಪಂದ್ಯವಾದರೂ ಫೈನಲ್‌ ಸ್ಪರ್ಧೆಗೂ ಮಿಗಿಲಾದ ಕೌತುಕ, ರೋಮಾಂಚನ, ನಿರೀಕ್ಷೆಗಳನ್ನು ಮೂಡಿಸಿದೆ. ಸ್ವಾರಸ್ಯವೆಂದರೆ, ಈವರೆಗಿನ 14 ಏಷ್ಯಾ ಕಪ್‌ ಕೂಟಗಳಲ್ಲಿ ಒಮ್ಮೆಯೂ ಭಾರತ-ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖೀ ಆಗಿಲ್ಲ!

ಭಾರತ ಅತ್ಯಧಿಕ 7 ಸಲ, ಪಾಕಿಸ್ತಾನ 2 ಸಲ ಚಾಂಪಿಯನ್‌ ಆಗಿವೆ. ಆದರೆ ಈ ಎರಡೂ ತಂಡಗಳು ಫೈನಲ್‌ನಲ್ಲಿ ಎದುರಿಸಿದ್ದು ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು! ಈ ಸಲವಾದರೂ ಭಾರತ-ಪಾಕಿಸ್ತಾನ ಪ್ರಶಸ್ತಿ ಸಮರದಲ್ಲಿ ಎದುರಾಗಬಹುದೇ ಎಂಬುದು ಅಭಿಮಾನಿಗಳ ಕುತೂಹಲ.

ಭಾರತದ ದಾಖಲೆ ಉತ್ತಮ: ಅಂಕಿಅಂಶ ಪ್ರಕಾರ ಪಾಕಿಸ್ತಾನ ವಿರುದ್ಧ ಭಾರತವೇ ಮೇಲುಗೈ ಹೊಂದಿದೆ. ಆಡಿದ 15 ಪಂದ್ಯಗಳಲ್ಲಿ ಭಾರತ 8 ಜಯ ಒಲಿಸಿಕೊಂಡಿದೆ. ಪಾಕ್‌ ಐದರಲ್ಲಿ ಜಯ ಸಾಧಿಸಿದೆ. 2 ಪಂದ್ಯ ರದ್ದುಗೊಂಡಿದೆ.

ಪಾಕಿಸ್ತಾನ ಕೊನೆಯ ಸಲ ಭಾರತವನ್ನು ಸೋಲಿಸಿದ್ದು 2014ರಲ್ಲಿ. ಅಂತರ ಕೇವಲ ಒಂದು ವಿಕೆಟ್‌. ಈ ಪಂದ್ಯ ಮಿರ್ಪುರ್‌ನ “ಶೇರ್‌ ಎ ಬಾಂಗ್ಲಾ ಸ್ಟೇಡಿಯಂ’ನಲ್ಲಿ ನಡೆದಿತ್ತು. ಅನಂತರ ನಡೆದ ಮೂರೂ ಪಂದ್ಯಗಳಲ್ಲಿ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರಿತ್ತು. ಆದರೆ ಇದು ಕೇವಲ ಅಂಕಿಅಂಶ ಮಾತ್ರ. ಭಾನುವಾರದ ಪಂದ್ಯಕ್ಕೆ ಇದು ಖಂಡಿತ ಮಾನದಂಡವಲ್ಲ. ನಿರ್ದಿಷ್ಟ ದಿನದಂದು ಯಾವ ತಂಡ ಉತ್ತಮ ಸಾಧನೆಗೈಯುತ್ತದೋ, ಯಾವ ತಂಡದ ಅದೃಷ್ಟ ಖುಲಾಯಿಸುತ್ತದೋ ಅದಕ್ಕೆ ಗೆಲುವು ಒಲಿಯಲಿದೆ. ಈ ಅದೃಷ್ಟ ಭಾರತದ್ದೇ ಆಗಲಿ ಎಂಬುದು ಎಲ್ಲರ ಹಾರೈಕೆ.

Advertisement

ಬೆಟ್ಟದಷ್ಟು ನಿರೀಕ್ಷೆ: ಇದು ಟಿ20 ಮಾದರಿಯ ಪಂದ್ಯವಾದರೂ ಭಾರತ ತಂಡ ಹಿರಿಯ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಕೆಲವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿದೆ. ಇವರಲ್ಲಿ ವಿರಾಟ್‌ ಕೊಹ್ಲಿ ಹೆಸರು ಪ್ರಮುಖವಾದುದು. ಹಾಗೆಯೇ ನಾಯಕ ರೋಹಿತ್‌ ಶರ್ಮ ಅವರೊಂದಿಗೆ ಇನಿಂಗ್ಸ್‌ ಆರಂಭಿಸಲಿರುವ ಕೆ.ಎಲ್‌.ರಾಹುಲ್‌ ಕೂಡ ಇದೇ ಸಾಲಿನಲ್ಲಿದ್ದಾರೆ. ಭಾರತದ ಯಶಸ್ಸಿಗೆ ಇವರಿಬ್ಬರ ಬ್ಯಾಟಿಂಗ್‌ ಲಯ ನಿರ್ಣಾಯಕ.

ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಅಂತಿಮ ಓವರ್‌ಗಳಲ್ಲಿ ರವೀಂದ್ರ ಜಡೇಜ, ದಿನೇಶ್‌ ಕಾರ್ತಿಕ್‌ ಸಿಡಿದು ನಿಲ್ಲಬೇಕಾದುದು ಮುಖ್ಯ. ಇಲ್ಲಿನ ಸಾಧನೆಯೇ ವರ್ಷಾಂತ್ಯದ ಟಿ20 ವಿಶ್ವಕಪ್‌ ಆಯ್ಕೆಗೆ ಮಾನದಂಡ ಎಂಬುದು ಎಲ್ಲರಿಗೂ ಅರಿವಿದೆ.

ವೇಗದ ಬೌಲಿಂಗ್‌ ದುರ್ಬಲ: ಭಾರತದ ಬೌಲಿಂಗ್‌ ಕುರಿತು ಹೇಳುವುದಾದರೆ, ಸ್ಪಿನ್‌ ವಿಭಾಗದಲ್ಲಿ ವೈವಿಧ್ಯ ಕಾಣಬಹುದು. ಆದರೆ ಪಾಕಿಗಳು ಸ್ಪಿನ್‌ ಎಸೆತಗಳನ್ನು ಚೆನ್ನಾಗಿ ದಂಡಿಸಬಲ್ಲರು ಎಂಬುದನ್ನು ಮರೆಯುವಂತಿಲ್ಲ. ಬುಮ್ರಾ, ಹರ್ಷಲ್‌ ಪಟೇಲ್‌, ದೀಪಕ್‌ ಚಹರ್‌ ಅನುಪಸ್ಥಿತಿಯಿಂದ ಭಾರತದ ವೇಗದ ಬೌಲಿಂಗ್‌ ವಿಭಾಗ ಶಕ್ತಿಗುಂದಿದೆ ಎಂದೇ ಹೇಳಬಹುದು. ಭುವನೇಶ್ವರ್‌ ಕುಮಾರ್‌ ಹೊರತುಪಡಿಸಿದರೆ ಇಲ್ಲಿ ಅನುಭವಿಗಳ ತೀವ್ರ ಕೊರತೆ ಇದೆ. ಅರ್ಷದೀಪ್‌ ಸಿಂಗ್‌ ಮತ್ತು ಆವೇಶ್‌ ಖಾನ್‌ ಮಾತ್ರ ಉಳಿದಿಬ್ಬರು ವೇಗಿಗಳು. ಹೀಗಾಗಿ ಹಾರ್ದಿಕ್‌ ಪಾಂಡ್ಯ ಮೇಲೆ ಸಣ್ಣ ಮಟ್ಟದ ಒತ್ತಡ ಬೀಳುವ ಸಾಧ್ಯತೆ ಇಲ್ಲದಿಲ್ಲ.

ಬಾಬರ್‌ ಆಜಂ, ಫ‌ಖರ್‌ ಜಮಾನ್‌, ಮೊಹಮ್ಮದ್‌ ರಿಜ್ವಾನ್‌ ಅವರನ್ನೊಳಗೊಂಡ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ. ಎಲ್ಲರೂ ಫಾರ್ಮ್ನಲ್ಲಿದ್ದಾರೆ. ಭಾರತದ ಫಾಸ್ಟ್‌ ಬೌಲಿಂಗ್‌ ಯೂನಿಟ್‌ ಇವರನ್ನು ತಡೆದು ನಿಲ್ಲಿಸೀತೇ ಎಂಬುದು ದೊಡ್ಡ ಪ್ರಶ್ನೆ.

ಲಾಭವೆತ್ತೀತೇ ಭಾರತ?: ಪಾಕಿಸ್ತಾನವೂ ಬೌಲಿಂಗ್‌ ಸಮಸ್ಯೆಗೆ ಸಿಲುಕಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಕಾಡಿದ ಶಾಹೀನ್‌ ಶಾ ಅಫ್ರಿದಿ, ಮೊಹಮ್ಮದ್‌ ವಾಸಿಮ್‌ ಗಾಯಾಳಾಗಿ ಹೊರಬಿದ್ದಿರುವುದು ಪಾಕ್‌ಗೆ ಬಿದ್ದ ದೊಡ್ಡ ಹೊಡೆತ. ಭಾರತದ ಬ್ಯಾಟರ್‌ಗಳು ಇದರ ಲಾಭವನ್ನು ಎತ್ತಬೇಕಿದೆ. ಶದಾಬ್‌ ಖಾನ್‌ ಪಾಕಿಸ್ತಾನ ತಂಡದ ಟ್ರಂಪ್‌ಕಾರ್ಡ್‌ ಆಗುವ ಎಲ್ಲ ಸಾಧ್ಯತೆ ಇದೆ.

ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಆವೇಶ್‌ ಖಾನ್‌.

ಪಾಕಿಸ್ತಾನ: ಬಾಬರ್‌ ಆಜಂ (ನಾಯಕ), ಶದಾಬ್‌ ಖಾನ್‌, ಆಸಿಫ್ ಅಲಿ, ಫ‌ಖರ್‌ ಜಮಾನ್‌, ಹೈದರ್‌ ಅಲಿ, ಹ್ಯಾರಿಸ್‌ ರೌಫ್, ಇಫ್ತಿಕಾರ್‌ ಅಹ್ಮದ್‌, ಖುಷಿªಲ್‌ ಶಾ, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ನಸೀಮ್‌ ಶಾ, ಶಹನವಾಜ್‌ ದಹಾನಿ, ಉಸ್ಮಾನ್‌ ಖಾದಿರ್‌, ಮೊಹಮ್ಮದ್‌ ಹಸ್ನೇನ್‌, ಹಸನ್‌ ಅಲಿ.

ಇಂದಿನ ಪಂದ್ಯ
ಸ್ಥಳ: ದುಬೈ
ಪಂದ್ಯಾರಂಭ: ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಮುಖಾಮುಖಿ
ಒಟ್ಟು ಪಂದ್ಯ 9
ಭಾರತ ಜಯ 7
ಪಾಕ್‌ ಜಯ 2

ಕೊಹ್ಲಿ 100ರ ದಾಖಲೆ
ಕೊಹ್ಲಿ ಲಯದಲ್ಲಿಲ್ಲದಿರಬಹುದು. ಆದರೆ ದಾಖಲೆಗಳಿಗೆ ಮಾತ್ರ ಬರವಿಲ್ಲ. ಭಾನುವಾರ ಅವರು ಕಣಕ್ಕಿಳಿದರೆ, ಅಂತಾರಾಷ್ಟ್ರೀಯ ಟಿ20ಯಲ್ಲಿ 100ನೇ ಪಂದ್ಯವಾಡಲಿದ್ದಾರೆ. ಅಲ್ಲಿಗೆ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ತಲಾ 100 ಅಥವಾ ಹೆಚ್ಚು ಪಂದ್ಯಗಳನ್ನಾಡಿದ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next