Advertisement

ಲಾರ್ಡ್ಸ್‌: ಕ್ಲಿಕ್‌ ಆಗಬೇಕಿದೆ ಭಾರತದ ಬ್ಯಾಟಿಂಗ್‌

06:00 AM Aug 09, 2018 | |

ಲಂಡನ್‌: ಇಂಗ್ಲೆಂಡ್‌ ಪಾಲಿನ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಅಲ್ಪ ಅಂತರದಿಂದ ಸೋತ ಟೀಮ್‌ ಇಂಡಿಯಾ ಈಗ ಸರಣಿಗೆ ಮರಳುವ ಯೋಜನೆಯೊಂದಿಗೆ ದ್ವಿತೀಯ ಟೆಸ್ಟ್‌ ಆಡಲಿಳಿಯಲಿದೆ. “ಹೋಮ್‌ ಆಫ್ ಕ್ರಿಕೆಟ್‌’ ಎನಿಸಿದ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಈ ಪಂದ್ಯ ಗುರುವಾರದಿಂದ ಆರಂಭವಾಗಲಿದೆ.

Advertisement

ಇದು 5 ಪಂದ್ಯಗಳ ಟೆಸ್ಟ್‌ ಸರಣಿಯಾಗಿದ್ದು, ಸಮಬಲ ಅಥವಾ ಮೇಲುಗೈಗೆ ಇನ್ನೂ ಅವಕಾಶ ಇದೆ ಎಂದು ಕುಳಿತರೆ ಕೊಹ್ಲಿ ಪಡೆಯ ಹಾದಿ ದುರ್ಗಮಗೊಳ್ಳುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಲಾರ್ಡ್ಸ್‌ನಲ್ಲೇ ತಿರುಗಿ ಬಿದ್ದು ಗೆಲುವು ಸಾಧಿಸಿದರೆ ಭಾರತ ತಂಡ ಆತಿಥೇಯರಿಗೆ ಭೀತಿಯೊಡ್ಡಬಹುದು.

ಆದರೆ ಭಾರತದ ಬ್ಯಾಟಿಂಗ್‌ ಸಮಸ್ಯೆ ಪರಿಹಾರವಾಗದೆ ಮೇಲುಗೈ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಆಡುವ ಬಳಗದಲ್ಲಿ ಯಾರೇ ಸ್ಥಾನ ಪಡೆಯಲಿ, ಅವರು ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ನಿಂತು ಆಡುವುದು ಅತೀ ಮುಖ್ಯ. ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯ ಸೋಲಲು ಭಾರತದ ಶೋಚನೀಯ ಬ್ಯಾಟಿಂಗ್‌ ಪ್ರದರ್ಶನವೇ ಹೊರತು ಬೇರೇನೂ ಅಲ್ಲ. ಸ್ವಲ್ಪ ಮಟ್ಟಿಗೆ ಕಳಪೆ ಕ್ಷೇತ್ರರಕ್ಷಣೆ ಕೂಡ ಕಾರಣವಾಗಿರಬಹುದು. ಆದರೆ ಬೌಲಿಂಗ್‌ ಆಕ್ರಮಣ ಮಾತ್ರ ಬಿಗುವಿನಿಂದಲೇ ಕೂಡಿತ್ತು.

ಮೊದಲ ಟೆಸ್ಟ್‌ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಹ್ಲಿ ಅವರದು ಏಕಾಂಗಿ ಬ್ಯಾಟಿಂಗ್‌ ಹೋರಾಟವಾಗಿತ್ತು. ಭಾರತದ ಒಟ್ಟು ಮೊತ್ತದಲ್ಲಿ ಕೊಹ್ಲಿ ಗಳಿಕೆಯೇ 200 ರನ್‌ ಆಗಿತ್ತೆಂಬುದು ಉಳಿದವರ ವೈಫ‌ಲ್ಯವನ್ನು ಸಾರುತ್ತದೆ. ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳಾದ ಇಶಾಂತ್‌, ಉಮೇಶ್‌ ಯಾದವ್‌, ಶಮಿ ಅವರ ಬೆಂಬಲ ಕೊಹ್ಲಿಗೆ ದೊಡ್ಡ ಮಟ್ಟದಲ್ಲಿ ಲಭಿಸಿದ್ದನ್ನು ಮರೆಯುವಂತಿಲ್ಲ. ಹಾಗಾದರೆ ಬೌಲರ್‌ಗಳು ತೋರ್ಪಡಿಸಿದ ಬ್ಯಾಟಿಂಗ್‌ ಸಾಧನೆ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳಿಗೇಕೆ ಸಾಧ್ಯವಾಗದು ಎಂಬುದು ಸದ್ಯದ ಪ್ರಶ್ನೆ.

ಮುರಳಿ ವಿಜಯ್‌, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಅಜಿಂಕ್ಯ ರಹಾನೆ, ದಿನೇಶ್‌ ಕಾರ್ತಿಕ್‌ ಅವರ ರನ್‌ ಬರಗಾಲ ಎಜ್‌ಬಾಸ್ಟನ್‌ನಲ್ಲಿ ಭಾರತವನ್ನು ಮುಳುಗಿಸಿತು. ಇವರೆಲ್ಲ ಮಾಮೂಲು ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರೂ ಸಾಕಿತ್ತು, 194 ರನ್ನುಗಳ ಗುರಿಯನ್ನು ಭಾರತ ನಿರಾಯಾಸವಾಗಿ ತಲುಪಬಹುದಿತ್ತು. ಪಿಚ್‌ ಬೌಲಿಂಗಿಗೆ ಎಷ್ಟೇ ಸಹಕರಿಸಿದರೂ ನಿಂತು ಆಡಿದರೆ ಗೆಲುವು ದೂರಾಗುತ್ತಿರಲಿಲ್ಲ.

Advertisement

ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರವೇನು?
ಭಾರತದ ಬ್ಯಾಟಿಂಗ್‌ ಸಮಸ್ಯೆಗೆ ಸರಿಹಾರವೇನು ಎಂಬುದು ಈಗ ಎದುರಾಗಿರುವ ದೊಡ್ಡ ಪ್ರಶ್ನೆ. ಮೊದಲ ಟೆಸ್ಟ್‌ನಲ್ಲಿ ಪೂಜಾರ ಇರಬೇಕಿತ್ತು, ಶಿಖರ್‌ ಧವನ್‌ ಏಕೆ ಬೇಕಿತ್ತು, ಕುಲದೀಪ್‌ಗೆ ಅವಕಾಶ ನೀಡಬಹುದಿತ್ತು… ಎಂಬುದೆಲ್ಲ ಹೆಚ್ಚು ಚರ್ಚೆಗೊಳಗಾದ ಸಂಗತಿಗಳು. ಬಹುಶಃ ಬಹುಜನರ ಆಪೇಕ್ಷೆಯ ಮೇರೆ “ಟೆಸ್ಟ್‌ ಸ್ಪೆಷಲಿಸ್ಟ್‌’ ಪೂಜಾರ ಲಾರ್ಡ್ಸ್‌ನಲ್ಲಿ ಆಡಲಿಳಿಯಬಹುದು. ಇವರಿಗಾಗಿ ಧವನ್‌ ಹೊರಗುಳಿಯುವ ಸಾಧ್ಯತೆ ಇದೆ. ಆಗ ಮುರಳಿ ವಿಜಯ್‌ ಜತೆ ರಾಹುಲ್‌ ಇನ್ನಿಂಗ್ಸ್‌ ಆರಂಭಿಸಬಹುದು.

ಉಪನಾಯಕ ಅಜಿಂಕ್ಯ ರಹಾನೆ ಕೂಡ ಕೈಕೊಡುತ್ತಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಇವರ ಬದಲು ಕರುಣ್‌ ನಾಯರ್‌ ಅವಕಾಶ ಪಡೆಯಬಹುದೇ? ಇಂಥದೊಂದು ಸಾಧ್ಯತೆ ಕಡಿಮೆ.

ಬೌಲಿಂಗ್‌ ಪರವಾಗಿಲ್ಲ, ಆದರೂ…
ಇಂಗ್ಲೆಂಡ್‌ ಟ್ರ್ಯಾಕ್‌ಗಳಲ್ಲಿ ಭಾರತದ ಬೌಲಿಂಗ್‌ ಯಾವತ್ತೂ ಕೈಕೊಟ್ಟದ್ದಿಲ್ಲ. ಇದಕ್ಕೆ ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯವೇ ತಾಜಾ ಉದಾಹರಣೆ. ಭುವನೇಶ್ವರ್‌, ಬುಮ್ರಾ ಗೈರಲ್ಲೂ ಭಾರತದ ದಾಳಿ ಹರಿತವಾಗಿಯೇ ಇತ್ತು. ಸ್ಪಿನ್ನರ್‌ ಅಶ್ವಿ‌ನ್‌ ಕೂಡ ಮಿಂಚಿದ್ದರು. ಆದರೂ ಲಾರ್ಡ್ಸ್‌ ಪಂದ್ಯಕ್ಕಾಗಿ ಭಾರತದ ಬೌಲಿಂಗ್‌ ವಿಭಾಗದಲ್ಲಿ ಪರಿವರ್ತನೆ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವುದು ಭಾರತದ ಯೋಜನೆಗಳಲ್ಲೊಂದು. ಆಗ ಕುಲದೀಪ್‌ ಯಾದವ್‌ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವೀಂದ್ರ ಜಡೇಜ ಕೂಡ ರೇಸ್‌ನಲ್ಲಿದ್ದಾರೆ. 2014ರ ಲಾರ್ಡ್ಸ್‌ ಪಂದ್ಯದಲ್ಲಿ 99ಕ್ಕೆ 3 ವಿಕೆಟ್‌ ಉರುಳಿಸಿದ್ದ ಜಡೇಜ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 68 ರನ್‌ ಹೊಡೆದಿದ್ದರು. ಅವಳಿ ಸ್ಪಿನ್ನರ್‌ಗಳಿಗೆ ಅವಕಾಶ ನೀಡುವುದೇ ಆದಲ್ಲಿ ಆಗ ಉಮೇಶ್‌ ಯಾದವ್‌ ಹೊರಗುಳಿಯಬಹುದು.

ವಿರಾಟ್‌ ಕೊಹ್ಲಿ ನಾಯಕನಾದ ಬಳಿಕ ಭಾರತದ ಆಡುವ ಬಳಗದಲ್ಲಿ 36 ವಿವಿಧ ಕಾಂಬಿನೇಶನ್‌ಗಳನ್ನು ಪ್ರಯೋಗಿಸಲಾಗಿದೆ ಎಂಬುದು ಭಾತದ ಟೆಸ್ಟ್‌ ತಂಡದ ಅಸ್ಥಿರತೆಗೆ ಸಾಕ್ಷಿ!

ಸ್ಟೋಕ್ಸ್‌ ಸ್ಥಾನಕ್ಕೆ ಯಾರು?
ಮೊದಲ ಟೆಸ್ಟ್‌ ಪಂದ್ಯದ ಸಣ್ಣ ಸವಾಲಿನಲ್ಲಿ ಗೆದ್ದು ಬಂದ ಖುಷಿಯಲ್ಲಿರುವ ಇಂಗ್ಲೆಂಡಿನ ಏಕೈಕ ಚಿಂತೆಯೆಂದರೆ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಗೈರು. ಈ ಜಾಗವನ್ನು ತುಂಬಬಲ್ಲ ಸಮರ್ಥರು ಬೇಕಾಗಿದ್ದಾರೆ. ಯುವ ಆಲ್‌ರೌಂಡರ್‌ ಓಲೀ ಪೋಪ್‌ ಪಾದಾರ್ಪಣೆ ಮಾಡಬಹುದೇ, ಅಥವಾ ದ್ವಿತೀಯ ಸ್ಪಿನ್ನರ್‌ ಮೊಯಿನ್‌ ಅಲಿ ಕಣಕ್ಕಿಳಿಯಬಹುದೇ ಎಂಬುದೊಂದು ಕುತೂಹಲ. ಇವರಿಬ್ಬರೂ ಇಂಗ್ಲೆಂಡ್‌ ಅಂತಿಮಗೊಳಿಸಿದ 12ರ ಬಳಗದಲ್ಲಿದ್ದಾರೆ. ಜತೆಗೆ ವೋಕ್ಸ್‌ ಕೂಡ ಇದ್ದಾರೆ.

ಸಂಭಾವ್ಯ ತಂಡಗಳು
ಭಾರತ:
ಮುರಳಿ ವಿಜಯ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ದಿನೇಶ್‌ ಕಾರ್ತಿಕ್‌, ಆರ್‌. ಅಶ್ವಿ‌ನ್‌, ಹಾರ್ದಿಕ್‌ ಪಾಂಡ್ಯ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ, ಕುಲದೀಪ್‌ ಯಾದವ್‌.

ಇಂಗ್ಲೆಂಡ್‌: ಅಲಸ್ಟೇರ್‌ ಕುಕ್‌, ಕೀಟನ್‌ ಜೆನ್ನಿಂಗ್ಸ್‌, ಜೋ ರೂಟ್‌ (ನಾಯಕ), ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಕ್ರಿಸ್‌ ವೋಕ್ಸ್‌, ಒಲಿವರ್‌ ಪೋಪ್‌, ಆದಿಲ್‌ ರಶೀದ್‌, ಸ್ಯಾಮ್‌ ಕರನ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆ್ಯಂಡರ್ಸನ್‌.
ಆರಂಭ: ಮಧ್ಯಾಹ್ನ 3.30

Advertisement

Udayavani is now on Telegram. Click here to join our channel and stay updated with the latest news.

Next