Advertisement

ಇಂದು ಲಾಸಾನ್ನೆ ಡೈಮಂಡ್‌ ಲೀಗ್‌: ನೀರಜ್‌, ಶ್ರೀಶಂಕರ್‌ ಆಶಾಕಿರಣ

10:29 PM Jun 29, 2023 | Team Udayavani |

ಲಾಸಾನ್ನೆ (ಸ್ವಿಜರ್ಲೆಂಡ್‌): ಶುಕ್ರವಾರ ನಡೆಯಲಿರುವ ಲಾಸಾನ್ನೆ ಡೈಮಂಡ್‌ ಲೀಗ್‌ ಮೂಲಕ ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಪುನರಾಗಮನ ಸಾರಲಿದ್ದಾರೆ. ಜತೆಗೆ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌ ಕೂಡ ಸ್ಪರ್ಧಿಸಲಿದ್ದಾರೆ. ಇವರಿಬ್ಬರೂ ಭಾರತದ ಆಶಾಕಿರಣವಾಗಿ ಗೋಚರಿಸುತ್ತಿದ್ದು, ನಿರೀಕ್ಷೆ ಮುಗಿಲು ಮುಟ್ಟಿದೆ.

Advertisement

ಒಲಿಂಪಿಕ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಮೇ 5ರಂದು ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಸ್ವರ್ಣ ಬೇಟೆಯಾಡಿದ್ದರು. ಅಲ್ಲಿ ತಮ್ಮ 4ನೇ ಅತ್ಯುತ್ತಮ ದೂರದ ಸಾಧನೆಯೊಂದಿಗೆ ಗುರುತಿಸಿಕೊಂಡಿ ದ್ದರು (88.67 ಮೀ.). ಅನಂತರ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಹೀಗಾಗಿ ಮೇ 29ರಂದು ನೆದರ್ಲೆಂಡ್ಸ್‌ ನಲ್ಲಿ ನಡೆದ ಎಫ್ಬಿಕೆ ಗೇಮ್ಸ್‌ ಮತ್ತು ಜೂ. 13ರಂದು ಫಿನ್ಲಂಡ್‌ನ‌ಲ್ಲಿ ನಡೆದ ಪಾವೋ ನುರ್ಮಿ ಗೇಮ್ಸ್‌ನಿಂದ ಹೊರಗುಳಿದರು. ಆದರೆ ಯಾವುದೇ ಡೈಮಂಡ್‌ ಲೀಗ್‌ ಸ್ಪರ್ಧೆಯನ್ನು ತಪ್ಪಿಸಿಕೊಳ್ಳಲಿಲ್ಲ.

ಸ್ಟಾರ್‌ಗಳ ಪೈಪೋಟಿ
ಶುಕ್ರವಾರದ ಲಾಸಾನ್ನೆ ಡೈಮಂಡ್‌ ಲೀಗ್‌ ಜಾವೆಲಿನ್‌ ಸ್ಪರ್ಧೆಯಲ್ಲಿ ವಿಶ್ವದ ಸ್ಟಾರ್‌ ಜಾವೆಲಿನ್‌ ಎಸೆತಗಾರರೆಲ್ಲ ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್‌ ಗಣರಾಜ್ಯದ ಜಾಕುಬ್‌ ವಾಲೆಶ್‌, ಗ್ರೆನೆಡಾದ ವಿಶ್ವ ಚಾಂಪಿಯನ್‌ ಆ್ಯಂಡರ್ಸನ್‌ ಪೀಟರ್, ಫಿನ್ಲಂಡ್‌ನ‌ ಒಲಿವರ್‌ ಹೆಲಾಂಡರ್‌, 2012ರ ಒಲಿಂಪಿಕ್‌ ಚಾಂಪಿಯನ್‌-ಟ್ರಿನಿಡಾಡ್‌ ಆ್ಯಂಡ್‌ ಟೊಬೆಗೋದ ಕೆಶಾರ್ಟ್‌ ವಾಲ್ಕಾಟ್‌, ಜರ್ಮನಿಯ ಜೂಲಿಯನ್‌ ವೆಬ್ಬರ್‌ ಮೊದಲಾದವರಿದ್ದಾರೆ.

ದೋಹಾ ಚಾಂಪಿಯನ್‌ ಆಗಿ ರುವ ಕಾರಣ ನೀರಜ್‌ ಚೋಪ್ರಾ 8 ಅಂಕಗಳೊಂದಿಗೆ ಕೂಟದ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ವಾಲೆಶ್‌ (7 ಅಂಕ) ಮತ್ತು ಪೀಟರ್ (6 ಅಂಕ) ಅನಂತರದ ಸ್ಥಾನದಲ್ಲಿದ್ದಾರೆ.

ಲುಸಾನ್ನೆ ಬಳಿಕ ಡೈಮಂಡ್‌ ಲೀಗ್‌ ಸರಣಿ ಮೊನಾಕೊ (ಜು. 21), ಜ್ಯೂರಿಚ್‌ನಲ್ಲಿ (ಆ. 31) ಮುಂದು ವರಿಯುತ್ತದೆ. ಗ್ರ್ಯಾಂಡ್‌ ಫಿನಾಲೆ ಅಮೆರಿಕದ ಯೂಜಿನ್‌ನಲ್ಲಿ ಸೆ. 16, 17ರಂದು ನಡೆಯಲಿದೆ.

Advertisement

ಶ್ರೀಶಂಕರ್‌ ಭರವಸೆ

ಡೈಮಂಡ್‌ ಲೀಗ್‌ ಪೋಡಿಯಂ ಏರಿದ ಭಾರತದ ನವತಾರೆ ಮುರಳಿ ಶ್ರೀಶಂಕರ್‌ ಮೇಲೂ ಪದಕದ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ ಲಾಂಗ್‌ಜಂಪ್‌ನಲ್ಲಿ ಅವರು 8.09 ಮೀ. ದೂರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾಗಿದ್ದರು. ನ್ಯಾಶನಲ್‌ ಇಂಟರ್‌ ಸ್ಟೇಟ್‌ ಆ್ಯತ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ದಾಖಲಿಸಿ (8.42 ಮೀ.) ಇಲ್ಲಿಗೆ ಆಗಮಿಸಿದ್ದಾರೆ. ಈ ಕೂಟದಲ್ಲಿ ಜೆಸ್ವಿನ್‌ ಆಲ್ಡಿನ್‌ ಅವರ ದಾಖಲೆಯನ್ನು ಮುರಿದಿದ್ದರು.

ಗ್ರೀಸ್‌ನ ಒಲಿಂಪಿಕ್‌ ಚಾಂಪಿಯನ್‌ ಮಿಲ್ಟಿಯಾಡಿಸ್‌ ಟೆಂಟೊಗ್ಲೂ, ಸ್ವಿಜರ್ಲೆಂಡ್‌ನ‌ ಸೈಮನ್‌ ಹ್ಯಾಮರ್‌, ಇಟಲಿಯ ಯುವ ಆ್ಯತ್ಲೀಟ್‌ ಮ್ಯಾಟಿಯ ಫ‌ುರ್ಲಾನಿ ಅವರ ಸವಾಲವನ್ನು ಮುರಳಿ ಶ್ರೀಶಂಕರ್‌ ಎದುರಿಸಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next