ಹೊಸದಿಲ್ಲಿ: ಬಾಹ್ಯಾಕಾಶ ಡಾಕಿಂಗ್ (ಅಂತರಿಕ್ಷದಲ್ಲಿ 2 ಉಪಗ್ರಹಗಳ ಜೋಡಣೆ) ವ್ಯವಸ್ಥೆಯ ಪರೀಕ್ಷೆಗಾಗಿ ಸೋಮವಾರ ರಾತ್ರಿ 2 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಇದರಲ್ಲಿ ಯಶಸ್ವಿಯಾದರೆ ಈ ಸಾಧನೆ ಮಾಡಿದ 4ನೇ ದೇಶ ಎಂಬ ಖ್ಯಾತಿ ಭಾರತಕ್ಕೆ ಸಿಗಲಿದೆ. ಎಸ್‌ಡಿಎಕ್ಸ್01 ಮತ್ತು ಎಸ್‌ಡಿಎಕ್ಸ್ 02 ಎಂಬ 2 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್ ಸೋಮವಾರ ರಾತ್ರಿ 9.58ಕ್ಕೆ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.
476 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಉಪಗ್ರಹಗಳನ್ನು ಇದು ನಿಯೋಜಿಸಲಿದೆ.
ಜನವರಿಯಲ್ಲಿ ಡಾಕಿಂಗ್: 2 ಉಪಗ್ರ ಹಗಳು ಕಕ್ಷೆ ಸೇರಿದ ಬಳಿಕ ಜನವರಿಯಲ್ಲಿ ಡಾಕಿಂಗ್ ಕಾರ್ಯ ನಡೆಸಲಾಗುತ್ತದೆ. ಡಾಕಿಂಗ್ ಯಶಸ್ವಿಯಾದರೆ, ಬಳಿಕ 2 ಉಪಗ್ರಹಗಳ ನಡುವೆ ವಿದ್ಯುತ್ ಹರಿಸುವ ಪರೀಕ್ಷೆ ನಡೆಸಲಾಗುತ್ತದೆ. ಇದಾದ ಬಳಿಕ 2 ವರ್ಷಗಳ ಕಾಲ ಈ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಅಮೆರಿಕ, ರಷ್ಯಾ ಮತ್ತು ಚೀನ ದೇಶಗಳು ಮಾತ್ರ ಬಾಹ್ಯಾಕಾಶ ಡಾಕಿಂಗ್‌ನಲ್ಲಿ ಯಶಸ್ವಿಯಾಗಿವೆ.
ಅಂತರಿಕ್ಷದಲ್ಲಿ ಗಿಡ ಬೆಳೆಸುವ ಪರೀಕ್ಷೆ
ಡಾಕಿಂಗ್ ವ್ಯವಸ್ಥೆಯ ಪರೀಕ್ಷೆಯ ಜತೆಗೆ ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಬೆಳವಣಿಗೆ ಹೊಂದಲಿವೆ ಎಂಬುದನ್ನು ಪರೀಕ್ಷೆ ನಡೆಸ ಲಾಗುತ್ತದೆ. ಇದಕ್ಕಾಗಿ ಅಗತ್ಯವಿರುವ ಬೀಜ ಮತ್ತು ವ್ಯವಸ್ಥೆಗಳನ್ನು ರಾಕೆಟ್‌ನಲ್ಲಿ ಅಳವಡಿಸಲಾಗಿದೆ.