Advertisement
ಈಗಿನ ಯಾಂತ್ರಿಕ ಬದುಕಿನಲ್ಲಿ ನಗು ಮತ್ತು ನಗಿಸುವುದು ಕೂಡ ಹಣ ಸಂಪಾದನೆಯ ಒಂದು ಮಾರ್ಗ ಎಂಬ ಸತ್ಯ ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಸುಂದರವಾದ ದಂತ ಪಂಕ್ತಿಗಳಿಂದ ಮನಬಿಚ್ಚಿ ನಿಷ್ಕಲ್ಮಶವಾಗಿ ಹೃದಯ ತುಂಬಿ ನಕ್ಕಲ್ಲಿ, ಮನುಷ್ಯನಿಗೆ ಯಾವುದೇ ರೋಗ ಬರದು ಎಂದು ತಿಳಿದವರು ಹೇಳುತ್ತಾರೆ. ತನ್ನ ಜತೆಗಿರುವವರನ್ನು ತನ್ನ ಮೋಡಿಗೆ ಬೀಳಿಸುವ, ಪರಸ್ಪರ ಅನ್ಯೋನ್ಯತೆ ಬೆಳೆಸುವ, ವಿಶ್ವಾಸ ವೃದ್ಧಿಸುವ,ನವಚೈತನ್ಯ ಮೂಡಿಸುವ ಅದ್ಭುºತ ಶಕ್ತಿ ನಗುವಿಗೆ ಇದೆ.
ವೈಜ್ಞಾನಿಕವಾಗಿ ನಗುವಿನ ಪರಿಣಾಮ ಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಗು ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಒಮ್ಮೆ ಹಾಯಾಗಿ ನಕ್ಕಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ನಾಯುಗಳು ಸಡಿಲಗೊಂಡು ರಕ್ತ ಸಂಚಾರ ಸುಗಮವಾಗಿ ಆ ಮೂಲಕ ಹೃದಯದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲು ಪರೋಕ್ಷವಾಗಿ ಸಹಕರಿಸುತ್ತದೆ. ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಒಟ್ಟಿನಲ್ಲಿ ನಗು ಎನ್ನುವುದು ಉಚಿತವಾಗಿ ದೊರಕುವ ಔಷಧ. ನಗು ಎನ್ನುವುದು ಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡು ಕೊಳ್ಳುತ್ತಾರೆ. ಅಂಥ ವ್ಯಕ್ತಿಗಳ ಜತೆ ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಿ, ಮಾನಸಿಕ ಒತ್ತಡ ಕಡಿಮೆಯಾಗಿ ನಾವು ಕೂಡ ಹೆಚ್ಚು ಹೆಚ್ಚು ನಗುನಗುತ್ತಾ ನೂರು ಕಾಲ ಬದುಕಬಹುದು.
Related Articles
Advertisement
ನಗುವಿನಿಂದ ಪ್ರಯೋಜನಗಳು– ನಮ್ಮ ಮನಸ್ಸಿಗೆ ಉಲ್ಲಾಸ, ಸಂತಸ ಮತ್ತು ಸಮಾಧಾನ ನೀಡುತ್ತದೆ.
– ನಗುವಿನಿಂದ ನಮ್ಮ ಶ್ವಾಸಕೋಶದ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು.
– ನಗುವಿನಿಂದ ಮಾನಸಿಕ ತಳಮಳ, ಭಯ, ಆತಂಕ ಮತ್ತು ಮನೋ ವ್ಯಾಕುಲತೆಯನ್ನು ಶಮನ ಮಾಡಬಹುದು.
– ನಮ್ಮ ಮನಸ್ಸಿಗೆ ಧೈರ್ಯ ಮತ್ತು ಸದೃಢತೆಯನ್ನು ನೀಡಿ, ಮನೋಸ್ಥಿತಿಯನ್ನು ಉಚ್ಚಾ†ಯ ಸ್ಥಿತಿಯಲ್ಲಿ ಇಡುತ್ತದೆ.
– ಧನಾತ್ಮಕ ಮತ್ತು ಆಶಾದಾಯಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯಮಾಡುತ್ತದೆ.
– ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಮತ್ತು ಆಯಾಮವನ್ನು, ದಿಶೆಯನ್ನು ನೀಡುತ್ತದೆ.
– ಯಾತನಾಮಯ ಮತ್ತು ನೋವಿನ ಸ್ಥಿತಿಗಳಲ್ಲಿ ಮಾನಸಿಕ ದೃಢತೆಯನ್ನು, ಧೈರ್ಯವನ್ನು ನೀಡಿ ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತದೆ.
– ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಗಳಿಂದಲೂ ಆರೋಗ್ಯಕ್ಕೆ ಪೂರಕವಾದ ದ್ರವ್ಯಗಳು ಸ್ರವಿಸಲ್ಪಟ್ಟು ಜೀವಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ.
– ನಮ್ಮ ಬದುಕಿಗೆ ಹೊಸ ಆಯಾಮವನ್ನು ನೀಡಿ ಬಾಳಿಗೆ ಬೆಳಕು ನೀಡುತ್ತದೆ. ನೀವು ಮನಬಿಚ್ಚಿ ನಕ್ಕಾಗ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸೇರಿಕೊಂಡು, ನಿಮ್ಮ ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳನ್ನು ಉತ್ತೇಜಿಸುತ್ತದೆ. ನಿಮ್ಮ ದೇಹದಲ್ಲಿ ಸ್ರವಿಸಲ್ಪಡುವ ಎಂಡೊರ್‌ಫಿನ್ ಎಂಬ ನಗಿಸುವ ರಸದೂತವನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಮತ್ತಷ್ಟು ಉಲ್ಲಸಿತರನ್ನಾಗಿ ಮಾಡುತ್ತದೆ.
– ನಮ್ಮ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಜತೆಗಿದ್ದವರನ್ನು ಮತ್ತಷ್ಟು ಉಲ್ಲಸಿತರನ್ನಾಗಿ ಮಾಡಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ವಿವಾದಗಳಿಗೆ ಅಂತ್ಯಹಾಡಲು ಸಹಕಾರಿ.
– ಮನಬಿಚ್ಚಿ ನಕ್ಕಾಗ ನಿಮ್ಮ ಮನಸ್ಸು ಉಲ್ಲಸಿತವಾಗಿ ಖನ್ನತೆಯನ್ನು ಕಡಿಮೆ ಮಾಡಿ, ಆತಂಕವನ್ನು ದೂರವಾಗಿಸಿ ನಿಮ್ಮನ್ನು ಖುಷಿಯಾಗಿಸುತ್ತದೆ.
– ನಾವು ನಕ್ಕಾಗ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹುಟ್ಟಿಕೊಳ್ಳುತ್ತದೆ. ಇದು ನಮ್ಮ ದೇಹದಲ್ಲಿ ಸ್ರವಿಸಲ್ಪಡುವ ಉತ್ತಮ ರಸದೂತಗಳನ್ನು ಹೆಚ್ಚಿಸುವಂತೆ ಮಾಡಿ, ದೇಹದ ರಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಶಕ್ತಿಶಾಲಿಯಾಗಿಸುತ್ತದೆ. -ಡಾ| ಮುರಲೀ ಮೋಹನ್ ಚೂಂತಾರು