Advertisement
ಜಗತ್ತಿನ ಎಲ್ಲ ದೇಶಗಳಿಗೆ ಭೇಟಿ ಕೊಟ್ಟವರಾರು? ಎಂಬ ಪ್ರಶ್ನೆಯನ್ನು ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇಳಿದರೆ ಸಾಮಾನ್ಯವಾಗಿ ಮೋದಿ, ನೆಹರೂ, ಗಾಂಧಿ, ಕ್ಲಿಂಟನ್, ಮಂಡೇಲಾ, ಒಬಾಮಾ ಇಂತಹ ಪ್ರಮುಖರ ಹೆಸರನ್ನು ಹೇಳಬಹುದಲ್ಲವೆ? ಪ್ರಾಯಃ ಇದಾವುದೂ ಸರಿ ಆಗದು. ಪ್ರಶ್ನೆ ಕೇಳಿದವರಿಗೂ ಅಚ್ಚರಿಯಾಗುವ ಉತ್ತರವೆಂದರೆ ಜಯ್ ಉಳ್ಳಾಲ್.ಜಯ್‌ವಂತ ಉಳ್ಳಾಲರು ಜಯ್ ಉಳ್ಳಾಲರೆಂದೇ ಜನಜನಿತ. 1933ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದರೂ ಕರಾವಳಿಯಲ್ಲಿ ಅಷ್ಟು ಪ್ರಸಿದ್ಧರೆಂದು ಹೇಳುವಂತಿಲ್ಲ. ಕಾರಣವೆಂದರೆ ಅವರ ಸಾಧನೆ ಜರ್ಮನಿ ಹ್ಯಾಂಬರ್ಗ್‌ನ್ನು ಕೇಂದ್ರೀಕರಿಸಿಕೊಂಡು ಜಗತ್ತಿನ ವಿವಿಧ ದೇಶಗಳಲ್ಲಿ ಹಂಚಿ ಹೋಗಿತ್ತು.
ಜಯ್ ಉಳ್ಳಾಲರು ಕೆಮರಾಮನ್ ಆಗಿ ಪರಿಣತಿ ಪಡೆದು ಮುಂಬಯಿಯಲ್ಲಿ 1957ರ ವರೆಗೆ ಚಲನಚಿತ್ರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಟೈಮ್ಸ್ ಆಫ್ ಇಂಡಿಯಾದಲ್ಲಿ ಛಾಯಾಚಿತ್ರ ವರದಿಗಾರರಾಗಿ ಸೇವೆ ಸಲ್ಲಿಸಿದರು. 1962ರಲ್ಲಿ ಜರ್ಮನಿಗೆ ತರಬೇತಿಗಾಗಿ ತೆರಳಿದ ಅವರು ಅಲ್ಲೇ ನೆಲೆ ನಿಂತರು. 1969ರ ವರೆಗೆ ಮಹಿಳಾ ನಿಯತಕಾಲಿಕೆ “ಕಾನ್‌ಸ್ಟಾರ್ನ್”ನಲ್ಲಿ ಕಾರ್ಯನಿರ್ವಹಿಸಿದರು. 1970ನೇ ವರ್ಷ ಅವರ ವೃತ್ತಿ ಬದುಕಿನಲ್ಲಿ ಬಹಳ ಬದಲಾವಣೆ ತಂದ ವರ್ಷ. ಜರ್ಮನಿ ಹ್ಯಾಂಬರ್ಗ್‌ನ ಪ್ರಸಿದ್ಧ ವಾರಪತ್ರಿಕೆ “ಸ್ಟರ್ನ್’ ಮೂಲಕ ಅವರಿಗೆ ವಿಶ್ವ ಸಂಚಾರ ಯೋಗ ಸಾಧ್ಯವಾಯಿತು. ಅವರ ಒಂದೊಂದು ಚಿತ್ರವೂ ಸಮಕಾಲೀನ ಜಗತ್ತಿನ ಸಮಸ್ಯೆಗಳನ್ನೋ, ನಿರ್ದಯ ಆಡಳಿತಗಾರರ ವಿಕಟ ಅಟ್ಟ ಹಾಸವನ್ನೋ, ಯುದ್ಧಗಳು- ಆಂತರಿಕ ಜನಾಂಗೀಯ ಕಲಹಗಳ ಕರಾಳ ಮುಖಗಳನ್ನೋ, ಇದರ ಉಪ ಉತ್ಪನ್ನವಾದ ನಿರ್ಗತಿಕರ ಬದುಕನ್ನೋ, ಅಪರೂಪದ ವನ್ಯಜೀವಿಗಳನ್ನೋ, ವಿವಿಐಪಿಗಳ ಖಾಸಗಿ ಇಷ್ಟಗಳನ್ನೋ ಹೊರ ಜಗತ್ತಿಗೆ ತೋರಿಸಿ ಓದುಗರನ್ನು ಆಸಕ್ತಿಯ ಓದಿಗೆ ಹಿಡಿದಿರಿಸುತ್ತಿತ್ತು.
Related Articles
ಲೆಬನಾನ್‌ನ ದಾಮೋರ್ ಹತ್ಯಾಕಾಂಡ, ಇರಾನ್-ಇರಾಕ್ ಯುದ್ಧ, ಬೋಸ್ನಿಯಾ, ಕಾಂಬೋಡಿಯಾ, ಫಿಲಿಫೈನ್ಸ್, ಉತ್ತರ ಕೊರಿಯಾ, ಪಾಕಿಸ್ಥಾನ ಮೊದಲಾದೆಡೆ ನಡೆದ ಯುದ್ಧದ ಸಂದರ್ಭದ ಸವಾಲನ್ನೂ ಎದುರಿಸಿದವರು ಜಯ್. ಹೀಗಾಗಿ ಜರ್ಮನಿಯಲ್ಲಿ ವರ್ಷದಲ್ಲಿ ಒಂದು ತಿಂಗಳು ಇರುವುದೂ ಕಷ್ಟವಿತ್ತು. ಕದನ ಆರಂಭ ಎಂಬ ಸುದ್ದಿ ಹೊರ ಬಿದ್ದಾಗ ಜಯ್ ಅವರ ಜತೆ ಕೆಮರಾವೂ ಹೊರಬೀಳುತ್ತಿತ್ತು. ಪತ್ನಿ ರಜನಿ ಇದನ್ನು “ಸಾವಿನೊಂದಿಗೆ ಮುಹೂರ್ತ’ (ಚ ಠಿrysಠಿ ಡಿಜಿಠಿಜ ಛಛಿಚಠಿಜ) ಎಂದು ಹಾಸ್ಯದಿಂದ ಹೇಳುತ್ತಿದ್ದರು.
Advertisement
ಸಾಮೂಹಿಕ ನರಮೇಧದ ಸಾಕ್ಷಿಖಮೇರ್ ಜನಾಂಗ ಕಾಂಬೋಡಿಯಾದಲ್ಲಿ 1970-80ರಲ್ಲಿ ನಡೆಸಿದ ಲಕ್ಷಾಂತರ ನರಮೇಧವನ್ನು ಜಗತ್ತಿಗೆ ಮೊದಲು ತೋರಿಸಿದ್ದು ಜಯ್. ಅಲ್ಲಿನ ತಲೆಬುರುಡೆಗಳ ರಾಶಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಬಳಿಕವೇ ಅಲ್ಲಿನ ವಾಸ್ತವ ಜಗತ್ತಿಗೆ ತಿಳಿದದ್ದು. 1986ರಲ್ಲಿ ಗಲ್ಫ್ ಯುದ್ಧ ನಡೆಯುತ್ತಿರುವಾಗ ಸಾವಿನಂಚಿ ನಲ್ಲಿ ಬದುಕುಳಿದವರು ಇವರು. ಫಿಲಿಫೈನ್ಸ್‌ನ ದಟ್ಟಾರಣ್ಯದಲ್ಲಿ ಕಾರ್ಯಾಚರಣೆಗೆ ತೊಡಗಿದಾಗ ಅತಿಕ್ರಮಣಕಾರರ ಕೈಗೆ ಸಿಕ್ಕಿ ಏಟು ತಿಂದ ಅನುಭವವೂ ಇದೆ. ಎಷ್ಟೋ ಕಡೆ ಅಧಿಕೃತವಾಗಿ ಪ್ರವೇಶ ಸಿಗುತ್ತಿರಲಿಲ್ಲ. ಜಯ್ ಮಾತ್ರ ತಮ್ಮದೇ ರೀತಿಯಲ್ಲಿ ಅಲ್ಲಿಗೆ ಪ್ರವೇಶಿಸುತ್ತಿದ್ದರು. ಬೋಸ್ನಿಯಾ ಯುದ್ಧದ ವರದಿ ಯನ್ನು ಮಾಡುವಾಗ 100ಕ್ಕೂ ಹೆಚ್ಚು ಪತ್ರಕರ್ತರು ಸಾವಿ ಗೀಡಾಗಿದ್ದರು. ಇವರ ಕೆಮರಾವೂ ಜರ್ಝರಿತವಾಗಿತ್ತು. ಥೈಲ್ಯಾಂಡ್, ಲಾವೋಸ್, ಬರ್ಮಾ (ಮ್ಯಾನ್ಮರ್) ಗಡಿಭಾಗದಲ್ಲಿ ಕೊಕೇನ್ ಕಳ್ಳಸಾಗಣೆ ಜಾಲದ ಚಿತ್ರವನ್ನು ಸೆರೆಹಿಡಿಯಲು ಇಬ್ಬರು ಗನ್‌ಧಾರಿಗಳೊಂದಿಗೆ ಜಯ್ ಐದು ಹಗಲು ಮತ್ತು ರಾತ್ರಿ ಕಾದಿದ್ದರಂತೆ. ಅಕ್ರಮ ಗರ್ಭ, ದಾರಿದ್ರ್ಯ, ರೋಗ, ವೈಧವ್ಯ ಬಾಂಗ್ಲಾ ಯುದ್ಧದ ವೇಳೆ 1971ರಲ್ಲಿ ಪೂರ್ವ ಪಾಕಿಸ್ಥಾನ ವನ್ನು ಪ್ರವೇಶಿಸಿದ ಮೊದಲ ಫೊಟೋಗ್ರಫರ್ ಜಯ್. ಆಗ ಅಲ್ಲಿ ಕಂಡದ್ದು-ಅಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ 200 ವಿದ್ಯಾರ್ಥಿ ಗಳಲ್ಲಿ 100 ವಿದ್ಯಾರ್ಥಿಗಳು ಗರ್ಭಿಣಿಯರಾಗಿದ್ದರು. ಸ್ವೀಡಿಶ್ ವೈದ್ಯರು ಏಳು ತಿಂಗಳ ಗರ್ಭವನ್ನು ತೆಗೆಸುತ್ತಿದ್ದರು. ಬೋಸ್ನಿಯಾ ಯುದ್ಧದ ಬಳಿಕ ಹೋಗುವಾಗ 15,000 ನಿರ್ಗತಿಕ ಮಕ್ಕಳು, ವಿಧವೆಯರಿದ್ದರಂತೆ. ಝೈರೆಯಲ್ಲಿ ನಡೆದ ಹುಟು-ಟುಟ್ಸೆ ಕದನದಲ್ಲಿ ಹತರಾದ 300 ಹುಟುಗಳ ಮೃತ ದೇಹಗಳನ್ನು ನದಿ ತಟದಲ್ಲಿ ಅಂತಿಮ ಸಂಸ್ಕಾರ ಮಾಡ ಲಾಯಿತು. ಮನೆ ಬಿಟ್ಟು ನಿರಾಶ್ರಿತರಾದ ಜನರು ನದಿ ನೀರು ಕುಡಿದು ಕಾಲರಾ ರೋಗ ಹರಡಿ ಒಂದೇ ವಾರದಲ್ಲಿ 1.2 ಲಕ್ಷ ಮಂದಿ ಸತ್ತಿದ್ದರು. ಇವೆಲ್ಲವನ್ನೂ ಚಿತ್ರಗಳ ಮೂಲಕ ದಾಖಲಿಸಿದ್ದು ಜಯ್ ಸಾಧನೆ. ಅಬೆದ್ ಮತ್ತು ಅರೇಜ್ ಇಬ್ಬರು ಅಕ್ಕಪಕ್ಕದ ಮಕ್ಕಳು. ಇಸ್ರೇಲ್ ಕದನದ ಮುಖ್ಯ ಸ್ಥಳವಾದ ಬೇರೂತ್‌ನಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವರ್ಗ ಕಲಹ ಸ್ಫೋಟಗೊಂಡ ಬಳಿಕ ಪ್ರಬಲ ವಿರೋಧದ ನಡುವೆಯೂ ಪ್ರೇಮಿಗಳಾಗಿ ಸತಿಪತಿಗಳಾದರು. ಅವರಿಬ್ಬರು ಗಡಿರೇಖೆಯಲ್ಲಿ ನಿಂತಿ ರುವ ಚಿತ್ರ ಜಾಗತಿಕ ಸಂದೇಶ ವಾಗಿದೆ. “ಈ ಪುಟ್ಟ ಕೆಮರಾದಿಂದಲೇ ಇಂತಹ ಜಾಗತಿಕ ಸಂಪರ್ಕ ಸಾಧ್ಯವಾಯಿತು’ ಎಂದು ಜಯ್ ಕೃತಜ್ಞತೆ ಸಲ್ಲಿಸುತ್ತಿದ್ದರು. ಜಾಗತಿಕ ಸ್ತರ- ಮಣಿಪಾಲದ ನಂಟು
ದಲೈಲಾಮಾರ ವಾಚ್ ರಿಪೇರಿ, ನೆಹರೂ- ಎಲಿಜಬೆತ್, ಮದರ್ ತೆರೆಸಾ, ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ ಯವರ ಮುದ್ದಿನ ಬೆಕ್ಕು ಹೀಗೆ ಅವರು ತೆಗೆದ ಚಿತ್ರಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ. ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈಯವರು ಹ್ಯಾಂಬರ್ಗ್‌ಗೆ ಹೋದಾಗ ಉಳಿದುಕೊಂಡದ್ದು ಜಯ್ ಅವರ ಮನೆಯಲ್ಲಿ. ಆಗ ಪ್ರಸಿದ್ಧ ಹಿಂದಿ ಚಿತ್ರ ನಟ ಸುನಿಲ್ ದತ್ ಮತ್ತು ಪತ್ನಿ ನರ್ಗಿಸ್ ಅಲ್ಲಿದ್ದರು. ಜಯ್ ಅವರು ಮಣಿಪಾಲಕ್ಕೆ ಬಂದು ಡಾ| ಟಿಎಂಎ ಪೈಯವರ ಅಪರೂಪದ ಚಿತ್ರಗಳನ್ನು ಸೆರೆ ಹಿಡಿ ದಿದ್ದರು. “ಇಂದು ನಾವು ಕಾಣುವ ಡಾ| ಟಿಎಂಎ ಪೈಯವರ ಚಿತ್ರಗಳು ಜಯ್ ಅವರು ಸೆರೆ ಹಿಡಿದದ್ದು’ ಎನ್ನುತ್ತಾರೆ ಸತೀಶ್ ಪೈಯವರು. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳನ್ನೂ ಸಂಚರಿಸಿದ್ದ ಜಯ್ ಅವರು 1998ರಲ್ಲಿ ಜರ್ಮನಿಯ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಪುರಸ್ಕಾರ ಪಡೆದರು. ಅವರ ಪ್ರತಿನಿಧಿಯಾಗಿ ತನ್ನ ಜಾಗತಿಕ ದಾಖಲೀಕರಣವನ್ನು ಈಗ ಸಮಾಜವೆಂಬ ಬುಟ್ಟಿಗೆ ಹಾಕಿ ತೆರೆಯ ಹಿಂದೆ ಸರಿದಿದ್ದಾರೆ. ಚಿತ್ರ ಒಂದು- ಸಂದೇಶ ಹಲವು
ಒಂದೆಡೆ ಟ್ಯಾಕ್ಸಿಗಳ ಸಾಲು, ಕಣ್ಣು ಕೋರೈಸುವ ಬೀದಿದೀಪಗಳು, ಆಕಾಶದೆತ್ತರಕ್ಕೆ ಎದ್ದುನಿಂತ ವಿಲಾಸಿ ಕಟ್ಟಡಗಳ ನಡುವೆ ಫುಟ್‌ಪಾತ್‌ನಲ್ಲಿ ಕಂಬಳಿ ಹೊದ್ದು ಮಲಗಿದ ಕಡುಬಡವರನ್ನು ಸೆರೆಹಿಡಿದ ಮುಂಬಯಿಯ ಒಂದು ಚಿತ್ರವೇ ಸಮಾಜದ ವಾಸ್ತವ ಚಿತ್ರಣವನ್ನು ನೀಡುತ್ತಿತ್ತು. ಇಥಿಯೋಪಿಯಾದ ಬರಗಾಲದಲ್ಲಿ ಏಳು ವರ್ಷದ ಬಾಲಕನೊಬ್ಬನ ದಯನೀಯ ಮುಖ, ಭೋಪಾಲ ಅನಿಲ ದುರಂತ ಸಂಭವಿಸಿ ಹತ್ತು ವರ್ಷಗಳ ಬಳಿಕ ಸಂತ್ರಸ್ತರಿಗೆ ಜನಿಸಿದ ವಿಕಾರದ ಮಗು ಇತ್ಯಾದಿ ಕ್ಷಣಗಳನ್ನು ಸೆರೆ ಹಿಡಿದ ಜಯ್ ಹೇಳುತ್ತಾರೆ: “ನಾನು ಮಾನವ ಸಂಕಷ್ಟಗಳನ್ನು ದಾಖಲಿಸಿದ್ದೇನೆ’. ಇಂಡೋನೇಶ್ಯಾ, ಜಾವಾ, ಬೋರ್ನಿಯೋ, ಸುಮಾತ್ರಾದಲ್ಲಿ ಕಂಡುಬರುವ ಚಿಂಪಾಂಜಿ, ಗೊರಿಲ್ಲಾ ರೀತಿಯ ಒರಂಗುಟಾನ್ ಎಂಬ ಕುಶಲಮತಿ ಪ್ರಾಣಿಯ ಸಂಖ್ಯೆ ಕುಸಿಯುತ್ತಿರುವುದನ್ನೂ ಇವುಗಳನ್ನು ಉಳಿಸುವ ಅಗತ್ಯವನ್ನೂ ಚಿತ್ರದ ಮೂಲಕ ಸಾರಿದವರು ಇವರು.