ಇತ್ತೀಚೆಗಷ್ಟೇ “ಭರ್ಜರಿ’ ಗೆಲುವು ಕಂಡ ಧ್ರುವ ಸರ್ಜಾ, ಈಗ “ಪೊಗರು’ ಸಿನಿಮಾಗೆ ಅಣಿಯಾಗಿದ್ದಾರೆ. ಡಿ.14 (ಇಂದು) ವೆಸ್ಟ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮುಂಜಾನೆ 5.30 ಕ್ಕೆ “ಪೊಗರು’ ಚಿತ್ರದ ಪೂಜೆ ನೆರವೇರಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಗಂಗಾಧರ್ ನಿರ್ಮಾಪಕರು. ಈ ಹಿಂದೆ ನಂದಕಿಶೋರ್ ನಿರ್ದೇಶನದ ಎಲ್ಲಾ ಚಿತ್ರಗಳ ಪೂಜೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತ್ತು.
ಹಾಗಾಗಿ “ಪೊಗರು’ ಚಿತ್ರದ ಪೂಜೆ ಕೂಡ ಅದೇ ದೇವಸ್ಥಾನದಲ್ಲಿ ನಡೆಯುತ್ತಿದೆ. ಡಿಸೆಂಬರ್ 20ರಿಂದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಈ ಚಿತ್ರಕ್ಕೆ ಧ್ರುವ ಸರ್ಜಾ ಹೀರೋ ಪಕ್ಕಾ ಆಗಿದ್ದರು. ಆದರೆ, ನಾಯಕಿ ಯಾರೆಂಬುದನ್ನು ಗೌಪ್ಯವಾಗಿಟ್ಟಿದ್ದರು ನಂದಕಿಶೋರ್. ಈಗ “ಪೊಗರು’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಇನ್ನೊಬ್ಬ ನಾಯಕಿಯೂ ಇದ್ದು, ಅದು ಶಾನ್ವಿ ಶ್ರೀವಾತ್ಸವ್ ಜತೆ ಮಾತುಕತೆ ನಡೆಯುತ್ತಿದೆ.
ಡೇಟ್ ಹೊಂದಾಣಿಕೆ ಸಮಸ್ಯೆ ಹಿನ್ನೆಲೆಯಲ್ಲಿ ಚಿತ್ರತಂಡ ಶಾನ್ವಿ ಅವರ ಹೆಸರನ್ನು ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇನ್ನು, ಈ ಚಿತ್ರಕ್ಕಾಗಿ ಧ್ರುವಸರ್ಜಾ ಅವರು ಸುಮಾರು30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣಕ್ಕೆ ಬೇಕಾದ ತಯಾರಿ ಮಾಡಿಕೊಂಡಿರುವ ಧ್ರುವಸರ್ಜಾ, ಆ ಬಳಿಕ ಎರಡನೇ ಹಂತದ ಚಿತ್ರೀಕರಣದ ಹೊತ್ತಿಗೆ ಪುನಃ ಬಾಡಿ ಬಿಲ್ಡ್ ಮಾಡಿಕೊಳ್ಳಲಿದ್ದಾರೆ.
ಈ ಮೂಲಕ ಧ್ರುವ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೊಂದು ಶಾಲೆಯ ವಿದ್ಯಾರ್ಥಿ ಪಾತ್ರ. ಹಾಗಾಗಿ, ಹಾಗೆ ಕಾಣಿಸಿಕೊಳ್ಳಲು ಏನು ಬೇಕೋ ಅದೆಲ್ಲಾ ತಯಾರಿಯನ್ನೂ ಧ್ರುವ ಮಾಡಿಕೊಂಡಿದ್ದಾರೆ. “ಪೊಗರು’ ಪಕ್ಕಾ ಕಮರ್ಷಿಯಲ್ ಮತ್ತು ಸ್ವಮೇಕ್ ಚಿತ್ರ. ಈ ಹಿಂದೆ ನಂದಕಿಶೋರ್ “ಹಯಗ್ರೀವ’ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಆ ಬಳಿಕ “ಪೊಗರು’ ಚಿತ್ರದ ಬಗ್ಗೆ ಹೇಳಿಕೊಂಡರು. ಆದರೆ, “ಹಯಗ್ರೀವ’ ಚಿತ್ರದ ಶೀರ್ಷಿಕೆ “ಪೊಗರು’ ಚಿತ್ರದ ಶೀರ್ಷಿಕೆ ಅಂತ ಬದಲಾಗಿದೆಯಾ ಎಂಬ ಪ್ರಶ್ನೆ ಎದುರಾಗಬಹುದು.
“ಹಯಗ್ರೀವ’ ಚಿತ್ರಕ್ಕೂ “ಪೊಗರು’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನಂದಕಿಶೋರ್ ಅವರು “ಪೊಗರು’ ಚಿತ್ರಕ್ಕಾಗಿಯೇ ಹೊಸದೊಂದು ಕಥೆ ಹೆಣೆದು, ಧ್ರುವ ಸರ್ಜಾ ಅವರ ಮ್ಯಾನರಿಸಂಗೆ ತಕ್ಕಂತೆಯೇ ಪಾತ್ರ ಹೆಣೆದು, ಪವರ್‌ಫುಲ್ ಚಿತ್ರ ಕೊಡಲು ಅಣಿಯಾಗಿದ್ದಾರೆ. ಸದ್ಯಕ್ಕೆ “ಭರ್ಜರಿ’ ಗೆಲುವಿನ ಖುಷಿಯಲ್ಲಿರುವ ಧ್ರುವ ಅವರು ಇದೀಗ ಮತ್ತೂಮ್ಮೆ “ಪೊಗರು’ ತೋರಿಸೋಕೆ ರೆಡಿಯಾಗಿದ್ದಾರೆ.