Advertisement

ಮಂಗಳೂರಿನಲ್ಲಿ ಟ್ರೆಂಡ್ ಆಗುತ್ತಿದೆ ಯೋಗ ಕಲಿಕೆ 

10:07 AM Jun 21, 2018 | Team Udayavani |

ಮಹಾನಗರ: ಭಾರತೀಯ ಯೋಗ ಪರಂಪರೆ ನಶಿಸಿ ಹೋಗುತ್ತಿದೆ ಎಂಬ ಕೂಗು ಸಾಮಾನ್ಯವಾಗಿದ್ದ ಕಾಲಘಟ್ಟವದು. ಯೋಗ ಕಲಿಕೆಗೆ ಆಸಕ್ತರಿಲ್ಲದೆ ಯೋಗ ಶಿಕ್ಷಕರಿಗೆ ಕಲಿಸುವ ಯೋಗವೂ ಸಿಗದಿರುತ್ತಿದ್ದ ಕಾಲವಿತ್ತು. ಆದರೆ ಕಳೆದೆರಡು ವರ್ಷಗಳಿಂದ ಎಲ್ಲವೂ ತದ್ವಿರುದ್ಧ. ಆಸಕ್ತಿಯೇ ಹವ್ಯಾಸವಾಗಿ ಬದಲಾಗುವಷ್ಟು ಪೂರಕ ವಾತಾವರಣ ಮಂಗಳೂರಿನಲ್ಲಿ ಯೋಗಕ್ಕೆ ಸಿಗುತ್ತಿದೆ. ಪಠ್ಯಕ್ರಮವಿಲ್ಲದಿದ್ದರೂ ಶಾಲೆ, ಕಾಲೇಜುಗಳಲ್ಲಿ ಪಠ್ಯದೊಂದಿಗೆ ಯೋಗ ರೂಢಿಯಾಗುತ್ತಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿವರ್ಷ ಜೂ. 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಕರೆ ಕೊಟ್ಟಂದಿನಿಂದ ಯೋಗಾಸಕ್ತಿ ಬೆಳೆಸಿಕೊಳ್ಳುವವರ ಸಂಖ್ಯೆಯೂ ಅಧಿಕವಾಗಿದೆ. ಎರಡು ವರ್ಷಗಳಿಂದೀಚೆಗೆ ಮಂಗಳೂರಿನಲ್ಲಿ ಯೋಗ ಕಲಿಕೆಯ ಚಿತ್ರಣ ಸಂಪೂರ್ಣ ಬದಲಾಗಿದ್ದು, ಕಲಿಕಾಸಕ್ತರು ಹೆಚ್ಚಿದ್ದು, ಯೋಗ ಗುರುಗಳಿಗೂ ಬಿಡುವಿಲ್ಲದಾಗಿದೆ ಎನ್ನುತ್ತಾರೆ ಯೇನಪೊಯ ವಿವಿಯ ಯೋಗ ಸಂಶೋಧನ ಕೇಂದ್ರದ ಯೋಗ ಥೆರಪಿ ಸಂಶೋಧನ ವಿದ್ಯಾರ್ಥಿ ಕುಶಾಲಪ್ಪ ಗೌಡ.

ಇತ್ತೀಚೆಗೆ ಯೋಗದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಗಳು ನಡೆದ ಅನಂತರ ಯೋಗಕ್ಕೆ ಆದ್ಯತೆ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಗರದ ಬಹುತೇಕ ಯೋಗ ಚಿಕಿತ್ಸಾ ಕೇಂದ್ರಗಳಲ್ಲಿ ಉಚಿತ ತರಬೇತಿ ಶಿಬಿರಗಳೂ ಆಗಾಗ ನಡೆಯುತ್ತಿರುತ್ತವೆ.

ಮುಖ್ಯವಾಗಿ ಪತಂಜಲಿ ಯೋಗ ಸಂಸ್ಥೆ, ನಿತ್ಯಾನಂದ ಯೋಗ ಸೆಂಟರ್‌, ಆವಿಷ್ಕಾರ್‌ ಯೋಗ ಕೇಂದ್ರ, ವಜ್ರೆàಶ್ವರಿ ಆಯುರ್‌ ಯೋಗ ಕೇಂದ್ರ, ಯೋಗ ಕುಟೀರ, ಸಹಿತ ವಿವಿಧ ಯೋಗ ಕೇಂದ್ರಗಳು ಆಗಾಗ ಜನರಿಗೆ ಉಚಿತ ಯೋಗ ಶಿಬಿರಗಳನ್ನೂ ಹಮ್ಮಿಕೊಂಡು ಯೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ.

ಯೋಗ ವಿಭಾಗ ಸೀಟು ಭರ್ತಿ
ಶೈಕ್ಷಣಿಕ ಅಧ್ಯಯನಕ್ಕಾಗಿ ಮತ್ತು ವೃತ್ತಿಪರ ಕೋರ್ಸ್‌ ಆಗಿ ಯೋಗ ವಿಜ್ಞಾನವನ್ನು ಆರಿಸಿಕೊಳ್ಳುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ. ಕಳೆದೈದು ವರ್ಷಗಳಿಂದ ಮಂಗಳೂರು, ಮಣಿಪಾಲದಲ್ಲಿ ಯೋಗ ವಿಷಯವನ್ನು ಅಧ್ಯಯನ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸೀಟ್‌ಗಳು ಭರ್ತಿಯಾಗುತ್ತಿವೆ. ಮಂಗಳೂರು ವಿವಿಯಲ್ಲಿ ಯೋಗ ವಿಜ್ಞಾನ ವೃತ್ತಿಪರ ಕೋರ್ಸ್‌ ಕಲಿಕೆಗೆ 20 ಜನರಲ್‌ ಮೆರಿಟ್‌ ಸೀಟು ಸೇರಿ ಒಟ್ಟು 32 ಸೀಟುಗಳ ಲಭ್ಯತೆ ಇದೆ. ಹಿಂದೆ ಈ ವಿಭಾಗದಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದ್ದರೆ ಈಗ ಎಲ್ಲ ಸೀಟ್‌ಗಳು ಭರ್ತಿಯಾಗುತ್ತಿವೆ ಎನ್ನುತ್ತಾರೆ ಮಂಗಳೂರು ವಿವಿ ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಶರ್ಮ.

Advertisement

ಶಾಲಾ-ಕಾಲೇಜುಗಳಲ್ಲಿ ಯೋಗ
ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಒಂದು ತರಗತಿಯನ್ನು ಯೋಗಕ್ಕಾಗಿಯೇ ಮೀಸಲಿಡಲಾಗಿದೆ. ನಗರದವಿಕಾಸ್‌ ಪಪೂ ಕಾಲೇಜು, ಎಕ್ಸ್‌ಪರ್ಟ್‌ ಕಾಲೇಜು, ಭಾರತೀ ಕಾಲೇಜು, ಯೇನಪೊಯ ಸಂಸ್ಥೆ, ಶಾರದಾ ವಿದ್ಯಾಲಯ, ನಳಂದಾ ಶಿಕ್ಷಣ ಸಂಸ್ಥೆ, ಮಣಿಪಾಲ್‌ ಸ್ಕೂಲ್‌ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಯೋಗವನ್ನು ಪಠ್ಯಕ್ರಮದೊಂದಿಗೇ ರೂಢಿಸಿಕೊಂಡು ವಿದ್ಯಾರ್ಥಿಗಳಿಗೆ ನಿತ್ಯ ಯೋಗಾಭ್ಯಾಸ ಮಾಡುವ ಕೆಲಸ ನಡೆಯುತ್ತಿದೆ.

ಇಷ್ಟೇ ಅಲ್ಲದೆ ವಿವಿಧ ಶಿಕ್ಷಣ ಸಂಸ್ಥೆಗಳು ಯೋಗ ಗುರುಗಳನ್ನು ಕರೆಸಿ ತಮ್ಮ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ಉಪನ್ಯಾಸಗಳನ್ನು ಏರ್ಪಡಿಸಿ, ಆ ಮೂಲಕ ಯೋಗಕ್ಕೆ ಪ್ರೇರೇಪಿಸುವ ಕೆಲಸ ಮಾಡುತ್ತಿವೆ.

ಯುವಕರಲ್ಲಿ ಯೋಗಾಸಕ್ತಿ
ಹಿಂದೆಲ್ಲ ಹೆಚ್ಚಾಗಿ ವಯಸ್ಸಾದವರು ಯೋಗ ಕಲಿಯಲು ಯೋಗ ಕೇಂದ್ರಗಳಿಗೆ ಬರುತ್ತಿದ್ದರು. ಪ್ರಸ್ತುತ ಯೋಗ ಕಲಿಕೆಗೆ ಆಸಕ್ತಿ ತೋರುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಯೋಗ ಕಲಿಯುವ ಯುವಕರ ಸಂಖ್ಯೆ ತೃಪ್ತಿಕರವಾಗಿದೆ ಎನ್ನುತ್ತಾರೆ ಬಂಟ್ಸ್‌ಹಾಸ್ಟೆಲ್‌ ನಿತ್ಯಾನಂದ ಯೋಗ ಸೆಂಟರ್‌ನ ಸ್ಥಾಪಕ ಡಾ| ನಿತ್ಯಾನಂದ ಎ. ಶೆಟ್ಟಿ. ಗಮನಾರ್ಹವೆಂದರೆ ಯೋಗ ಕಲಿಯಲು ಬರುವ ಯುವತಿಯರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಮಾಜದ ಎಲ್ಲ ವಯೋಮಾನದವರೂ ಯೋಗವನ್ನು ಜೀವನಶೈಲಿಯಾಗಿ ಅಳವಡಿಸಿಕೊಂಡಿದ್ದಾರೆ ಎಂದು ಯೋಗಗುರುಗಳು ಹೇಳುತ್ತಾರೆ.

ವಿದೇಶಿಗರು ಮತ್ತು ಯೋಗ
ಜಗತ್ತಿಗೇ ಭಾರತ ನೀಡಿದ ಕೊಡುಗೆ ಯೋಗ ಪದ್ಧತಿ. ಈ ಕೊಡುಗೆಯನ್ನು ಅಷ್ಟೇ ಸಂಯಮದಿಂದ ಸ್ವೀಕರಿಸಿದ ವಿದೇಶಗಳು ತಮ್ಮಲ್ಲಿಯೂ ಯೋಗವನ್ನು ಜೀವನಕ್ರಮವಾಗಿ ಅಳವಡಿಸಿಕೊಂಡಿವೆ.

ವಿದೇಶದಲ್ಲಿ ಯೋಗಾಭ್ಯಾಸ
ಸುಮಾರು ಎರಡು ವರ್ಷಗಳಿಂದ ವಿದೇಶದಲ್ಲಿ ಯೋಗ ಕಲಿಕೆಗೆ ಹೆಚ್ಚಿನ ಬೇಡಿಕೆ ಇದೆ. ಭಾರತೀಯ ಯೋಗ ಗುರುಗಳನ್ನು ಕರೆಸಿ ಯೋಗ ಹೇಳಿಕೊಡುವ ಪರಿಪಾಠ ಒಂದೆಡೆಯಾದರೆ, ಇಲ್ಲಿಂದ ಯೋಗ ಕಲಿತು ವಿದೇಶದಲ್ಲಿ ಯೋಗಾಭ್ಯಾಸ ಹೇಳಿಕೊಡುತ್ತಿರುವ ಯೋಗಗುರುಗಳೂ ಇದ್ದಾರೆ.

ವೈದ್ಯರಿಂದ ಯೋಗದ ಸಲಹೆ
ಆಧುನಿಕ ಇಂಗ್ಲಿಷ್‌ ವೈದ್ಯ ಪದ್ಧತಿಯು ಒಂದು ಕಾಲದಲ್ಲಿ ಭಾರತೀಯ ಯೋಗ ಪದ್ಧತಿಯನ್ನು ಸಂಪೂರ್ಣ ಮರೆಯಾಗಿಸಿತು. ಆದರೆ ಪ್ರಸ್ತುತ ವೈದ್ಯಕೀಯ ರಂಗವೇ ಯೋಗದ ಮಹತ್ವವನ್ನು ಅರಿತುಕೊಂಡು ರೋಗಿಗಳಿಗೆ ಯೋಗ ಮಾಡುವಂತೆ ಸಲಹೆ ಮಾಡುತ್ತಿದೆ. ಮಂಗಳೂರಿನಲ್ಲಿ ಅನೇಕ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಬೋಧಿಸುವುದರೊಂದಿಗೆ ರೋಗಿಗಳಿಗೂ ಯೋಗದೆಡೆಗೆ ಒಲವು ಬೆಳೆಸಿಕೊಳ್ಳುವಂತೆ ಹೇಳುತ್ತಿವೆ ಎನ್ನುತ್ತಾರೆ ಕುಶಾಲಪ್ಪ ಗೌಡ. 

ಫಿಟ್ನೆಸ್  ಚಾಲೆಂಜ್‌
ಸುಮಾರು ಒಂದು ತಿಂಗಳಿನಿಂದ ಫಿಟ್ನೆಸ್  ಚಾಲೆಂಜ್‌ ಕೂಡಾ ಟ್ರೆಂಡ್‌ ಆಗುತ್ತಿದೆ. ಯೋಗಾಭ್ಯಾಸ ಮಾಡುತ್ತಿರುವ ವೀಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕಿ ಪರಸ್ಪರ ಖೋ ಕೊಡುವ ಪರಿಪಾಠ ಬೆಳೆಯುತ್ತಿದೆ. ಇದು ಯೋಗವನ್ನು ಪ್ರಚುರಪಡಿಸಲು ಉತ್ತಮ ವೇದಿಕೆಯಾಗಿ ರೂಪುಗೊಳ್ಳುತ್ತಿದೆ. 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next