Advertisement

Bihar: ಬಿಹಾರ ರಾಜಕೀಯಕ್ಕೆ ಇಂದು ತುರೀಯ

01:18 AM Jan 28, 2024 | Team Udayavani |

ಪಾಟ್ನಾ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾ ಶನಿವಾರವೂ ಮುಂದುವರಿದಿದ್ದು, ಸಿಎಂ ನಿತೀಶ್‌ ಕುಮಾರ್‌ ಐಎನ್‌ಡಿಐಎಯಿಂದ ಹೊರಗೆ ಬರುವುದು ಮತ್ತು ಎನ್‌ಡಿಎ ಜತೆ ಸೇರಿ ಬಿಹಾರದಲ್ಲಿ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಎಲ್ಲ ರಾಜಕೀಯ ಹೈಡ್ರಾಮಾಗಳಿಗೆ ರವಿವಾರ ತೆರೆಬೀಳುವ ಸಾಧ್ಯತೆಯಿದೆ.

Advertisement

ರವಿವಾರ ಬೆಳಗ್ಗೆ ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿ ಕಡಿದು ಎನ್‌ಡಿಎ ಜತೆ ಸೇರುವ ನಿರ್ಧಾರ ಆಗುವ ಸಾಧ್ಯತೆಯಿದೆ.

ಇದು ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್‌ ನಿವಾಸದಲ್ಲೇ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ. ಸಭೆಯಲ್ಲಿ ಸಮಾಲೋಚನೆ ಬಳಿಕ ನಿತೀಶ್‌ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ. ಜತೆಗೆ ಎನ್‌ಡಿಎ ಶಾಸಕರ ಬೆಂಬಲ ಕುರಿತ ಪತ್ರವನ್ನೂ ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಸಂಜೆ 4ಕ್ಕೆ ಹೊಸ ಸಚಿವ ಸಂಪುಟದ ಪ್ರಮಾಣ ಸ್ವೀಕಾರ ನಡೆಯಲಿದೆ ಎಂದು ಜೆಡಿಯು ಮೂಲಗಳು ತಿಳಿಸಿವೆ.

ರವಿವಾರ ಬೆಳಗ್ಗೆಯೇ ನಿತೀಶ್‌ ಅವರು ಮಿತ್ರಪಕ್ಷ ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಸಚಿವರನ್ನು ಉಚ್ಚಾಟನೆ ಮಾಡಲಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಜೆಡಿಯು ನಡುವೆ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಮಾತುಕತೆಯೂ ಅಂತಿಮಗೊಂಡಿದೆ ಎನ್ನಲಾಗಿದೆ.

ಇನ್ನೊಂದೆಡೆ ನಿತೀಶ್‌ರೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್‌ ನಾಯಕರು ನಡೆಸಿದ ಸತತ ಪ್ರಯತ್ನಗಳು ವಿಫ‌ಲವಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ನಿತೀಶ್‌ಗೆ ಕರೆ ಮಾಡಲು ಯತ್ನಿಸಿದ್ದು, ನಿತೀಶ್‌ ಬಿಝಿಯಾಗಿದ್ದಾರೆ ಎಂಬ ಉತ್ತರ ಬರುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ.

Advertisement

ಶನಿವಾರ ಸಂಜೆ ಪಾಟ್ನಾದ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರಿಗೆ ಚಹಾ ಕೂಟ ಏರ್ಪಡಿಸಿದ್ದ ನಿತೀಶ್‌, ಅಲ್ಲಿ ತಮ್ಮ ರಾಜಕೀಯ ನಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅದೇ ಸಮಯದಲ್ಲಿ ಬಿಜೆಪಿ ಕೋರ್‌ ಕಮಿಟಿ ಸಭೆಯೂ ನಡೆದಿದ್ದು, ರಾಜ್ಯದಲ್ಲಿ ಸರಕಾರ ರಚಿಸಲು ನಿತೀಶ್‌ಗೆ ಬೆಂಬಲ ಸೂಚಿಸುವ ಕುರಿತು ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಅತ್ತ ಆರ್‌ಜೆಡಿ ಕೂಡ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ. ಶನಿವಾರ ಲಾಲು ಪ್ರಸಾದ್‌ ಯಾದವ್‌ ನೇತೃತ್ವದಲ್ಲಿ ಪಕ್ಷದ ಶಾಸಕರ ಸಭೆ ನಡೆದಿದೆ. ಲಾಲು ಅವರು ಕೈಗೊಳ್ಳುವ ಎಲ್ಲ ನಿರ್ಧಾರಕ್ಕೂ ನಾವು ಬದ್ಧರಾಗಿದ್ದೇವೆ. ಅವರ ನಿರ್ಧಾರವೇ ಅಂತಿಮ ಎಂದು ಶಾಸಕರು ಈ ವೇಳೆ ಹೇಳಿದ್ದಾರೆ. ಲಾಲು ಪುತ್ರಿ ರಾಜಲಕ್ಷ್ಮೀ ಯಾದವ್‌ ಅವರು ಲಾಲು ಮತ್ತು ತೇಜಸ್ವಿಯಾದವ್‌ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದಕ್ಕೆ “ಗುಂಪಾಗಿ ಬರುವುದು ಪೆಂಗ್ವಿನ್‌ಗಳು. ಸಿಂಹ ಯಾವತ್ತೂ ಏಕಾಂಗಿಯಾಗಿಯೇ ಬರುತ್ತದೆ’ ಎಂಬ ಅಡಿಬರಹ ನೀಡಿದ್ದಾರೆ.

ಮೋದಿಗೇ ಬೆಂಬಲ ಎಂದ ಮಾಂಜಿ
ಬಿಹಾರ ಸರಕಾರ ಪತನಗೊಳ್ಳುವ ಸುಳಿವು ಸಿಗುತ್ತಿದ್ದಂತೆ ಐಎನ್‌ಡಿಐಎ ಒಕ್ಕೂಟವು ಹಿಂದುಸ್ಥಾನಿ ಅವಾಮಿ ಮೋರ್ಚಾ ಮುಖ್ಯಸ್ಥ ಜಿತನ್‌ ರಾಂ ಮಾಂಜಿ ಅವರನ್ನು ಸಂಪರ್ಕಿಸಿದೆ. ಅವರನ್ನು ಐಎನ್‌ಡಿಐಎ ಒಕ್ಕೂಟಕ್ಕೆ ಬರುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಭೂಪೇಶ್‌ ಬಘೇಲ್‌ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಕೋರಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಮಾಂಜಿ, ನನ್ನ ಬೆಂಬಲವೇನಿದ್ದರೂ ಮೋದಿಯವರಿಗೆ ಎಂದಿದ್ದಾರೆ. ಇದೇ ವೇಳೆ ಜಿತನ್‌ ಅವರು ಹೊಸ ಸರಕಾರದಲ್ಲಿ ತಮ್ಮ ಪಕ್ಷಕ್ಕೆ 2 ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next