Advertisement
ಇದೇ ವೇಳೆ, ತಂಡದ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸಲಿಕ್ಕೂ ಭಾರತ ಹೊರಡುವ ಸಾಧ್ಯತೆ ಇದೆ. ಇಲ್ಲಿ ಎಡಗೈ ಆರಂಭಕಾರ ಶಿಖರ್ ಧವನ್ ಆಗಮನದ ಕುರಿತಷ್ಟೇ ನಾಯಕ ರೋಹಿತ್ ಶರ್ಮ ಸುಳಿವು ನೀಡಿದ್ದಾರೆ. ಉಳಿದಂತೆ ಈ ಸರಣಿಯಲ್ಲಿ ಅವಕಾಶ ಪಡೆಯದ ಆಟಗಾರರ ದೊಡ್ಡ ದಂಡೇ ಇದೆ. ಮಾಯಾಂಕ್ ಅಗರ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ದೀಪಕ್ ಚಹರ್, ಆವೇಶ್ ಖಾನ್, ರವಿ ಬಿಷ್ಣೋಯಿ, ಶಾರೂಖ್ ಖಾನ್… ರೇಸ್‌ನಲ್ಲಿದ್ದಾರೆ. ಇವರಲ್ಲಿ ಒಂದಿಬ್ಬರಾದರೂ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಕೊರೊನಾದಿಂದ ಚೇತರಿಸಿಕೊಂಡು ಬಂದ ಶಿಖರ್ ಧವನ್ ಇಲ್ಲಿ ನಾಯಕ ರೋಹಿತ್ ಶರ್ಮ ಜತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಗ 3 ಪಂದ್ಯಗಳಿಗೆ 3 ಆರಂಭಿಕ ಜೋಡಿಗಳನ್ನು ಭಾರತ ಪ್ರಯೋಗಿಸಿದಂತಾಗುತ್ತದೆ. ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್, ಬಳಿಕ ರಿಷಭ್ ಪಂತ್ ಕಪ್ತಾನನೊಂದಿಗೆ ಓಪನರ್ ಆಗಿ ಬಂದಿದ್ದರು. ಇದೀಗ ಧವನ್ ಆಗಮಿಸುವುದರಿಂದ ಪಂತ್ ಮತ್ತೆ ಮಿಡ್ಲ್ ಆರ್ಡರ್‌ಗೆ ತೆರಳಬೇಕಾಗುತ್ತದೆ. ಉಪನಾಯಕ ಕೆ.ಎಲ್. ರಾಹುಲ್ ಕೂಡ ಇಲ್ಲಿಯೇ ಉಳಿಯ ಬೇಕಾಗುತ್ತದೆ. ಧವನ್‌ಗಾಗಿ ಆಲ್‌ರೌಂಡರ್ ದೀಪಕ್ ಹೂಡಾ ಅವರನ್ನು ಕೈಬಿಡುವ ಸಾಧ್ಯತೆ ಇದೆ. ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಮಿಡ್ಲ್ ಆರ್ಡರ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾದುದು ಭಾರತದ ಮುಂದಿರುವ ದೊಡ್ಡ ಸವಾಲು. ಇಲ್ಲಿ ಕೊಹ್ಲಿ, ರಾಹುಲ್, ಸೂರ್ಯಕುಮಾರ್, ಅಯ್ಯರ್, ಪಂತ್ ಅವರನ್ನೆಲ್ಲ ಗಟ್ಟಿಗೊಳಿಸುವ ಯೋಜನೆ ಇದೆ. ಇವರಲ್ಲಿ ಅಯ್ಯರ್ ಇನ್ನೂ ಈ ಸರಣಿಯಲ್ಲಿ ಆಡಿಲ್ಲ. ಸೂರ್ಯ ಕುಮಾರ್ ಓಕೆ. ರಾಹುಲ್ ಯಾವ ಕ್ರಮಾಂಕಕ್ಕೂ ಸೈ ಎನಿಸುವ ಮಟ್ಟದಲ್ಲಿದ್ದಾರೆ. ಆದರೆ ಕೊಹ್ಲಿ, ಪಂತ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾದ ತುರ್ತು ಅಗತ್ಯವಿದೆ.
Related Articles
Advertisement
ಬೌಲರ್‌ಗಳೇ ಹೀರೋಸ್ಮೊದಲೆರಡೂ ಪಂದ್ಯಗಳಲ್ಲಿ ಬೌಲರ್‌ಗಳೇ ಹೀರೋಗಳಾಗಿದ್ದರು. ಅದರಲ್ಲೂ ಆತಿಥೇಯ ಭಾರತ ಅಮೋಘ ಬೌಲಿಂಗ್ ಪ್ರದರ್ಶಿಸಿತ್ತು. ವೆಸ್ಟ್ ಇಂಡೀಸನ್ನು ಕ್ರಮವಾಗಿ 176 ಹಾಗೂ 193ಕ್ಕೆ ಆಲೌಟ್ ಮಾಡಿತ್ತು. ಕಳೆದ 17 ಪಂದ್ಯಗಳಲ್ಲಿ ಕೆರಿಬಿಯನ್ನರು ಪೂರ್ತಿ 50 ಓವರ್ ಪೂರೈಸದ 11ನೇ ನಿದರ್ಶನ ಇದಾಗಿದೆ. ಎರಡೂ ಪಂದ್ಯಗಳಲ್ಲಿ ಭಾರತ ಸುಧಾರಿತ ಹಾಗೂ ಪರಿಣಾಮಕಾರಿ ಬೌಲಿಂಗ್ ಮೂಲಕ ಗಮನ ಸೆಳೆದಿತ್ತು. ಮೊದಲ ಪಂದ್ಯದಲ್ಲಿ ಸ್ಪಿನ್ನರ್ ಚಹಲ್, ದ್ವಿತೀಯ ಮುಖಾಮುಖಿಯಲ್ಲಿ ಪೇಸರ್ ಪ್ರಸಿದ್ಧ್ ಕೃಷ್ಣ ಮಿಂಚಿನ ದಾಳಿ ಸಂಘಟಿಸಿದ್ದರು. ಈ ಬೌಲರ್‌ಗಳೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಅಹ್ಮದಾಬಾದ್ ಟ್ರ್ಯಾಕ್ ಬ್ಯಾಟ್ಸ್‌ಮನ್‌ಗಳಿಗೆ ಅಷ್ಟೇನೂ ಸಹಕರಿಸುತ್ತಿಲ್ಲ. ಹೀಗಾಗಿ ಶುಕ್ರವಾರವೂ ಬೌಲರ್‌ಗಳೇ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಕಳೆದೆರಡು ಪಂದ್ಯಗಳಲ್ಲಿ ಕೇವಲ 3 ಅರ್ಧ ಶತಕವಷ್ಟೇ ದಾಖಲಾಗಿದೆ. 64 ರನ್ ಮಾಡಿದ ಸೂರ್ಯಕುಮಾರ್ ಯಾದವ್ ಅವರದೇ ಗರಿಷ್ಠ ಗಳಿಕೆ. ರೋಹಿತ್ ಶರ್ಮ 60, ಜೇಸನ್ ಹೋಲ್ಡರ್ 57 ರನ್ ಹೊಡೆದಿದ್ದಾರೆ. ಸಿಡಿಯದ ವಿಂಡೀಸ್
ವೆಸ್ಟ್ ಇಂಡೀಸ್ ಘಟಾನುಘಟಿ ಬ್ಯಾಟ್ಸ್ ಮನ್‌ಗಳನ್ನು ಹೊಂದಿದ್ದರೂ ಸಿಡಿದು ನಿಂತಿಲ್ಲ. ಆತಿಥೇಯರ ಬೌಲಿಂಗ್ ಆಕ್ರಮಣಕ್ಕೆ ಸಂಪೂರ್ಣವಾಗಿ ಶರಣಾಗಿದೆ. ಆದರೆ ಮೈಚಳಿ ಬಿಟ್ಟು ಆಡಿದರೆ ಈ ಬೌಲಿಂಗ್ ಟ್ರ್ಯಾಕ್‌ನಲ್ಲೂ ದೊಡ್ಡ ಮೊತ್ತ ರಾಶಿ ಹಾಕುವ ಸಾಮರ್ಥ್ಯ ಕೆರಿಬಿಯನ್ನರಿಗಿದೆ. ಪೊಲಾರ್ಡ್, ಹೋಲ್ಡರ್, ಹೋಪ್, ಕಿಂಗ್, ಪೂರಣ್ ಅವರನ್ನೊಳಗೊಂಡ ದೈತ್ಯ ಬ್ಯಾಟಿಂಗ್ ಪಡೆಯೇ ಇಲ್ಲಿದೆ. ಬೌಲಿಂಗ್ ಟ್ರ್ಯಾಕ್‌ನಲ್ಲೂ ವಿಂಡೀಸ್ ಗಮನಾರ್ಹ ಪ್ರದರ್ಶನವನ್ನೇನೂ ನೀಡಿಲ್ಲ. ಹೀಗಾಗಿ ಇಲ್ಲಿಯೂ ದೊಡ್ಡ ಮಟ್ಟದ ಸುಧಾರಣೆ ಆಗಬೇಕಿದೆ.