Advertisement

Press distributor’s day: ಮಳೆ ಇರಲಿ, ಚಳಿ ಇರಲಿ… ಇವರ ಸೇವೆ ಮಾತ್ರ ನಿಲ್ಲದು

09:46 PM Sep 03, 2023 | Team Udayavani |

ಮುಂಜಾನೆ ಎದ್ದ ಕೂಡಲೇ ಕಾಫಿ, ಟೀ ಹೀರುವ ಹೊತ್ತಿಗೆ ಸರಿಯಾಗಿ ಕೈಯಲ್ಲಿ ಪತ್ರಿಕೆ ಹಿಡಿದು ಸುದ್ದಿಗಳನ್ನು ಓದುವುದೇ ಒಂದು ಗಮ್ಮತ್ತು. ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿಗಳನ್ನು ಇಣುಕಿ ನೋಡಿದ್ದರೂ ಪೂರ್ಣಪ್ರಮಾಣದ ಸುದ್ದಿಯ ಮೇಲೊಮ್ಮೆ ಕಣ್ಣಾಡಿಸಿದರಷ್ಟೇ ತೃಪ್ತಿ.

Advertisement

ಮನೆಗೆ ಪತ್ರಿಕೆ ಬರುವುದು ಕೊಂಚ ತಡವಾದರೂ ಕೆಲವೊಮ್ಮೆ ಕಸಿವಿಸಿಯಾಗುತ್ತದೆ. ಈ ಪೇಪರ್‌ನವ್ರು ಯಾಕಿನ್ನೂ ಬಂದಿಲ್ಲ? ಎಂದು ಗುನುಗಿಕೊಳ್ಳುತ್ತಾ ಕಾಯುವವರಿದ್ದೀರಿ. ಮನದ ಮಾತು ಕೇಳಿಸಿಕೊಂಡವರಂತೆ ಛಂಗನೇ ಪ್ರತ್ಯಕ್ಷವಾಗುವ ವಿತರಕರು, ಸಕಾಲಕ್ಕೆ ಪತ್ರಿಕೆ ತಲುಪಿಸಲು ಪಡುವ ಕಷ್ಟ ಅಷ್ಟಿಷ್ಟಲ್ಲ.

ಪತ್ರಿಕೆ ಮುದ್ರಣಗೊಂಡು ಪ್ಯಾಕ್‌ ಆಗಿ ಹೊರಬರುವ ವೇಳೆಗೆ ಮಧ್ಯರಾತ್ರಿ ಕಳೆದಿರುತ್ತದೆ. ನಸುಕಿನ ವೇಳೆಯಲ್ಲಿ ಸರಿಯಾಗಿ ಹಾಜರಾಗಿ ಅವುಗಳನ್ನು ಒಪ್ಪ ಮಾಡಿಕೊಳ್ಳುತ್ತಾರೆ. ಹೀಗೆ ಬೆಳ್ಳಂ ಬೆಳಗ್ಗೆ ಜನರ ಕೈಗೆ ಪತ್ರಿಕೆ ತಲುಪಿಸುವ ವಿತರಕರ ಗೋಳು ಮಾತ್ರ ಹೇಳತೀರದು.

ಕರ್ನಾಟಕ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪತ್ರಿಕೆಗಳಿಗೆ ಸುಮಾರು 183 ವರ್ಷಗಳ ಇತಿಹಾಸವಿದ್ದರೆ, ಪತ್ರಿಕಾ ವಿತರಕರಿಗೆ 180 ವರ್ಷಗಳ ಚರಿತ್ರೆ ಇದೆ. ರಾಜ್ಯದಲ್ಲಿ ಸುಮಾರು 70 ಸಾವಿರ ಮಂದಿ ಪತ್ರಿಕಾ ವಿತರಕರಿದ್ದು, 3.5 ಲಕ್ಷ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ಹೀಗೆ ಅನೇಕ ದಶಕಗಳಿಂದ ಅಸಂಘಟಿತ ವಲಯದಲ್ಲೇ ಶ್ರಮಿಸುತ್ತಿರುವ ಪತ್ರಿಕಾ ವಿತರಕರಿಗೂ ಒಂದು ದಿನಾಚರಣೆ ಇದೆ.

ಸೆ.4 ರ ಸೋಮವಾರದಂದು ತುಮಕೂರಿನಲ್ಲಿ ರಾಜ್ಯ ಮಟ್ಟದ ಪತ್ರಿಕಾ ವಿತರಕರ ದಿನ ಆಚರಣೆಯಾಗಲಿದೆ. ವರ್ಷವಿಡೀ ಅನವರತ ದುಡಿಯುವ ಈ ವರ್ಗದ ಜನರಿಗಾಗಿ ಇದೊಂದು ದಿನ ಸಂಭ್ರಮಿಸಿದರೆ ಸಾಲದು. ಇವರ ಮುಂದಿರುವ ಸವಾಲು, ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳು ಆಗಬೇಕಿವೆ. ಸರ್ಕಾರದ ಮಟ್ಟದಲ್ಲಿ ಕಿಂಚಿತ್‌ ನೆರವಿನ ನಿರೀಕ್ಷೆಯೂ ಇದೆ.
ಮಳೆ ಇರಲಿ, ಚಳಿ ಇರಲಿ ವಿತರಣೆ ನಿಲ್ಲಲ್ಲ

Advertisement

ಪತ್ರಿಕಾಲಯ ಹಾಗೂ ಓದುಗರ ನಡುವಿನ ಸಂಪರ್ಕ ಸೇತುವೆಯಾಗಿರುವ ವಿತರಕರು ಜಂಜಡಗಳ ನಡುವೆಯೇ ವೃತ್ತಿ ಮತ್ತು ಬದುಕನ್ನು ಸಾಗಿಸಬೇಕು. ಬೆಳಗಿನ ಝಾವವೇ ಜನರ ಕೈಯಲ್ಲಿ ಪತ್ರಿಕೆ ಇರಬೇಕೆಂದರೆ ಅಷ್ಟು ಮುಂಚೆಯೇ ನಿದ್ದೆಗೆಟ್ಟು ಚಳಿ ಇರಲಿ, ಮಳೆ ಇರಲಿ ಕಾರ್ಯಕ್ಷೇತ್ರಕ್ಕೆ ಕಾಲಿಡಬೇಕು. ಓದಗರೇ ಪತ್ರಿಕೆಗಳ ಜೀವನಾಡಿಯಾದ್ದರಿಂದ ಅವರ ಸಮಯಕ್ಕೆ ಸರಿಯಾಗಿ ಸುದ್ದಿ ತಲುಪಿಸುವ ಹೊಣೆಗಾರಿಕೆ ಇರುವುದರಿಂದ ಸಮಯ ಪಾಲನೆಯೂ ಅಷ್ಟೇ ಮುಖ್ಯ. ಅದರಲ್ಲಿ ಕೊಂಚ ವಿಳಂಬವಾದರೂ ಪತ್ರಕರ್ತರು, ಮುದ್ರಕರು ಸೇರಿದಂತೆ ನೂರಾರು ಜನರ ಇಡೀ ದಿನದ ಶ್ರಮ ವ್ಯರ್ಥವಾಗುತ್ತದೆ. ಎರಡೂ ಕಡೆಗೆ ನ್ಯಾಯ ಸಲ್ಲಿಸುವ ಜವಾಬ್ದಾರಿ ವಿತರಕರ ಮೇಲಿರುತ್ತದೆ.

ಕೋವಿಡ್‌ ವೇಳೆ ಸಿಗದ ಸ್ಪಂದನೆ
ಕೋವಿಡ್‌ ಸಂದರ್ಭದಲ್ಲಿ ಹಲವಾರು ಕ್ಷೇತ್ರಗಳ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ “ಹೈಬ್ರಿಡ್‌’ ಅವಕಾಶಗಳಿದ್ದವು. ಆದರೆ, ಪತ್ರಿಕಾ ವಿತರಕರಿಗೆ ಮಾತ್ರ ಇಂತಹ ಯಾವ ಸದಾವಕಾಶವೂ ಇರಲಿಲ್ಲ. ಅನೇಕರು ಮುಟ್ಟಿ ತಯಾರಿಸಿದ ಪತ್ರಿಕೆಗಳಿಂದಲೂ ಕೊರೋನಾ ವೈರಾಣು ಸೋಂಕು ತಗಲುತ್ತದೆ ಎಂಬ ಅಪಪ್ರಚಾರ ಹಾಗೂ ಅಪನಂಬಿಕೆಯಿಂದ ಪತ್ರಿಕೆಗಳನ್ನೇ ಬೇಡ ಎನ್ನುವ ಮಟ್ಟಕ್ಕೆ ಜನರು ಆತಂಕಗೊಂಡಿದ್ದರು. ಈ ವೇಳೆ ಪತ್ರಿಕಾ ಮುದ್ರಣದ ಪ್ರಕ್ರಿಯೆಯು ಎಷ್ಟು ಸುರಕ್ಷಿತವಾಗಿ ಆಗುತ್ತದೆ ಎಂಬುದನ್ನು ಮನದಟ್ಟು ಮಾಡಿಸಿ, ಅರೋಗ್ಯ ಕಾಳಜಿ ವಹಿಸಿದ್ದು ಇದೇ ವಿತರಕರು. ಆದರೆ, ಇಷ್ಟೆಲ್ಲಾ ಕಷ್ಟಪಟ್ಟ ಸುಮಾರು 120 ಮಂದಿ ಪತ್ರಿಕಾ ವಿತರಕರು ಕೊರೋನಾ ಸೋಂಕಿನಿಂದ ಮೃತಪಟ್ಟ ದುರಂತಗಳೂ ನಡೆದು ಹೋದವು. ಕೊರೋನಾ ಸೇನಾನಿಗಳು ಎಂಬ ಪಟ್ಟ ಬಿಟ್ಟು ಸರ್ಕಾರದಿಂದ ಬೇರಾವ ನೆರವೂ ಸಿಗಲಿಲ್ಲ ಎಂಬ ದುಗುಡ ಇನ್ನೂ ಮಾಸಿಲ್ಲ.

ಕ್ಷೇಮನಿಧಿಗಿಲ್ಲ ಬಿಡುಗಡೆ ಭಾಗ್ಯ
2018 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಪತ್ರಿಕಾ ವಿತರಕರಿಗಾಗಿ 2 ಕೋಟಿ ರೂ.ಗಳ ಕ್ಷೇಮನಿಧಿ ಮೀಸಲಿಡುವ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲು ಎಂಬಂತೆ ಕರ್ನಾಟಕದಲ್ಲಿ ಪತ್ರಿಕಾ ವಿತರಕರಿಗೆ ಕ್ಷೇಮನಿಧಿ ಸ್ಥಾಪನೆ ಆಯಿತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಏನೋ ಕ್ಷೇಮನಿಧಿಗೆ ಇದುವರೆಗೆ ಬಿಡುಗಡೆ ಭಾಗ್ಯವೇ ದೊರೆತಿಲ್ಲ. ಈಗಲಾದರೂ ಪ್ರತಿ ಜಿಲ್ಲೆಗೆ 1 ಕೋಟಿ ರೂ. ಕ್ಷೇಮನಿಧಿ ಮೀಸಲಿಟ್ಟು, ಮೊದಲ ಹಂತವಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಇಟ್ಟಿದೆ. ಸದ್ಯಕ್ಕೆ “ನಮಗೆ ನಾವೇ ಆಗಬೇಕು” ಎನ್ನುವ ಘೋಷವಾಕ್ಯದ ಮೂಲಕ ದೇಣಿಗೆ ಮೂಲಕ ಪತ್ರಿಕಾ ವಿತರಕರು ಸಂಕಷ್ಟ ಪರಿಹಾರಕ್ಕೆ ಉಪಾಯ ಕಂಡುಕೊಂಡಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಬೊಗಸೆಯಷ್ಟು ಭರವಸೆ ಇಟ್ಟು ಕಾಯುತ್ತಿದೆ.

ಸ್ವಿಗ್ಗಿ, ಜೋಮಾಟೋದಂತೆ ನಮ್ಮ ಮೇಲೂ ಕೃಪೆ ತೋರಿ
ವಿಧಾನಸಭಾ ಚುನಾವಣೆ ವೇಳೆ ಸಂಸದ ರಾಹುಲ್‌ ಗಾಂಧಿ ಅವರು ಬೆಂಗಳೂರಿನಲ್ಲಿ ಸ್ವಿಗ್ಗಿ, ಜೋಮಾಟೋ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ಅದರ ಪರಿಣಾಮವಾಗಿ ಬಜೆಟ್‌ನಲ್ಲಿ ಅವರ ನೆರವಿಗೆ ಹಣವನ್ನೂ ಸರ್ಕಾರ ಮೀಸಲಿಟ್ಟಿದೆ. ಈ ಕಾರ್ಮಿಕರಿಗಿಂತ ಸಂಕಷ್ಟದ ಸ್ಥಿತಿಯಲ್ಲಿರುವ ಪತ್ರಿಕಾ ವಿತರಕರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು. ಅಪಘಾತದ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚ ಭರಿಸಬೇಕು ಹಾಗೂ ಮೃತಪಟ್ಟ ವಿತರಕರ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂ.ಗಳ ಪರಿಹಾರವನ್ನಾದರೂ ನೀಡಬೇಕು ಎಂಬ ಮನವಿಯನ್ನು ಸರ್ಕಾರದ ಮುಂದಿಟ್ಟಿದೆ. ಬೆಂಗಳೂರಿನಲ್ಲಿ ಒಕ್ಕೂಟದ ಕಚೇರಿ ಸ್ಥಾಪಿಸಲು ನಿವೇಶನ ಹಾಗೂ ಬೀಜನಿಧಿ ನೀಡುವ ಮೂಲಕ ಸಂಘಟನೆಗೆ ಬಲ ನೀಡಬೇಕೆಂದು ಕೋರಿದೆ.

ಪತ್ರಿಕಾ ವಿತರಕರ ಬೇಡಿಕೆಗಳು
* ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟಕ್ಕೆ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ನಿವೇಶನ ಹಾಗೂ ಬೀಜನಿಧಿ ಒದಗಿಸಬೇಕು
* ಇ-ಶ್ರಮ್‌ ಯೋಜನೆಯಡಿ ಸಿಗುವ ಎಲ್ಲ ಸೌಲಭ್ಯಗಳನ್ನೂ ಪತ್ರಿಕಾ ವಿತರಕರಿಗೆ ನೀಡುವುದು
* ಪ್ರತಿ ಜಿಲ್ಲೆಗೆ 1 ಕೋಟಿ ರೂ. ಕ್ಷೇಮನಿಧಿ ಮೀಸಲಿಟ್ಟು, ಮೊದಲ ಹಂತವಾಗಿ 10 ಕೋಟಿ ರೂ. ಬಿಡುಗಡೆ ಮಾಡಬೇಕು
* ಅಪಘಾತದ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚ ಭರಿಸಬೇಕು, ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಕೊಡಬೇಕು.
* ರಾಜ್ಯೋತ್ಸವ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಪತ್ರಿಕಾ ವಿತರಕರನ್ನೂ ಪರಿಗಣಿಸಬೇಕು
* ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಒಕ್ಕೂಟದ ಪ್ರತಿನಿಧಿಯೊಬ್ಬರಿಗೆ ಅವಕಾಶ ಕಲ್ಪಿಸಬೇಕು

ಸ್ವಿಗ್ಗಿ, ಜೋಮಾಟೋದಂತೆ ಪತ್ರಿಕಾ ವಿತರಕರೂ ಅಸಂಘಟಿತ ವಲಯದ ಕಾರ್ಮಿಕರಾಗಿದ್ದೇವೆ. ಅವರಿಗೆ ಸಿಗುವ ಕನಿಷ್ಠ ಸವಲತ್ತೂ ನಮಗಿಲ್ಲ. ಪ್ರತಿ ಜಿಲ್ಲೆಗೆ ಕನಿಷ್ಠ 1 ಕೋಟಿ ರೂ.ಗಳನ್ನು ಪತ್ರಿಕಾ ವಿತರಕರ ಕ್ಷೇಮನಿಧಿಯಾಗಿ ಮೀಸಲಿಡಬೇಕು. ಅಪಘಾತವಾದರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಮೃತಪಟ್ಟರೆ 5 ಲಕ್ಷ ರೂ.ಗಳ ಪರಿಹಾರವನ್ನು ಕುಟುಂಬಸ್ಥರಿಗೆ ನೀಡಬೇಕು.
ಕೆ. ಶಂಭುಲಿಂಗ, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ

ಸರ್ಕಾರ ನಮ್ಮನ್ನು ಗುರುತಿಸುವ ನಿಟ್ಟಿನಲ್ಲಿ ಒಕ್ಕೂಟ ಒಗ್ಗಟ್ಟಾಗಬೇಕು. ಕ್ಷೇಮನಿಧಿ ಪಡೆಯಲು ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಒಕ್ಕೂಟ ಒದಗಿಸಬೇಕು. ನಸುಕಿನಲ್ಲಿ ನಿದ್ದೆಗೆಟ್ಟು ವಾಹನ ಚಲಾಯಿಸಿಕೊಂಡು ಧಾವಂತದಲ್ಲಿ ಪತ್ರಿಕೆ ತಲುಪಿಸುತ್ತೇವೆ. ಈ ವೇಳೆ ಅನಾಹುತಗಳೂ ಸಂಭವಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ನಮ್ಮ ನೆರವಿಗಿದೆ ಎಂಬ ಧೈರ್ಯ ನಮಗೆ ಸಿಗಬೇಕು.
ಎಂ.ಪ್ರಕಾಶ್‌, ಪತ್ರಿಕಾ ವಿತರಕರು

Advertisement

Udayavani is now on Telegram. Click here to join our channel and stay updated with the latest news.

Next