ಬೆಂಗಳೂರು: ಮತದಾನದ ಮುನ್ನಾ ದಿನವಾದ ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಮತದಾರರ ಮನವೊಲಿಕೆಯ ಅಂತಿಮ ಕಸರತ್ತು ನಡೆಸಿದರು. ಗುರುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ನಂತರ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿದ್ದು ನಾಯಕರ ದಂಡು ಖಾಲಿಯಾಗುತ್ತಲೇ ಅಭ್ಯರ್ಥಿಗಳು ಗೆಲ್ಲುವ “ಕಾರ್ಯ ತಂತ್ರ’ಗಳ ನಡುವೆ ಶುಕ್ರವಾರ ಇಡೀ ದಿನ ಕ್ಷೇತ್ರದ ವಿವಿಧೆಡೆ ಮತಯಾಚನೆ ಮಾಡಿದರು.
ಮತ್ತೂಂದೆಡೆ ಮೂರೂ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರ ಸಹ ತಮ್ಮ ಅಭ್ಯರ್ಥಿಗಳ ಪರ ಮತಪತ್ರ ಹಂಚಿಕೆ ಮೂಲಕ ಮತ ನೀಡುವಂತೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಿದ್ಧತೆ: ಮತ್ತೂಂದೆಡೆ ನಗರದ ಪೊಲೀಸ್ ಹಾಗೂ ಜಿಲ್ಲಾಡಳಿತ ಮತದಾನಕ್ಕೆ ಅಗತ್ಯವಾದ ಸಿದ್ಧತಾ ಕಾರ್ಯಗಳಲ್ಲಿ ತೊಡಗಿತ್ತು. ಮತಗಟ್ಟೆಗಳಲ್ಲಿ ಮತದಾನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಅಧಿಕಾರಿಗಳು ನಿರತರಾಗಿದ್ದರು. ಮತಗಟೆ ಸಿಬ್ಬಂದಿ ಶುಕ್ರವಾರ ರಾತ್ರಿಯೇ ಮತಗಟ್ಟೆಗಳಿಗೆ ಆಗಮಿಸಿದ್ದು, ಪೊಲೀಸ್ ಹಾಗೂ ಭದ್ರತಾ ಪಡೆ ಸಿಬ್ಬಂದಿ ಎಲ್ಲ ಮತಗಟ್ಟೆಗಳಿಗೆ ರವಾನೆಯಾಗಿತ್ತು. ಶನಿವಾರ ಬೆಳಗ್ಗೆ 7 ರಿಂದ ಸಂಜೆ 6 ರವರೆಗೂ ಮತದಾನ ನಡೆಯಲಿದ್ದು 26 ಕ್ಷೇತ್ರಗಳಲ್ಲಿ 417 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯ ನಿರ್ಧಾರವಾಗಲಿದೆ.