ಬೆಂಗಳೂರು: 71ನೇ ಸ್ವಾತಂತ್ರ್ಯೋತ್ಸವ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷಗಳಾದ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು (ಆ.15) ತೆರೆ ಬೀಳಲಿದೆ. ಕಡೆಯ ದಿನ ಸುಮಾರು ಒಂದು ಲಕ್ಷಕ್ಕೂ ಅಧಿಕ ವೀಕ್ಷಕರು ಲಾಲ್‌ಬಾಗ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 150 ಪೊಲೀಸ್ ಸಿಬ್ಬಂದಿ ಮತ್ತು 75ಕ್ಕೂ ಅಧಿಕ ತೋಟಗಾರಿಕೆ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಭದ್ರತೆಗೆ ನಿಯೋಜಿಸಲಾಗಿದೆ. ಆ.14ರಂದು 34 ಸಾವಿರ ವಯಸ್ಕರು, 5500 ಮಕ್ಕಳು ಮತ್ತು 1138 ಪಾಸುದಾರರು ಸೇರಿ ಒಟ್ಟು 40638 ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದು, ಸುಮಾರು 17,38,800 ರೂ. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್ ತಿಳಿಸಿದ್ದಾರೆ.
ಕವಿಗೋಷ್ಠಿ: ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದು 50 ವರ್ಷ ಆಗಿರುವ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಸುಮಾರು 18ಕ್ಕೂ ಹೆಚ್ಚು ಕವಿಗಳು ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಹಲವು ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.
ಇದಕ್ಕೂ ಮುನ್ನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, “ನನ್ನ ಹೆಗಲ ಮೇಲೆ ಕಂಬಳಿ ಇತ್ತು. ಕೈಯಲ್ಲಿ ಊರುಗೋಲು ಇತ್ತು. ಈಗ ನನ್ನ ಹೆಗಲ ಮೇಲೆ ಹೆಣ ಹೊರಿಸಿದ್ದವರು ಯಾರು? ಕೈಗೆ ಕೊಡಲಿ ಇಟ್ಟವರು ಯಾರು?’ ಎಂಬ ಮಹಾಕವಿಯೊಬ್ಬರ ಕಾವ್ಯದ ಸಾಲು ನೆನಪಾಗುತ್ತಿವೆ.
ಕೋಮು ವೈಷಮ್ಯದಿಂದ ಸಮಾಜದ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ದೇಶ ಪ್ರೇಮದ ಹೆಸರಲ್ಲಿ ಸ್ವಾತಂತ್ರ್ಯ ಹರಣ ಮಾಡಿ ಶೋಷಣೆ ಮಾಡಲಾಗುತ್ತಿದೆ. ನಾವೇನು ತಿನ್ನಬೇಕು ಎನ್ನುವ ಕಟ್ಟುಪಾಡು ವಿಧಿಸುವುದು ಹಾಗೂ ಎದುರು ಮಾತನಾಡಿದರೆ “ದೇಶ ದ್ರೋಹಿ’ ಪಟ್ಟ ಕಟ್ಟುವುದು, ಮನುಷ್ಯ ಮನುಷ್ಯನ ನಡುವೆ ವಿಷ ಬಿತ್ತುವ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೋಷ್ಠಿ ಉದ್ಘಾಟಿಸಿ ಮಾತನಾಡಿದ ದಲಿತ ಕವಿ ಡಾ. ಸಿದ್ದಲಿಂಗಯ್ಯ, “ಲಾಲ್‌ಬಾಗ್‌ನಂತೆ ಹಸಿರು ಹೊದ್ದಿರುವ ಕಬ್ಬನ್ ಉದ್ಯಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿ, ಪಾರ್ಕ್ ಮೂಲಕವೇ ರಸ್ತೆ ವ್ಯವಸ್ಥೆ ಕಲ್ಪಿಸಿ ಹಾಳು ಮಾಡಲಾಗುತ್ತಿದೆ. ಇದು ಪ್ರಕೃತಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ದೊಡ್ಡರಂಗೇಗೌಡ ಸೇರಿದಂತೆ ಹಲವರು ಕವಿಗಳು ಭಾಗವಹಿಸಿದ್ದರು.