Advertisement

ಇಂದು ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

10:47 PM Oct 16, 2019 | Lakshmi GovindaRaju |

ಮಡಿಕೇರಿ: ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ 12.59 ಗಂಟೆಗೆ ಜರುಗುವ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಸಂಭವಿಸಲಿದೆ ಎಂದು ಪ್ರಧಾನ ಅರ್ಚಕ ನಾರಾಯಾಣಾಚರ್‌ ತಿಳಿಸಿದ್ದಾರೆ.

Advertisement

ಪವಿತ್ರ ತೀರ್ಥೋದ್ಭವ ಸಂಬಂಧ ತಲಕಾವೇರಿ ಕೊಳದ ಬಳಿ ಭಕ್ತಾದಿಗಳ ಅನುಕೂಲಕ್ಕಾಗಿ ಅಗತ್ಯ ಬ್ಯಾರಿಕೇಡ್‌ಗಳ ನಿರ್ಮಾಣ, ವಿದ್ಯುತ್‌ ದೀಪ ಅಲಂಕಾರ ಮಾಡಲಾಗಿದೆ. ಈ ಬಾರಿ ಪ್ಲಾಸ್ಟಿಕ್‌ ಬಾಟಲಿ ಹಾಗೂ ಪ್ಲಾಸ್ಟಿಕ್‌ ಬಿಂದಿಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ತಾಮ್ರದ ಬಿಂದಿಗೆ ಅಥವಾ ಸ್ಟೀಲ್‌ ಬಿಂದಿಗೆಯಲ್ಲಿ ಪವಿತ್ರ ತೀರ್ಥ ಪಡೆಯಬಹುದಾಗಿದೆ.

ಪವಿತ್ರ ತೀರ್ಥೋದ್ಭವ ವೀಕ್ಷಣೆಗಾಗಿ ತಲಕಾವೇರಿ ಕ್ಷೇತ್ರದಲ್ಲಿ ಎರಡು ಬೃಹತ್‌ ಎಲ್‌ಇಡಿ ಪರದೆ ಹಾಕಲಾಗಿದೆ. ಪೊಲೀಸ್‌ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಅ.16ರಿಂದ 19ರ ವರೆಗೆ ಭಾಗಮಂಡಲ ಠಾಣಾ ಸರಹದ್ದಿನ 20 ಕಿ.ಮಿ.ವ್ಯಾಪ್ತಿಯಲ್ಲಿ ಇರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್‌, ಹೋಟೆಲ್‌ ಮತ್ತು ಕ್ಲಬ್‌ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.

ಭಾಗಮಂಡಲದಿಂದ ತಲಕಾವೇರಿವರೆಗೆ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿವೆ. ಹಾಗೆಯೆ, ಮಡಿಕೇರಿಯಿಂದ ಭಾಗಮಂಡಲದವರೆಗೆ 10 ರಿಂದ 20 ಬಸ್‌ ಕಲ್ಪಿಸಲಾಗಿದೆ. ಜನದಟ್ಟಣೆ ನೋಡಿಕೊಂಡು ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಾದ ಗೀತಾ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next