Advertisement

ರೋಹಿತ್‌-ಪೆರೆರ ಪಡೆಗಳಿಗೆ ಏಕದಿನ ಸವಾಲು

06:00 AM Dec 10, 2017 | |

ಧರ್ಮಶಾಲಾ: ಭಾರತ-ಶ್ರೀಲಂಕಾ ನಡುವಿನ “ಟೆಸ್ಟ್‌ ಸಮಯ’ ಮುಗಿದಿದೆ. ಟೀಮ್‌ ಇಂಡಿಯಾ ಸರಣಿ ಗೆದ್ದರೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫ‌ಲವಾಯಿತೆಂದೇ ಹೇಳಬೇಕು. ಕೋಟ್ಲಾ ಟೆಸ್ಟ್‌ ಪಂದ್ಯ ಉಳಿಸಿಕೊಂಡ ಲಂಕಾ “ನೈತಿಕ ಗೆಲುವು’ ಸಾಧಿಸಿದ್ದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ರವಿವಾರದಿಂದ ಆರಂಭವಾಗಲಿರುವ ಇತ್ತಂಡಗಳ ನಡುವಿನ ಏಕದಿನ ಸರಣಿ ಹೆಚ್ಚು ಮಹತ್ವ ಪಡೆಯಲಿದೆ.

Advertisement

ಮೊದಲ ಪಂದ್ಯದ ಆತಿಥ್ಯ ಪ್ರಕೃತಿ ಮನೋಹರ ತಾಣವಾದ ಧರ್ಮಶಾಲಾಕ್ಕೆ ಲಭಿಸಿದೆ. ಇಬ್ಬನಿ, ಮಂಜು, ತೇವ, ಚಳಿಗಾಳಿ ಮೊದಲಾದ ಕಾರಣಗಳಿಂದ ಈ ಡೇ-ನೈಟ್‌ ಪಂದ್ಯ ಮಧ್ಯಾಹ್ನ 11.30ಕ್ಕೆ ಆರಂಭವಾಗಲಿದೆ. ಭಾರತದಲ್ಲಿ ಏಕದಿನ ಪಂದ್ಯವೊಂದು ಈ ವೇಳೆಗೆ ಶುರುವಾಗುವುದು ಇದೇ ಮೊದಲು. “ಎಚ್‌.ಪಿ.ಸಿ.ಎ. ಸ್ಟೆಡಿಯಂ’ನ ಪಿಚ್‌ ಸ್ವಿಂಗ್‌ ಬೌಲಿಂಗಿಗೆ ಹೆಚ್ಚು ಅನುಕೂಲವಾದ್ದರಿಂದ ಟಾಸ್‌ ಗೆಲುವು ನಿರ್ಣಾಯಕ ಎನಿಸಲಿದೆ.

ಭಾರತದ ಮುಂದೆ 2 ಗುರಿ
ಈ ಸರಣಿಯಲ್ಲಿ ಭಾರತದ ಮುಂದೆ ಎರಡು ಪ್ರಮುಖ ಗುರಿಗಳಿವೆ. ಮೊದಲನೆಯದು, ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸುವುದು. ಎರಡನೆಯದು, ಶ್ರೀಲಂಕಾಕ್ಕೆ ಸತತ 3 ಏಕದಿನ ಸರಣಿಗಳಲ್ಲಿ ವೈಟ್‌ವಾಶ್‌ ಮಾಡುವುದು.

ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ 120 ಅಂಕಗಳನ್ನು ಹೊಂದಿವೆ. ದಶಮಾಂಶ ಲೆಕ್ಕಾಚಾರದಲ್ಲಿ ಮುಂದಿರುವ ಕಾರಣ ಆಫ್ರಿಕಾಕ್ಕೆ ಅಗ್ರಸ್ಥಾನ ಒಲಿದಿದೆ. ಭಾರತ 2ನೇ ಸ್ಥಾನದಲ್ಲಿದೆ. ಧರ್ಮಶಾಲಾ ಪಂದ್ಯ ಗೆದ್ದರೆ ಭಾರತ ನಂ.1 ತಂಡವಾಗಿ ಮೂಡಿಬರಲಿದೆ. ಆದರೆ ಇದೇ ಸ್ಥಾನ ಕಾಯ್ದುಕೊಳ್ಳಬೇಕಾದರೆ ಉಳಿದೆರಡೂ ಪಂದ್ಯಗಳಲ್ಲಿ ಲಂಕೆಯನ್ನು ಮಣಿಸಬೇಕಾದುದು ಅಗತ್ಯ.

ಇನ್ನು ವೈಟ್‌ವಾಶ್‌ ವಿಚಾರ. ಹಿಂದಿನೆರಡೂ ಸರಣಿಗಳಲ್ಲಿ ಟೀಮ್‌ ಇಂಡಿಯಾ ಲಂಕಾ ವಿರುದ್ಧ 5-0 ಕ್ಲೀನ್‌ಸಿÌàಪ್‌ ಸಾಧಿಸಿತ್ತು. 2014-15ರ ತವರಿನ ಸರಣಿಯಲ್ಲಿ ಹಾಗೂ ಈ ವರ್ಷ ಲಂಕಾ ನೆಲದಲ್ಲಿ ಭಾರತ 5-0 ಪ್ರಚಂಡ ಪರಾಕ್ರಮ ಮೆರೆದಿತ್ತು. ಈ ಸಲ 5 ಪಂದ್ಯಗಳಿಲ್ಲ. ಆದರೆ ಮೂರನ್ನೂ ಗೆದ್ದರೆ “ವೈಟ್‌ವಾಶ್‌ ಹ್ಯಾಟ್ರಿಕ್‌’ಗೇನೂ ಮೋಸವಿಲ್ಲ! ಅಂದಹಾಗೆ, ಪಾಕಿಸ್ಥಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದೆರಡು ದ್ವಿಪಕ್ಷೀಯ ಸರಣಿಗಳಲ್ಲೂ ಲಂಕಾ 5-0 ಸಂಕಟಕ್ಕೆ ಸಿಲುಕಿತ್ತು. ಅಂದರೆ ಒಂದೇ ವರ್ಷದಲ್ಲಿ 3 ಸಲ 5-0 ಅಂತರದ ಸೋಲನುಭವಿಸಿದ ಸಂಕಟ ಶ್ರೀಲಂಕಾದ್ದು. ಹೀಗಾಗಿ ನಾಯಕತ್ವದ ಅನುಭವ ಹೊಂದಿಲ್ಲದ ತಿಸರ ಪೆರೆರ ಪಾಲಿಗೆ ಈ ಸರಣಿ ನಿಜಕ್ಕೂ ಅಗ್ನಿಪರೀಕ್ಷೆ.

Advertisement

ಕೊಹ್ಲಿ ಗೈರು ಹಿನ್ನಡೆಯೇ?
ಟೆಸ್ಟ್‌ ತಂಡಗಳಿಗೆ ಹೋಲಿಸಿದರೆ ಎರಡೂ ಕಡೆ ಸಾಕಷ್ಟು ಬದಲಾವಣೆ ಗೋಚರಿಸುತ್ತದೆ. ಭಾರತಕ್ಕೆ ಕಾಯಂ ನಾಯಕ ವಿರಾಟ್‌ ಕೊಹ್ಲಿ ಸೇವೆ ಲಭಿಸುತ್ತಿಲ್ಲ. ಅವರು ವಿಶ್ರಾಂತಿಗೆ ತೆರಳಿದ್ದರಿಂದ ರೋಹಿತ್‌ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್‌ ಸರಣಿಯಲ್ಲಿ ಹ್ಯಾಟ್ರಿಕ್‌ ಶತಕ, ಸತತ 2 ದ್ವಿಶತಕ ಸಹಿತ 610 ರನ್‌ ಪೇರಿಸಿ ಸಿಂಹಳೀಯರಿಗೆ ಸಿಂಹಸ್ವಪ್ನರಾಗಿದ್ದ ಕೊಹ್ಲಿ ಗೈರು ಭಾರತಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯೆಂದೇ ಹೇಳಬೇಕು. ಅಜಿಂಕ್ಯ ರಹಾನೆ ಫಾರ್ಮ್ ಕೂಡ ಕೈಕೊಟ್ಟಿರುವುದು ಆತಂಕದ ಸಂಗತಿ. ಟೆಸ್ಟ್‌ ಸರಣಿಯ 5 ಇನ್ನಿಂಗ್ಸ್‌ಗಳಲ್ಲಿ ರಹಾನೆ ಗಳಿಸಿದ್ದು 17 ರನ್‌ ಮಾತ್ರ!

ವಿರಾಟ್‌ ಕೊಹ್ಲಿ ಗೈರಲ್ಲಿ ರೋಹಿತ್‌, ಧವನ್‌, ಧೋನಿ, ಕಾರ್ತಿಕ್‌, ಪಾಂಡೆ ಮೊದಲಾದವರ ಮೇಲೆ ಹೆಚ್ಚಿನ ಬ್ಯಾಟಿಂಗ್‌ ಭಾರ ಬೀಳಲಿದೆ. ಯುವ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಕೂಡ ರೇಸ್‌ನಲ್ಲಿದ್ದಾರೆ. ಹಾರ್ಡ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ವಿಶ್ರಾಂತಿಯಿಂದ ಮರಳಿದ್ದು, ಹೆಚ್ಚಿನ ಜೋಶ್‌ ತೋರಬಹುದೆಂಬ ನಿರೀಕ್ಷೆ ಇದೆ. ರೋಹಿತ್‌-ಧವನ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ವನ್‌ಡೌನ್‌ನಲ್ಲಿ ರಹಾನೆ ಬರಬಹುದು.

ಬ್ಯಾಟಿಂಗಿಗೆ ಹೋಲಿಸಿದರೆ ಭಾರತದ ಬೌಲಿಂಗ್‌ ಹೆಚ್ಚು ವೈವಿಧ್ಯಮಯ ಎಂದೇ ಹೇಳಬಹುದು. ಭುವನೇಶ್ವರ್‌ ಮರಳಿದ್ದಾರೆ. ಬುಮ್ರಾ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದ ಸಡಗರದಲ್ಲಿದ್ದಾರೆ. ಪಂಜಾಬ್‌ನ ಮಧ್ಯಮ ವೇಗಿ ಸಿದ್ಧಾರ್ಥ ಕೌಲ್‌ ಪಾದಾರ್ಪಣೆಯ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಚಾಹಲ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಸ್ಪಿನ್‌ ದಾಳಿಯನ್ನು ಹರಿತಗೊಳಿಸಬಲ್ಲರು.

ಲಂಕಾ ಬ್ಯಾಟಿಂಗ್‌ ಓಕೆ
ಶ್ರೀಲಂಕಾ ತಂಡದಲ್ಲೂ ಸಾಕಷ್ಟು ಮಂದಿ ಏಕದಿನ ಸ್ಪೆಷಲಿಸ್ಟ್‌ಗಳಿದ್ದಾರೆ. ಎಲ್ಲರ ಸಂತಸಕ್ಕೆ ಪ್ರಮುಖ ಕಾರಣವೊಂದಿದೆ. ಅದೆಂದರೆ, ಭಾರತದೆದುರಿನ ಟೆಸ್ಟ್‌ ಸರಣಿಯನ್ನು 3-0 ವೈಟ್‌ವಾಶ್‌ ಮಾಡಿಸಿಕೊಳ್ಳದೆ, ಇದನ್ನು 1-0 ಅಂತರಕ್ಕೆ ಸೀಮಿತಗೊಳಿಸಿದ್ದು. ಹೀಗಾಗಿ ಏಕದಿನ ಸರಣಿಯಲ್ಲೂ ಭಾರತಕ್ಕೆ ಕಠಿನ ಸ್ಪರ್ಧೆಯೊಡ್ಡಬಹುದೆಂಬ ಆತ್ಮವಿಶ್ವಾಸ ಲಂಕಾ ತಂಡದಲ್ಲಿದೆ.

ಗಾಯಾಳಾಗಿದ್ದ ಕುಸಲ್‌ ಪೆರೆರ, ಅಸೇಲ ಗುಣರತ್ನ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ದಿಲ್ಲಿಯಲ್ಲಿ “ಫೈಟಿಂಗ್‌ ಸೆಂಚುರಿ’ ಹೊಡೆದ ಯುವ ಬ್ಯಾಟ್ಸ್‌ಮನ್‌ ಧನಂಜಯ ಡಿ’ಸಿಲ್ವ ಬ್ಯಾಟಿಂಗ್‌ ವಿಭಾಗದ ಆಧಾರಸ್ತಂಭವಾಗಿದ್ದಾರೆ. ತರಂಗ, ತಿರಿಮನ್ನೆ, ಮ್ಯಾಥ್ಯೂಸ್‌, ಡಿಕ್ವೆಲ್ಲ ಬ್ಯಾಟಿಂಗ್‌ ವಿಭಾಗದ ಪ್ರಮುಖರು.
ಆದರೆ ಲಂಕೆಯ ಬೌಲಿಂಗ್‌ ವಿಭಾಗ ಹೇಳಿಕೊಳ್ಳುವಷ್ಟು ಅಪಾಯಕಾರಿಯಲ್ಲ. ಇದರಿಂದ ಭಾರತಕ್ಕೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ.

ತಂಡಗಳು
ಭಾರತ:
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಸಿದ್ಧಾರ್ಥ ಕೌಲ್‌.

ಶ್ರೀಲಂಕಾ: ತಿಸರ ಪೆರೆರ (ನಾಯಕ), ಉಪುಲ್‌ ತರಂಗ, ದನುಷ್ಕ ಗುಣತಿಲಕ, ಲಹಿರು ತಿರಿಮನ್ನೆ, ನಿರೋಷನ್‌ ಡಿಕ್ವೆಲ್ಲ, ಚತುರಂಗ ಡಿ’ಸಿಲ್ವ, ಅಖೀಲ ಧನಂಜಯ, ಸುರಂಗ ಲಕ್ಮಲ್‌, ನುವಾನ್‌ ಪ್ರದೀಪ್‌, ಸದೀರ ಸಮರವಿಕ್ರಮ, ಧನಂಜಯ ಡಿ’ಸಿಲ್ವ, ದುಷ್ಮಂತ ಚಮೀರ, ಸಚಿತ ಪತಿರಣ, ಕುಸಲ್‌ ಪೆರೆರ.

ಆರಂಭ: ಮಧ್ಯಾಹ್ನ 11.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಸರಣಿಯಿಂದ ಹೊರಬಿದ್ದ
ಕೇದಾರ್‌ ಜಾಧವ್‌

ಏಕದಿನ ಸರಣಿಯ ಆರಂಭಕ್ಕೂ ಮೊದಲೇ ಭಾರತ ದೊಡ್ಡ ಆಘಾತವೊಂದಕ್ಕೆ ಸಿಲುಕಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ ಸ್ನಾಯು ಸೆಳೆತದಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಮೊದಲೇ ವಿರಾಟ್‌ ಕೊಹ್ಲಿ ಅನುಪಸ್ಥಿತಿ ಎದುರಿಸುತ್ತಿರುವ ಟೀಮ್‌ ಇಂಡಿಯಾಕ್ಕೆ ಜಾಧವ್‌ ಗೈರಿನಿಂದ ಬ್ಯಾಟಿಂಗ್‌ ವಿಭಾಗದಲ್ಲಿ ಹಿನ್ನಡೆ ಎದುರಾಗುವ ಸಾಧ್ಯತೆ ಇದೆ. ಜಾಧವ್‌ ಸ್ಥಾನಕ್ಕೆ ತಮಿಳುನಾಡಿನ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಇನ್ನೊಂದೆಡೆ ಶ್ರೀಲಂಕಾ ಕೂಡ ಇಂಥದೇ ಆಘಾತಕ್ಕೆ ಸಿಲುಕಿದ್ದು, ಧರ್ಮಶಾಲಾ ಪಂದ್ಯದಿಂದ ಧನಂಜಯ ಡಿ’ಸಿಲ್ವ ಹೊರಬಿದ್ದಿದ್ದಾರೆ. ದಿಲ್ಲಿ ಟೆಸ್ಟ್‌ ಪಂದ್ಯದ ವೇಳೆ ಸಂಭವಿಸಿದ ಗಾಯದಿಂದ ಅವರು ಪೂರ್ತಿ ಚೇತರಿಸಿಕೊಂಡಿಲ್ಲ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next