Advertisement

ಇಂದು ವೈಕುಂಠ ಏಕಾದಶಿ ಸಂಭ್ರಮ

12:10 PM Dec 29, 2017 | |

ಬೆಂಗಳೂರು: ಚಾಮರಾಜಪೇಟೆಯ ಇತಿಹಾಸ ಪ್ರಸಿದ್ಧ ಕೋಟೆ ಶ್ರೀವೆಂಕಟರಮಣ ದೇವಾಲಯ, ವೈಯಾಲಿಕಾವಲ್‌ನ ಶ್ರೀವೆಂಕಟರಮಣ ದೇವಾಲಯ ಸೇರಿದಂತೆ ಸಿಲಿಕಾನ್‌ ಸಿಟಿಯ ಹಲವು ದೇವಾಲಗಳಲ್ಲೀಗ ವೈಕುಂಠ ಏಕಾದಶಿಯ ಸಂಭ್ರಮ ಮೇಳೈಸಿದೆ. ವಿಶೇಷವೆಂದರೆ ರಾಜಾಜಿಗರದ ಇಸ್ಕಾನ್‌ ದೇವಾಲಯದಲ್ಲಿ ಅಲಂಕೃತ ಗೋವಿಂದನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Advertisement

ವೈಕುಂಠ ಏಕಾದಶಿಯ ದಿನದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಮಾತಿದ್ದು ಈ ಹಿನ್ನಲೆಯಲ್ಲಿ ಬೆಂಗಳೂರಿನ ದೇವಾಲಯಗಳಲ್ಲಿ ಭಕ್ತಿಯ ಸಮಾಗಮಕ್ಕೆ ಸಾಕ್ಷಿಯಾಗುತ್ತಿವೆ.ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದ್ದು ಈ  ಹಿನ್ನಲೆಯಲ್ಲಿ ಎಲ್ಲಾ ದೇವಾಲಯಗಳಲ್ಲಿ ಭಕ್ತರ ಸುಗಮ ದರ್ಶನಕ್ಕಾಗಿ ಎಲ್ಲಾ ರೀತಿಯ ಏರ್ಪಾಡುಗಳನ್ನು ದೇವಾಲಯಗಳ ಆಡಳಿತ ಮಂಡಳಿ ಮಾಡಿಕೊಂಡಿದೆ.

ಇಸ್ಕಾನ್‌ನಲ್ಲಿ ವಿಶೇಷ ಪೂಜೆ: ರಾಜಾಜಿನಗರದ ಇಸ್ಕಾನ್‌ ದೇವಾಲಯದಲ್ಲಿ ಮುಂಜಾನೆ 3 ರಿಂದ ರಾತ್ರಿ 11 ಗಂಟೆವರೆಗೂ ವಿಶೇಷ ಪೂಜೆಗಳು ನಡೆಯಲಿವೆ. ಮುಂಜಾನೆ 3 ಗಂಟೆಗೆ ಸುಪ್ರಭಾತ ಮತ್ತು ಮಹಾಮಂಗಳಾರತಿ ನಡೆಯಲಿದೆ. ಇದಾದ ಬಳಿಕ  ಶ್ರೀನಿವಾಸಗೋವಿಂದ ಅಭಿಷೇಕ, ಪ್ರಹ್ಲಾದ ನರಸಿಂಹ ಮಂದಿರದಲ್ಲಿ ಮಂಗಳಾರತಿ ಜರುಗಲಿದೆ.

ಬೆಳಗ್ಗೆ 5 ಗಂಟೆಗೆ ವೈಕುಂಠ ದ್ವಾರಕ್ಕೆ ಶ್ರೀಲಕ್ಷಿನಾರಾಯಣ ಅಲಂಕಾರದಲ್ಲಿ ಶ್ರೀರಾಧಾ ಕೃಷ್ಣ ಚಂದ್ರರ ಪಲ್ಲಕ್ಕಿ ಉತ್ಸವ, ವೈಕುಂಠ ದ್ವಾರ ಪೂಜೆ, ಕಲ್ಯಾಣೋತ್ಸವದ ಜತೆಗೆ ತೋಮಾಲೆ ಸೇವೆ, ಕದಲಿ ಫ‌ಲ ಪಾಯಸ ಸೇವೆ ಲಕ್ಷಾರ್ಚನೆ ಪೂಜೆ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯ ಲಿವೆ. ಈ ಬಾರಿ ವೈಕುಂಠ ದ್ವಾರದಲ್ಲಿ “ಶ್ರೀ ಗೋವಿಂದನೊಂದಿಗೆ ಸೆಲ್ಪಿ ‘ ಕೂಡ ವಿಶೇಷ ಆಕರ್ಷಣೆ ಯಾಗಿದೆ.

ವೈಕುಂಠ ಏಕಾದಶಿಯಂದು 10 ಟನ್‌ ಸಕ್ಕರೆ ಪೊಂಗಲ್‌ ಮತ್ತು 1 ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾ ದಿಗಳಿಗೆ ವಿತರಿಸಲಾಗುವುದು. ಬನ್ನೇರುಘಟ್ಟದ ನಿಸರ್ಗ ಬಡಾವಣೆಯಲ್ಲಿರುವ ಶ್ರೀ ಪ್ರಸನ್ನವರದ ವೆಂಕಟೇಶ್ವರ ದೇವಾಲಯ ಕೂಡ ಪರಮಪದ ವೈಕುಂಠ ಏಕಾದಶಿ ಮಹೋತ್ಸವಕ್ಕೆ ಸಕಲರೀತಿಯಲ್ಲಿ ಅಣಿಗೊಂಡಿದೆ. ಬೆಳಗ್ಗೆ ಯಿಂದ ಸಂಜೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement

ವಿಷ್ಣು ಸಹಸ್ರನಾಮ ಪಾರಾಯಣ: ಮಲ್ಲೇಶ್ವರಂ ನ ಶ್ರೀ ಪಾಂಡುರಂಗ ವಿಷ್ಣುಸಹಸ್ರಾನಾಮ ಮಂಡಳಿ ಕೂಡ ವೈಕುಂಠ ಏಕಾದಶಿಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮಲ್ಲೇಶ್ವರದ ಆಟದ ಮೈದಾನದ ಎದಿರು ಶ್ರೀನಿವಾಸ ಕಲ್ಯಾಣೋತ್ಸವ ದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶುಕ್ರವಾರ ಬೆಳಿಗ್ಗೆ 5 ಗಂಟೆಯಿಂದ ಶನಿವಾರ ಬೆಳಗ್ಗೆ 8 ಗಂಟೆಯವರೆಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ. ಈ ಅಖಂಡ ಸಹಸ್ರನಾಮ ಪಾರಾಯಣದಲ್ಲಿ ಬೆಂಗಳೂರಿನ ನಾನಾ ಭಾಗಗಳ ವಿಷ್ಣು ಸಹಸ್ರನಾಮ ಮಂಡಳಿಗಳು ಭಾಗವಹಿಸಲಿವೆ.

27 ಗಂಟೆ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ 108 ಬಾರಿ ವಿಷ್ಣುಸಹಸ್ರನಾಮ ಪಾರಾಯಣ ನಡೆಯಲಿದೆ ಎಂದು ಮಂಡಳಿಯ ಅಧ್ಯಕ್ಷ ಜಯಕುಮಾರ್‌ ತಿಳಿಸಿದ್ದಾರೆ. ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿರುವ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಮುಂಜಾನೆಯಿಂದಲೇ ವಿವಿಧ ಭಕ್ತಿ ಕಾರ್ಯಕ್ರಮಗಳು ಆರಂಭವಾಗಲಿದ್ದು,ಬೆಳಗ್ಗೆ 6 ಗಂಟೆಗೆ ವೈಕುಂಠ ದ್ವಾರದರ್ಶನ ನಡೆಯಲಿದೆ.

ಕೆಂಪೇಗೌಡ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ: ರಾಜರಾಜೇಶ್ವರಿ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಲಿದೆ. ಮಹಾಲಕ್ಷಿಪುರದ ಶ್ರೀ ಶ್ರೀನಿವಾಸ ದೇವಸ್ಥಾನ ಸೇವಾ ಸಮಿತಿ ಕೂಡ ವೈಕುಂಠ ಏಕಾದಶಿ ಪ್ರಯುಕ್ತ ಅಮ್ಮನವರಿಗೆ ವಜ್ರ ಕವಚಧಾರಣೆ ಮತ್ತು ವಿಶೇಷ ಹೂವಿನ ಆಲಂಕಾರ ಪೂಜೆಯನ್ನು ಹಮ್ಮಿಕೊಂಡಿದೆ.

ನಂದಿಗುಡಿ ರಸ್ತೆಯ ಜಯಮಹಲ್‌ ಬಡಾವಣೆಲ್ಲಿರುವ ಬಂಡೆ ಶ್ರೀ ಸತ್ಯ ಆಂಜನೇಯಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯಲ್ಲಿರುವ ಶ್ರೀವಿನಾಯಕ ಶ್ರೀ ವೆಂಕಟೇಶ್ವರ ದೇವಸ್ಥಾನ, ಜೆಪಿ ನಗರದ ಕಲ್ಯಾಣ ವೆಂಕಟಸ್ವಾಮಿ ದೇವಾಲಯ, ಬನಶಂಕರಿ 2ನೇ ಹಂತದಲ್ಲಿರುವ ದೇವಗಿರಿ ಶ್ರೀನಿವಾಸ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮಗಳು ಮುಂಜಾನೆಯಿಂದಲೇ ನಡೆಯಲಿವೆ. ಇನ್ನು ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರಿಗೆ ಲಡ್ಡು ವಿತರಿಸುವ ಕಾರ್ಯ ಕೂಡ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next