ಏಪ್ರಿಲ್ 24 ಬಂತೆಂದರೆ, ಕನ್ನಡ ಚಿತ್ರರಸಿಕರಿಗೆ ಎಲ್ಲಿಲ್ಲದ ಉತ್ಸಾಹ. ಆ ಅತೀವ ಉತ್ಸಾಹಕ್ಕೆ ಕಾರಣ, ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಏಪ್ರಿಲ್ 24 (ಇಂದು) ಡಾ.ರಾಜ್‌ಕುಮಾರ್ ಅವರ 90 ನೇ ಜನ್ಮದಿನಾಚರಣೆ ಆಚರಿಸಲಾಗುತ್ತಿದೆ. ಚಿತ್ರರಂಗಕ್ಕಷ್ಟೇ ಅಲ್ಲ, ಕರುನಾಡ ಕನ್ನಡಿಗರಿಗೂ ಇದೊಂದು ಹಬ್ಬದ ಸಂಭ್ರಮ. ಪ್ರೀತಿಯ ಆರಾಧ್ಯ ದೈವ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ರಾಜ್ ಅಭಿಮಾನಿಗಳು ಈಗಾಗಲೇ ಎಲ್ಲೆಡೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಸೇರಿದಂತೆ, ಅನೇಕ ಸಂಘ,ಸಂಸ್ಥೆಗಳು, ಡಾ.ರಾಜಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಚಿತ್ರಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನೃತ್ಯ ಕಲಾವಿದರ ಸಂಘ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಸಂಘ, ಸಂಸ್ಥೆಗಳು ಡಾ.ರಾಜಕುಮಾರ್ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧವಾಗಿವೆ.
ಮಂಗಳವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜಕುಮಾರ್ ಅವರ ಸ್ಮಾರಕಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ. ಡಾ.ರಾಜ್ ಕುಟುಂಬ ಈ ಪೂಜೆ ಕಾರ್ಯದಲ್ಲಿ ಪಾಲ್ಗೊಳ್ಳಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಡಾ.ರಾಜಕುಮಾರ್ ಜನ್ಮದಿನೋತ್ಸವ ನಡೆಯಲಿದೆ. ಮಂಡಳಿ ಮುಂದೆ ಇರುವ ಡಾ.ರಾಜಕುಮಾರ್ ಪುತ್ಥಳಿಗೆ ಹೂವಿನ ಮಾಲೆ ಹಾಕುವ ಮೂಲಕ ರಾಜ್ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯ ಸರ್ಕಾರ ಡಾ.ರಾಜಕುಮಾರ್ ಅವರ ಜನ್ಮ ದಿನಾಚರಣೆ ಆಚರಿಸುತ್ತಿದೆ. ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದು, ವಾರ್ತಾ ಇಲಾಖೆ ಹಾಗು ಕರ್ನಾಟಕ ಚಲನಚಿತ್ರ ಆಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ರಾಜ್ ಜನ್ಮದಿನಾಚರಣೆಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ಶಿವರಾಜಕುಮಾರ್,
ರಾಘವೇಂದ್ರ ರಾಜಕುಮಾರ್, ಪುನೀತ್‌ರಾಜಕುಮಾರ್ ಸೇರಿದಂತೆ ರಾಜ್‌ಕುಟುಂಬ ವರ್ಗ ಹಾಗು ಚಿತ್ರೋದ್ಯಮದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಡಾ..ರಾಜಕುಮಾರ್ ಚಿತ್ರಗಳ ಗೀತಗಾಯನ ನಡೆಯಲಿದ್ದು, ಗಾಯಕಿ ಮಂಜುಳ ಗುರುರಾಜ್, ಸುನೀತ, ಮೋಹನ್ ಅವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.