ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 147ನೇ ಜಯಂತಿಯನ್ನು ದೇಶಾದ್ಯಂತ ಸೋಮವಾರ ಆಚರಿಸಲಾಗುತ್ತದೆ.
ಕೇಂದ್ರ ಸರ್ಕಾರ ಈ ದಿನವನ್ನು “ರಾಷ್ಟ್ರೀಯ ಐಕ್ಯತಾ ದಿನ’ ಆಚರಿಸಲು ನಿರ್ಧರಿಸಿದ್ದು, ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಕೇಂದ್ರೀಯ ಅರೆಸೇನಾ ಪಡೆಗಳನ್ನು ಒಳಗೊಂಡಂತೆ ದೇಶದ 750 ಜಿಲ್ಲೆಗಳಲ್ಲಿ ಐಕ್ಯತಾ ಓಟ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ನಾಗರಿಕರು ಐಕ್ಯತಾ ಪ್ರತಿಜ್ಞೆಯನ್ನೂ ಸ್ವೀಕರಿಸಲಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ಇರುವ ಗುಜರಾತ್‌ನ ಕೇವಡಿಯಾದಲ್ಲಿ ಇರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ಆಯೋಜಿಸಿರುವ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಗರಿಕ ಸೇವಾ ತರಬೇತಿ ಪಡೆಯುತ್ತಿರುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶಾದ್ಯಂತ ಐಕ್ಯತಾ ನಡಿಗೆ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕುರಿತ ನಾಟಕಗಳ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಐಕ್ಯತಾ ದಿನದ ಆಚರಣೆಯನ್ನು ಆರಂಭಿಸಿದರು.