Advertisement
ಏನಿದು ರಾಷ್ಟ್ರೀಯ ಪ್ರವಾಸೋದ್ಯಮ ದಿನ?ಇತಿಹಾಸ ಹುಡುಕಿಕೊಂಡು ಹೋದರೆ ರಾಷ್ಟ್ರೀಯ ಪ್ರವಾಸೋದ್ಯಮ ದಿನ ಯಾವಾಗ ಆರಂಭವಾಯಿತು ಎಂದು ಖಚಿತ ಪಡಿಸುವ ಯಾವುದೇ ಮಾಹಿತಿಗಳಿಲ್ಲ. ಆದರೆ ಸ್ವತಂತ್ರ ಭಾರತದಲ್ಲಿ 1984ರಲ್ಲಿ ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಟೂರಿಸ್ಟ್ ಟ್ರಾಫಿಕ್ ಕಮಿಟಿಯೊಂದನ್ನು ಆರಂಭಿಸಲಾಗಿತ್ತು. ಆ ವರ್ಷವೇ ಹೊಸದಿಲ್ಲಿ ಮತ್ತು ಮುಂಬಯಿಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸಲಾಗಿತ್ತು. 1951ರಲ್ಲಿ ಕೋಲ್ಕತಾ ಮತ್ತು ಚೆನ್ನೈಯಲ್ಲೂ ಮತ್ತೆರಡು ಪ್ರಾದೇಶಿಕ ಕಚೇರಿಗಳನ್ನು ತೆರೆಯಲಾಯಿತು. 1985ರಲ್ಲಿ ಪ್ರವಾಸೋದ್ಯಮ ಮತ್ತು ಸಂಪರ್ಕ ಇಲಾಖೆಯ ಅಡಿಯಲ್ಲಿ ಪ್ರವಾಸೋದ್ಯಮ ಕುರಿತ ಪ್ರತ್ಯೇಕ ವಿಭಾಗ ಆರಂಭಿಸಲಾಗಿದ್ದು, ಇದಕ್ಕೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ಉಪ ನಿರ್ದೇಶಕರನ್ನು ಮುಖ್ಯಸ್ಥರನ್ನಾಗಿ ಮಾಡಲಾಯಿತು.
2019ರಲ್ಲಿ ಭಾರತದ ಪ್ರವಾಸೋದ್ಯಮ ಕ್ಷೇತ್ರದಿಂದ 194.30 ಬಿಲಿಯನ್ ಡಾಲರ್ ಆದಾಯ ಬಂದಿದೆ. ಅಂದರೆ ದೇಶದ ಜಿಡಿಪಿಯ ಶೇ.6.8ರಷ್ಟು ಕಾಣಿಕೆಯನ್ನು ಈ ವಲಯ ನೀಡುತ್ತಿದೆ. ಅಲ್ಲದೆ ಜಾಗತಿಕ ಪ್ರಯಾಣ ಮತ್ತು ಪ್ರವಾಸಿ ಮಂಡಳಿಯ ಪ್ರಕಾರ ಪ್ರವಾಸೋದ್ಯಮ ಕ್ಷೇತ್ರದಿಂದ 39.5 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಅಂದರೆ ಒಟ್ಟಾರೆ ಕಾರ್ಮಿಕರಲ್ಲಿ ಶೇ.8ರಷ್ಟು ಉದ್ಯೋಗಿಗಳು ಈ ವಲಯದಲ್ಲೇ ಇದ್ದಾರೆ. ಪ್ರತಿ ವರ್ಷವೂ ಲಕ್ಷಾಂತರ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ. 2029ರ ವೇಳೆಗೆ ಈ ಕ್ಷೇತ್ರದಲ್ಲಿ 53ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದೇ ಅಂದಾಜಿಸಲಾಗಿದೆ. ಟೂರಿಸಂ ಕ್ಷೇತ್ರದ ಮೇಲೆ
ಕೊರೊನಾ ಹೊಡೆತ
2020, 2021ರಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರ ಹಿಂದೆಂದೂ ಕಾಣದಂಥ ಹಿನ್ನಡೆ ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣವೇ ಕೊರೊನಾ. 2020ರಲ್ಲಿ ಕೊರೊನಾದ ಮೊದಲ ಅಲೆ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದಾಗಿ ದೇಶಾದ್ಯಂತ ಜನರ ಓಡಾಟ ನಿಂತಿತು. ಸುಮಾರು 6 ತಿಂಗಳ ಕಾಲ ದೇಶದಲ್ಲಿ ಬಹುತೇಕ ಎಲ್ಲವೂ ಬಂದ್ ಆಗಿತ್ತು. ಈ ವೇಳೆ ದೇಶದ ಎಲ್ಲ ಪ್ರವಾಸೋದ್ಯಮ ಕ್ಷೇತ್ರಗಳೂ ಖಾಲಿ ಹೊಡೆದವು. ಇದಾದ ಮೇಲೆ 2021ರಲ್ಲಿ ಕಾಣಿಸಿಕೊಂಡ ಎರಡನೇ ಅಲೆ ವೇಳೆಯಲ್ಲೂ ಇದೇ ರೀತಿಯ ಹೊಡೆತ ಬಿದ್ದಿತು. ಈ ಸಂದರ್ಭದಲ್ಲಿ ಲಾಕ್‌ಡೌನ್ ಸ್ವಲ್ಪ ಪ್ರಮಾಣದಲ್ಲಿ ಘಾಸಿ ನೀಡಿದರೆ, ಜನರ ಓಡಾಟ ನಿಂತಿದ್ದು ಮತ್ತೊಂದು ಸಮಸ್ಯೆಗೆ ಕಾರಣವಾಯಿತು.
Related Articles
ಭಾರತದಲ್ಲಿ ಮುಖ್ಯವಾಗಿ ಪ್ರವಾಸೋದ್ಯಮ ದಿನವನ್ನು ಆರ್ಥಿಕತೆಯ ಆಧಾರದ ಮೇಲೆ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವೆಂದರೆ ಭಾರತದ ಪ್ರತಿಯೊಂದು ಭಾಗವೂ ನೈಸರ್ಗಿಕ ಮತ್ತು ಪ್ರವಾಸಿ ತಾಣಗಳಾಗಿ ಆಕರ್ಷಣೀಯವಾಗಿರುವಂಥದ್ದಾಗಿದೆ. ಈ ವಲಯವನ್ನು ಅಭಿವೃದ್ಧಿಪಡಿಸಿ, ಹೆಚ್ಚೆಚ್ಚು ಜನರನ್ನು ಪ್ರವಾಸಿ ಸ್ಥಳಗಳಿಗೆ ಆಕರ್ಷಣೆ ಮಾಡುವುದೇ ಇದರ ಪ್ರಮುಖ ಉದ್ದೇಶ. ಈ ಮೂಲಕ ಆರ್ಥಿಕತೆಗೆ ಈ ಕಡೆಯಿಂದಲೂ ಆದಾಯ ಬರಲಿ ಎಂಬ ಕಾರಣವೂ ಇದೆ. ಅಲ್ಲದೆ, ಈ ಪ್ರವಾಸೋದ್ಯಮ ದಿನ ಆಚರಣೆಯ ಮುಖಾಂತರ ಜನರಲ್ಲಿ ಪ್ರವಾಸಿ ಕ್ಷೇತ್ರಗಳ ಕುರಿತಂತೆ ಜಾಗೃತಿ ಮೂಡಿಸುವುದೂ ಸೇರಿದೆ.
Advertisement
ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಸಾಮಾನ್ಯವಾಗಿ ಹೊಡೆತ ಬೀಳುವುದು ವಿದೇಶಿ ಪ್ರವಾಸಿಗರು ಬರದೇ ಇದ್ದಾಗ. ಹೌದು, ಇಂಥದ್ದೇ ಹೊಡೆತಕ್ಕೆ ಈ ಕ್ಷೇತ್ರಗಳು ಸಾಕ್ಷಿಯಾದವು. ಇದು ಕೇವಲ ಭಾರತವಲ್ಲ, ಬಹುತೇಕ ಎಲ್ಲÉ ದೇಶಗಳೂ ಈ ಸಮಸ್ಯೆ ಅನುಭವಿಸಿದವು. ನಿಜವಾಗಿ ಹೇಳಬೇಕು ಎಂದಾದರೆ, ಚೀನದಲ್ಲಿ ಕೊರೊನಾ ಕಾಣಿಸಿಕೊಂಡು, ನಿಧಾನಕ್ಕೆ ಬೇರೆ ದೇಶಗಳಿಗೆ ಹಬ್ಬುವುದು ಆರಂಭವಾದ ಕೂಡಲೇ ಮೊದಲು ನಿಲ್ಲಿಸಿದ್ದು, ಅಂತಾರಾಷ್ಟ್ರೀಯ ವಿಮಾನ ಯಾನವನ್ನು. ಇದರಿಂದಾಗಿ ವಿದೇಶಿ ಪ್ರವಾಸಿಗರು ಬರುವುದು ನಿಂತಿತು. ವಿಶೇಷವೆಂದರೆ 2020ರ ಮಾರ್ಚ್‌ನಲ್ಲಿ ಆರಂಭವಾದ ಈ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧ ಈಗಲೂ ಭಾಗಶಃ ಮುಂದುವರಿದಿದೆ. ಅಲ್ಲದೆ ಈಗ ಮೂರನೇ ಅಲೆ ಆರಂಭವಾಗಿದ್ದು, ಈಗಲೂ ಅಂತಾರಾಷ್ಟ್ರೀಯ ವಿಮಾನಯಾನವನ್ನು ನಿಲ್ಲಿಸಲಾಗಿದೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರ ಇನ್ನಿಲ್ಲದಂತೆ ನಲುಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದ ಪ್ರೋತ್ಸಾಹಕ ಕ್ರಮಗಳು
ಕೊರೊನಾದಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ನಲುಗಿರುವಂತೆಯೇ ಕೇಂದ್ರ ಸರಕಾರ ಸ್ವದೇಶ ದರ್ಶನ ಎಂಬ ಕಾರ್ಯಕ್ರಮ ಆರಂಭಿಸಿದೆ. ಇದಕ್ಕಾಗಿ 2019-20ರಲ್ಲಿ ಹೆಚ್ಚುವರಿ ಅನುದಾನವಾಗಿ 1,854.67 ಕೋಟಿ ರೂ.ಗಳನ್ನು ನೀಡಿದೆ. ಇದನ್ನು ಹೊಸ ಯೋಜನೆಗಳನ್ನು ಆರಂಭಿಸುವ ಸಲುವಾಗಿ ನೀಡಲಾಗಿದೆ. ಈಶಾನ್ಯ ರಾಜ್ಯಗಳಿಗಾಗಿ ಕೇಂದ್ರ ಸರಕಾರ 1,456 ಕೋಟಿ ರೂ.ಗಳನ್ನು 18 ಯೋಜನೆಗಳಿಗಾಗಿ ನೀಡಿದೆ. ಈ ಹಣವನ್ನು ಸ್ವದೇಶ ದರ್ಷನ ಮತ್ತು ಪ್ರಸಾದ ಯೋಜನೆಯಡಿ ಬಳಸಿಕೊಂಡು ಅಭಿವೃದ್ಧಿ ಮತ್ತು ಉತ್ತೇಜನ ಮಾಡುವಂತೆ ಸೂಚಿಸಲಾಗಿದೆ. 2018ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಕೇವಾಡಿಯಾದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. 2019ರ ನವೆಂಬರ್ ವೇಳೆಗೆ ಏಕತಾ ಪ್ರತಿಮೆಯಿಂದಾಗಿ 82.51 ಕೋಟಿ ರೂ. ಆದಾಯ ಬಂದಿದೆ. ಆಸಕ್ತಿದಾಯಕ ಮಾಹಿತಿಗಳು
-2020ರಲ್ಲಿ ಭಾರತದ ಮೆಡಿಕಲ್ ಪ್ರವಾಸೋದ್ಯಮದಿಂದ 9 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಬಂದಿರುವ ಅಂದಾಜು ಇದೆ.
-ಸದ್ಯ ಟ್ರಾವೆಲ್ ಉದ್ಯಮದಿಂದ ಭಾರತಕ್ಕೆ 75 ಬಿಲಿಯನ್ ಡಾಲರ್ ಆದಾಯ ಬರುತ್ತಿದ್ದು, 2027ರ ಹೊತ್ತಿಗೆ 125 ಬಿಲಿಯನ್ ಡಾಲರ್ ಆದಾಯ ಬರುವ ಅಂದಾಜು ಇದೆ.
-2028ರ ವೇಳೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 30.5 ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ.