Advertisement

ಇಂದು ಅಂತಾರಾಷ್ಟ್ರೀಯ ಹುಲಿ ದಿನ: ಹುಲಿ ಯೋಜನೆಗೆ ಸುವರ್ಣ ಮಹೋತ್ಸವ

11:58 PM Jul 28, 2023 | Team Udayavani |

ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿ ಸಂತತಿಯನ್ನು ಸಂರಕ್ಷಿಸಲು ಕೇಂದ್ರ ಸರಕಾರಆರಂಭಿಸಿದ ಹುಲಿ ಯೋಜನೆಗೆ ಈಗ 50 ವರ್ಷ ತುಂಬಿದೆ. 1973ರ ಎ.1ರಂದು ದೇಶದಲ್ಲಿ ಹುಲಿ ಯೋಜನೆ ಜಾರಿಗೊಳಿಸಲಾಯಿತು.

Advertisement

ಅಳಿವಿನಂಚಿಗೆ ಸಾಗುತ್ತಿದ್ದ ಹುಲಿಗಳ ಸಂತತಿ ರಕ್ಷಣೆಗಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1973ರ ಎ.1ರಂದು ಹುಲಿ ಯೋಜನೆಗೆ ಚಾಲನೆ ನೀಡಿದ್ದರು. 1973ರ ನ.16ರಂದು ಅಂದಿನ ಮುಖ್ಯಮಂತ್ರಿ ಡಿ.ದೇವ ರಾಜ ಅರಸು ಅವರು ಕರ್ನಾಟಕದ ಬಂಡೀಪುರ ಹುಲಿ ಯೋಜನೆ ಉದ್ಘಾಟಿಸಿದ್ದರು.

ಹುಲಿ ಯೋಜನೆ ಆರಂಭಕ್ಕೂ ಮುಂಚೆ ದೇಶದ ಅರಣ್ಯಗಳಲ್ಲಿ ಇದ್ದ ಹುಲಿಗಳ ಸಂಖ್ಯೆ 1,827. ಯೋಜನೆ ಆರಂಭವಾದ ಈ 50 ವರ್ಷಗಳ ಅನಂತರ ದೇಶದಲ್ಲಿ ಈಗ 3,167 ಹುಲಿಗಳಿರುವ ಅಂದಾಜು ಮಾಡಲಾಗಿದೆ. 2022ರಲ್ಲಿ ನಡೆದ ಹುಲಿಗಣತಿ ಪ್ರಕಾರ ಹುಲಿ ಸಂತತಿ ಸಂರಕ್ಷಣೆಯಲ್ಲಿ ಇದೊಂದು ಮಹತ್ವದ ಕಾರ್ಯಸಾಧನೆ ಎಂದೇ ಹೇಳಬಹುದು.

ಹುಲಿಯಾವಲೋಕನ
ಭಾರತದಲ್ಲಿ 20ನೇ ಶತಮಾನದ ಆರಂಭದಲ್ಲಿ ಹುಲಿಗಳ ಸಂಖ್ಯೆ ಅಂದಾಜು 40 ಸಾವಿರದಷ್ಟು ಇತ್ತು!. ದೇಶದ ಬಹು ತೇಕ ಅರಣ್ಯದಲ್ಲಿ ಹುಲಿ ಯಥೇತ್ಛವಾಗಿಯೇ ಇದ್ದವು. ಬರ ಬರುತ್ತಾ ಹುಲಿ ಮೇಲೆ ಮನುಷ್ಯನ ಸವಾರಿ ಹೆಚ್ಚಾಗ ತೊಡಗಿದಂತೆ ಸಂಖ್ಯೆಯೂ ಕ್ಷೀಣವಾಗುತ್ತಾ ಬಂದಿತು.

1965-70ರ ಹೊತ್ತಿಗೆ ಹುಲಿಗಳ ಕಾಳಜಿ ಧ್ವನಿಯೂ ಕೇಳಿ ಬರತೊಡಗಿತು. ದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟಿರ ಬಹುದು ಎನ್ನುವ ಅಂಶವೊಮ್ಮೆ ಕೇಂದ್ರ ಸರಕಾರದ ಮಟ್ಟ ದಲ್ಲಿ ಚರ್ಚೆಗೆ ಬಂದಿತು. ಇದರ ಭಾಗವಾಗಿಯೇ ಆಗ ಹುಲಿ ಹತ್ಯೆಯನ್ನು ರಾಷ್ಟ್ರೀಯವಾಗಿ ನಿಷೇಧಿಸಲಾಯಿತು. ಹುಲಿ ಸಂರಕ್ಷಣೆಯ ಮೊದಲ ಹೆಜ್ಜೆ ಅದು.

Advertisement

ಹುಲಿಗಳ ಖಚಿತ ಅಂಕಿ ಅಂಶ ಪಡೆದುಕೊಳ್ಳಲೆಂದೇ, ಒಮ್ಮೆ ಗಣತಿಯಾಗಿ ಬಿಡಲಿ ಎಂದು ತೀರ್ಮಾನಿಸಲಾಯಿತು. 1972ರಲ್ಲಿ ಮೊದಲ ಬಾರಿ ನಡೆದದ್ದು ಹುಲಿ ತಲೆ ಎಣಿಸುವ ಲೆಕ್ಕ. ಆಗ ಸಿಕ್ಕ ಸಂಖ್ಯೆಗಳು ಆತಂಕಕಾರಿಯೇ ಆಗಿದ್ದವು. 1972ರಲ್ಲಿ ಸಿಕ್ಕ ಹುಲಿಗಳ ಸಂಖ್ಯೆ 1,827. ಇದರಿಂದ ಗಾಬರಿಗೊಂಡ ಕೇಂದ್ರ ಸರಕಾರ1972ರಲ್ಲಿ ವನ್ಯ ಜೀವಿ ಸಂರಕ್ಷಣೆ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿತು. ಆಗ ಹುಲಿ ಉಳಿಸುವ ಕಾರ್ಯಪಡೆಯೂ ರಚನೆಯಾಯಿತು. ಇದು ಹುಲಿ ಸಂರಕ್ಷಣೆಗೆ ಇಟ್ಟ 2ನೇ ಹೆಜ್ಜೆ.

1973ರಲ್ಲಿ ಯೋಜನೆ ಆರಂಭ
ಇದರ ಮುಂದುವರಿದ ಭಾಗವೇ 1973ರಲ್ಲಿ ಚಾಲನೆ ಗೊಂಡ ಹುಲಿ ಯೋಜನೆ. ದೇಶದಲ್ಲಿ ಹುಲಿಗೆ ಪ್ರತ್ಯೇಕ ಇರುವ ಆವಾಸಸ್ಥಾನ ಸಂರಕ್ಷಿಸುವುದು. ಮಿತಿ ಮೀರಿದ್ದ ಕಳ್ಳ ಬೇಟೆ ತಡೆಯುವುದು ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ಹುಲಿಯ ಮೂಲ ನೆಲೆಯನ್ನು ಗಟ್ಟಿಗೊಳಿಸಲೆಂದೇ ಕೋರ್‌ ಪ್ರದೇಶ ರೂಪಿಸಲಾಯಿತು.

ಯೋಜನೆ ಉದ್ದೇಶ
1ಹುಲಿ ಯೋಜನೆ ಪ್ರದೇಶಗಳೆಂದು ಘೋಷಣೆಯಾಗುವ ಅದರಲ್ಲೂ ಬಫ‌ರ್‌ ಕೋರ್‌ ಪ್ರದೇಶದಲ್ಲಿ ಎಲ್ಲ ರೀತಿಯ ಮಾನವ ಚಟುವಟಿಕೆ ರಹಿತವಾಗಿಸಿ ಎಲ್ಲ ಕಡೆ ಅರಣ್ಯದ ಮೇಲಿನ ಒತ್ತಡ ತಗ್ಗಿಸುವುದು.
2 ಹುಲಿ ವಾಸ ಪ್ರದೇಶದಲ್ಲಿ ಯೋಜನೆ ಘೋಷಣೆಯಾಗುವ ಮುನ್ನ ಆದ ನಷ್ಟ ಸರಿಪಡಿಸುವುದು. ಇದರಿಂದ ಜೀವ ಪರಿಸರವನ್ನು ನೈಸರ್ಗಿಕತೆಗೆ ಮರಳಿಸುವುದು.
3 ಸಂರಕ್ಷಿತ ಪ್ರದೇಶದ ಸಸ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಉಳಿಸಿಕೊಳ್ಳಲು ಶಿಸ್ತು ಬದ್ಧವಾದ ಮೇಲ್ವಿಚಾರಣೆ ಹಾಗೂ ಪೂರಕವಾದ ವನ್ಯಜೀವಿ ಸಂಶೋಧನಾ ಚಟುವಟಿಕೆ ಕೈಗೊಳ್ಳುವುದು.

ಹುಲಿ ಯೋಜನೆ ಆಯ್ಕೆ ಹೇಗೆ?
ಹುಲಿಯೋಜನೆ ಸಂರಕ್ಷಿತ ಪ್ರದೇಶ ಆಯ್ಕೆಗೆ ಮಾನದಂಡವಾಗಿದ್ದು ಹುಲಿಗಳ ಸಂಖ್ಯೆ ಜತೆಗೆ ವಾಸಕ್ಕೆ ಪೂರಕವಾದ ಅಲ್ಲಿನ ದಟ್ಟಾರಣ್ಯದ ಪ್ರಮಾಣ. ಇದನ್ನು ಗಮನಿಸಿಯೇ ಮೊದಲ ಹಂತದಲ್ಲಿ 9 ಪ್ರದೇಶಗಳನ್ನು ಗುರುತಿಸಲಾಯಿತು. ಇನ್ನಷ್ಟು ಅರಣ್ಯಗಳಲ್ಲಿ ಹುಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವ ಮಾಹಿತಿ ಆಧರಿಸಿ ವಿಸ್ತರಿಸಲಾಗಿದೆ. ಅದರಲ್ಲೂ ಹುಲಿ ಯೋಜನೆಯನ್ನು ಪ್ರಮುಖ ವಂಶಾವಳಿ ರಕ್ಷಣ ಪ್ರದೇಶ ಎಂದೇ ಹೇಳಲಾಗುತ್ತದೆ. ಜನ ಸಮುದಾಯದಿಂದ ಮುಕ್ತವಾದ ವನ್ಯಜೀವಿಗಳಿಗೆ ಮಾತ್ರ ಮೀಸಲಾದ ಸ್ಥಳ ನಿಗದಿಪಡಿಸುವ(ಕೋರ್‌ ಬಫ‌ರ್‌) ಲೆಕ್ಕಾಚಾರದ ಮೇಲೆಯೇ ಹುಲಿ ಸಂರಕ್ಷಿತ ಪ್ರದೇಶ ಗುರುತಿಸಲಾಗಿದೆ.

ಅಲ್ಲಿ ಮನುಷ್ಯನ ವಾಸ ಹಾಗೂ ಅರಣ್ಯ ಚಟುವಟಿಕೆ ನಿಷೇಧಿಸುವುದು ಪ್ರಮುಖವಾದದ್ದು. ಸಣ್ಣ ಸಣ್ಣ ಅರಣ್ಯ ಪ್ರದೇಶದಲ್ಲಿ ಮನುಷ್ಯನ ಸಂಪರ್ಕ ಯಥೇತ್ಛವಾಗಿರುತ್ತದೆ. ಅರಣ್ಯದ ಅವಲಂಬನೆಯೂ ಇದಕ್ಕೆ ಕಾರಣ. ಆದರೆ ಬಫ‌ರ್‌ ವಲಯವನ್ನು ಬಹುಪಯೋಗಿ ಪ್ರದೇಶ ಎಂದು ಗುರುತಿಸಿ, ಹುಲಿಗಳು ಸಹಜವಾಗಿ ಹುಟ್ಟಿ ಬೆಳೆದ ಬೀಡು ಪ್ರದೇಶವನ್ನಾಗಿಯೇ ಉಳಿಸುವುದು. ಇದರಿಂದ ಹುಲಿಗಳ ವನ್ಯತ್ವ ಯಥಾರೀತಿ ಉಳಿಸಿಕೊಳ್ಳಲು ಸಹಕಾರಿ. ಅದೇ ರೀತಿ ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿರುವ ಜನ ವಸತಿಯನ್ನು ಬೇರ್ಪಡಿಸಿ ಹುಲಿ ಆವಾಸ ಸ್ಥಾನಕ್ಕೆ ಮುಕ್ತವಾಗಿಸುವುದು ಸೇರಿದೆ.

ಯೋಜನೆ ಫ‌ಲಿತಾಂಶ
ಹುಲಿ ಯೋಜನೆ ಅನುಷ್ಠಾನಗೊಂಡ ಅನಂತರ ಸಂಪೂರ್ಣ ಅಳಿವಿನ ಅಂಚಿಗೆ ತಲುಪಿದ್ದ ಹುಲಿ ಸಂರಕ್ಷಿಸಲು ಸಾಧ್ಯವಾಗಿದೆ. ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ರಣ ಥಂಭೋರ್‌, ಕನ್ಹಾ ಸೇರಿ ಹಲವು ಹುಲಿ ಯೋಜನೆ ಪ್ರದೇಶದಲ್ಲಿ ಹುಲಿಗಳ ಸಂತಾನಭಿವೃದ್ಧಿಯಿಂದ ವಂಶಾವಳಿ ವೈವಿಧ್ಯತೆ ಕಾಪಾಡಲು ಸಾಧ್ಯವಾಗಿದೆ. ಹುಲಿ ಯೋಜನೆ ಜಾರಿಗೊಳಿಸಿದ ಕೆಲವೇ ವರ್ಷದಲ್ಲಿ ಸುರಕ್ಷಿತ ವಲಯ ರೂಪುಗೊಂಡು ಹುಲಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ಹುಲಿ ಯೋಜನೆ ಪ್ರದೇಶಗಳಲ್ಲಿ ಪರಿಣಾಮಕಾರಿ ಭದ್ರತೆ ಹಾಗೂ ಕಾಳಜಿಯುಕ್ತ ಸಂರಕ್ಷಣಾ ಕ್ರಮಗಳ ಫ‌ಲವಾಗಿ ಸಾಕಷ್ಟು ಬದಲಾವಣೆ ಕಂಡು ಬಂದಿರುವುದು ನಿಜ. ಸಂತತಿ ಕ್ಷೀಣಿಸುವುದೂ ತಗ್ಗಿದೆ. ನೀರಿನ ಮೂಲಗಳು ಅಭಿವೃದ್ಧಿಯಾಗಿದೆ. ಒಟ್ಟಾರೆ ಹುಲಿಗಳಿಗೆ ಮೀಸಲಾದ ಪ್ರದೇಶ ರೂಪುಗೊಂಡಿದೆ. ಹುಲಿ ಯೋಜನೆ ಜಾರಿ ಅನಂತರ ಅರಣ್ಯ ಸಂರಕ್ಷಣೆಯತ್ತ ಗಮನಹರಿಸಿದ್ದರಿಂದ ಇತರೆ ವನ್ಯಜೀವಿಗಳ ವೃದ್ಧಿಗೂ ಪರೋಕ್ಷವಾಗಿ ಕಾರಣವಾಗಿದೆ.

ಹುಲಿ ಯೋಜನೆ ಕಾಡುಗಳು
1973ರ ಆರಂಭದಲ್ಲಿ ದೇಶದ 9 ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಲಾಯಿತು. ಅದರಲ್ಲಿ ಕರ್ನಾ ಟಕದ ಬಂಡೀಪುರವೂ ಒಂದು. ಮನಾಸ್‌(ಅಸ್ಸಾಂ), ಪಲ ಮಾವು (ಬಿಹಾರ), ಸಿಮ್ಲಿಪಾಲ್‌(ಒಡಿಶಾ), ಕಾರ್ಬೆಟ್‌(ಉತ್ತರಾಂಚಲ), ಕನ್ಹಾ  (ಮಧ್ಯ ಪ್ರದೇಶ), ಮೇಲಘಾಟ್‌(ಮಹಾರಾಷ್ಟ್ರ), ರಣಥಂಬೋರ್‌(ರಾಜಸ್ಥಾನ), ಸುಂದರ ಬನ (ಪಶ್ಚಿಮ ಬಂಗಾಲ) ಹುಲಿ ಯೋಜನೆ ವ್ಯಾಪ್ತಿಗೆ ಬಂದ ರಾಷ್ಟ್ರೀಯ ಉದ್ಯಾನವನಗಳು. ಆಗ ಇದ್ದ ಹುಲಿ ಸಂರಕ್ಷಣೆ ಪ್ರದೇಶ ಸುಮಾರು 16,339 ಚದರ ಕಿ.ಮೀ. ಇದ್ದ ಹುಲಿಗಳ ಸಂಖ್ಯೆ 268. ಅಲ್ಲಿಂದ ಇದು 27 ಸಂರಕ್ಷಿತ ಪ್ರದೇಶಗಳಿಗೆ ವಿಸ್ತರಣೆ ಯಾಯಿತು. ಆಗ 37,761 ಚದರ ಕಿ.ಮೀ. ವ್ಯಾಪ್ತಿಯನ್ನು ಸೇರಿಸಿ ಕೊಳ್ಳಲಾಯಿತು. ಈ ವ್ಯಾಪ್ತಿಯಲ್ಲಿದ್ದ ಹುಲಿಗಳ ಸಂಖ್ಯೆ 1498. ಪ್ರಸ್ತುತ 53 ಹುಲಿ (ಯೋಜನೆ) ಸಂರಕ್ಷಿತ ಪ್ರದೇಶಗಳಿವೆ.

ಕರ್ನಾಟಕದಲ್ಲಿ ಹುಲಿಗಳು
2018ರಲ್ಲಿ ನಡೆದ ಹುಲಿ ಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು 524 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ 526 ಹುಲಿ ಪತ್ತೆಯಾಗಿದ್ದವು. ಎರಡೇ ಹುಲಿಗಳ ಹೆಚ್ಚಳದಿಂದಾಗಿ ಮಧ್ಯಪ್ರದೇಶ ದೇಶದಲ್ಲೇ ಅತೀ ಹೆಚ್ಚು ಹುಲಿಗಳಿರುವ ರಾಜ್ಯ ಎಂದು ಹೇಳಲಾಗುತ್ತಿತ್ತು. ಆದರೆ 2022ರಲ್ಲಿ ನಡೆದಿರುವ ಹುಲಿ ಗಣತಿ ಪ್ರಕಾರ ಕರ್ನಾಟಕ ನಂ.1 ಸ್ಥಾನಕ್ಕೇರುವ ಸಾಧ್ಯತೆಯಿದೆ. ಈ ಗಣತಿ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಬಂಡೀಪುರ, ನಾಗರಹೊಳೆ, ಭದ್ರಾ ಹಾಗೂ ಉತ್ತರ ಕನ್ನಡದ ಅಣಶಿ-ದಾಂಡೇಲಿ ಹಾಗೂ ಜಿಲ್ಲೆಯ ಬಿಳಿಗಿರಿರಂಗನಾಥ ಅರಣ್ಯ ಸೇರಿ ರಾಜ್ಯದ 5 ಅರಣ್ಯಗಳನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಈಗ ಹುಲಿ ಯೋಜನೆ ಅರಣ್ಯ ಪ್ರದೇಶ 4 ರಿಂದ 5 ಸಾವಿರ ಚದರ ಕಿ.ಮೀ.ನಷ್ಟಿದೆ.

ಅನುದಾನ ಕಡಿತ
ಭಾರತದಲ್ಲಿ ವನ್ಯಸಂಕುಲದ ಪುನರುತ್ಥಾನಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದರೂ ಇಷ್ಟು ಅಬ್ಬರದಿಂದ ಕಾರ್ಯಕ್ರಮ ರೂಪಿಸಿದ್ದು ಕಡಿಮೆಯೇ. 3 ತಿಂಗಳುಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರೇ ಹುಲಿ ಯೋಜನೆಯ 50 ಸಂವತ್ಸರದ ಕಾರ್ಯಕ್ರಮ ಉದ್ಘಾಟಿಸಿದ್ದರು. ಹುಲಿ ಕಾಣಲು ಬಂಡೀಪುರ ಸುತ್ತು ಹಾಕಿದ್ದರು. ದೇಶದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿ ಸಂರಕ್ಷಣೆಗೆ ಪ್ರತಿ ವರ್ಷ ಕೇಂದ್ರ ಸರಕಾರ ನೀಡುತ್ತಿರುವ ಅನುದಾನ ಕಡಿತವಾಗುತ್ತಲೇ ಇದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ( ಎನ್‌ಟಿಸಿಎ) 2015-16ರಲ್ಲಿ 350 ಕೋಟಿ ರೂ. ಅನುದಾನ ಒದಗಿಸಿ ಪೂರ್ತಿ ಬಿಡುಗಡೆ ಮಾಡಲಾಗಿತ್ತು. ಈ ಹಿಂದಿನ ವರ್ಷ 300 ಕೋಟಿ ರೂ. ಪ್ರಕಟಿ ಸಿದರೂ ಬಿಡುಗಡೆಯಾಗಿದ್ದು 150 ಕೋಟಿ ರೂ. ಮಾತ್ರ. ಅಂದರೆ ಶೇ.50ರಷ್ಟು ಕಡಿತ. ಈ ವರ್ಷ 280 ಕೋಟಿ ರೂ. ಘೋಷಿಸಲಾಗಿದ್ದು, ಎಷ್ಟು ಬಿಡುಗಡೆಯಾಗಬಹುದು ಎನ್ನುವ ಆತಂಕ ಎನ್‌ಟಿಸಿಎ ವಲಯದಲ್ಲಿದೆ.

ಹುಲಿಗಳ ನಾಡು ಚಾಮರಾಜನಗರ!
ರಾಜ್ಯದಲ್ಲಿ 5 ಹುಲಿ ಯೋಜನೆ ಪ್ರದೇಶಗಳಿದ್ದರೆ, ಇದರಲ್ಲಿ ಎರಡು ಚಾಮರಾಜನಗರ ಜಿಲ್ಲೆಯಲ್ಲೇ ಇರುವುದು ವಿಶೇಷ. ಇದರ ಜತೆ ಮಲೆ ಮಹದೇಶ್ವರ ಅರಣ್ಯವನ್ನೂ ಹುಲಿ ಯೋಜನೆಗೆ ಸೇರಿಸಲು ಪ್ರಯತ್ನ ನಡೆದಿವೆ. ಇದು ಸಫ‌ಲವಾದರೆ ಜಿಲ್ಲೆ ಮೂರು ಹುಲಿ ಸಂರಕ್ಷಿತ ಅರಣ್ಯವನ್ನು ಹೊಂದಿರುವ ಅಪರೂಪದ ಸಾಧನೆಗೆ ಕಾರಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next