Advertisement

ಜಾಗೃತಿಯ ಜಪವಾಗಲಿ ರಕ್ತದಾನ

10:07 AM Jun 14, 2018 | Team Udayavani |

ಮನುಷ್ಯ ಜೀವನದಲ್ಲಿನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿದೆ. ಇದರಿಂದ ಜೀವಕ್ಕೆ ಅತಿ ಆವಶ್ಯಕವಾಗಿ ಬೇಕಿರುವ ರಕ್ತದ ಕೊರತೆ ವರ್ಷಂಪ್ರತಿ ಏರುತ್ತಿದೆ. ಇದರ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶ್ವಾದ್ಯಂತ ವಿಶ್ವ ರಕ್ತದಾನಿಗಳ ದಿನವನ್ನಾಗಿ ರಕ್ತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜೂ.14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ.

Advertisement

ಮಹಾನಗರ : ಕೆಲವು ವರ್ಷಗಳಿಂದೀಚೆಗೆ ರಕ್ತದಾನದ ಅಗತ್ಯ ತೀರಾ ಹೆಚ್ಚುತ್ತಿದೆ. ಆಧುನಿಕ ಜೀವನ ಪದ್ಧತಿಯ ಅನುಕರಣೆ, ದೇಹಾರೋಗ್ಯದ ಬಗ್ಗೆ ನಿರ್ಲಕ್ಷ್ಯ ಮುಂತಾದ ಕಾರಣಗಳಿಂದಾಗಿ ಮನುಷ್ಯನನ್ನು ಬಾಧಿಸುವ ಹೊಸ ಕಾಯಿಲೆಗಳು ಜೀವವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ರಕ್ತದ ಆವಶ್ಯಕತೆಯ ನಡುವೆ ಸಂಗ್ರಹದ ಕೊರತೆಯೂ ಈಗ ಬಹುವಾಗಿ ಕಾಡುತ್ತಿದೆ.

ದೇಶದಲ್ಲಿ ರಕ್ತದ ಕೊರತೆ ತೀರಾ ಇದ್ದು, ಪ್ರತಿವರ್ಷ ಐದು ಕೋಟಿ ಯುನಿಟ್‌ ರಕ್ತ ಅಗತ್ಯವಿದೆ. ಆದರೆ ವರ್ಷಂಪ್ರತಿ ಸಂಗ್ರಹವಾಗುವ ರಕ್ತ ಸುಮಾರು ನಾಲ್ಕು ಕೋಟಿ ಯುನಿಟ್‌ ಮಾತ್ರ. ರಕ್ತವನ್ನು ಉತ್ಪಾದನೆ ಮಾಡಲು  ಸಾಧ್ಯವಾದ್ದರಿಂದ ದಾನ ಮಾಡುವುದೊಂದೇ ರಕ್ತ ಕೊರತೆ ನೀಗಿಸಲು ಇರುವ ಪರಿಹಾರ. ಆರೋಗ್ಯವಂತ ಜೀವನಕ್ಕಾಗಿ ರಕ್ತದಾನ ಮಾಡುವುದೂ ಅವಶ್ಯವಾಗಿದೆ.

ಅದೆಷ್ಟೋ ಮಂದಿ ರಕ್ತದಾನ ಮಾಡಿದ ತರುವಾಯ ಆರೋಗ್ಯವಂತ ಜೀವನ ನಡೆಸಿದ, ಹೆಚ್ಚು ಶಕ್ತಿಶಾಲಿಯಾಗಿ ಬಾಳಿದ ಉದಾಹರಣೆಗಳೂ ಇವೆ. ಹಾಗಾಗಿ ರಕ್ತದಾನವೆಂಬುದು ಜಾಗೃತಿಯ ಜಪವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್‌ 14ರಂದು ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. 

ಯಾರು ಮಾಡಬಹುದು?
18ರಿಂದ 60 ವರ್ಷ ವಯಸ್ಸಿನ ಯಾರು ಬೇಕಾದರೂ ರಕ್ತದಾನ ಮಾಡಬಹುದು. ಆದರೆ ರಕ್ತದಾನ ಮಾಡುವ ವ್ಯಕ್ತಿ ಕನಿಷ್ಠ 45 ಕೆಜಿ ತೂಕವನ್ನು ಹೊಂದಿರಬೇಕು ಮತ್ತು ಅವನ ಹಿಮೋಗ್ಲೋಬಿನ್‌ ಪ್ರಮಾಣ 12 ಗ್ರಾಂನಷ್ಟಿರಬೇಕು. ರಕ್ತದಾನ  ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಒಮ್ಮೆ ರಕ್ತದಾನ ಮಾಡಿದರೆ ಸುಮಾರು 300ರಿಂದ 350 ಎಂಎಲ್‌ ರಕ್ತವನ್ನು ದೇಹದಿಂದ ತೆಗೆಯಲಾಗುತ್ತದೆ. ಅಲ್ಲದೆ ಕೆಲವೇ ಸಮಯಗಳಲ್ಲಿ ಆ ರಕ್ತ ಮರುಪೂರಣವಾಗುವುದರಿಂದ ದಾನಿಯ ದೇಹದಿಂದ ರಕ್ತ ನಷ್ಟವಾಗುವುದಿಲ್ಲ. ಜತೆಗೆ ಹಿಮೋಗ್ಲೋಬಿನ್‌ ಪ್ರಮಾಣ ಕೂಡ ಸಮಂಜಸ ಪ್ರಮಾಣದಲ್ಲಿ ಇರುತ್ತದೆ.

Advertisement

ಯಾರು ಮಾಡಬಾರದು?
ವ್ಯಕ್ತಿಯು ರಕ್ತದಾನಕ್ಕೆ ಒಳಪಡುವ ಮುನ್ನ ವೈದ್ಯರು ಆತನನ್ನು ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ. ಆರು ತಿಂಗಳ ಒಳಗೆ ಶಸ್ತ್ರ ಚಿಕಿತ್ಸೆಯಾದವರು, ಗರ್ಭಿಣಿಯಾದವರು, ಹೆರಿಗೆಯಾಗಿ ಆರು ತಿಂಗಳಾಗಿದ್ದರೆ ಅಂತಹವರು ರಕ್ತದಾನ ಮಾಡುವಂತಿಲ್ಲ. ಅಲ್ಲದೆ ರಕ್ತದೊತ್ತಡ ಸಮಸ್ಯೆ ಇದ್ದವರು ರಕ್ತದಾನ ಮಾಡುವಂತಿಲ್ಲವಾದರೂ ಬಿಪಿ ನಿಯಂತ್ರಣದಲ್ಲಿದ್ದರೆ ನೀಡಬಹುದು ಎನ್ನುತ್ತಾರೆ ವೈದ್ಯರು. ಆದರೆ ಇದನ್ನು ಪರೀಕ್ಷಿಸಿ ಆನಂತರವಷ್ಟೇ ರಕ್ತ ಪಡೆಯಲಾಗುತ್ತದೆ.

ಒಬ್ಬನಿಂದ 500 ಜೀವಕ್ಕೆ ಆಸರೆ 
ಓರ್ವ ವ್ಯಕ್ತಿಯಿಂದ ಪಡೆದ ಒಂದು ಯುನಿಟ್‌ ರಕ್ತದಲ್ಲಿ ಮೂರು ಮಂದಿಯ ಜೀವವನ್ನು ಉಳಿಸಬಹುದು. ಒಬ್ಬ ವ್ಯಕ್ತಿ ತನ್ನ 18ನೇ ವಯಸ್ಸಿನಿಂದ ರಕ್ತದಾನ ಮಾಡಲು ಆರಂಭಿಸಿದರೆ ಪ್ರತಿ ಮೂರು ತಿಂಗಳಿಗೊಮ್ಮೆ ಸೇರಿ ವರ್ಷದಲ್ಲಿ ನಾಲ್ಕು ಬಾರಿ ರಕ್ತದಾನ ಮಾಡುವ ಅವಕಾಶವಿದೆ. ಇದನ್ನು ಆತ 60 ವರ್ಷ
ತನಕ ಮುಂದುವರಿಸಿದರೆ ಆತನ ಜೀವಿತಾವಧಿಯಲ್ಲಿ ಒಟ್ಟು 500 ಜೀವವನ್ನು ಉಳಿಸಲು ಸಾಧ್ಯವಿದೆ. 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next