ಅಕ್ಟೋಬರ್ 29, 2021- ಸಿನಿಪ್ರಿಯರಿಗೆ ಕರಾಳ ದಿನ. ಎಲ್ಲರೂ ಖುಷಿ ಖುಷಿಯಿಂದ ಇದ್ದ ಸಮಯದಲ್ಲಿ ಬಂದಂತಹ ಸುದ್ದಿಯೊಂದು ಬರಸಿಡಿಲಿನಂತೆ ಹೊಡೆಯಿತು. ಆ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಯಿತು. ಅದು ತಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ. ಫಿಟ್ ಅಂಡ್ ಫೈನ್ ಆಗಿ, ಚಿತ್ರರಂಗಕ್ಕೆ ಬರುವ ನವ ನಟರಿಗೆಲ್ಲಾ ಬೆನ್ನು ತಟ್ಟುತ್ತಿದ್ದ ದೊಡ್ಮನೆಯ ಕುಡಿ, ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಇವತ್ತಿಗೂ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಕಷ್ಟದಲ್ಲೇ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ (ಅಕ್ಟೋಬರ್ 29ಕ್ಕೆ) ಎರಡು ವರ್ಷವಾಗುತ್ತದೆ. ಆದರೆ, ಈ ಎರಡು ವರ್ಷದಲ್ಲಿ ಕರುನಾಡು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಯದ ದಿನವಿಲ್ಲ. ಅವರ ಅಭಿಮಾನಿಗಳು ನೋವಿನಲ್ಲೇ ದಿನ ದೂಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಸತತ ಎರಡು ವರ್ಷದಿಂದ ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ಅಭಿಮಾನಿಗಳಿಗೆ ಅದು ಸಮಾಧಿಯಲ್ಲ, ದೇವಸ್ಥಾನ. ನವಜೋಡಿಗಳಿಂದ ಹಿಡಿದು, ಮಗುವಿನ ನಾಮಕರಣವನ್ನೂ ಅಲ್ಲಿ ಮಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನ. ಇಡೀ ಕರುನಾಡು ತನ್ನ ಮನೆಯ ಯಾರೋ ಸದಸ್ಯರನ್ನೇ ಕಳೆದುಕೊಂಡಂತಹ ದುಃಖ ಸಾಗರದಲ್ಲಿ ಮುಳುಗಿದೆ.
ಇದೇ ವೇಳೆ ಪುನೀತ್ ಪ್ರಚಾರದ ಹಂಗಿಲ್ಲದೇ ಮಾಡಿದ ಸಹಾಯಗಳು ಈ ಎರಡು ವರ್ಷದಲ್ಲಿ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಕನ್ನಡ ಚಿತ್ರರಂಗ ಕೂಡಾ ಪುನೀತ್ ನಿಧನದ ನಂತರ ಯಾವುದೇ ಸಿನಿಮಾದ ಟೀಸರ್, ಟ್ರೇಲರ್‌ನಲ್ಲಿ ಅವರ ಸ್ಮರಣೆ ಮಾಡದೇ ಮುಂದೆ ಹೋಗುತ್ತಿಲ್ಲ. ಜೊತೆಗೆ ಅನೇಕ ಅಭಿಮಾನಿಗಳು, ಸಿನಿಮಾ ಮಂದಿ ಪುನೀತ್ ರಾಜ್‌ಕುಮಾರ್ ಕುರಿತಾದ ಆಲ್ಬಂ ಹೊರತರುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಪುನೀತ್ ಅವರ ಪುತ್ಥಳಿ ನಿರ್ಮಾಣ ವಾಗುತ್ತಿದೆ. ಅದೇನೇ ಆದರೂ ಪುನೀತ್ ಇಲ್ಲ ಎಂಬ ನೋವನ್ನು ಮಾತ್ರ ಹೃದಯದಿಂದ ಕಿತ್ತಾಕಲು ಯಾರಿಂದಲೂ ಸಾಧ್ಯವಿಲ್ಲ. ಅದೇ ನೋವಲ್ಲಿ ಅಭಿಮಾನಿಗಳು ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.
ಇಂದು ಕುಟುಂಬದವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇಂದು ಅನ್ನಸಂತರ್ಪಣೆ, ನೇತ್ರದಾನ, ರಕ್ತದಾನ ಶಿಬಿರಗಳನ್ನು ಸಹ ಆಯೋಜನೆ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ಸದ್ಯ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ನಿರ್ಮಾಣ ಕಾರ್ಯ ಕೂಡಾ ನಡೆಯುತ್ತಿದೆ.