ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಗುರುವಾರ ನಿಗದಿಯಾಗಿದ್ದು, ಆಪರೇಷನ್ ಕಮಲ ಕಾರ್ಯಾಚರಣೆ ಹಾಗೂ ಆ ನಂತರದ ವಿದ್ಯಮಾನಗಳು, ಶಾಸಕರ ಮಾರಾಮಾರಿ ಪ್ರಕರಣದಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ಸಮ್ಮಿಶ್ರ ಸರ್ಕಾರದ ಮೊದಲ ಪೂರ್ಣ ಬಜೆಟ್ ಫೆ.8 ರಂದು ಮಂಡನೆಯಾಗಲಿದ್ದು ಬಜೆಟ್‌ನಲ್ಲಿ ಘೋಷಿಸಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಸುದೀರ್ಘ ಸಮಾಲೋಚನೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ ಚುನಾವಣಾ ಸಮಯದಲ್ಲಿ ನೀಡಿದ್ದ ಆಶ್ವಾಸನೆ, ಪ್ರಣಾಳಿಕೆಯಲ್ಲಿನ ಅಂಶಗಳು, ಹಿಂದಿನ ಸರ್ಕಾರದಲ್ಲಿ ಜಾರಿ ಯಾಗಿದ್ದ ಯೋಜನೆಗಳ ಮುಂದುವರಿಕೆ ಮತ್ತಿತರ ವಿಚಾರಗಳ ಬಗ್ಗೆ ಪ್ರಮುಖ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಮತ್ತೂಮ್ಮೆ ಆಪರೇಷನ್ ಕಮಲ ಕಾರ್ಯಾಚರಣೆ ಪ್ರಯತ್ನ ಮಾಡಿದರೆ ಸರ್ಕಾರ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಕುಮಾರಕೃಪ ಅತಿಥಿಗೃಹದಲ್ಲಿ ಸಂಜೆ 5 ಗಂಟೆಗೆ ಸಮನ್ವಯ ಸಮಿತಿ ನಿಗದಿಯಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.