Advertisement

ಕುಕ್ಕೆ ಸುಬ್ರಹ್ಮ ಣ್ಯದಲ್ಲಿ ಇಂದು ಚಂಪಾಷಷ್ಠಿ

10:53 AM Nov 24, 2017 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನ. 24ರಂದು ಚಂಪಾಷಷ್ಠಿ ಮಹೋತ್ಸವ ಜರಗಲಿದೆ. ಸ್ಕಂದ ಪಂಚಮಿಯ ದಿನ ಗುರುವಾರ ಶ್ರೀ ದೇಗುಲದಲ್ಲಿ ತೈಲಾಭ್ಯಂಜನ ನೆರವೇರಿತು. ಮಧ್ಯಾಹ್ನ ಶ್ರೀ ದೇಗುಲದ ಒಳಾಂಗಣ ಮತ್ತು ಅಂಗಡಿ ಗುಡ್ಡೆಯ ಅನ್ನಛತ್ರದಲ್ಲಿ ಅನ್ನಪ್ರಸಾದಕ್ಕೆ ಪಲ್ಲಪೂಜೆ ನೆರವೇರಿತು.

Advertisement

ಮಾರ್ಗಶಿರ ಶುದ್ಧ ಚೌತಿಯ ದಿನವಾದ ಬುಧವಾರ ರಾತ್ರಿ ಹೂವಿನ ರಥೋತ್ಸವ ನಡೆಯಿತು. ದೇಗುಲದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ ಸಂಗೀತ, ಮಂಗಳವಾದ್ಯ, ನಾದಸ್ವರ, ಬ್ಯಾಂಡ್‌ ಸುತ್ತುಗಳ ಬಳಿಕ ರಥಬೀದಿಗೆ ಶ್ರೀ ದೇವರ ಪ್ರವೇಶ ವಾಯಿತು. ಬಳಿಕ ಉತ್ತರಾಧಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.

ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾ ಗಣಪತಿಯ ಸನ್ನಿಧಿಗೆ ಆಗಮಿಸಿದರು. ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನೆರವೇರಿತು. ಬಳಿಕ ವಾಸುಕಿ ಛತ್ರದ ಕಟ್ಟೆಯಲ್ಲಿ ಕಟ್ಟೆಪೂಜೆ, ಶಿವರಾತ್ರಿ ಕಟ್ಟೆಯಲ್ಲಿ ಮತ್ತು ಸವಾರಿ ಮಂಟಪದಲ್ಲಿ ಕಟ್ಟೆಪೂಜೆ ನೆರವೇರಿತು. ಆಕರ್ಷಕ ಸುಡುಮದ್ದಿನ ಪ್ರದರ್ಶನ ನಡೆಯಿತು. ಪಂಚಮಿ ದಿನವಾದ ಗುರುವಾರವೂ ನೂರಾರು ಮಂದಿ ಬೀದಿಮಡಸ್ನಾನ, ಅಂಗಣ ಪ್ರದಕ್ಷಿಣೆ ಹಾಗೂ ಎಡೆಸ್ನಾನ ಸೇವೆಯಲ್ಲಿ ಪಾಲ್ಗೊಂಡಿದ್ದರು.

ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಚ್‌. ರವೀಂದ್ರ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಶೇಖರ್‌ ಪೇರಾಲ್‌, ವ್ಯವಸ್ಥಾಪನ ಸಮಿತಿ ಸದಸ್ಯರು ವಿವಿಧ ಇಲಾಖೆಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

ಕೃಷಿ ಮೇಳಕ್ಕೆ ಚಾಲನೆ
ಬದುಕಿನಲ್ಲಿ ಶ್ರೇಷ್ಠವಾದ್ದು ಕೃಷಿ ಜೀವನ. ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು. ಚಂಪಾಷಷ್ಠಿ ಪ್ರಯುಕ್ತ ದೇಗುಲದ ವತಿಯಿಂದ ವಿವಿಧ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಸಹಾಯೋಗದಲ್ಲಿ ಅಕ್ಷರ ವಸತಿಗೃಹದ ಬಳಿ ಆಯೋಜಿಸಲಾದ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್‌. ರವೀಂದ್ರ, ವ್ಯವಸ್ಥಾಪನ ಸಮಿತಿ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಿಬಂದಿ ಉಪಸ್ಥಿತರಿದ್ದರು. ಷಷ್ಠಿ ದಿನ (ನ. 24ರಂದು) ಕೂಡ ಕೃಷಿ ಮೇಳ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next