Advertisement

ಕೆರಿಬಿಯನ್ನರೆದುರು ಕೊಹ್ಲಿ ತಂಡವೇ ಫೇವರಿಟ್‌

03:45 AM Jun 23, 2017 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ಕಾಲೆಳೆಯುವ ರಾಜಕಾರಣವನ್ನೂ ಮೀರಿದ ಸ್ವಾರ್ಥದೊಂದಿಗೆ ಪ್ರಧಾನ ಕೋಚ್‌ ಅನಿಲ್‌ ಕುಂಬ್ಳೆ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿ ಬೀಗುತ್ತಿರುವ ಕ್ಯಾಪ್ಟನ್‌ ಕೊಹ್ಲಿ, ಇದೇ ಸಂತಸದಲ್ಲಿ ಕೆರಿಬಿಯನ್‌ ನೆಲದಲ್ಲಿ ಶುಕ್ರವಾರದಿಂದ ಏಕದಿನ ಸರಣಿಯನ್ನು ಸಕಾರಾತ್ಮಕವಾಗಿ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಕ್ಲಬ್‌ ದರ್ಜೆಗೂ ಸಮನಾಗದ ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿ ಗೆದ್ದು ದೊಡ್ಡ ಹೀರೋ ಎನಿಸಿಕೊಳ್ಳಲು ತಂಡದೆಲ್ಲ ಆಟಗಾರರೂ ತುದಿಗಾಲಲ್ಲಿ ನಿಂತಿದ್ದಾರೆ. ಒಂದು ಹಂತದ “ರಾಜಕೀಯ’ ಮುಗಿಸಿರುವುದರಿಂದ ಟೀಮ್‌ ಇಂಡಿಯಾಕ್ಕೆ ಸರಣಿ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲೇಬೇಕು. ಕೊಹ್ಲಿ ಪಡೆ ಸೋತರಷ್ಟೇ ಮಹದಚ್ಚರಿ ಎನಿಸಲಿದೆ!

Advertisement

5 ಪಂದ್ಯಗಳ ಏಕದಿನ ಸರಣಿಯ ಮೊದಲ ಮುಖಾಮುಖೀ ಇಲ್ಲಿನ “ಕ್ವೀನ್ಸ್‌ ಪಾರ್ಕ್‌ ಓವಲ್‌’ನಲ್ಲಿ ನಡೆಯಲಿದೆ. ಕೊನೆಯಲ್ಲೊಂದು ಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಾಗುವುದು. ಇತ್ತಂಡಗಳ ನಡುವೆ ಯಾವುದೇ ಟೆಸ್ಟ್‌ ಪಂದ್ಯದ ಆಯೋಜನೆ ಇಲ್ಲ. ಕಳೆದ ಸಲ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆಯೇ ಅನಿಲ್‌ ಕುಂಬ್ಳೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ಕರ್ತವ್ಯ ಆರಂಭಿಸಿದ್ದರೆಂಬುದು ಒಂದು ಸಣ್ಣ ಫ್ಲ್ಯಾಶ್‌ಬ್ಯಾಕ್‌!

ಕ್ಯಾಪ್ಟನ್‌-ಕೋಚ್‌ ಕಿತ್ತಾಟ ಇಲ್ಲಿಲ್ಲ!
ಕಳೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳೆ ಹಾಲಿ ಚಾಂಪಿಯನ್‌ ಆಗಿದ್ದ ಭಾರತ, ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತದ್ದು ಇತಿಹಾಸ. ಈ ಪಂದ್ಯಾವಳಿಯ ವೇಳೆ ಭಾರತದ ಸಾಧನೆಗಿಂತ ಮಿಗಿಲಾಗಿ ಕೊಹ್ಲಿ-ಕುಂಬ್ಳೆ ಮಧ್ಯೆ ನಡೆಯಿತೆನ್ನಲಾದ ಕಿತ್ತಾಟವೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ದಿನಕ್ಕೊಂದು ರೀತಿಯ ಆಘಾತಕಾರಿ ಸುದ್ದಿ ಬೌನ್ಸರ್‌ ರೂಪದಲ್ಲಿ ನೈಜ ಕ್ರಿಕೆಟ್‌ ಅಭಿಮಾನಿಗಳ ಮೇಲೆ ದಾಳಿ ಮಾಡುತ್ತಿತ್ತು. ಭಾರತದ ಫೈನಲ್‌ ಸೋಲು ಕೂಡ ಇದೇ ಕಿತ್ತಾಟದ ಒಂದು ಭಾಗ ಎಂದು ಅನುಮಾನಿಸಿದರೂ ತಪ್ಪಿಲ್ಲ. ಆದರೆ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರಿಂದ ಕೊಹ್ಲಿಗೆ ಕ್ರೀಡಾ ಬಾಳ್ವೆಯಲ್ಲೇ “ಮಹೋನ್ನತ’ ಗೆಲುವು ದಕ್ಕಿದೆ. ಬಹುಶಃ ಚಾಂಪಿಯನ್ಸ್‌ ಟ್ರೋಫಿ ಗೆದ್ದರೂ ಅವರಿಗೆ ಇಷ್ಟೊಂದು ಸಂಭ್ರಮ ಆಗುತ್ತಿರಲಿಲ್ಲವೋ ಏನೋ. ಹೀಗಾಗಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೊಹ್ಲಿ ಆ್ಯಂಡ್‌ ಟೀಮ್‌ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್‌ನಲ್ಲೇ ತೊಡಗಿಸಿಕೊಂಡು ನಿಸ್ವಾರ್ಥದಿಂದ ಆಡುತ್ತದೆಂದು ಆಶಿಸಲಡ್ಡಿಯಿಲ್ಲ!

ವಿಂಡೀಸಿಗೆ ಆಫ್ಘಾನಾಘಾತ!:
ಚಾಂಪಿಯನ್ಸ್‌ ಟ್ರೋಫಿಯಲ್ಲಿ ವೆಸ್ಟ್‌ ಇಂಡೀಸಿಗೆ ಜಾಗ ಇರಲಿಲ್ಲ. ಕಾರಣ, ಎಂಟಕ್ಕೂ ಕೆಳ ಮಟ್ಟದ ರ್‍ಯಾಂಕಿಂಗ್‌. ಆಗ ವಿಂಡೀಸ್‌ ತಂಡ “ಕ್ರಿಕೆಟ್‌ ಶಿಶು’ ಆಫ್ಘಾನಿಸ್ಥಾನದ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಆಡುತ್ತಿತ್ತು. ಮೊದಲ ಪಂದ್ಯದಲ್ಲಿ ಸೋಲಿನ ಹೊಡೆತ ತಿಂದಿತ್ತು. ದ್ವಿತೀಯ ಪಂದ್ಯವನ್ನು ಹೇಗೋ ಗೆದ್ದಿತು. ನಿರ್ಣಾಯಕ ಪಂದ್ಯ ಮಳೆಯಿಂದ ರದ್ದುಗೊಂಡಿತು. ಸರಣಿಯನ್ನು 1-1ರಿಂದ ಸಮಗೊಳಿಸಿದ ಸಮಾಧಾನ ಜಾಸನ್‌ ಹೋಲ್ಡರ್‌ ತಂಡದ್ದಾಯಿತು. ಒಂದು ಕಾಲ ಕ್ರಿಕೆಟ್‌ ವಿಶ್ವವನ್ನೇ ಆಳಿದ ಕೆರಿಬಿಯನ್‌ ಕ್ರಿಕೆಟ್‌ ಸ್ಥಿತಿ ಇಂದು ಯಾವ ಹಂತಕ್ಕೆ ಬಂದು ಮುಟ್ಟಿದೆ ಎಂದು ಅರಿಯಲು ಈ ಸರಣಿಯೇ ಸಾಕು. ಇವರ ವಿರುದ್ಧ ಆಡುವುದೆಂದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ!

ಗೇಲ್‌, ಬ್ರಾವೊ, ಪೊಲಾರ್ಡ್‌, ಬ್ರಾತ್‌ವೇಟ್‌, ಸಿಮನ್ಸ್‌, ಸಾಮ್ಯುಯೆಲ್ಸ್‌, ನಾರಾಯಣ್‌, ಬದ್ರಿ… ಹೀಗೆ ಅದೆಷ್ಟೋ ಮಂದಿ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರು ಈಗಲೂ ಅಪಾಯಕಾರಿ ಆಟಗಾರರಾಗಿಯೇ ಗೋಚರಿಸುತ್ತಿದ್ದಾರೆ. ಆದರೆ ಇವರ್ಯಾರೂ ದೇಶಕ್ಕಾಗಿ ಆಡುತ್ತಿಲ್ಲ. ಮಂಡಳಿ ಹಾಗೂ ಕ್ರಿಕೆಟಿಗರ ನಡುವೆ ಸದಾ ವೈಷಮ್ಯ. ಇಲ್ಲಿ ಇಬ್ಬರೂ ಜಿದ್ದಿಗೆ ಬಿದ್ದವರಂತೆ ವರ್ತಿಸುವುದರಿಂದ ಸಮಸ್ಯೆಗೊಂದು ಶಾಶ್ವತ ಪರಿಹಾರ ಸಿಕ್ಕಿಲ್ಲ. ಸದ್ಯ ಸಿಗುವುದೂ ಇಲ್ಲ. ಬ್ಯಾಟ್‌-ಬಾಲ್‌ ಬಗ್ಗೆ ಅಲ್ಪ ಜ್ಞಾನವುಳ್ಳ 11 ಮಂದಿ ಇದ್ದರೆ ಸಾಕು, ಅಲ್ಲೊಂದು “ಅಂತಾರಾಷ್ಟ್ರೀಯ ಮಟ್ಟ’ದ ವಿಂಡೀಸ್‌ ತಂಡ ರೂಪುಗೊಳ್ಳುತ್ತದೆ. ಈಗಿನ ಜಾಸನ್‌ ಹೋಲ್ಡರ್‌ ಟೀಮ್‌ ಕೂಡ ಇದಕ್ಕಿಂತ ಭಿನ್ನವಲ್ಲ. ತಂಡದ 13 ಆಟಗಾರರು ಒಟ್ಟು 213 ಏಕದಿನ ಪಂದ್ಯಗಳ ಅನುಭವವನ್ನಷ್ಟೇ ಹೊಂದಿದ್ದಾರೆ. ನಾಯಕ ಹೋಲ್ಡರ್‌ ಅತ್ಯಧಿಕ 58 ಪಂದ್ಯಗಳನ್ನಾಡಿದ್ದಾರೆ.

Advertisement

ಭಾರತ ಹೆಚ್ಚು ಅನುಭವಿ ತಂಡ:
ಅನುಭವದ ಲೆಕ್ಕಾಚಾರದಲ್ಲಿ ಭಾರತ ತಂಡ ವಿಂಡೀಸಿಗಿಂತ ಅದೆಷ್ಟೋ ಮುಂದಿದೆ. ಯುವರಾಜ್‌ (301), ಧೋನಿ (291), ಕೊಹ್ಲಿ (184) ಸೇರಿಕೊಂಡೇ 776 ಪಂದ್ಯಗಳನ್ನಾಡಿದ್ದಾರೆ. ಇವರೊಂದಿಗೆ ತಂಡದ “ಮೀಸಲು ಸಾಮರ್ಥ್ಯ’ವನ್ನು ಅಳೆಯಲು ಈ ಸರಣಿಯೊಂದು ಉತ್ತಮ ವೇದಿಕೆ ಆಗಬೇಕಿದೆ.

ಚಾಂಪಿಯನ್ಸ್‌ ಟ್ರೋಫಿ ವೇಳೆ ವೀಕ್ಷಕರಾಗಿಯೇ ಉಳಿದ ಶಮಿ, ರಹಾನೆ ಇಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡಿದ್ದರಿಂದ ರಹಾನೆ ಆರಂಭಿಕನಾಗಿ ಇಳಿಯುವ ಸಾಧ್ಯತೆ ಹೆಚ್ಚು. ಇಲ್ಲವೇ ಸ್ಫೋಟಕ ಆಟಗಾರ ರಿಷಭ್‌ ಪಂತ್‌ ಅವಕಾಶ ಪಡೆಯಲೂ ಬಹುದು. ಆಫ್ಘಾನ್‌ ಸರಣಿ ವೇಳೆ ಲೆಗ್‌-ಬ್ರೇಕ್‌ ಬೌಲರ್‌ ರಶೀದ್‌ ಖಾನ್‌ ಅವರನ್ನು ಅರ್ಥೈಸಿಕೊಳ್ಳಲು ವಿಂಡೀಸಿಗರಿಗೆ ಕಷ್ಟವಾದುದನ್ನು ಗಮನದಲ್ಲಿರಿಸಿಕೊಂಡು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ಗೆ ಅವಕಾಶ ಕೊಡುವುದು ಜಾಣತನ.

Advertisement

Udayavani is now on Telegram. Click here to join our channel and stay updated with the latest news.

Next