Advertisement

ಇಂದು ಭಾರತ ಸ್ತಬ್ಧ; ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಹೋರಾಟ

01:55 AM Dec 08, 2020 | mahesh |

ಹೊಸದಿಲ್ಲಿ/ಬೆಂಗಳೂರು: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ 38 ರೈತ ಸಂಘಟನೆಗಳು ಮಂಗಳವಾರ ದೇಶಾದ್ಯಂತ ಬಂದ್‌ ನಡೆಸಲಿವೆ. ಕಾಂಗ್ರೆಸ್‌, ಟಿಆರ್‌ಎಸ್‌, ಡಿಎಂಕೆ, ಎಸ್‌ಪಿ, ಬಿಎಸ್‌ಪಿ, ಆಪ್‌, ಶಿವಸೇನೆ ಸಹಿತ 15 ರಾಜಕೀಯ ಪಕ್ಷಗಳು ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

Advertisement

ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ಬಂದ್‌ ನಡೆಸಲಾಗುತ್ತದೆ ಎಂದು ರೈತ ಸಂಘಟನೆಗಳು ಹೇಳಿವೆ. ಯಾರೂ ಬಲವಂತವಾಗಿ ಅಂಗಡಿ ಮುಚ್ಚಿಸುವುದು, ಶಾಂತಿ ಕದಡುವುದನ್ನು ಮಾಡಬಾರದು ಎಂದು ರೈತ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಜತೆಗೆ ಬಂದ್‌ ವೇಳೆ ಯಾವುದೇ ರಾಜಕೀಯ ಪಕ್ಷದ ನಾಯಕರನ್ನು ವೇದಿಕೆ ಬಳಿ ಸುಳಿಯಲು ಬಿಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲೂ ಜನರಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆಗಳಿವೆ. ರೈತ ಸಂಘಟನೆಗಳ ಒಕ್ಕೂಟವು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಕಾಂಗ್ರೆಸ್‌, ಜೆಡಿಎಸ್‌, ಕರ್ನಾಟಕ ರಕ್ಷಣ ವೇದಿಕೆ, ಲಾರಿ ಮಾಲಕರ ಸಂಘ, ಓಲಾ- ಉಬರ್‌ ಚಾಲಕರ ಸಂಘ ಮುಂತಾದವು ಬೆಂಬಲ ಘೋಷಿಸಿವೆ.

ಶಾಂತಿ ಕಾಪಾಡಿ
ಕೇಂದ್ರ ಸರಕಾರವು ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗಬಾರದು, ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗಬಾರದು ಎಂದು ಸೂಚಿಸಿದೆ.

ಪ್ರಶಸ್ತಿ ವಾಪಸಿಗೆ ತಡೆ
ರೈತರಿಗೆ ಬೆಂಬಲ ನೀಡುವ ಸಲುವಾಗಿ ತಮ್ಮ ಪ್ರಶಸ್ತಿ ವಾಪಸ್‌ ನೀಡುವ ಉದ್ದೇಶದಿಂದ ರಾಷ್ಟ್ರಪತಿ ಭವನಕ್ಕೆ ತೆರಳುತ್ತಿದ್ದ 30 ಕ್ರೀಡಾಳುಗಳನ್ನು ದಿಲ್ಲಿ ಪೊಲೀಸರು ಮಾರ್ಗಮಧ್ಯದಲ್ಲೇ ತಡೆದಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ ಕುಸ್ತಿ ಪಟು ಕರ್ತಾರ್‌ ಸಿಂಗ್‌, ಪಂಜಾಬ್‌ ಮತ್ತು ಇತರೆಡೆಯ 30 ಮಂದಿ ಪ್ರಶಸ್ತಿ ವಾಪಸ್‌ ನೀಡುವುದಕ್ಕಾಗಿ ತೆರಳಿದ್ದೆವು ಎಂದಿದ್ದಾರೆ.

Advertisement

ರೈತರ ನಿಲುವು
11 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ರೈತರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನೇ ಇಲ್ಲದಂತೆ ಮಾಡುತ್ತವೆ ಮತ್ತು ಮಂಡಿ ವ್ಯವಸ್ಥೆಯೂ ಹೋಗುತ್ತದೆ. ಆಗ ರೈತರು ಕಾರ್ಪೊರೆಟ್‌ ಮರ್ಜಿಗೆ ಬೀಳಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ.
ಸರಕಾರದ ನಿಲುವು ಕೃಷಿ ಕಾಯ್ದೆಗಳು ರೈತ ಪರವಾಗಿಯೇ ಇವೆ. ಮಧ್ಯವರ್ತಿಗಳ ಕಾಟ ತಪ್ಪಿಸುವುದಲ್ಲದೆ, ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತರ ಬೇಡಿಕೆಯಂತೆ ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ರೈತರ ಮನವಿಯಂತೆ ತಿದ್ದುಪಡಿ ಮಾಡಲಾಗುವುದು.

ಬಂದ್‌ಗೆ ಕರ್ನಾಟಕ ಬೆಂಬಲ
ರಾಜ್ಯ ರೈತ ಸಂಘಟನೆಗಳ ಒಕ್ಕೂಟವು ಮಂಗಳವಾರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ರಾಜ್ಯ ಬಂದ್‌ ಮಾಡುವುದಾಗಿ ಹೇಳಿದೆ. ವಿಪಕ್ಷಗಳು ಬೆಂಬಲ ನೀಡಿವೆ.

ಕರಾವಳಿ ಸ್ಥಿತಿಯೇನು?
ಭಾರತ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರೈತಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ವಿವಿಧೆಡೆ ರಾಸ್ತಾರೋಕೊ ನಡೆಸಲಿವೆ. ಆದರೆ ಜಿಲ್ಲೆಯಲ್ಲಿ ಬಂದ್‌ ಆಗುವ ಸಾಧ್ಯತೆ ಇಲ್ಲ. ಸರಕಾರಿ ಮತ್ತು ಖಾಸಗಿ ಬಸ್‌ ಸೇವೆ ಎಂದಿನಂತೆ ಇರಲಿದೆ. ರಿಕ್ಷಾ, ಕಾರು, ಹೊಟೇಲ್‌, ಅಂಗಡಿ ಮುಂಗಟ್ಟುಗಳು ಕೂಡ ತೆರೆದಿರುವ ಸಾಧ್ಯತೆಯಿದೆ. ಉಡುಪಿ ಜಿಲ್ಲೆಯಲ್ಲಿಯೂ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಆದರೆ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗದು. ಸರಕಾರಿ, ಖಾಸಗಿ ಬಸ್‌ಗಳು ಸಂಚರಿಸಲಿವೆ.

ಏನಿರುತ್ತದೆ?
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌, ನಮ್ಮ ಮೆಟ್ರೋ, ಆಸ್ಪತ್ರೆಗಳು, ಮೆಡಿಕಲ್‌ ಶಾಪ್‌, ಸರಕಾರಿ ಕಚೇರಿಗಳು, ಆ್ಯಂಬುಲೆನ್ಸ್‌ ಸೇವೆ, ಹಾಲು, ದಿನಪತ್ರಿಕೆ, ವಿಮಾನ, ರೈಲು ಸೇವೆ, ಬ್ಯಾಂಕ್‌ ಸೇವೆ, ಹೊಟೇಲ್‌, ಸ್ವೀಟ್‌ ಅಂಗಡಿಗಳು, ಬಟ್ಟೆ ಅಂಗಡಿ, ಕೃಷಿ ಮಾರುಕಟ್ಟೆ.

ಅಭಿವೃದ್ಧಿಗಾಗಿ ಸುಧಾರಣೆ ಬಹುಮುಖ್ಯವಾದದ್ದು. ಸದ್ಯದ ಸಂದರ್ಭದಲ್ಲಿ ಸುಧಾರಣೆಯ ಆವಶ್ಯಕತೆ ಬಹಳಷ್ಟಿದೆ. ಹೊಸ ಶತಮಾನವನ್ನು, ಹಳೆಯ ಶತಮಾನದಲ್ಲಿ ಮಾಡಿರುವ ಕಾನೂನಿನ ಅಡಿಯಲ್ಲಿ ನಿರ್ಮಿಸಲು
ಸಾಧ್ಯವಿಲ್ಲ. -ನರೇಂದ್ರ ಮೋದಿ, ಪ್ರಧಾನಿ

ಬಂದ್‌ ಮಾಡದಂತೆ ಪ್ರಧಾನಿ ಮೋದಿ ರೈತರಲ್ಲಿ ಮನವಿ ಮಾಡಿದ್ದಾರೆ. ಅವರೇ ರೈತರನ್ನು ಕರೆದು ಸಮಾಧಾನ ಮಾಡಲು ಮುಂದಾದರೂ ಕೆಲವರು ಹಠ ಮಾಡುತ್ತಿದ್ದಾರೆ. ಈ ರೀತಿ ಬಂದ್‌ ಮಾಡುವುದರಿಂದ ಅರ್ಥವಿಲ್ಲ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಕೃಷಿ ಕಾಯ್ದೆಗಳಿಗೆ ಆಕ್ಷೇಪ ವಿಪಕ್ಷಗಳ ಇಬ್ಬಗೆ ನೀತಿ. 2019ರ ಕಾಂಗ್ರೆಸ್‌ ಚುನಾವಣ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ತೆಗೆದುಹಾಕಿ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿ ಮಾಡುವುದಾಗಿ ಹೇಳಿತ್ತು.
-ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next